ಲುಲು ಗ್ರೂಪ್‌ ಅಧ್ಯಕ್ಷ ಯೂಸುಫ್‌ ಅಲಿ ಅವರಿಗೆ ಈಡಿ ಸಮನ್ಸ್‌

Update: 2023-03-14 08:11 GMT

ಹೊಸದಿಲ್ಲಿ: ವಡಕ್ಕಂಚೆರಿ ಲೈಫ್‌ ಮಿಷನ್‌ ವಸತಿ ಸಂಕೀರ್ಣ ಹಗರಣದಲ್ಲಿ ವಿದೇಶಿ ದೇಣಿಗೆ (ನಿಯಂತ್ರಣ) ಕಾಯಿದೆಯ ಉಲ್ಲಂಘನೆಯಾಗಿದೆ ಎಂಬ ಆರೋಪಗಳಿಗೆ ಸಂಬಂಧಿಸಿದ ತನಿಖೆ ಕುರಿತಂತೆ ವಿಚಾರಣೆ ನಡೆಸಲು ಲುಲು ಗ್ರೂಪ್‌ (Lulu Group) ಆಡಳಿತ ನಿರ್ದೇಶಕ ಮತ್ತು ಅಧ್ಯಕ್ಷ ಎಂ ಎ ಯೂಸುಫ್‌ ಅಲಿ (Yusuff Ali) ಅವರಿಗೆ ಜಾರಿ ನಿರ್ದೇಶನಾಲಯ (ED) ಸಮನ್ಸ್‌ ಜಾರಿಗೊಳಿಸಿ ಮಾರ್ಚ್‌ 16 ರಂದು  ಹಾಜರಾಗುವಂತೆ ಸೂಚಿಸಿದೆ. ಅಲಿ ಅವರನ್ನು ಈ ಹಿಂದೆ ಮಾರ್ಚ್‌ 1 ರಂದು ವಿಚಾರಣೆಗೆ ಕರೆಯಲಾಗಿದ್ದರೂ ಅವರು ಆ ದಿನ ಹಾಜರಾಗಿರಲಿಲ್ಲ ಎಂದು ವರದಿಯಾಗಿದೆ.

ಕೇರಳ ಮೂಲದ ಯೂಸುಫ್‌ ಅಲಿ ಅವರು ಯುಎಇ ನಲ್ಲಿ ವಾಸಿಸುತ್ತಾರೆ. ಲುಲು ಹೈಪರ್‌ಮಾರ್ಕೆಟ್‌ ಮತ್ತು ಲುಲು ಶಾಪಿಂಗ್‌ ಮಾಲ್‌ಗಳನ್ನು ಲುಲು ಗ್ರೂಪ್‌ ನಡೆಸುತ್ತಿದೆ.

ಲೈಫ್‌ ಮಿಷನ್‌ ಹಗರಣಕ್ಕೆ ಸಂಬಂಧಿಸಿದಂತೆ ಕಳೆದ ಶನಿವಾರ ಜಾರಿ ನಿರ್ದೇಶನಾಲಯವು ಕೇರಳ ಮುಖ್ಯಮಂತ್ರಿಯ ಮಾಜಿ ಮುಖ್ಯ ಕಾರ್ಯದರ್ಶಿ ಎಂ ಶಿವಶಂಕರ್‌ ಅವರನ್ನು ಬಂಧಿಸಿದೆ. ನಂತರ ಅವರು ಅನಾರೋಗ್ಯಕ್ಕೀಡಾದ ಹಿನ್ನೆಲೆಯಲ್ಲಿ ಅವರನ್ನು ಕೊಚ್ಚಿಯ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ತ್ರಿಶ್ಶೂರಿನ ವಡಕ್ಕಂಚೆರಿ ಪಟ್ಟಣದಲ್ಲಿ ಸರ್ಕಾರದ ವಸತಿ ಯೋಜನೆಯನ್ನು ಜಾರಿಗೊಳಿಸುತ್ತಿರುವ ಬಿಲ್ಡರ್‌ಗಳಿಂದ  ಪಡೆಯಲಾಗಿದೆಯೆನ್ನಲಾದ ಲಂಚಕ್ಕೆ ಸಂಬಂಧಿಸಿದ ಹಗರಣ ಲೈಫ್‌ ಮಿಷನ್‌ ಹಗರಣವಾಗಿದೆ.

ಯುಎಇ ಕಾನ್ಸುಲೇಟ್‌ ಮೂಲಕ ರೆಡ್‌ ಕ್ರೆಸೆಂಟ್‌ ಒದಗಿಸಿದ ರೂ. 20 ಕೋಟಿ ಅನುದಾನದ ಪೈಕಿ ರೂ 14.50 ಕೋಟಿ ವೆಚ್ಚದಲ್ಲಿ 140 ಕುಟುಂಬಗಳಿಗೆ ಮನೆಗಳನ್ನು ನಿರ್ಮಿಸುವ ಯೋಜನೆ ಇದಾಗಿತ್ತು.

ಯುನಿಟ್ಯಾಕ್‌ ಬಿಲ್ಡರ್‌ ಇದರ ಆಡಳಿತ ನಿರ್ದೇಶಕ ಸಂತೋಶ್‌ ಇಯಪ್ಪನ್‌  ಹಾಗೂ ಸೇನ್‌ ವೆಂಚರ್ಸ್‌  ಅನ್ನು ಮೊದಲ ಎರಡು ಆರೋಪಿಗಳನ್ನಾಗಿ ಹೆಸರಿಸಿ ಕಾಂಗ್ರೆಸ್‌ ಶಾಸಕ ಅನಿಲ್‌ ಅಕ್ಕರ ನೀಡಿದ್ದ ದೂರಿನ ಆಧಾರದಲ್ಲಿ ಸಿಬಿಐ 2020 ರಲ್ಲಿ ಕೊಚ್ಚಿ ಕೋರ್ಟಿನಲ್ಲಿ ಐಪಿಸಿ ಸೆಕ್ಷನ್‌ 120ಬಿ ಹಾಗೂ ಎಫ್‌ಸಿಆರ್‌ಎ ಇದರ ಸೆಕ್ಷನ್‌ 35 ಅನ್ವಯ ಎಫ್‌ಐಆರ್‌ ದಾಖಲಿಸಿತ್ತು.

ಮೇಲಿನ ಎರಡೂ ಕಂಪೆನಿಗಳು ಅಂತಾರಾಷ್ಟ್ರೀಯ ಮಾನವಸೇವಾ ಸಂಸ್ಥೆ ರೆಡ್‌ ಕ್ರೆಸೆಂಟ್‌ ಜೊತೆಗಿನ ಒಪ್ಪಂದದಂತೆ ನಿರ್ಮಾಣಕ್ಕೆ ಮುಂದಾಗಿದ್ದವು. ರೆಡ್‌ ಕ್ರೆಸೆಂಟ್‌ನಿಂದ ಗುತ್ತಿಗೆದಾರರ ಆಯ್ಕೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಕಾಂಗ್ರೆಸ್‌ ಆರೋಪಿಸಿತ್ತು.

ಆದರೆ ಎರಡೂ ಸಂಸ್ಥೆಗಳು ರೆಡ್‌ ಕ್ರೆಸೆಂಟ್‌ನಿಂದ ನೇರವಾಗಿ ಅನುದಾನ ಪಡೆದುಕೊಂಡು ನಿರ್ಮಾಣ ಕಾರ್ಯ ನಡೆಸುವ ಕುರಿತಂತೆ ಒಪ್ಪಂದಕ್ಕೆ ಸಹಿ ಹಾಕಿದ್ದವು ಎಂದು ಲೈಫ್‌ ಮಿಷನ್‌ ಸಿಇಒ ನ್ಯಾಯಾಲಯಕ್ಕೆ ಹೇಳಿದ್ದರು.

ರೆಡ್‌ ಕ್ರೆಸೆಂಟ್‌ ಜೊತೆ ಒಪ್ಪಂದಕ್ಕೆ ಸಹಿ ಹಾಕಿದ ಕಂಪೆನಿಗಳು ಎಫ್‌ಸಿಆರ್‌ಎ ಇದರ ಸೆಕ್ಷನ್‌ 3 ಅಡಿಯಲ್ಲಿ ವಿದೇಶಿ ದೇಣಿಗೆ ಪಡೆಯಲು ನಿರ್ಬಂಧಿತರಾದವರ ವರ್ಗದಲ್ಲಿ ರೆಡ್‌ ಕ್ರೆಸೆಂಟ್‌ ಬರುವುದಿಲ್ಲ ಎಂದೂ ಲೈಫ್‌ ಮಿಷನ್‌ ಸಿಇಒ ಹೇಳಿಕೊಂಡಿದ್ದರು.

ಇದನ್ನೂ ಓದಿ: ತಮಿಳುನಾಡಿನಲ್ಲಿ ವಲಸಿಗ ಕಾರ್ಮಿಕರ ಮೇಲೆ ಹಲ್ಲೆ: ಹಿಂದುತ್ವ ಸಂಘಟನೆಯ ಇಬ್ಬರು ಕಾರ್ಯಕರ್ತರ ಸಹಿತ ನಾಲ್ವರ ಬಂಧನ

Similar News