ನ್ಯಾಯವಾದಿ ಮೇಲೆ ಮುಂದುವರಿದ ದಾಳಿ, ಕ್ರಮಕ್ಕೆ ಮುಂದಾಗದ ಪೊಲೀಸರು: ಆರೋಪ

Update: 2023-03-13 09:49 GMT

ಬೆಂಗಳೂರು, ಮಾ.13- ಬೆಂಗಳೂರು ನಗರದ ನ್ಯಾಯವಾದಿಯೊಬ್ಬರ ಮೇಲೆ ದುಷ್ಕರ್ಮಿಗಳಿಂದ ಸರಣಿ ಹಲ್ಲೆಗೆ ಯತ್ನ ನಡೆದು ಮೂರು ಮೊಕದ್ದಮೆ ದಾಖಲಾಗುತ್ತಿದ್ದರೂ, ಪೊಲೀಸರು ಇದುವರೆಗೂ ಯಾವುದೇ ಕ್ರಮ, ತನಿಖೆ ಕೈಗೊಳ್ಳದ ಆರೋಪವೊಂದು ಕೇಳಿಬಂದಿದೆ.

ಬೆಂಗಳೂರಿನ ಹೈಕೋರ್ಟಿನ ನ್ಯಾಯವಾದಿ ಹುಸೈನ್ ಉವೈಸ್ ಅವರ ಮೇಲೆ ಕಳೆದ ಆರು ತಿಂಗಳಿನೊಳಗೆ ವಿವಿಧೆಡೆ ಮೂರು ಬಾರಿ ಹಲ್ಲೆಗೆ ಯತ್ನ, ಬೆದರಿಕೆ ಕರೆಗಳು ಬಂದಿವೆ. ಈ ಸಂಬಂಧ ಇಲ್ಲಿನ ಆರ್‌ಟಿನಗರ, ಅಮೃತಹಳ್ಳಿ ಹಾಗೂ ಬಂಗಾರಪೇಟೆ ಪೊಲೀಸ್ ಠಾಣೆಗಳಲ್ಲಿ ಮೊಕದ್ದಮೆ ದಾಖಲಾಗಿದ್ದರೂ, ಯಾವುದೇ ಕ್ರಮವಾಗಿಲ್ಲ. ಜೀವ ಭಯದಲ್ಲಿಯೇ ಅವರು ಓಡಾಟ ನಡೆಸುವ ವಾತಾವರಣ ಸೃಷ್ಟಿಯಾಗಿದೆ.

ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಅಪರಿಚಿತ ವ್ಯಕ್ತಿಯೊರ್ವ ಕರೆ ಮಾಡಿ, ತಸ್ನೀಮಾ ಫಾತೀಮಾ ಎಂಬುವರ ಪರ ವಕಲತ್ತು ವಹಿಸದಂತೆ ಬೆದರಿಕೆವೊಡ್ಡಿದಲ್ಲದೆ, ಕುಟುಂಬಸ್ಥರ ಮೇಲೆ ದಾಳಿ ನಡೆಸುವುದಾಗಿ ಹೇಳಿದ್ದ. ಈ ಸಂಬಂಧ ಹುಸೈನ್ ಅವರು ಇಲ್ಲಿನ ಆರ್‌ಟಿ ನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ಆರು ತಿಂಗಳು ಕಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲ.

ಇನ್ನೂ, ಬಂಗಾರಪೇಟೆ ವ್ಯಾಪ್ತಿಯಲ್ಲಿಯೂ ಫೆ.10ರಂದು ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಏಕಾಏಕಿ ಮಾರಕಾಸ್ತçಗಳಿಂದ ದಾಳಿ ನಡೆಸಲು ಮುಂದಾದರು. ಈ ಸಂದರ್ಭದಲ್ಲಿ ಪರಾಗಿದ್ದ ಹುಸೈನ್ ಅವರು ಬಂಗಾರ ಪೇಟೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿದರೂ, ಯಾವುದೇ ಕ್ರಮವಾಗಿಲ್ಲ.

ದಾಳಿಗೆ ಯತ್ನ: ಶನಿವಾರ ಅಮೃತಹಳ್ಳಿ ಠಾಣಾ ವ್ಯಾಪ್ತಿಯ ಹೆಬ್ಬಾಳ ರಿಂಗ್ ರಸ್ತೆಯಲಿ ಸಂಜೆ 4:30ರ ಸುಮಾರಿಗೆ ಹುಸೈನ್ ಓವೈಸ್ ಅವರ ಕಾರನ್ನು ಹಿಂಬಲಿಸಿಕೊಂಡು ಬಂದು ಅಡ್ಡಗಟ್ಟಿದ್ದ ನಾಲ್ವರು ದುಷ್ಕರ್ಮಿಗಳು ಕಾರಿನ ಗಾಜು ಒಡೆದು, ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ. ಈ ಸಂಬಂಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

ಈ ಘಟನೆ ಕುರಿತು ಪ್ರತಿಕ್ರಿಯಿಸಿದ ಹುಸೈನ್ ಒವೈಸ್, ಶನಿವಾರ ಸಂಜೆ ನಾಗವಾರದ ಬಿಬಿಎಂಪಿ ಕಚೇರಿಯಲ್ಲಿ ತಮ್ಮ ಕಕ್ಷಿದಾರರೊಬ್ಬರ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದೆ. ಎರಡು ದ್ವಿಚಕ್ರ ವಾಹನಗಳಲ್ಲಿ ಬಂದ ನಾಲ್ವರು ಆರೋಪಿಗಳು ನನ್ನನ್ನು ಕಾರು ನಿಲ್ಲಿಸಲು ಸೂಚಿಸಿದರು. ಬಳಿಕ ಅವರು ಯಾರೆಂದು ಗೊತ್ತಿಲ್ಲದ ಕಾರಣ ನಾನು ಕಾರಿನಲ್ಲಿ ಮುಂದೆ ತೆರಳಿದೆ. 

ಸ್ವಲ್ಪ ದೂರದವರೆಗೆ ಕಾರನ್ನು ಹಿಂಬಲಿಸಿಕೊಂಡು ಬಂದು ಹೆಬ್ಬಾಳ ಮೇಲ್ಸೇತುವೆ ಬಳಿ ಅಡ್ಡಗಟ್ಟಿದರು.ಈ ವೇಳೆ ಕಾರಿನ ಬಾಗಿಲು ತೆರೆಯುವಂತೆ ಸೂಚಿಸಿದರು ಎಂದರು.

ಆರೋಪಿಗಳ ಕೈಯಲ್ಲಿ ಕಬ್ಬಿಣದ ರಾಡ್ ಇರುವುದನ್ನು ಕಂಡು ಕಾರಿನ ಬಾಗಿಲು ತೆರೆಯಲು ನಿರಾಕರಿಸಿದೆ. ತಕ್ಷಣ ಕಾರಿನ ಕಿಟಕಿ ಗಾಜುಗಳನ್ನು ಒಡೆದು ಪರಾರಿಯಾದರು. ಹಲ್ಲೆ ಮಾಡಿರುವ ಆರೋಪಿಗಳು ಯಾರು ಎಂಬ ಮಾಹಿತಿ ನನಗಿಲ್ಲ. ಆದರೆ ವಕೀಲನಾಗಿ ಅನೇಕ ಪ್ರಕರಣಗಳಲ್ಲಿ ವಕಾಲತ್ತು ವಹಿಸಿರುವ ಮತ್ತು ವಹಿಸುತ್ತಿರುವ ತನಗೆ ಜೀವ ಬೆದರಿಕೆಯಿದೆ. ಆರೋಪಿಗಳನ್ನು ಪತ್ತೆ ಹಚ್ಚುವಂತೆ ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿರುವುದಾಗಿ ತಿಳಿಸಿದರು.

Similar News