ಮತಾಂತರದ ನೆಪದಲ್ಲಿ ಕ್ರೈಸ್ತರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ

Update: 2023-03-13 04:15 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ಭಾರತದ ಸಾಮಾಜಿಕ ಏಳಿಗೆಯ ಬಗ್ಗೆ ಚರ್ಚಿಸುವಾಗ ಕ್ರೈಸ್ತ್ರ ಧರ್ಮೀಯರ ಶಿಕ್ಷಣ, ಆರೋಗ್ಯಸಂಸ್ಥೆಗಳ ಪಾತ್ರಗಳನ್ನು ಬದಿಗಿಡುವಂತೆಯೇ ಇಲ್ಲ. ಭಾರತದಲ್ಲಿ ಧರ್ಮವೆನ್ನುವುದು ಮೇಲ್‌ಜಾತಿಗಳ, ಉಳ್ಳವರ ಊಳಿಗ ಮಾಡುತ್ತಿರುವಾಗ ಕ್ರೈಸ್ತ ಮಿಶನರಿಗಳು ತಮ್ಮ ಧರ್ಮವನ್ನು ತಳಸ್ತರದ ಜನರೆಡೆಗೆ ಕೊಂಡೊಯ್ದರು. ಅವರ ಆರೋಗ್ಯ, ಶಿಕ್ಷಣ, ಬದುಕಿನ ಬಗ್ಗೆ ಕಾಳಜಿವಹಿಸುವ ಮೂಲಕ ಧರ್ಮ ಪ್ರಚಾರಕ್ಕೆ ಹೊಸ ವ್ಯಾಖ್ಯಾನವನ್ನು ನೀಡಿದರು. ದಲಿತರು, ಕೆಳ ಜಾತಿಯ ಜನರು ದೊಡ್ಡ ಪ್ರಮಾಣದಲ್ಲಿ ಕ್ರೈಸ್ತ ಧರ್ಮದ ಕಡೆಗೆ ಒಲವು ತೋರಿಸುವುದಕ್ಕೂ ಇದು ಕಾರಣವಾಯಿತು. ಭಾರತದ ಇತಿಹಾಸದುದ್ದಕ್ಕೂ ಚರ್ಚ್ ಮತ್ತು ಅದಕ್ಕೆ ಒಳಪಟ್ಟ ಸಂಘಟನೆಗಳು ಶಿಕ್ಷಣ, ವೈದ್ಯಕೀಯ ಸೇವೆ, ಸಾಮಾಜಿಕ ಸೇವೆ, ಗ್ರಾಮೀಣ ಅಭಿವೃದ್ಧಿ, ಹಸಿದವರ ಮತ್ತು ಬಡವರ ಸೇವೆ, ವೃತ್ತಿ ತರಬೇತಿ, ಸಮುದಾಯ ಅಭಿವೃದ್ಧಿ ಹಾಗೂ ಇತರ ಹಲವಾರು ಅಭಿವೃದ್ಧಿ ಮಾದರಿಗಳನ್ನು ಪರಿಚಯಿಸಿಕೊಂಡು ಬಂದಿವೆ.

ಭಾರತದಲ್ಲಿ ಸ್ವಾತಂತ್ರಾನಂತರ,1952ರಲ್ಲಿ ಸರಕಾರ ಜಾರಿಗೆ ತಂದ ಪಂಚವಾರ್ಷಿಕ ಯೋಜನೆಗಳ ಮೂಲವು ವೈಎಮ್‌ಸಿಎ ತತ್ವ ಮತ್ತು ಸಿದ್ಧಾಂತಗಳನ್ನು ಆಧರಿಸಿಕೊಂಡಿದೆ. ಇತ್ತೀಚಿನ ದಿನಗಳಲ್ಲಿ 'ಮತಾಂತರ ಮಾಡುತ್ತಿದ್ದಾರೆ' ಎಂಬ ಆರೋಪದಲ್ಲಿ ಸಂಘಪರಿವಾರ ಕ್ರೈಸ್ತರ ಮೇಲೆ ತನ್ನ ದಾಳಿಯನ್ನು ಹೆಚ್ಚಿಸುತ್ತಿದೆ. ಆದರೆ ಅವರು ನಿಜಕ್ಕೂ ದಾಳಿ ನಡೆಸುತ್ತಿರುವುದು 'ಮತಾಂತರ'ದ ವಿರುದ್ಧವಲ್ಲ. ಕ್ರೈಸ್ತರ ಶೋಷಿತ ಸಮುದಾಯದ ಮೇಲಿನ ಕಾಳಜಿಯ ವಿರುದ್ಧ. ಕ್ರೈಸ್ತ ಸಮುದಾಯದ ಸೇವೆಯ ಜೊತೆಗೆ ಸ್ಪರ್ಧೆ ನಡೆಸಲು ಸಾಧ್ಯವಾಗದ ಜನರು, ಆ ಸೇವೆಯನ್ನು ತಡೆಯುವುದಕ್ಕಾಗಿಯೇ ಮತಾಂತರವನ್ನು ನೆಪ ಮಾಡಿಕೊಳ್ಳುತ್ತಿದ್ದಾರೆ. ಪರಿಣಾಮವಾಗಿ ದೇಶದಲ್ಲಿ ಕ್ರೈಸ್ತರ ಮೇಲಿನ ದಾಳಿಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿವೆ. 2012ಕ್ಕೆ ಹೋಲಿಸಿದರೆ 2013ರಲ್ಲಿ ಕೋಮು ಹಿಂಸಾಚಾರ ಘಟನೆಗಳ ಸಂಖ್ಯೆಯಲ್ಲಿ 30 ಶೇಕಡ ವೃದ್ಧಿಯಾಗಿದೆ ಎಂದು 2014ರಲ್ಲಿ ಗೃಹ ವ್ಯವಹಾರಗಳ ಸಚಿವಾಲಯವು ವರದಿ ಮಾಡಿದೆ. ದಾಖಲೆಗಳ ಪ್ರಕಾರ, 2015ರಲ್ಲಿ ಭಾರತದಲ್ಲಿ ಕ್ರೈಸ್ತರ ವಿರುದ್ಧ ನಡೆದ ದಾಳಿಗಳ ಸಂಖ್ಯೆ 177. ಮತಾಂತರ ಕಾಯ್ದೆ ಜಾರಿಗೊಂಡ ಬಳಿಕ ಈ ದಾಳಿ, ದೌರ್ಜನ್ಯಗಳ ವ್ಯಾಪ್ತಿ ಇನ್ನಷ್ಟು ಹಿಗ್ಗಿದೆ.

ಸಂಘಪರಿವಾರದ ದುಷ್ಕರ್ಮಿಗಳ ಜೊತೆಗೆ ಪೊಲೀಸರೂ ದಾಳಿಯೊಂದಿಗೆ ಕೈ ಜೋಡಿಸಿದ್ದಾರೆ. 2021ರ ಆರಂಭಕ್ಕೆ ಒಂಭತ್ತು ರಾಜ್ಯಗಳು ಮತಾಂತರದ ವಿರುದ್ಧ ಕಾನೂನುಗಳನ್ನು ಮಾಡಿವೆ. ಭಾರತದಲ್ಲಿ ಧಾರ್ಮಿಕ ಮತಾಂತರ ಪ್ರಕರಣಗಳು ತೀರಾ ವಿರಳ. ಸಮೀಕ್ಷೆಯಲ್ಲಿ ಭಾಗವಹಿಸಿದವರ ಪೈಕಿ ಕೇವಲ 2ಶೇ. ಜನರು ಮಾತ್ರ ತಾವು ತಮ್ಮ ಮೂಲ ಧರ್ಮವನ್ನು ಬಿಟ್ಟು ಬೇರೆ ಧರ್ಮವನ್ನು ಸ್ವೀಕರಿಸಿದ್ದೇವೆ ಎಂದು ಹೇಳಿದ್ದಾರೆ. ಈ ಪೈಕಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡವರ ಪ್ರಮಾಣ 0.4ಶೇ. ಭಾರತದಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುವವರು ಕೆಳ ಜಾತಿಗಳಿಗೆ ಸೇರಿದ ಜನರು. ಮತಾಂತರಗೊಂಡ ಹೆಚ್ಚಿನವರು ಬಡತನ ಹಿನ್ನೆಲೆಯವರು. ಈ ಮತಾಂತರವನ್ನು ಸಂಘಪರಿವಾರ ಆಮಿಷದ ಮತಾಂತರವೆಂದು ಬಣ್ಣಿಸುತ್ತದೆ. ಕೋಮುವಾದ ಭಾರತದ ಮುಸ್ಲಿಮರನ್ನಷ್ಟೇ ಗುರಿ ಮಾಡುತ್ತದೆ ಎನ್ನುವ ತಪ್ಪು ಕಲ್ಪನೆಯಿಂದ ಕ್ರೈಸ್ತರು ಹೊರ ಬಂದುದು 2008ರ ಕಂದಮಾಲ್ ಹಿಂಸಾಚಾರದ ಸಂದರ್ಭದಲ್ಲಿ. ಆ ಹಿಂಸಾಚಾರದಲ್ಲಿ 39 ಕ್ರೈಸ್ತರು ಪ್ರಾಣ ಕಳೆದುಕೊಂಡರು, 395ಕ್ಕೂ ಅಧಿಕ ಚರ್ಚ್‌ಗಳು ಧ್ವಂಸಗೊಂಡವು, ಸುಮಾರು 600 ಗ್ರಾಮಗಳಲ್ಲಿ ದಾಂಧಲೆಗಳು ನಡೆದವು, 5,600ಕ್ಕೂ ಅಧಿಕ ಮನೆಗಳನ್ನು ದೋಚಲಾಯಿತು ಮತ್ತು 54,000ಕ್ಕೂ ಅಧಿಕ ಜನರು ನಿರ್ವಸಿತರಾದರು.

2014ರ ಬಳಿಕ ಕ್ರೈಸ್ತ ವಿರೋಧಿ ದೌರ್ಜನ್ಯಗಳು ದ್ವಿಗುಣಗೊಂಡವು. ಹೊಸದಿಲ್ಲಿಯಲ್ಲಿರುವ ಕೆಥೊಲಿಕ್ ಚರ್ಚ್‌ಗಳು ಕೂಡ ದಾಳಿಗೀಡಾದವು. ಈ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ಕ್ರೈಸ್ತ ನಾಯಕರು ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದರಾದರೂ, ಯಾವುದೇ ಪರಿಣಾಮವಾಗಲಿಲ್ಲ. 2021ರಲ್ಲಿ ಇಂಥ 505 ದಾಳಿಗಳು ನಡೆದಿದ್ದರೆ, 2022ರ ನವೆಂಬರ್ 21ರ ವೇಳೆಗೆ ಆ ಸಂಖ್ಯೆ 511 ಆಗಿತ್ತು. 2014ರಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಕ್ರೈಸ್ರರ ಮೇಲಿನ ದಾಳಿ ಘಟನೆಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ಹಲವು ಅಧ್ಯಯನಗಳು ಹೇಳಿವೆ. 2016ರಲ್ಲಿ, ಕ್ರೈಸ್ತರಿಗೆ ಅಪಾಯಕಾರಿಯಾದ ದೇಶಗಳ ಪಟ್ಟಿಯಲ್ಲಿ ಭಾರತ 15ನೇ ಸ್ಥಾನದಲ್ಲಿತ್ತು. 2012ರಲ್ಲಿ ಭಾರತವು ಆ ಪಟ್ಟಿಯಲ್ಲಿ 31ನೇ ಸ್ಥಾನವನ್ನು ಹೊಂದಿತ್ತು.

2016ರಲ್ಲಿ ಭಾರತದಲ್ಲಿ ಒಂದು ವಾರದಲ್ಲಿ ಸರಾಸರಿ 10 ಚರ್ಚುಗಳನ್ನು ಸುಡಲಾಗಿದೆ ಅಥವಾ ಧರ್ಮ ಗುರುವೊಬ್ಬರಿಗೆ ಹೊಡೆಯಲಾಗಿದೆ. ಇದು ಅದರ ಹಿಂದಿನ ವರ್ಷಕ್ಕೆ ಹೋಲಿಸಿದರೆ ಮೂರು ಪಟ್ಟು ಹೆಚ್ಚಳವಾಗಿದೆ. 2016ರಲ್ಲಿ ಭಾರತದಲ್ಲಿ ಸರಾಸರಿ ಪ್ರತಿ 40 ಗಂಟೆಗಳಿಗೊಮ್ಮೆ ಕ್ರೈಸ್ತರ ಮೇಲೆ ದಾಳಿ ನಡೆದಿದೆ ಎಂದು ಅಖಿಲ ಭಾರತ ಕ್ರೈಸ್ತ ಮಂಡಳಿ ಹೇಳಿದೆ. 2016ರಿಂದ 2019ರವರೆಗಿನ ಅವಧಿಯಲ್ಲಿ ಕ್ರೈಸ್ತರ ಮೇಲಿನ ಅಪರಾಧಗಳ ಪ್ರಮಾಣ 60ಶೇ.ದಷ್ಟು ವೃದ್ಧಿಯಾಗಿದೆ ಎಂದು 'ಪರ್ಸೆಕ್ಯೂಶನ್ ರಿಲೀಫ್' ತನ್ನ ವರದಿಯಲ್ಲಿ ಹೇಳಿದೆ.ವಿಪರ್ಯಾಸವೆಂದರೆ, ದಾಳಿಗಳು ಚರ್ಚ್‌ಗಳ ಮೇಲೆ ಮಾತ್ರವಲ್ಲ, ಕ್ರೈಸ್ತರು ನಡೆಸುತ್ತಿರುವ ಶಾಲೆಗಳ ಮೇಲೂ ನಡೆದಿವೆ. ಕ್ರೈಸ್ತರ ಮೇಲೆ ದಾಳಿ ನಡೆದಾಗಲೆಲ್ಲ ದಾಳಿ ನಡೆಸಿದವರ ಮೇಲೆ ಪ್ರಕರಣ ದಾಖಲಾಗುವುದು ತೀರಾ ಕಡಿಮೆ. ಬದಲಿಗೆ ಸಂತ್ರಸ್ತ ಕ್ರೈಸ್ತರ ಮೇಲೆಯೇ ಪ್ರಕರಣಗಳು ದಾಖಲಾಗುತ್ತವೆ.

ಮತಾಂತರ ಕಾಯ್ದೆ ಜಾರಿಗೊಂಡ ಬಳಿಕ ಕ್ರೈಸ್ತರು ಎರಡು ಕಡೆಯಿಂದ ಏಕಕಾಲಕ್ಕೆ ಹಲ್ಲೆಗೊಳಗಾಗ ತೊಡಗಿದರು. ಆರಂಭದಲ್ಲಿ ಸಂಘಪರಿವಾರದ ಗೂಂಡಾಗಳು ಚರ್ಚ್‌ಗಳಿಗೆ ನುಗ್ಗುತ್ತಾರೆ. ಇದಾದ ಬಳಿಕ ಪೊಲೀಸರು ಬಂದು ಮತಾಂತರ ನಡೆಸಿದ ಆರೋಪದಲ್ಲಿ ಕ್ರೈಸ್ತ ಧಾರ್ಮಿಕ ಮುಖಂಡರ ಮೇಲೆ ಪ್ರಕರಣ ದಾಖಲಿಸುತ್ತಾರೆ. ಮತಾಂತರದ ಆರೋಪ ಹೊರಿಸಿ ದೇಶಾದ್ಯಂತ ಪಾಸ್ಟರ್‌ಗಳ ಮೇಲೆ 79 ಮೊಕದ್ದಮೆಗಳನ್ನು ದಾಖಲಿಸಲಾಗಿದೆ. ಆದರೆ, ಈವರೆಗೆ ನ್ಯಾಯಾಲಯಗಳಲ್ಲಿ ಒಂದೇ ಒಂದು ಪ್ರಕರಣ ಕೂಡ ಸಾಬೀತಾಗಿಲ್ಲ. ಮತಾಂತರದ ಆರೋಪಗಳು ಸಾಬೀತಾಗದೇ ಇದ್ದರೂ ಕ್ರೈಸ್ತ ಪಾಸ್ಟರ್‌ಗಳು ಜೈಲಿನಲ್ಲಿ ಶಿಕ್ಷೆ ಅನುಭವಿಸುವುದರಿಂದ ತಪ್ಪಿಸಿಕೊಳ್ಳುವಂತಿಲ್ಲ. ನ್ಯಾಯಾಲಯ ತನ್ನ ತೀರ್ಪು ಬಹಿರಂಗ ಪಡಿಸುವಷ್ಟರಲ್ಲಿ, ಇವರು ಮಾಡದ ತಪ್ಪಿಗೆ ತಮ್ಮ ಶಿಕ್ಷೆಯನ್ನು ಅನುಭವಿಸಿ ಮುಗಿಸಿರುತ್ತಾರೆ.

ಬಡವರಿಗೆ, ಶೋಷಿತ ಸಮುದಾಯದವರಿಗೆ ಮಾಡುವ ಸೇವೆಯನ್ನು 'ಆಮಿಷ' ಎಂದು ಕರೆಯುವ ಮನಸ್ಥಿತಿಯೇ ಮನುಷ್ಯ ವಿರೋಧಿಯಾದುದು. ಧರ್ಮವೆನ್ನುವುದು ವೈಯಕ್ತಿಕ ಅಗತ್ಯವಾಗಿದೆ. ಹಾಗೆಯೇ ಅದು ಒಬ್ಬ ವ್ಯಕ್ತಿಯ ಅಲೌಕಿಕ ಅಗತ್ಯ ಮಾತ್ರವಲ್ಲ, ಲೌಕಿಕ ಅಗತ್ಯವನ್ನೂ ಈಡೇರಿಸಬೇಕು. ಅಂತಹ ಲೌಕಿಕ ಅಗತ್ಯಗಳನ್ನು ಈಡೇರಿಸುವುದು ಪಕ್ಕಕ್ಕಿರಲಿ, ಆತನನ್ನು ಲೌಕಿಕವಾಗಿ ದಮನಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಅರಿವಿಗೆ ಬಂದು ಆತ ಆ ಧರ್ಮವನ್ನೇ ತಿರಸ್ಕರಿಸಲು ಮುಂದಾದರೆ ಅದನ್ನು ಆಕ್ಷೇಪಿಸುವುದು ಮನುಷ್ಯ ವಿರೋಧಿಯಾಗುತ್ತದೆ. ಧರ್ಮದ ಕಾರಣದಿಂದಲೇ ಒಬ್ಬ ಶೋಷಣೆಯ ಬದುಕು ಅನುಭವಿಸುತ್ತಿದ್ದಾನೆ ಎನ್ನುವುದು ಗೊತ್ತಿದ್ದೂ ಆತನನ್ನು ಅದೇ ಧರ್ಮದಲ್ಲಿ ಬದುಕಲು ಒತ್ತಾಯಿಸುವುದು ಪರೋಕ್ಷವಾಗಿ ಶೋಷಣೆಯೊಂದಿಗೆ ಕೈ ಜೋಡಿಸಿದಂತೆ.

ಕ್ರೈಸ್ತರ ಸೇವೆಯ ವಿರುದ್ಧ ದಾಳಿಗಳನ್ನು ನಡೆಸುವ ಬದಲು, ಜಾತಿಯ ಹೆಸರಿನಲ್ಲಿ ನಡೆಸುವ ತಮ್ಮದೇ ಧರ್ಮದ ಶೋಷಣೆಯನ್ನು ತಡೆದು, ಕ್ರೈಸ್ತರ ಸೇವೆಯನ್ನು ಮಾದರಿಯಾಗಿರಿಸಿಕೊಂಡಾಗ ಮತಾಂತರಗಳು ತನ್ನಷ್ಟಕ್ಕೆ ನಿಲ್ಲುತ್ತದೆ. ಮತಾಂತರವೆನ್ನುವುದು ವೈಯಕ್ತಿಕ ನಂಬಿಕೆಗೆ ಸಂಬಂಧಿಸಿದ್ದು. ಬೆದರಿಕೆಗಳಿಂದ ಒಬ್ಬನ ಮೇಲೆ ನಂಬಿಕೆಯನ್ನು ಹೇರಲು ಸಾಧ್ಯವಿಲ್ಲ, ಹಾಗೆಯೇ ಆತ ನಂಬಿಕೆಯನ್ನು ತೊರೆಯುವಂತೆ ಮಾಡುವುದೂ ಸಾಧ್ಯವಿಲ್ಲ. ಬಲವಂತದ ಮತಾಂತರ ಇಂದಿನ ದಿನಗಳಲ್ಲಿ ಸುಲಭವಿಲ್ಲ. ಆದರೆ ತನಗೆ ಬೇಡವಾದ ಧರ್ಮವನ್ನು ತೊರೆಯದಂತೆ ಒತ್ತಾಯಿಸುವುದು ಕೂಡ ಬಲವಂತವೇ ಆಗಿರುತ್ತದೆ. ಮತಾಂತರ ಕಾಯ್ದೆಯ ದುರ್ಬಳಕೆ ನಿಲ್ಲಬೇಕು ಮಾತ್ರವಲ್ಲ, ಮತಾಂತರದ ಹೆಸರಿನಲ್ಲಿ ಬೀದಿಯಲ್ಲಿ ವಿಜೃಂಭಿಸುತ್ತಿರುವ ಧರ್ಮ ಬಾಹಿರ ಶಕ್ತಿಗಳಿಗೆ ಕೈಕೋಳ ತೊಡಿಸುವ ಕಾರ್ಯವನ್ನು ಸರಕಾರ ತುರ್ತಾಗಿ ಮಾಡಬೇಕು. ಇಲ್ಲವಾದರೆ ಭಾರತದಲ್ಲಿ ಧರ್ಮವೆಂದರೆ ಸಂಘಪರಿವಾರದ ಗೂಂಡಾಗಳ ಕೈಯ ಚಾಕು, ಚೂರಿಗಳಾಗಿ ವ್ಯಾಖ್ಯಾನಗೊಳ್ಳುವ ದಿನಗಳು ಎದುರಾಗಬಹುದು.

Similar News