ಭಾರತದ ನಿರುದ್ಯೋಗ ಮತ್ತು ಜನಸಂಖ್ಯೆಯ ಬದಲಾಗುತ್ತಿರುವ ಸಂರಚನೆ

Update: 2023-03-14 05:02 GMT

ಕೊರೋನೋತ್ತರ ವರ್ಷಗಳಲ್ಲಿ ನಮ್ಮ ಸರಕಾರಗಳು ಡೆಮೊಗ್ರಾಫಿಕ್ ಡಿವಿಡೆಂಡ್ ಅನ್ನು ಸದುಪಯೋಗ ಮಾಡಿಕೊಳ್ಳುವ ಬಗ್ಗೆ ನಿಖರವಾಗಿ ಗಮನ ಹರಿಸಿಲ್ಲ. ಉದ್ಯೋಗ ಸೃಷ್ಟಿ ಮತ್ತು ಉದ್ಯೋಗ ಭದ್ರತೆಗಳ ಕುರಿತಂತೆ ನಿರ್ದಿಷ್ಟವಾದ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಳಂಬವಾದಷ್ಟು ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ. ಜಪಾನ್ ಮತ್ತು ಚೀನಾಗಳು ಈಗಾಗಲೇ ಪ್ರಗತಿ ಹೊಂದಿದ ದೇಶಗಳು; ಅವುಗಳು ತಮ್ಮ ತಮ್ಮ ಡೆಮೊಗ್ರಾಫಿಕ್ ಡಿವಿಡೆಂಡ್ ಅನ್ನು ಸಮರ್ಥವಾಗಿ ಬಳಸಿಕೊಂಡೇ ಮುಂದಕ್ಕೆ ಬಂದಿವೆ. ಹಾಗಾಗಿ ಅವುಗಳ ಜನಸಂಖ್ಯೆ ಇಳಿಮುಖವಾದರೂ ಆರ್ಥಿಕವಾಗಿ ಆ ದೇಶಗಳು ಸುಭದ್ರವಾಗಿ ಉಳಿದಿವೆ.

ಭಾರತವು ಹೋದ ಡಿಸೆಂಬರ್ನ ಅಂತ್ಯಕ್ಕೆ ಚೀನಾವನ್ನು ಹಿಂದೆ ಹಾಕಿ ವಿಶ್ವದಲ್ಲಿಯೇ ಜನಸಂಖ್ಯಾ ಬಾಹುಳ್ಯದ ಆಧಾರದಲ್ಲಿ ಅತ್ಯಂತ ದೊಡ್ಡ ದೇಶವಾಗಿದೆ. ಚೀನಾದ ಜನಸಂಖ್ಯೆ 141 ಕೋಟಿ ತಲಪಿದರೆ ನಮ್ಮ ಜನಸಂಖ್ಯೆ 142.8 ಕೋಟಿ ದಾಟಿದೆ. ಇದರ ಜೊತೆಗೆ ಇನ್ನೆರಡು ಅಂಶಗಳೂ ಗಮನಾರ್ಹ. ನಮ್ಮ ಜನಸಂಖ್ಯೆಯ ಹೆಚ್ಚಳದ ದರ ಕಡಿಮೆಯಾಗುತ್ತಾ ಇದೆ; ಮಾತ್ರವಲ್ಲ ದುಡಿಯುವ ಸಾಮರ್ಥ್ಯ ಉಳ್ಳವರ ಸಂಖ್ಯೆ ಏರುತ್ತಾ ಇದೆ. ಇವೆರಡು ಬೆಳವಣಿಗೆಗಳೂ ದೇಶದ ಅರ್ಥವ್ಯವಸ್ಥೆಯ ಮೇಲೆ ದೂರಗಾಮಿ ಪರಿಣಾಮವನ್ನು ಬೀರಲಿವೆ. ನಮ್ಮ ದೇಶದ ಆಡಳಿತ ಸೂತ್ರವನ್ನು ಹಿಡಿದವರು ಇದನ್ನು ಗಮನಿಸಿ ಕಾರ್ಯೋನ್ಮುಖರಾಗಬೇಕಾದ ತುರ್ತು ನಮ್ಮ ಮುಂದಿದೆ.

ಜನಸಂಖ್ಯೆಯ ಹೆಚ್ಚಳದ ಕುರಿತಾದ ವಿಶ್ಲೇಷಣೆಗೆ ಪೂರಕವಾದ ಎರಡು ಚಿತ್ರಗಳನ್ನು ನಾವು ಗ್ರಹಿಸಬೇಕು. ಈ ಗ್ರಹಿಕೆಯ ಮೂಲಕ ಜನಸಂಖ್ಯೆಗೆ ಸಂಬಂಧಿಸಿದಂತೆ ಹುಟ್ಟುವ ಸವಾಲುಗಳನ್ನು ಅರಿತುಕೊಳ್ಳುವುದು ಸುಲಭ. 

ಚಿತ್ರ ಒಂದು:
ಶಂಕರ, ಇಂಜಿನಿಯರಿಂಗ್ನಲ್ಲಿ ಡಿಪ್ಲೊಮ ಮಾಡಿ 7-8 ವರ್ಷದಿಂದ ಯಂತ್ರಗಳ ಬಿಡಿಭಾಗಗಳನ್ನು ಉತ್ಪಾದಿಸುವ  ಕಾರ್ಖಾನೆಯಲ್ಲಿ ಮೇಲ್ವಿಚಾರಕನಾಗಿ ದುಡಿಯುತ್ತಿದ್ದಾನೆ. ಉದ್ಯೋಗಕ್ಕೆ ಸೇರುವಾಗ ಅವನ ಕೈಕೆಳಗೆ ಆರು ಮಂದಿ ತರಬೇತಿ ಹೊಂದಿದ ಕಾರ್ಮಿಕರಿದ್ದರು. ಈಗ ಕೇವಲ ಇಬ್ಬರಿದ್ದಾರೆ. ಬೇಡಿಕೆ ಕುಂಠಿತವಾಗಿ ಕಂಪೆನಿಯು ಉತ್ಪಾದನೆಯನ್ನು ಕಡಿತಗೊಳಿಸಿದೆ; ಮೊದಲಿದ್ದಷ್ಟು ಕಾರ್ಮಿಕರು ಈಗ ಬೇಡ ಎಂದು ಸಂಸ್ಥೆಯು ಇತರ ವಿಭಾಗಳಿಂದಲೂ ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಿದೆ. 

ಅವನು ಇನ್ನೊಂದು ಮಾಹಿತಿಯನ್ನೂ ನೀಡಿದ: ಮೇಲ್ವಿಚಾರಕರ ಸಂಖ್ಯೆಯಲ್ಲಿಯೂ ಕಡಿತವಾಗುವ ಸಾಧ್ಯತೆ ಇದೆ; ತಾನೂ ಬೇರೆ ಉದ್ಯೋಗ ಹುಡುಕಬೇಕಾಗಬಹುದು ಎಂದ. ಅವನ ಜೊತೆಯಲ್ಲಿ ಡಿಪ್ಲೊಮ ಓದಿದವರು ಬೆಂಗಳೂರಿನ ಸಣ್ಣ ಸಣ್ಣ ಕಾರ್ಖಾನೆಗಳಲ್ಲಿ ಕೆಲಸಮಾಡುತ್ತಿದ್ದರು; ಕೊರೋನದ ಸಂದರ್ಭದಲ್ಲಿ ಕಾರ್ಖಾನೆಗಳಿಗೆ ಬೀಗ ಬಿದ್ದು ಉದ್ಯೋಗ ಕಳಕೊಂಡರು; ಮನೆಗೆ ವಾಪಸಾದವರು ಇನ್ನೂ ಉದ್ಯೋಗಗಳನ್ನು ಅರಸುತ್ತಿದ್ದಾರೆ.

ಶಂಕರ ನನ್ನ ಕಣ್ಣೆದುರೇ ಬೆಳೆದ ಹುಡುಗ; ಎರಡು ವರ್ಷಗಳ ಹಿಂದೆ ಅವನಿಗೆ ಶಿವಾನಿಯೊಂದಿಗೆ ಮದುವೆಯಾಯಿತು. ಆಕೆ ಕಾಲೇಜು ಡಿಗ್ರಿ ಪಡೆದ ಬಳಿಕ ನಗರದ ಒಂದು ಸರಕಾರಿ ಕಚೇರಿಯಲ್ಲಿ ಸಣ್ಣ ಉದ್ಯೋಗದಲ್ಲಿದ್ದಾಳೆ.  ಮದುವೆಯಾದ ಹೊಸತರಲ್ಲಿ ಇಬ್ಬರನ್ನೂ ಮನೆಗೆ ಕರೆದಿದ್ದೆ. ಮಾತನಾಡಿಸುತ್ತಿದ್ದಂತೆ ಶಿವಾನಿ ಹೇಳಿದಳು: ‘‘ಸರಕಾರಿ ಕಚೇರಿಯಲ್ಲಿ ಕೆಲಸ ಹೌದು; ಆದರೆ ಐದು ವರ್ಷದಿಂದ ಉದ್ಯೋಗವು ಗುತ್ತಿಗೆ ಆಧಾರದಲ್ಲಿದೆ; ವರ್ಷ ವರ್ಷ ಗುತ್ತಿಗೆಯನ್ನು ನವೀಕರಿಸುತ್ತಾರೆ.’’ ಆದರೆ ಅವಳ ಜೊತೆಗೆ ಸೇರಿದ ಕೆಲವು ಯುವತಿಯರು ಅದೃಷ್ಟವಂತೆಯಾಗಿರಲಿಲ್ಲ. ಅವರ ಗುತ್ತಿಗೆಯು ನವೀಕೃತವಾಗದೆ ಈಗ ಮನೆಯಲ್ಲಿದ್ದಾರೆ; ಹಾಗಾಗಿ ಮದುವೆಯೂ ಆಗಿಲ್ಲ. ಶಿವಾನಿಗೆ ವಾರದ ರಜಾದಿನ ಬಿಟ್ಟರೆ ಬೇರೆ ರಜೆಗಳು ಇಲ್ಲ; ಕೆಲಸದ ಭದ್ರತೆಯ ಬಗ್ಗೆ ಅನಿಶ್ಚಿತತೆ ಯಾವತ್ತೂ ಕಾಡುತ್ತಿದೆ.  

ಮಧ್ಯ ವಯಸ್ಕ ವಿಧವೆ ರೇಖಾ ಬೇರೆ ಬೇರೆ ಮನೆಗಳಲ್ಲಿ ಸಹಾಯಕಿಯಾಗಿ ದುಡಿದು ಒಂದಿಷ್ಟು ಸಂಪಾದಿಸಿ ತನ್ನ ಮಗ ರಮೇಶನನ್ನು ಇಂಜಿನಿಯರಿಂಗ್ ಓದಿಸಿದಳು. ಪಿಯುಸಿ ಮತ್ತು ಪ್ರವೇಶ ಪರೀಕ್ಷೆಯಲ್ಲಿ ಒಳ್ಳೆ ಮಾರ್ಕುಗಳು ಸಿಕ್ಕಿದ್ದವು; ಖ್ಯಾತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಇ.ಮೆಕ್ಯಾನಿಕಲ್ ಕೋರ್ಸಿಗೆ ಪ್ರವೇಶ ಸಿಕ್ಕಿತು, ಬ್ಯಾಂಕಿನವರು ಸಾಲವನ್ನೂ ಕೊಟ್ಟರು. ಬಿ.ಇ.ಯಲ್ಲಿ ಉತ್ತಮ ಶ್ರೇಣಿಯಲ್ಲಿ 2018ರಲ್ಲಿ ತೇರ್ಗಡೆಯಾದ. ಆ ವರ್ಷ ಯಾವ ಕಂಪೆನಿಗಳೂ ಕಾಲೇಜಿಗೆ ಬಾರದ ಕಾರಣ ಅವನಿಗೆ ತಕ್ಷಣವೇ ಕೆಲಸ ಸಿಗಲಿಲ್ಲ. ಬೆಂಗಳೂರಿನ ಒಂದು ಸಣ್ಣ ಕಾರ್ಖಾನೆಯಲ್ಲಿ ಕೆಲಸ ಸಿಕ್ಕಿತು. ಕೊರೋನದ ಸಂದರ್ಭದಲ್ಲಿ ಆ ಉದ್ಯೋಗವೂ ಹೋಯಿತು. 

ಇತ್ತೀಚೆಗೆ ನಮ್ಮ ಮನೆಯ ಹಿತ್ತಿಲನ್ನು ಸ್ವಚ್ಛಗೊಳಿಸಲು ಮಂಗಳೂರಿನ ಉರ್ವ ಸ್ಟೋರ್ಸ್ನ ಮೈದಾನದಲ್ಲಿ ಕೈಯಲ್ಲಿ ಚೀಲಗಳನ್ನು ಹಿಡಿದುಕೊಂಡು ಕೆಲಸಕ್ಕಾಗಿ ಕಾದು ಕೊಂಡಿರುವ ಡಜನುಗಟ್ಟಳೆ ವಲಸೆ ಕಾರ್ಮಿಕರಲ್ಲಿ ಒಬ್ಬನಾದ ಬಸವನನ್ನು ಕರೆದಿದ್ದೆ. ಬಾಗಲಕೋಟೆಯ ಯಾವುದೋ ಹಳ್ಳಿಯಿಂದ ಹೆಂಡತಿ ಮತ್ತು ಇಬ್ಬರು ಚಿಕ್ಕ ಮಕ್ಕಳ ಜೊತೆ ಮಂಗಳೂರಿಗೆ ಒಂದು ವರ್ಷದ ಹಿಂದೆ ವಲಸೆ ಬಂದ ಬಸವ ದಿನಾ ಬೆಳಗ್ಗೆ ಉರ್ವಾ ಸ್ಟೋರ್ಸ್ ಮೈದಾನದಲ್ಲಿ, ಕೆಲವೊಮ್ಮೆ ಬಿಜೈ ಬಸ್ಸು ನಿಲ್ದಾಣದಲ್ಲಿ, ಇತರ ವಲಸೆ ಕಾರ್ಮಿಕರಂತೆ, ಯಾರಾದರೂ ಕೆಲಸಕ್ಕೆ ಕರೆಯಬಹುದೆಂಬ ಆಸೆಯಿಂದ ಕಾದಿರುತ್ತಾನೆ. 

ಬಸವನ ಕುಟುಂಬದ ವಾಸ ನಗರದ ಹೊರವಲಯದ ಕೂಳೂರಿನ ಸಮೀಪದಲ್ಲಿರುವ ಟರ್ಪಾಲು ಹೊದಿಸಿದ ಒಂದು ಗುಡಿಸಲಿನಲ್ಲಿ; ಮನೆಯ ಉಪಯೋಗಕ್ಕೆ ನೀರನ್ನು ಸಮೀಪದ ಸಾರ್ವಜನಿಕ ನಳ್ಳಿಯಿಂದ ತರಬೇಕು. ಮಲವಿಸರ್ಜನೆಗೆ ಶೌಚಾಲಯವಿಲ್ಲ. ಆ ವಠಾರದಲ್ಲಿ ಅವನ ಊರಿನಿಂದ ಬಂದ ಇನ್ನೂ ಕೆಲವು ಕುಟುಂಬಗಳದ್ದು ಅದೇ ಕತೆ. ದಿನದ ದುಡಿಮೆ ಮುಗಿಸಿ ಹೊರಡುವಾಗ ಕೇಳಿದ, ‘‘ದಣಿಗಳೇ, ನೀವು ಉಪಯೋಗಿಸದೇ ಇರುವ ಒಂದು ಪೈಂಟ್ ಡಬ್ಬವನ್ನು ನನಗೆ ಕೊಡ್ತೀರ?  ಮನೆಯಲ್ಲಿ ಬೇಕಾದಷ್ಟು ಬಾಲ್ದಿಗಳಿಲ್ಲ’’.

37 ವರ್ಷದ ಮಹೇಶ ಇಂಜಿನಿಯರಿಂಗ್ ಮತ್ತು ದೇಶದ ಒಂದು ಪ್ರತಿಷ್ಠಿತ ಐಐಎಂನ ಪದವೀಧರ. ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಮಾರ್ಕೆಟಿಂಗ್ ವಿಭಾಗದಲ್ಲಿ 2014ರಿಂದ ಕೆಲಸಮಾಡುತ್ತಿದ್ದ. 2016ರಲ್ಲಿ ಮದುವೆಯಾಗಿ ಸಂಸಾರ ಹೂಡಿದ. 2022ರ ಜೂನ್ ತಿಂಗಳಲ್ಲಿ, ಅವನ ಕಂಪೆನಿಯು ವೆಚ್ಚ ಉಳಿಸಲೆಂದು ನೂರಾರು ಯುವಕರನ್ನು ವಜಾಮಾಡಿತು; ಅವರಲ್ಲಿ ಮಹೇಶನೂ ಒಬ್ಬ. ಇನ್ನೂ ಕೆಲಸ ಆಗಿಲ್ಲ. 

ಅದಿತಿ ಒಂದು ಜನಪ್ರಿಯ ಪತ್ರಿಕೆಯಲ್ಲಿ ಪತ್ರಕರ್ತೆಯಾಗಿ ದುಡಿಯುತ್ತಿದ್ದಳು. ನಾನು ಸೇವಾನಿವೃತ್ತನಾಗುವ ಸಂದರ್ಭದಿಂದಲೇ ಆಕೆಯ ಪರಿಚಯವಾಗಿತ್ತು. ಕೊರೋನ ಸಂದರ್ಭದಲ್ಲಿ ಭೇಟಿಯಾಗಿರಲಿಲ್ಲ. ಯಾವುದೋ ಒಂದು ಕಾರ್ಯಕ್ರಮದಲ್ಲಿ ಸಿಕ್ಕಿ ಗುರುತು ಹಿಡಿದು ನಮಸ್ಕಾರ ಹೇಳಿದಾಗ ಕೇಳಿದೆ, ‘‘ಅದಿತಿ, ಅದೇ ಪೇಪರಿನಲ್ಲಿ ಇದ್ದೀರ?’’. ‘‘ನನ್ನನ್ನು ಕೆಲಸದಿಂದ ವಜಾ ಮಾಡಿದರು, ಸರ್; ನನ್ನ ಕೆಲವು ಸಹೋದ್ಯೋಗಿಗಳಿಗೂ ಅದೇ ಗತಿಯಾಯ್ತು’’ ಎಂದಳು. ಅವಳ ಮಗಳ ಶಾಲೆಯ ಓದು ಮುಗಿದು ಉಚ್ಚ ಶಿಕ್ಷಣದ ಬಗ್ಗೆ ಕನಸು ಕಟ್ಟಿದ್ದಳು. 

ಭಾರತದ ಪ್ರತಿಯೊಂದು ಊರಿನಲ್ಲಿಯೂ, ಶಂಕರ, ಅದಿತಿ, ಮಹೇಶ, ಬಸವ, ರಮೇಶ, ಶಿವಾನಿಯಂತಹ ಸಹಸ್ರಾರು ಯುವಕ ಯುವತಿಯರನ್ನು ನಾವು ಕಾಣಬಹುದು. ದೇಶದ ನಾಯಕರ ದೃಷ್ಟಿಯಿಂದ ಇವರೆಲ್ಲ ನಿರ್ಜೀವ ಅಂಕೆಗಳು; ಅಥವಾ ಶೇಕಡಾವಾರು ಪ್ರಮಾಣದ, ಲೆಕ್ಕಿಸಲು ಸಾಧ್ಯವಾಗದಷ್ಟು ಕಿರಿದಾದ ಒಂದು ಭಾಗ ಮಾತ್ರ. 

ಚಿತ್ರ ಎರಡು:
ಇತ್ತೀಚೆಗೆ ಬಂದ ಕೆಲವು ಮಾಹಿತಿಗಳು ಇನ್ನೊಂದು ಚಿತ್ರವನ್ನು ನೀಡುತ್ತವೆ. ಭಾರತೀಯ ರೈಲ್ವೇ ಒಂದರಲ್ಲಿಯೇ 3.11 ಲಕ್ಷ ಹುದ್ದೆಗಳು ಖಾಲಿ ಇವೆ. ಕೇಂದ್ರದ ಸಚಿವ ಜಿತೇಂದ್ರ ಸಿಂಗರು 2022 ಆಗಸ್ಟ್ ತಿಂಗಳಿನಲ್ಲಿ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಕೇಂದ್ರ ಸರಕಾರದ ವಿವಿಧ ವಿಭಾಗಗಳಲ್ಲಿ ಒಟ್ಟು 9.79 ಲಕ್ಷ ಹುದ್ದೆಗಳು ಖಾಲಿ ಇವೆ ಎಂದಿದ್ದರು. ಕೆಲವು ವಿಭಾಗಗಳಲ್ಲಿ  ನಿವೃತ್ತರಾದವರ ಸ್ಥಾನಕ್ಕೆ ಅನೇಕ ವರ್ಷಗಳಿಂದ ಹೊಸ ನೇಮಕಾತಿ ನಡೆದೇ ಇಲ್ಲ. ಅದರಲ್ಲಿ ಪ್ರಧಾನ ಮಂತ್ರಿಯವರ ಸಚಿವಾಲಯವೂ ಸೇರಿದೆ. ಈಗಾಗಲೇ ಕೆಲವು ಉದ್ಯೋಗ ಮೇಳಗಳನ್ನು ಕೇಂದ್ರ ಸರಕಾರ ಮಾಡಿದೆ. ಆ ಮೇಳಗಳಲ್ಲಿ ಅರ್ಹ ಯುವಜನರಿಗೆ ನೇಮಕಾತಿ ಪತ್ರಗಳನ್ನು ವಿತರಿಸುವ ಕಾರ್ಯವನ್ನು ಕೈಗೊಳ್ಳಲಾಗಿತ್ತು. ವಾಸ್ತವವಾಗಿ ಎಷ್ಟು ಮಂದಿಗೆ ಖಾಯಂ ಉದ್ಯೋಗಗಳು ಸಿಕ್ಕಿವೆ ಎಂಬುದು ತಿಳಿದಿಲ್ಲ. 

2022ರಲ್ಲಿ ಜಗತ್ತಿನಾದ್ಯಂತ 1,046 ಕಂಪೆನಿಗಳು 1.61 ಲಕ್ಷ ಕೌಶಲ್ಯ ನಿಪುಣ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿವೆ ಎಂಬ ವರದಿ ಬಂದಿದೆ. ಈ ವರ್ಷದ ಜನವರಿ-ಫೆಬ್ರವರಿ ಎರಡೇ ತಿಂಗಳುಗಳಲ್ಲಿ 417 ಕಂಪೆನಿಗಳು 1.2 ಲಕ್ಷ ಯುವಜನರನ್ನು ಮನೆಗೆ ಕಳಿಸಿವೆ. ಮಾತ್ರವಲ್ಲ, ಈ ಸಂಖ್ಯೆ ಇನ್ನೂ ಏರಲಿದೆ. ಈ ಬೆಳವಣಿಗೆಯ ಬಿಸಿ ಭಾರತದ ತರುಣತರುಣಿಯರಿಗೆ ನಾಟಲಿದೆ, ವಿದೇಶದಲ್ಲಿ ಸಿಗಬಹುದಾದ ಉದ್ಯೋಗಾವಕಾಶಗಳೂ ಕುಂಠಿತಗೊಳ್ಳಲಿವೆ; ಅಲ್ಲಿರುವ ಅನೇಕರು ಸ್ವದೇಶಕ್ಕೆ ಮರಳಬೇಕಾಗಬಹುದು. 

ವೃತ್ತಿ ಶಿಕ್ಷಣ ಸಂಸ್ಥೆಗಳಲ್ಲಿ ಓದಿದ ಸ್ನಾತಕರನ್ನು ಪ್ರತಿಷ್ಠಿತ ಕಂಪೆನಿಗಳು ಕಾಲೇಜುಗಳಿಗೇ ಬಂದು ನೇರವಾಗಿ ನೇಮಕಾತಿ ಮಾಡುವ ಕ್ರಮ ಅನೇಕ ವರ್ಷಗಳಿಂದ ವಾಡಿಕೆಯಲ್ಲಿತ್ತು. ಈ ನೇಮಕಾತಿಯ ಪ್ರಮಾಣ ಇತ್ತೀಚೆಗಿನ ದಿನಗಳಲ್ಲಿ ಇಳಿಮುಖವಾಗಿದೆ. ಇದಕ್ಕೆ ಕಾರಣಗಳು ಎರಡು: ಮೊದಲನೆಯದು, ಕಾಲೇಜುಗಳಲ್ಲಿ ನೀಡಲಾಗುತ್ತಿರುವ ಕೌಶಲ್ಯ ತರಬೇತಿ ಗುಣಮಟ್ಟದ್ದಾಗಿಲ್ಲ; ಎರಡನೆಯದು, ಕಂಪೆನಿಗಳಲ್ಲಿ ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತಿಲ್ಲ. 

ಉದಾರೀಕರಣದ ಆರಂಭದಿಂದಲೇ ವೆಚ್ಚವನ್ನು ಕಡಿತಗೊಳಿಸುವ ಉದ್ದೇಶದಿಂದ ಖಾಲಿಯಾದ ಅನೇಕ ಹುದ್ದೆಗಳಿಗೆ ಹೊಸತಾಗಿ ಖಾಯಂ ನೇಮಕಾತಿಯ ಬದಲು, ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡುವ ಪರಿಪಾಠ ವ್ಯಾಪಕವಾಗಿ ಬೆಳೆದಿದೆ. ಸರಕಾರಿ ಸಂಸ್ಥೆಗಳು, ಸರಕಾರದ ಅನುದಾನ ಪಡೆದು ನಡೆಸಲ್ಪಡುವ ಕಂಪೆನಿಗಳು ಹಾಗೂ ಸರಕಾರಿ ಕಚೇರಿಗಳಲ್ಲಿಯೂ ಇದೇ ಪದ್ಧತಿಯನ್ನು ಅಳವಡಿಸಲಾಗಿದೆ. ಖಾಲಿ ಹುದ್ದೆಗಳಿಗೆ ನೇಮಕಾತಿ ಮಾಡುವ ಕ್ರಮವನ್ನೂ ಕೈಬಿಡಲಾಗಿದೆ. ಗುತ್ತಿಗೆ ನೌಕರರಿಗೆ ವರ್ಷವರ್ಷವೂ ವೇತನವನ್ನು ಏರಿಸಬೇಕಾಗಿಲ್ಲ; ಖಾಯಂ ನೌಕರರಷ್ಟು ರಜೆಗಳನ್ನು ನೀಡಬೇಕಾಗಿಲ್ಲ; ಭವಿಷ್ಯ ನಿಧಿ ಅಥವಾ ನಿವೃತ್ತಿವೇತನದ ಹೊರೆ ಸರಕಾರಕ್ಕೆ ಇಲ್ಲ. ಈ ತನಕ ದೀರ್ಘಕಾಲದ ಸೇವೆ ಸಲ್ಲಿಸುವ ಅವಕಾಶವಿದ್ದು, ಸಮಾಜದಲ್ಲಿ ಒಂದು ವಿಶಿಷ್ಟವಾದ ಗೌರವವನ್ನು ನೀಡುತ್ತಿದ್ದ ಸೇನೆಗೆ ಮಾಡುವ ನೇಮಕಾತಿಯನ್ನು ‘ಅಗ್ನಿವೀರ’ ಪದ್ಧತಿಯಲ್ಲಿ ಕೇವಲ ಐದು ವರ್ಷಗಳ ಸೇವೆಗೆ ಸೀಮಿತಗೊಳಿಸಲಾಗಿದೆ.  ಇದೇ ದಾರಿಯನ್ನು ರಾಜ್ಯ ಸರಕಾರದ ವಿಭಿನ್ನ ವಿಭಾಗಗಳು ಮತ್ತು ಸಂಸ್ಥೆಗಳು ಅನುಸರಿಸುತ್ತಿವೆ. ಸರಕಾರಿ ರಂಗದ ಬ್ಯಾಂಕುಗಳೂ ಈ ಅಭ್ಯಾಸವನ್ನು ಬೆಳೆಸಿವೆ. 

ಈ ಎಲ್ಲ ಬೆಳವಣಿಗೆಗಳು ಯುವಜನರ ಆಶೋತ್ತರಗಳಿಗೆ ಮತ್ತಷ್ಟು ಧಕ್ಕೆಯುಂಟುಮಾಡಲಿವೆ. ಅದಿತಿ, ರಮೇಶ, ಮಹೇಶ, ಶಿವಾನಿ ಮುಂತಾದವರು ಈ ಬೆಳವಣಿಗೆಗಳ ದೃಷ್ಟಾಂತಗಳು ಮಾತ್ರ.

ಈ ಎರಡು ಚಿತ್ರಗಳು ದೇಶದ ತೀವ್ರವಾದ ನಿರುದ್ಯೋಗದ ಸಮಸ್ಯೆಯನ್ನು ಬಿಂಬಿಸುತ್ತಿರುವ ಸಂದರ್ಭದಲ್ಲಿ ಇದರಿಂದ ಆಗಬಹುದಾದ ದೀರ್ಘಾವಧಿಯ ಪರಿಣಾಮದ ಬಗ್ಗೆ  ಇನ್ನೊಂದು ಚಿತ್ರ ಕಾಣಲು ಆರಂಭವಾಗಿದೆ. ಈ ಚಿತ್ರ, ಭಾರತದ ಜನಸಂಪನ್ಮೂಲದ ಈಗಿನ ಅನನ್ಯವಾದ ವೈಶಿಷ್ಟ್ಯಕ್ಕೆ ಸಂಬಂಧಿಸಿದೆ.  

‘ಡೆಮೊಗ್ರಾಫಿಕ್ ಡಿವಿಡೆಂಡ್’:
ಒಂದು ದೇಶದ ಮಾನವ ಸಂಪನ್ಮೂಲವನ್ನು ಮೂರು ಭಾಗವಾಗಿ ವಿಂಗಡಿಸಲಾಗುತ್ತದೆ: ಒಂದು, ಮಕ್ಕಳು (14 ವರ್ಷದ ತನಕದವರು), ಎರಡು, ಸಾಮಾನ್ಯವಾಗಿ ದುಡಿಯುವ ಸಾಮರ್ಥ್ಯ ಇದೆಯೆಂದು ಪರಿಗಣಿಸಲ್ಪಡುವವರು (15ರಿಂದ 64 ವರ್ಷದವರು) ಮತ್ತು ಮೂರು, ಹಿರಿಯ ನಾಗರಿಕರು (65 ವರ್ಷದ ಮೇಲಿನವರು). ವಿಶ್ವ ಸಂಸ್ಥೆಯ ಜನಸಂಖ್ಯಾ ನಿಧಿಯ (ಯುನೈಟೆಡ್ ನೇಶನ್ಸ್ ಪಾಪ್ಯುಲೇಶನ್ ಫಂಡ್) ಪ್ರಕಾರ, ದುಡಿಯಲು ಸಾಮರ್ಥ್ಯವಿರುವ ವರ್ಗದ ಹೆಚ್ಚಳವಾದಂತೆ ಆರ್ಥಿಕ ಚಟುವಟಿಕೆ ವೃದ್ಧಿಸಿ ವಿಭಿನ್ನ ರೀತಿಯಲ್ಲಿ ದೇಶಕ್ಕೆ ಪ್ರಯೋಜನವಾಗುವ ಮಾರ್ಗವನ್ನು ತೆರೆದಿಡುತ್ತದೆ. ಈ ಪ್ರಯೋಜನವನ್ನು ‘ಜನಸಂಖ್ಯಾ ಬಾಹುಳ್ಯದಿಂದ ಸಿಗುವ ಲಾಭಾಂಶ’ (ಆಂಗ್ಲ ಭಾಷೆಯಲ್ಲಿ ‘ಡೆಮೊಗ್ರಾಫಿಕ್ ಡಿವಿಡೆಂಡ್’) ಎನ್ನುತ್ತದೆ, ಆ ಸಂಸ್ಥೆ. 

ಭಾರತದಲ್ಲಿ ಇತ್ತೀಚೆಗಿನ ವರ್ಷಗಳಲ್ಲಿ ಜನಸಂಖ್ಯೆಯ ಹೆಚ್ಚಳದ ದರ ಕಡಿಮೆಯಾಗುತ್ತಾ ಇದೆ. ಇದಕ್ಕೆ ಉಪಯೋಗಿಸಲಾಗುವ ಮಾನದಂಡಕ್ಕೆ ‘ಟೋಟಲ್ ಫರ್ಟಿಲಿಟಿ ರೇಟ್’ (ಟಿಎಫ್ಆರ್) ಅಂದರೆ ಮಹಿಳೆಯ ಜೀವಿತಾವಧಿಯಲ್ಲಿ ಆಕೆಗೆ ಹುಟ್ಟಿದ ಅಥವಾ ಹುಟ್ಟುವ ಸಾಧ್ಯತೆಯಿರುವ ಒಟ್ಟು ಮಕ್ಕಳ ಸಂಖ್ಯೆ. ಈ ಸಂಖ್ಯೆ 2.1 ಇದ್ದರೆ ಒಟ್ಟು ಜನಸಂಖ್ಯೆಯು ಸ್ಥಿರವಾಗಿ ಉಳಿಯುತ್ತದೆ. 

2019-21ರ ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸರ್ವೇಯ ವರದಿಯಂತೆ 2005-06ರಲ್ಲಿ ಭಾರತದ ಟಿಎಫ್ಆರ್ 2.7 ಇತ್ತು; 2015-16ರಲ್ಲಿ ಅದು 2.2ಕ್ಕೆ ಇಳಿದು, 2020-21ಕ್ಕೆ 2.0ಗೆ ಕುಸಿದಿದೆ. ಟಿಎಫ್ಆರ್ 2.0ಕ್ಕೆ  ತಲುಪಿದಾಗ ಕಾಲವಶರಾದ ದಂಪತಿಗಳ ಸ್ಥಾನವನ್ನು ತುಂಬಲು ಇನ್ನಿಬ್ಬರು ಇರುವುದಿಲ್ಲ. ಇದರಿಂದಾಗಿ ಜನಸಂಖ್ಯೆಯು ಕುಗ್ಗುತ್ತಾ ಹೋಗುತ್ತದೆ. (ಚೀನಾ ಮತ್ತು ಜಪಾನ್ ದೇಶಗಳು ಈ ಹಂತಕ್ಕೆ ಈಗಾಗಲೇ ತಲುಪಿವೆ). ಟಿಎಫ್ಆರ್ ಕುಸಿಯಲು ಕಾರಣಗಳು- ಆರ್ಥಿಕ ಅಭಿವೃದ್ಧಿ, ಹೆಚ್ಚುತ್ತಿರುವ ವಿದ್ಯಾಭ್ಯಾಸ ಮತ್ತು ಮಹಿಳೆಯರ ಸಬಲೀಕರಣ. 

ಟಿಎಫ್ಆರ್ನ ಕುಸಿತದಿಂದ ಜನಸಂಖ್ಯೆಯ ಸಂರಚನೆಯಲ್ಲಿ ಬದಲಾವಣೆಯಾಗುತ್ತದೆ. ಕೋಷ್ಟಕದಲ್ಲಿ 1990ರ ದಶಕದಿಂದ ಭಾರತದಲ್ಲಿ ಆಗುತ್ತಿರುವ ಈ ಬದಲಾವಣೆಯನ್ನು ಸಂಕ್ಷೇಪವಾಗಿ ಕೊಡಲಾಗಿದೆ. 

ಮಾಹಿತಿಯ ಪ್ರಕಾರ 1990 ಮತ್ತು 2020ರ ಅವಧಿಯಲ್ಲಿ 14 ವರ್ಷ ವಯಸ್ಸಿನ ತನಕದ ಜನಸಂಖ್ಯೆಯ ಪ್ರಮಾಣ ಶೇ. 38ರಿಂದ ಶೇ. 26.2ಕ್ಕೆ ಇಳಿದಿದೆ; 2030ಕ್ಕೆ ಅದು ಶೇ. 23 ಕ್ಕೆ ಇಳಿದು 2050ರಲ್ಲಿ ಶೇ. 18.5ಕ್ಕೆ ಕುಸಿಯಲಿದೆ. ಅಂದರೆ ಒಟ್ಟು ಯುವಕರ ಪ್ರಮಾಣ ತೀವ್ರವಾಗಿ ಕಡಿಮೆಯಾಗಲಿದೆ. ದುಡಿಯುವ ವರ್ಗದ ಪ್ರಮಾಣ 2020ರಲ್ಲಿ ಶೇ. 67.2ರಷ್ಟಿತ್ತು, 2030ರ ಅಂದಾಜಿಗೆ ನಿಧಾನಗತಿಯಲ್ಲಿ ಏರಿ ಶೇ. 68.4 ಆಗಬಹುದೆಂದು ಅಂದಾಜಿಸಲಾಗಿದೆ; ಆದರೆ ಆನಂತರದ 20 ವರ್ಷಗಳಲ್ಲಿ ಅದು ಇಳಿಮುಖವಾಗಿ ಶೇ. 67.7ಕ್ಕೆ ಕುಸಿಯಲಿದೆ. 

ಟಿಎಫ್ಆರ್ನ ಕುಸಿತ ಆರಂಭವಾದಾಗ ದುಡಿಯುವ (ಎರಡನೆಯ) ವರ್ಗಕ್ಕೆ ಸೇರ್ಪಡೆಯಾಗುವವರ ಸಂಖ್ಯೆಯು ಕುಸಿಯುತ್ತದೆ. ಕ್ರಮೇಣ ದೇಶದಲ್ಲಿ ಮೂರನೆಯ ವರ್ಗದ, ಅಂದರೆ ಹಿರಿಯ ನಾಗರಿಕರ ಸಂಖ್ಯೆಯೇ ಹೆಚ್ಚುತ್ತದೆ. ಇದರ ಅರ್ಥ ಜನಸಂಖ್ಯಾ ಬಾಹುಳ್ಯದ ಲಾಭಾಂಶವು ಕುಸಿಯಲು ಆರಂಭವಾಗುತ್ತದೆ ಎಂದು. ಆ ಹಂತಕ್ಕೆ ಸಮಾಜವು ತಲಪುವ ಮೊದಲೇ ಜನಸಂಪನ್ಮೂಲವನ್ನು ಸಮರ್ಥವಾಗಿ ಆ ದೇಶ ಬಳಸಿಕೊಳ್ಳಬೇಕು. ಈ ಪ್ರಕ್ರಿಯೆ ವಿಳಂಬವಾದಷ್ಟು ‘ಡೆಮೊಗ್ರಾಫಿಕ್ ಡಿವಿಡೆಂಡ್’ ಕ್ಷಯಿಸುತ್ತಾ ಹೋಗುತ್ತದೆ. 

ಕೊರೋನೋತ್ತರ ವರ್ಷಗಳಲ್ಲಿ ನಮ್ಮ ಸರಕಾರಗಳು ಡೆಮೊಗ್ರಾಫಿಕ್ ಡಿವಿಡೆಂಡ್ ಅನ್ನು ಸದುಪಯೋಗ ಮಾಡಿಕೊಳ್ಳುವ ಬಗ್ಗೆ ನಿಖರವಾಗಿ ಗಮನ ಹರಿಸಿಲ್ಲ. ಉದ್ಯೋಗ ಸೃಷ್ಟಿ ಮತ್ತು ಉದ್ಯೋಗ ಭದ್ರತೆಗಳ ಕುರಿತಂತೆ ನಿರ್ದಿಷ್ಟವಾದ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಳಂಬವಾದಷ್ಟು ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ. ಜಪಾನ್ ಮತ್ತು ಚೀನಾಗಳು ಈಗಾಗಲೇ ಪ್ರಗತಿ ಹೊಂದಿದ ದೇಶಗಳು; ಅವುಗಳು ತಮ್ಮ ತಮ್ಮ ಡೆಮೊಗ್ರಾಫಿಕ್ ಡಿವಿಡೆಂಡ್ ಅನ್ನು ಸಮರ್ಥವಾಗಿ ಬಳಸಿಕೊಂಡೇ ಮುಂದಕ್ಕೆ ಬಂದಿವೆ. ಹಾಗಾಗಿ ಅವುಗಳ ಜನಸಂಖ್ಯೆ ಇಳಿಮುಖವಾದರೂ ಆರ್ಥಿಕವಾಗಿ ಆ ದೇಶಗಳು ಸುಭದ್ರವಾಗಿ ಉಳಿದಿವೆ. 

ಇನ್ನೂ ಪ್ರಗತಿಶೀಲದೇಶವೆಂದು ಪರಿಗಣಿಸಲ್ಪಡುವ ಭಾರತವು ಅದಿತಿ, ರಮೇಶ, ಮಹೇಶ, ಬಸವ, ಶಿವಾನಿಯಂತಹ ದುಡಿಯುವ ವರ್ಗಕ್ಕೆ ಸೇರುತ್ತಿರುವ ಮತ್ತು ಈಗಾಗಲೇ ಸೇರಿರುವ ಯುವಜನರನ್ನು-ಅವರೆಲ್ಲ ಹಿರಿಯ ನಾಗರಿಕರ ವರ್ಗಕ್ಕೆ ‘ತೇರ್ಗಡೆ’ಹೊಂದುವ ಮೊದಲೇ- ಸಮರ್ಥವಾಗಿ ಬಳಸಿ ಆದಾಯ ಸಂಪಾದನೆಯ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿದಾಗ ಅವರಿಗೆ ಮಾತ್ರವಲ್ಲ ದೇಶಕ್ಕೂ ದೀರ್ಘಾವಧಿಯ ಲಾಭವು ಲಭಿಸುತ್ತದೆ; ‘ಡೆಮೊಗ್ರಾಫಿಕ್ ಡಿವಿಡೆಂಡ್’ ಅನ್ನು ಬಳಸಿದಂತಾಗುತ್ತದೆ.


(ಇಲ್ಲಿ ಉಲ್ಲೇಖಿಸಿದ ಘಟನೆಗಳು ವಾಸ್ತವ; ಹೆಸರುಗಳನ್ನು ಮಾತ್ರ ಬದಲಾಯಿಸಿದ್ದೇನೆ-ಲೇ.)

Similar News