×
Ad

ಶಿಕ್ಷಣವು ಮಾರಾಟದ ಸರಕಾಗಿದೆ: ಜೀವನ್‌ ರಾಜ್ ಕುತ್ತಾರ್

ಡಿವೈಎಫ್‌ಐ ವತಿಯಿಂದ ಮಂಗಳೂರು ನಗರ ಸಮ್ಮೇಳನ

Update: 2023-03-12 21:59 IST

ಮಂಗಳೂರು: ಪ್ರಸ್ತುತ ಶಿಕ್ಷಣವು ಮಾರಾಟದ ಸರಕಾಗಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾ ಮಾಡಿದವರು ಉದ್ಯೋಗವಿಲ್ಲದೆ ಅಲೆಯುವಂತಾಗಿದೆ. ಮಂಗಳೂರಿನಲ್ಲಿ ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಯಾವುದೇ ಉದ್ಯೋಗವಿಲ್ಲ. ಅದಕ್ಕಾಗಿ ಬೆಂಗಳೂರಿಗೆ ತೆರಳಿ 10 ಸಾವಿರ ರೂಪಾಯಿಗೆ ದುಡಿಯಬೇಕಾದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಯೆನೆಪೊಯ ಕಾಲೇಜು ಉಪ ಪ್ರಾಂಶುಪಾಲ ಜೀವನ್‌ ರಾಜ್ ಕುತ್ತಾರ್ ತಿಳಿಸಿದ್ದಾರೆ.

ತುಳುನಾಡಿನ ಅಭಿವೃದ್ಧಿಯಲ್ಲಿ ತುಳುನಾಡಿನ ಯುವಜನರಿಗೆ ದೊಡ್ಡಪಾಲು, ಉದ್ಯೋಗ ಸೃಷ್ಟಿಸಿ, ಸ್ಥಳೀಯರಿಗೆ ಆದ್ಯತೆ ನೀಡಿ ಎಂಬ ಘೋಷಣೆಯಡಿಯಲ್ಲಿ ಭಾರತ ಪ್ರಜಾಸತಾತ್ಮಕ ಯುವಜನ ಫೆಡರೇಷನ್‌ನ (ಡಿವೈಎಫ್‌ಐ) 13ನೇ ಮಂಗಳೂರು ನಗರ ಸಮ್ಮೇಳನವನ್ನು ಉದ್ಘಾಟನೆ ಮಾಡಿ ಮಾತನಾಡಿದರು.

ಎಲ್‌ಕೆಜಿ, ಯುಕೆಜಿಯ ಶುಲ್ಕ ಪಾವತಿಸಲು ಕೂಡಾ ಸಾಲ ಮಾಡಬೇಕಾದ ಸ್ಥಿತಿಯಿದೆ. ಇದಕ್ಕೆಲ್ಲ ಪ್ರಮುಖ ಕಾರಣ ಈ ಸರಕಾರದ ವ್ಯವಸ್ಥೆ. ನಮ್ಮ ತುಳುನಾಡಿನ ಅಭಿವೃದ್ಧಿಗೆ ನಮ್ಮ ಜನರ ಪಾಲು ದೊಡ್ಡದು. ಆದರೆ ಇಲ್ಲಿ ದೊಡ್ಡ ದೊಡ್ಡ ಸಂಸ್ಥೆಗಳಲ್ಲಿ ಸ್ಥಳೀಯರಿಗೆ ಉದ್ಯೋಗವನ್ನು ನೀಡಲಾಗುತ್ತಿಲ್ಲ, ಎಂದು ಹೇಳಿದರು.

ಜನರಿಗೆ ಯಾವುದೇ ಸುಳಿವು ಇಲ್ಲದೆಯೇ ನಗರದಲ್ಲಿ ಡ್ರಗ್ಸ್ ಜಾಲ ಅತೀ ವಿಸ್ತಾರವಾಗಿ ಬೆಳೆದಿದೆ. ಪ್ರಮುಖವಾಗಿ ಹೈಸ್ಕೂಲ್ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಡ್ರಗ್ಸ್ ಪೆಡ್ಲರ್‌ಗಳಾಗುತ್ತಿದ್ದಾರೆ. ಕ್ಲಬ್, ಪಬ್‌ಗಳಲ್ಲಿ ಮಾಸಿಕ ಒಂದು ಬಾರಿ ನಡೆಸಲಾಗುವ ಉಚಿತ ಪಾರ್ಟಿಗೆ ಹೋದ ವಿದ್ಯಾರ್ಥಿಗಳು ಡ್ರಗ್ಸ್ ಚಟಕ್ಕೆ ಒಳಗಾಗುತ್ತಿದ್ದಾರೆ. ಯುವಜನರು ಉದ್ಯೋಗ, ಮೊದಲಾದ ಸಮಸ್ಯೆಯ ಬಗ್ಗೆ ಮಾತನಾಡಬಾರದು ಎಂದೇ ವ್ಯವಸ್ಥಿತವಾಗಿ ಅವರು ಡ್ರಗ್ ವ್ಯಸನಿಗಳಾಗುವಂತೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲರಿಗೂ ತಿಳಿದಿದ್ದರೂ ಏನೂ ಕ್ರಮಕೈಗೊಳ್ಳ ದಂತಹ ಸ್ಥಿತಿಯಲ್ಲಿ ಈ ಜಾಲ ವಿಸ್ತರಿಸಬಹುದು, ಎಂದು ಜೀವನ್‌ರಾಜ್ ಕುತ್ತಾರ್ ಆತಂಕ ವ್ಯಕ್ತಪಡಿಸಿದರು.

ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ ಕೆ ಇಮ್ತಿಯಾಝ್, ನಾವು ದೇಶವನ್ನು ಮೋದಿ ಆಳುತ್ತಿದ್ದಾರೆ ಎಂದುಕೊಂಡಿದ್ದೇವೆ, ಆದರೆ ನೈಜವಾಗಿ ಆಳುವುದು ಆರ್‌ಎಸ್‌ಎಸ್ ಸಂಘಟನೆಯಾಗಿದೆ. ಆರ್‌ಎಸ್‌ಎಸ್ ಶತ್ರುಗಳನ್ನು ಗುರುತಿಸಿ‌ ಕೊಂಡೇ ಯೋಜನೆ ರೂಪಿಸುತ್ತಿದೆ. ಮುಸ್ಲಿಮರು, ಕ್ರೈಸ್ತರು, ಎಡಪಕ್ಷದವರನ್ನು ಗುರಿಯಾಗಿಸಿಕೊಂಡಿದೆ. ತಮ್ಮ ವಿರುದ್ಧ ಮಾತನಾಡುವವರ ಮೇಲೆ ನೇರ ದಾಳಿಯನ್ನು ನಡೆಸುತ್ತಿದೆ. ನ್ಯಾಯಾಂಗ ವ್ಯವಸ್ಥೆಯನ್ನೇ ತನ್ನ ಹತೋಟಿಯಲ್ಲಿ ಇಟ್ಟುಕೊಂಡಿದೆ ಎಂದು ಆರೋಪಿಸಿದರು.

ಅಧ್ಯಕ್ಷತೆಯನ್ನು ಡಿವೈಎಫ್‌ಐ ಅಧ್ಯಕ್ಷ ನವೀನ್ ಕೊಂಚಾಡಿ ವಹಿಸಿದರು. ಸಮಾರಂಭದಲ್ಲಿ ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್,  ಡಿವೈಎಫ್‌ಐ ನಗರ ಉಪಾಧ್ಯಕ್ಷೆ ಮಾಧುರಿ ಬೋಳಾರ್ ಹಾಜರಿದ್ದರು. ಡಿವೈಎಫ್‌ಐ ನಗರ ಕಾರ್ಯದರ್ಶಿ ಸಾದಿಕ್ ಕಣ್ಣೂರು ಕಾರ್ಯಕ್ರಮ ನಿರ್ವಹಣೆ ಮಾಡಿದರು. 

Similar News