ಸಂಘದ ಬೇಡಿಕೆ ಈಡೇರಿಸಲು ಶಾಸಕರ ನಿರ್ಲಕ್ಷ್ಯ ಆರೋಪ: ಪುತ್ತೂರಿನಲ್ಲಿ ದಲಿತ್ ಸೇವಾ ಸಮಿತಿ ಪ್ರತಿಭಟನೆ

Update: 2023-03-13 12:35 GMT

ಪುತ್ತೂರು: ವಿಟ್ಲದಲ್ಲಿ ಅಂಬೇಡ್ಕರ್ ಭವನಕ್ಕೆ ಹೆಚ್ಚುವರಿ ಅನುದಾನ ನೀಡಿ ಅದರ ಶಂಕುಸ್ಥಾಪನೆ ನೆರವೇರಿಸಬೇಕು ಹಾಗೂ ಕನ್ಯಾನದಲ್ಲಿ ಕಿರುಕುಳಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಆತ್ಮಿಕಾ ಅವರ ಕುಟುಂಬಕ್ಕೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಶಾಸಕರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿ ಸೋಮವಾರ ದ.ಕ. ಜಿಲ್ಲಾ ದಲಿತ್ ಸೇವಾ ಸಮಿತಿಯ ವತಿಯಿಂದ ಪುತ್ತೂರು ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ ಮಾತನಾಡಿದ ದ.ಕ. ಜಿಲ್ಲಾ ದಲಿತ್ ಸೇವಾ ಸಮಿತಿ ಸ್ಥಾಪಕ ಅಧ್ಯಕ್ಷ ಬಿ.ಕೆ. ಸೇಸಪ್ಪ ಬೆದ್ರಕಾಡು ಅವರು ನಮ್ಮ ಹೋರಾಟವು ಯಾವುದೇ ಪಕ್ಷದ ವಿರುದ್ಧವಲ್ಲ. ಯಾವ ಪಕ್ಷವನ್ನೂ ಸೋಲಿಸಬೇಕು ಅಥವಾ ಗೆಲ್ಲಿಸಬೇಕು ಎಂಬುದು ನಮ್ಮ ಇರಾದೆಯಲ್ಲ. ನಮ್ಮ ಬೇಡಿಕೆ ಈಡೇರಿಸಬೇಕು ಎಂಬುದಷ್ಟೇ ನಮ್ಮ ಹೋರಾಟದ ಉದ್ದೇಶವಾಗಿದೆ. ಹಿಂದೆ ಈ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ವಿಟ್ಲದಿಂದ ಪುತ್ತೂರು ತನಕ ಕಾಲ್ನಡಿಗೆ ಜಾಥಾ ನಡೆಸಿ ಶಾಸಕರಿಗೆ ಮನವಿ ಮಾಡಿದ್ದೆವು. ಅದಕ್ಕೆ ಸ್ಪಂದನೆ ನೀಡಿಲ್ಲ ಎಂದು ಬಳಿಕ ಪುತ್ತೂರು ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ಸತ್ಯಾಗ್ರಹ ನಡೆಸಿದ್ದೆವು. ಇದಕ್ಕೂ ಸ್ಪಂದನೆ ನೀಡದ ಕಾರಣ ಇದೀಗ ಶಾಸಕ ಕಚೇರಿ ಮುತ್ತಿಗೆ ಮಾಡಲು ಮುಂದಾಗಿದ್ದೇವೆ. ಶಾಸಕರು ಸ್ಥಳಕ್ಕೆ ಆಗಮಿಸಿ ನಮ್ಮ ಬೇಡಿಕೆಗೆ ಲಿಖಿತ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಶಾಸಕ ಸಂಜೀವ ಮಠಂದೂರು ಅವರು ಸಂಘದ ಬೇಡಿಕೆಯನ್ನು ಈಡೇರಿಸುವ ಬಗ್ಗೆ ಭರವಸೆ ನೀಡಿದರು. ಆ ಬಳಿಕ ಪ್ರತಿಭಟನೆಯನ್ನು ಹಿಂದೆಗೆದುಕೊಳ್ಳಲಾಯಿತು. ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಬಿ.ಕೆ. ಸೇಸಪ್ಪ ಬೆದ್ರಕಾಡು ಅವರು ನಮ್ಮ ಬೇಡಿಕೆ ಈಡೇರಿಸುವ ಬಗ್ಗೆ ಶಾಸಕರು ವಿಟ್ಲ ಅಂಬೇಡ್ಕರ್ ಭವನಕ್ಕೆ ಒಂದು ವಾರದೊಳಗೆ ಹೆಚ್ಚಿನ ಅನುದಾನ ಭರಿಸಿ ಶಂಕುಸ್ಥಾಪನೆಗೆ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದ್ದಾರೆ ಅಲ್ಲದೆ ಆತ್ಮಿಕಾ ಅವರ ಕುಟುಂಬಕ್ಕೂ ಸಹಾಯ ನೀಡಲು ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿರುವುದರಿಂದ ಶಾಸಕರ ಮಾತಿನಲ್ಲಿ ಭರವಸೆ ಇಟ್ಟು ಪ್ರತಿಭಟನೆ ಹಿಂದಕ್ಕೆ ಪಡೆಯಲಾಗಿದೆ. ಒಂದು ವಾರದಲ್ಲಿ ಬೇಡಿಕೆ ಈಡೇರದಿದ್ದಲ್ಲಿ ಮತ್ತೆ ಶಾಸಕರ ಕಚೇರಿ ಮುತ್ತಿಗೆ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿ ಅಧ್ಯಕ್ಷ ಚಂದ್ರಶೇಖರ ವಿಟ್ಲ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸೇಸಪ್ಪ ನೆಕ್ಕಿಲು, ಅಂಬೇಡ್ಕರ್ ರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ ಪರಮೇಶ್ವರ ಕೆಮ್ಮಿಂಜೆ, ತಾಲೂಕು ಅಧ್ಯಕ್ಷ ಸುಂದರ ಪಾಟಾಜೆ, ದಲಿತ್ ಸೇವಾ ಸಮಿತಿ ಮಂಗಳೂರು ತಾಲೂಕು ಅಧ್ಯಕ್ಷ ನಾಗೇಶ್ ಮುಡಿಪು, ಕುರಿಯ ಶಾಖೆಯ  ಅಧ್ಯಕ್ಷ ಯಾದವ ಕುರಿಯ, ಮಹಿಳಾ ಸಂಘದ ಜಿಲ್ಲಾಧ್ಯಕ್ಷೆ ಮೀನಾಕ್ಷಿ ನೆಲ್ಲಿಗುಡ್ಡೆ, ಉಪಾಧ್ಯಕ್ಷೆ ವಿಮಲಾ ಮುಳಿಯ, ಜಿಲ್ಲಾ ಉಪಾಧ್ಯಕ್ಷ ಪ್ರಸಾದ್ ಬೊಳ್ಮಾರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ದನಂಜಯ ಬಲ್ನಾಡ್ ಮತ್ತಿತರರು ಉಪಸ್ಥಿತರಿದ್ದರು.

Similar News