ಭ್ರಷ್ಟಾಚಾರದಲ್ಲಿ ಭಾಗಿ: ಅಮಾನತಾದ ಅಧಿಕಾರಿಗಳಿಗೆ ಪುನಃ ಲಾಭದಾಯಕ ಹುದ್ದೆ..!

Update: 2023-03-13 11:55 GMT

ಬೆಂಗಳೂರು, ಮಾ. 13: ಭ್ರಷ್ಟಾಚಾರ, ಅಕ್ರಮ ಹಣ ಪಡೆಯುತ್ತಿರುವ ವೇಳೆ ಟ್ರ್ಯಾಪ್ ಹಾಗೂ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಪ್ರಕರಣಗಳಲ್ಲಿ ದಾಳಿಗೆ ಒಳಗಾಗಿ ಅಮಾನತಾದ ನೂರಾರು ಅಧಿಕಾರಿಗಳು ಮತ್ತೆ ಲಾಭದಾಯಕ ಹುದ್ದೆಯಲ್ಲಿ ಕುಳಿತು ಕಾರ್ಯಾಭಾರ ಮಾಡುತ್ತಿರುವ ಪ್ರಕರಣಗಳು ಸರಕಾರಿ ಇಲಾಖೆಗಳಲ್ಲಿ ದಿನೇ ದಿನೇ ಅಧಿಕವಾಗುತ್ತಿವೆ.

ಆರೋಪಿತ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಲಾಭದಾಯಕ ಹುದ್ದೆಗಳಿಗೆ ನೇಮಿಸಬಾರದು ಮತ್ತು ಇಂಥವರಿಗೆ ‘ನಾನ್ ಎಕ್ಸಿಕ್ಯೂಟಿವ್’ ಹುದ್ದೆಯಲ್ಲಿ ಮಾತ್ರ ನೇಮಕ ಮಾಡಬೇಕೆಂದು ಸರಕಾರದ ನಿಯಮ ಈಗಾಗಲೇ ಇದ್ದರೂ, ಹಣ ಮತ್ತು ರಾಜಕೀಯ ಪ್ರಭಾವ ಬಳಸಿ ಅಧಿಕಾರಿಗಳು ಹಿಂದೆ ಸೇವೆ ಸಲ್ಲಿಸಿದ್ದ ಹುದ್ದೆಗೆ ಅಥವಾ ಇತರ ಲಾಭದಾಯಕ ಹುದ್ದೆಗಳಲ್ಲಿ ಕುಳಿತು ಇನ್ನಷ್ಟು ಭ್ರಷ್ಟಾಚಾರದ ದಂಧೆಯಲ್ಲಿ ತೊಡಗಿದ್ದಾರೆ. 

ಅಷ್ಟೇ ಅಲ್ಲದೆ, ಸರಕಾರದ ನಿಯಯ ಉಲ್ಲಂಸಿ ಸ್ವತಃ ಸಚಿವರಗಳೇ ಲಕ್ಷಾಂತರ ರೂಪಾಯಿ ಲಂಚ ಪಡೆದು ಲಾಭದ ಹುದ್ದೆಗಳಲ್ಲಿ ಅಮಾನತಾದ ಭ್ರಷ್ಟ ಅಧಿಕಾರಿಗಳನ್ನು ಬೇಕಾಬಿಟ್ಟಿ ನೇಮಿಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದೆ. ಅದರಲ್ಲೂ ಅಬಕಾರಿ, ನಗರಾಭಿವೃದ್ಧಿ, ಬಿಬಿಎಂಪಿ, ಸಾರಿಗೆ ಸೇರಿ ಸರಕಾರದ ಬಹುತೇಕ ಇಲಾಖೆಗಳಲ್ಲಿ ಈ ದಂಧೆ ಹೆಚ್ಚಾಗಿದೆ. 

ಸುತ್ತೋಲೆ ಏನಿದೆ?: ಭ್ರಷ್ಟಾಚಾರತಡೆ ಅಧಿನಿಯಮ 1988ರಡಿ ಕರ್ನಾಟಕ ಲೋಕಾಯುಕ್ತದ ಪೊಲೀಸ್ ವಿಭಾಗವು ಅಕ್ರಮ ಸಂಭಾವನೆ ಪಡೆಯುತ್ತಿರುವಂತಹ ನೌಕರರನ್ನು ಟ್ರ್ಯಾಪ್, ದಾಳಿ ಅಥವಾ ಇತರ ಪ್ರಕರಣಗಳಲ್ಲಿ ನಡೆದ ತನಿಖೆಯಲ್ಲಿ ತಪ್ಪಿತಸ್ಥರೆಂದು ಕಂಡು ಬಂದಾಗ ಅಂತಹ ಆರೋಪಿತ ಸರಕಾರಿ ಅಧಿಕಾರಿ ಮತ್ತು ನೌಕರರು ಅಮಾನತು ಮಾಡಲು ಸಕ್ಷಮ ಪ್ರಾಧಿಕಾರಕ್ಕೆ ಅಧಿಕಾರ ಇದೆ.

ಈ ಅಧಿಕಾರಿಗಳನ್ನು ಪುನಃ ಸೇವೆಗೆ ನೇಮಕ ಮಾಡುವ ಸಂದರ್ಭದಲ್ಲಿ ಲೋಕಾಯುಕ್ತ ಸಂಸ್ಥೆ ಜತೆಗೆ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರ ಸಮಾಲೋಚಿಸಿ ಕ್ರಮ ಕೈಗೊಳ್ಳಬೇಕು. ಕಳಂಕಿತ ಅಧಿಕಾರಿಗಳನ್ನು ಯಾವುದೇ ಕಾರಣಕ್ಕೂ ಹಿಂದೆ ಸೇವೆ ಸಲ್ಲಿಸಿದ್ದ ಹುದ್ದೆಯಲ್ಲಿ ಮತ್ತು ಲಾಭದಾಯಕ ಹುದ್ದೆಗಳಲ್ಲಿ ನೇಮಕ ಮಾಡಕೂಡದು. ಯಾವುದಾದರೂ ‘ನಾನ್ ಎಕ್ಸಿಕ್ಯೂಟಿವ್’ ಹುದ್ದೆಗಳಲ್ಲಿ ನೇಮಿಸಬೇಕು ಎಂದು ಸರಕಾರ ಸುತ್ತೋಲೆ ಹೊರಡಿಸಿದೆ. 

2,121 ಪ್ರಕರಣ: 2016-17ರಿಂದ 2022-23ರ ಜೂ.29ರ ವರೆಗೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದಲ್ಲಿ ಭ್ರಷ್ಟಾಚಾರ ಪ್ರಕರಣಗಳ ಸಂಬಂಧ ಒಟ್ಟು 2,121 ಪ್ರಕರಣ ದಾಖಲಾಗಿವೆ. ಇದರಲ್ಲಿ 99 ಪ್ರಕರಣಗಳಲ್ಲಿ ಮಾತ್ರ ‘ಬಿ’ ರಿಪೆÇೀಟ್ ಸಲ್ಲಿಕೆಯಾದರೆ, 22 ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಿದೆ. 39 ಪ್ರಕರಣಗಳು ಖುಲಾಸೆ, 23 ಪ್ರಕರಣಗಳಲ್ಲಿ ಆರೋಪಿಗಳು ಮೃತರಾಗಿದ್ದಾರೆ. ಇನ್ನೂ, 22 ಪ್ರಕರಣಗಳ ವಿಚಾರಣೆ ಪೂರ್ಣಗೊಂಡಿವೆ. ಉಳಿದ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲಾಗಿದೆ.

ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ..!

ಲಂಚಗುಳಿತನ, ಟ್ರ್ಯಾಪ್ ಹಾಗೂ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಸಂಬಂಧ ಲೋಕಾಯುಕ್ತದಲ್ಲಿ ದಾಖಲಾದ ಪ್ರಕರಣಗಳ ಕುರಿತು ಕೆಲವರಿಗೆ ಶಿಕ್ಷೆಯಾಗಿ ‘ನಾನ್ ಎಕ್ಸಿಕ್ಯೂಟಿವ್’ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಇನ್ನೂ ಕೆಲ ಆರೋಪಿತ ಅಧಿಕಾರಿಗಳು ತಮಗೆ ಶಿಕ್ಷೆಯಾಗದಂತೆ ನೋಡಿಕೊಂಡು ಲಾಭದಾಯಕ ಹುದ್ದೆಯಲ್ಲಿ ಈಗಲೂ ಮುಂದುವರಿದಿದ್ದಾರೆ. ಹಾಗಾಗಿ, ಸರಕಾರಿ ಇಲಾಖೆಗಳಲ್ಲಿ ಕಳಂಕಿತ ಅಧಿಕಾರಿಗಳ ವಿಚಾರದಲ್ಲಿ ‘ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ’ ಎಂಬಂತಾಗಿದೆ. 

ಅಬಕಾರಿ ಇಲಾಖೆಯಲ್ಲೇ 48 ಪ್ರಕರಣ..!

‘ಸನ್ನದುದಾರರಿಂದ ಲಂಚ ವಸೂಲಿ, ಟ್ರ್ಯಾಪ್, ಕರ್ತವ್ಯಲೋಪ ಮತ್ತು ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಸೇರಿ ವಿವಿಧ ಭ್ರಷ್ಟಾಚಾರ ಪ್ರಕರಣ ಸಂಬಂಧ ಅಬಕಾರಿ ಇಲಾಖೆಯಲ್ಲಿ 48 ಅಧಿಕಾರಿಗಳ ಮತ್ತು ಸಿಬ್ಬಂದಿ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಲಂಚ ಪಡೆಯುತ್ತಿದ್ದ ವೇಳೆ ಸಿಕ್ಕಿಬಿದ್ದ ಅಬಕಾರಿ ಉಪ ಆಯುಕ್ತ ನಾಗಶಯನ, ಕೊಪ್ಪಳ ಅಬಕಾರಿ ಆಯುಕ್ತೆ ಸಲಿನಾ, ಅಬಕಾರಿ ಅಧೀಕ್ಷಕ ಕೆ.ವಿನೋದ್ ಕುಮಾರ್ ಸೇರಿ ಇತರ ಅಧಿಕಾರಿಗಳು ಲಾಭದಾಯಕ ಹುದ್ದೆಯಲ್ಲಿ ಕುಳಿತಿದ್ದಾರೆ ಎನ್ನಲಾಗಿದೆ.

ಅಲ್ಲದೆ, ಇಲಾಖೆಯಲ್ಲಿ ದಾಖಲಾಗಿರುವ ಪ್ರಕರಣಗಳ ಪೈಕಿ ಆದಾಯಕ್ಕಿಂತ ಅಕ್ರಮವಾಗಿ ಆಸ್ತಿ ಗಳಿಕೆ ಸಂಬಂಧ ಹೆಚ್ಚು ಪ್ರರಕಣಗಳಿವೆ. ಶೇ.50ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕೆಲ ಅಧಿಕಾರಿಗಳು ಅಕ್ರಮ ಆಸ್ತಿ ಹೊಂದಿದ್ದಾರೆ. ಕೆಲವರು ನೂರಾರು ಪಟ್ಟು ಆಸ್ತಿ ಮಾಡಿಕೊಂಡಿದ್ದಾರೆ. 20 ವರ್ಷಗಳಿಂದ ಲೋಕಾಯುಕ್ತ ಹಾಗೂ ನ್ಯಾಯಾಲಯದಲ್ಲಿ ಇನ್ನೂ ವಿಚಾರಣೆ ನಡೆಯುತ್ತಿವೆ. 

Similar News