ಸಲಿಂಗಿ ವಿವಾಹಗಳಿಗೆ ಮಾನ್ಯತೆ ವಿಚಾರ: ಎ.18 ರಂದು ಅಂತಿಮ ವಾದ-ಪ್ರತಿವಾದ ಮಂಡನೆ

ಇದೊಂದು ಅತ್ಯಂತ ಮಹತ್ವದ ವಿಚಾರ ಎಂದ ಸುಪ್ರೀಂ ಕೋರ್ಟ್‌

Update: 2023-03-13 12:20 GMT

ಹೊಸದಿಲ್ಲಿ: ಭಾರತದಲ್ಲಿ ಸಲಿಂಗಿ ವಿವಾಹಗಳಿಗೆ ಕಾನೂನು ಮಾನ್ಯತೆ ಒದಗಿಸುವ ಕುರಿತಂತೆ ಅಂತಿಮ ವಾದ-ಪ್ರತಿವಾದಗಳನ್ನು ಎಪ್ರಿಲ್‌ 18 ರಂದು ಪಂಚ-ಸದಸ್ಯರ ಸಾಂವಿಧಾನಿಕ ಪೀಠ ಆಲಿಸಲಿದೆ ಎಂದು ಸುಪ್ರೀಂ ಕೋರ್ಟ್‌ ಇಂದು ಹೇಳಿದೆ.

ಈ ವಿಚಾರ ಕುರಿತಂತೆ ಯಾವುದೇ ನಿರ್ಧಾರ ಸಮಾಜದ ಮೇಲೆ ದೊಡ್ಡ ಪರಿಣಾಮ ಬೀರಲಿದೆ ಎಂದು ಹೇಳಿದ ಸುಪ್ರೀಂ ಕೋರ್ಟ್‌, "ಇದೊಂದು ಅತ್ಯಂತ ಮಹತ್ವದ ವಿಚಾರ" ಎಂದು ಬಣ್ಣಿಸಿದೆ.

ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ವೆಬ್‌ಸೈಟ್‌ ಮತ್ತು ಯುಟ್ಯೂಬ್‌ನಲ್ಲಿ ನೇರ ಸ್ಟ್ರೀಮಿಂಗ್‌ ಮಾಡಲಾಗುವುದು.

"ಈ ಕುರಿತಾದ ತೀರ್ಪು ಸಮಾಜದ ಮೇಲೆ ದೊಡ್ಡ ಪರಿಣಾಮ ಬೀರುವುದರಿಂದ, ಯಾರದ್ದೇ ವಾದ ಮಂಡನೆ ವೇಳೆ ಸಮಯ ಕಡಿತಗೊಳಿಸಬೇಡಿ," ಎಂದು ತ್ರಿಸದಸ್ಯ ಪೀಠ ಹೇಳಿದೆ

"ಇಲ್ಲಿ ಎತ್ತಲಾಗಿರುವ ವಿಚಾರಗಳನ್ನು ಈ ನ್ಯಾಯಾಲಯದ ಪಂಚ ಸದಸ್ಯರ ಪೀಠವು ಸಂವಿಧಾನದ 145 (3) ವಿಧಿಯನ್ನು ಪರಿಗಣಿಸಿ ಇತ್ಯರ್ಥಪಡಿಸುವುದು ಸೂಕ್ತ ಎಂಬುದು ನಮ್ಮ ಅಭಿಪ್ರಾಯ. ಆದುದರಿಂದ ಇದನ್ನು ಸಾಂವಿಧಾನಿಕ ಪೀಠದ ಮುಂದಿಡಬೇಕೆಂದು ಸೂಚಿಸುತ್ತೇವೆ," ಎಂದು ತ್ರಿಸದಸ್ಯ ನ್ಯಾಯಪೀಠ ಹೇಳಿದೆ.

ಭಾರತದ ಕುಟುಂಬ ಪದ್ಧತಿಯಾನುಸಾರ ಸಲಿಂಗಿ ವಿವಾಹ ಸರಿಯಾಗದು ಎಂದು ಕೇಂದ್ರ ಈ ಹಿಂದೆ ತನ್ನ ವಾದ ಮಂಡನೆಯಲ್ಲಿ ತಿಳಿಸಿತ್ತು. ಐಪಿಸಿಯ ಸೆಕ್ಷನ್‌ 377 ಅನ್ವಯ ಸಲಿಂಗ ಕಾಮವನ್ನು ಅಪರಾಧೀಕರಣದಿಂದ ಮುಕ್ತಗೊಳಿಸಲಾಗಿದೆಯಾದರೂ  ಅರ್ಜಿದಾರರು ಸಲಿಂಗಿ ವಿವಾಹಗಳು ಮೂಲಭೂತ ಹಕ್ಕು ಮತ್ತು ದೇಶದ ಕಾನೂನಿನಡಿಯಲ್ಲಿ ಮಾನ್ಯಗೊಳಿಸಬೇಕು ಎಂದು ಕೇಳಲು ಸಾಧ್ಯವಿಲ್ಲ ಎಂದು ಕೇಂದ್ರ ಹೇಳಿದೆ.

ಸಲಿಂಗಿ ವ್ಯಕ್ತಿಗಳು ಸಂಗಾತಿಗಳಾಗಿ ಜೊತೆಯಾಗಿ ವಾಸಿಸಿ ದೈಹಿಕ ಸಂಬಂಧ ಹೊಂದುವುದು ಭಾರತೀಯ ಕುಟುಂಬ ಪದ್ಧತಿಯ ಅನುಸಾರ ಸರಿಯಲ್ಲ ಹಾಗೂ ಪ್ರಸ್ತುತ ಕಾನೂನು ಚೌಕಟ್ಟಿನ ಕುರಿತಂತೆ ಎಲ್‌ಜಿಬಿಟಿಕ್ಯು+ ಜೋಡಿಗಳು ಮಂಡಿಸಿರುವ ವಾದಗಳನ್ನು ತಿರಸ್ಕರಿಸಬೇಕು ಎಂದು ಕೇಂದ್ರ ಹೇಳಿದೆ.

ಸಲಿಂಗಿ ವಿವಾಹಗಳನ್ನು ಮಾನ್ಯಗೊಳಿಸಬೇಕೆಂದು ಕೋರಿ ಕನಿಷ್ಠ ನಾಲ್ಕು ಸಲಿಂಗಿ ಜೋಡಿಗಳು ಇತ್ತೀಚೆಗೆ ನ್ಯಾಯಾಲಯದ ಮೊರೆ ಹೋಗಿವೆ.

Similar News