ಬಿಜೆಪಿಯಲ್ಲಿ ಈಗ ಬಿಎಸ್ ವೈಗಿಂತ ಸಿ.ಟಿ.ರವಿ ದೊಡ್ಡವರಾಗಿದ್ದಾರೆ: ಡಿ.ಕೆ.ಶಿವಕುಮಾರ್

Update: 2023-03-14 12:11 GMT

ಬೆಂಗಳೂರು, ಮಾ.14: ‘ಬಿಜೆಪಿಯಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೈಕಮಾಂಡ್ ಆಗಿದ್ದು, ಯಡಿಯೂರಪ್ಪ ಅವರಿಗಿಂತ ಬಹಳ ದೊಡ್ಡವರಾಗಿದ್ದಾರೆ. ಹೀಗಾಗಿ ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರ ಟಿಕೆಟ್ ವಿಚಾರವಾಗಿ ಮಾತನಾಡಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. 

ಮಂಗಳವಾರ ಸದಾಶಿವನಗರದಲ್ಲಿರುವ ತಮ್ಮ ನಿವಾಸದ ಬಳಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ವಿಜಯೇಂದ್ರಗೆ ಶಿಕಾರಿಪುರ ಟಿಕೆಟ್ ನೀಡುವುದು ಬಿಜೆಪಿಯ ಆಂತರಿಕ ವಿಚಾರ. ಬಿಜೆಪಿಯಲ್ಲಿ ಬಹಳ ಹಿಂದಿನಿಂದ ಈ ಬಗ್ಗೆ ಚರ್ಚೆಯಾಗುತ್ತಿದೆ ಎಂದರು.

ಬಿಜೆಪಿಯಲ್ಲಿ ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಲು ಪಿತೂರಿ ನಡೆದಿದ್ದು, ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ಇದರಲ್ಲಿ ಕಾಂಗ್ರೆಸ್ ಪಾತ್ರವಿಲ್ಲ. ಜನ ಯಡಿಯೂರಪ್ಪ ಅವರ ಮುಖ ನೋಡಿ ಬಿಜೆಪಿಗೆ ಮತಹಾಕಿದ್ದರು. ಆದರೆ ಯಡಿಯೂರಪ್ಪ ಅವರ ಕಣ್ಣೀರು ರಾಜ್ಯ ರಾಜಕಾರಣದ ಚಿತ್ರಣ ಬದಲಿಸಲಿದೆ. ಸಿ.ಟಿ.ರವಿ ಹೈಕಮಾಂಡ್ ಆಗಿದ್ದು, ಅವರು ಯಡಿಯೂರಪ್ಪ ಅವರಿಗಿಂತಲೂ ದೊಡ್ಡವರಾಗಿದ್ದಾರೆ. ಇದು ಆ ಪಕ್ಷದ ಆಂತರಿಕ ವಿಚಾರವಾಗಿದ್ದು, ಅವರೆ ತೀರ್ಮಾನ ಮಾಡುತ್ತಾರೆ ಎಂದು ಅವರು ತಿಳಿಸಿದರು.

ಸಚಿವರು, ಶಾಸಕರು ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ನಾನು ಈಗ ಏನನ್ನೂ ಹೇಳುವುದಿಲ್ಲ. ಸಮಯ ಎಲ್ಲದಕ್ಕೂ ಉತ್ತರ ನೀಡಲಿದೆ. ನಾನು ಯಾವುದೇ ಸಚಿವರ ಜತೆ ಸಂಪರ್ಕ ಮಾಡಿಲ್ಲ. ಆದರೆ, ಹಾಲಿ ಶಾಸಕರು ಕಾಂಗ್ರೆಸ್ ಟಿಕೆಟ್ ಕೇಳುತ್ತಿದ್ದಾರೆ. ನಾವು ಕೆಲವು ಕ್ಷೇತ್ರಗಳ ಬಗ್ಗೆ ಮಾತ್ರ ಈ ವಿಚಾರವಾಗಿ ಚಿಂತನೆ ಮಾಡುತ್ತಿದ್ದು, ಈಗಲೇ ಅವರ ಹೆಸರುಗಳನ್ನು ಬಹಿರಂಗಪಡಿಸುವುದಿಲ್ಲ ಎಂದು ಶಿವಕುಮಾರ್ ಹೇಳಿದರು.

ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅಝಾನ್ ವಿಚಾರವಾಗಿ ಹಾಗೂ ಬಿಜೆಪಿ ಎಲ್ಲ ಮುಸಲ್ಮಾನರ ವಿರುದ್ಧವಾಗಿಲ್ಲ ಎಂದು ನೀಡಿರುವ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಈಶ್ವರಪ್ಪ ತಮ್ಮ ರಾಜಕೀಯ ಅಸ್ತ್ರ ಬಳಸುತ್ತಿದ್ದಾರೆ. ಭ್ರಷ್ಟಾಚಾರದ ಆರೋಪದ ಮೇಲೆ ಅವರನ್ನು ಸರಕಾರದಿಂದ ಹೊರದಬ್ಬಲಾಗಿದೆ. ಅವರು ಭ್ರಷ್ಟಾಚಾರದ ನಾಯಕರಾಗಿದ್ದಾರೆ’ ಎಂದು ತಿರುಗೇಟು ನೀಡಿದರು.

ಈಶ್ವರಪ್ಪ ಶಿವಮೊಗ್ಗ ಹಾಗೂ ಮಲೆನಾಡಿಗೆ ತಂದಿರುವ ಕಪ್ಪುಚುಕ್ಕೆಯಿಂದ ಆ ಭಾಗ ಚೇತರಿಸಿಕೊಳ್ಳಲು 20-30 ವರ್ಷಗಳೆ ಬೇಕಾಗುತ್ತದೆ. ಮಾಜಿ ಸಂಸದ ಆಯನೂರು ಮಂಜುನಾಥ್ ಅಲ್ಲಿನ ಜನರಿಗೆ ಭ್ರಷ್ಟ ಮುಕ್ತ ಆಡಳಿತ, ವ್ಯಾಪಾರ ಸ್ನೇಹಿ ವಾತಾವರಣ ಕಲ್ಪಿಸುವ ಭರವಸೆ ನೀಡಿದ್ದಾರೆ. ಆಮೂಲಕ ಶಿವಮೊಗ್ಗದ ಪರಿಸ್ಥಿತಿ ಸರಿಯಾಗಿಲ್ಲ, ಹೀಗಾಗಿ ಯಾವುದೇ ಉದ್ಯಮಿಗಳು ಅಲ್ಲಿ ಬಂಡವಾಳ ಹೂಡಿಕೆ ಮಾಡಲು ಮುಂದೆಬರುತ್ತಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಅಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಾಗಿದ್ದು, ಮೋದಿ, ಈಶ್ವರಪ್ಪ ಏನೇ ಭಾಷಣ ಮಾಡಿದರೂ ಪ್ರಯೋಜನವಿಲ್ಲ ಎಂದು ಅವರು ತಿಳಿಸಿದರು.

ರಾಮನಗರದಲ್ಲಿ ಡಿ.ಕೆ.ಸುರೇಶ್ ಸ್ಪರ್ಧೆ ಸ್ಪರ್ಧೆ ಕುರಿತು ಸ್ಥಳೀಯ ಕಾರ್ಯಕರ್ತರು, ಮುಖಂಡರಿಂದ ನಮಗೆ ಸಂದೇಶ ಬಂದಿದೆ. ಈ ಸಂಬಂಧ ಸುರೇಶ್ ಅಥವಾ ಕಾರ್ಯಕರ್ತರ ಜೊತೆ ಮಾತನಾಡಿಲ್ಲ. ನನಗೆ ಅನಗತ್ಯವಾಗಿ ಉಪಚುನಾವಣೆ ಮಾಡಲು ಇಚ್ಛೆ ಇಲ್ಲ. ಈ ಬಗ್ಗೆ ಎಲ್ಲರ ಜತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದು ಶಿವಕುಮಾರ್ ಹೇಳಿದರು.

ತರಾತುರಿಯಲ್ಲಿ ಹೆದ್ದಾರಿ ಉದ್ಘಾಟನೆ: ಅಪೂರ್ಣವಾಗಿರುವ ಹೆದ್ದಾರಿಯನ್ನು ಪ್ರಧಾನಿ ನರೇಂದ್ರ ಮೋದಿ ತರಾತುರಿಯಲ್ಲಿ ಉದ್ಘಾಟನೆ ಮಾಡಿರುವುದೇ ಸರಿಯಿಲ್ಲ. ಗುಣಮಟ್ಟದಲ್ಲಿ ಕಾಮಗಾರಿಯಾಗಿಲ್ಲ. ಹೆದ್ದಾರಿಯ ಪಕ್ಕದಲ್ಲಿರುವ ಗ್ರಾಮಸ್ಥರು ಈ ಬದಿಯಿಂದ ಆ ಬದಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಮೈಸೂರಿನಿಂದ ಹೊರಟರೆ ಬೆಂಗಳೂರಿಗೆ ಬರುವವರೆಗೂ ಮೂತ್ರವಿಸರ್ಜನೆ ಸೇರಿದಂತೆ ವಿಶ್ರಾಂತಿಗೆ ಎಲ್ಲೂ ನಿಲ್ಲಿಸಲು ವ್ಯವಸ್ಥೆ ಇಲ್ಲ ಎಂದು ಅವರು ತಿಳಿಸಿದರು.

ಈ ಭಾಗದಲ್ಲಿದ್ದ ವ್ಯಾಪಾರ ವಹಿವಾಟುಗಳಿಗೆ ದೊಡ್ಡ ಪೆಟ್ಟು ಬಿದ್ದಿದೆ. ಚುನಾವಣೆಗಾಗಿ ತರಾತುರಿಯಲ್ಲಿ ಬಂದು ಉದ್ಘಾಟನೆ ಮಾಡಿದ್ದಾರೆ. ಕಾರ್ಯಕ್ರಮಕ್ಕೆ ಸಂಸದ ಡಿ.ಕೆ.ಸುರೇಶ್ ಅವರಿಗೆ ಆಹ್ವಾನ ನೀಡದೆ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ. ಇದು ಜನರ ಯೋಜನೆ ಕಾರ್ಯಕ್ರಮಕ್ಕಿಂತ ರಾಜಕೀಯ ಕಾರ್ಯಕ್ರಮವಾಗಿತ್ತು ಎಂದು ಶಿವಕುಮಾರ್ ಹೇಳಿದರು.

ಸರಕಾರ ಹೊಸ ಟೆಂಡರ್ ಕರೆದು ಮುಂಗಡ ಪಾವತಿಗಾಗಿ 25 ಸಾವಿರ ಕೋಟಿಯಷ್ಟು ಟೆಂಡರ್ ಕರೆಯುತ್ತಿದ್ದಾರೆ. ನಾನು ಈ ವಿಚಾರವಾಗಿ ಮುಖ್ಯಕಾರ್ಯದರ್ಶಿಗೆ ಪತ್ರ ಬರೆದು ಯಾವುದೇ ಇಲಾಖೆಯಲ್ಲಿ ಹೊಸ ಟೆಂಡರ್, ಅಲ್ಪಾವಧಿಯ ಟೆಂಡರ್ ಕರೆಯಬಾರದು ಎಂದು ತಿಳಿಸುತ್ತೇವೆ. ಈ ಬಗ್ಗೆ ಲೋಕಾಯುಕ್ತ ಗಮನಕ್ಕೂ ತರುತ್ತೇವೆ. ಇವರ ಮಾತು ಕೇಳಿ ಅಧಿಕಾರಿಗಳು

ಇದನ್ನು ಮಾಡಿದರೆ ಮುಂದೆ ನಿಮಗೆ ತೊಂದರೆ ಎದುರಾಗಲಿದೆ ಎಂದು ಎಚ್ಚರಿಕೆ ನೀಡುತ್ತಿದ್ದೇವೆ ಎಂದು ಅವರು ತಿಳಿಸಿದರು.

ವಸತಿ ಸಚಿವ ವಿ.ಸೋಮಣ್ಣ ನಮ್ಮ ತಾಲೂಕಿನವರು. ಧರ್ಮ ಹಾಗೂ ತಾಲೂಕಿನ ಕೆಲಸಗಳಲ್ಲಿ ನಾವು ಒಟ್ಟಾಗಿ ಕೆಲಸ ಮಾಡಿಕೊಂಡು ಬಂದಿದ್ದೇವೆ. ರಾಜಕಾರಣವೆ ಬೇರೆ, ಬಾಂಧವ್ಯವೆ ಬೇರೆ. ಅವರು ಕಾಂಗ್ರೆಸ್ ಸೇರುವುದಾಗಿ ಹೇಳಿಲ್ಲ, ಕಾಂಗ್ರೆಸ್ ಪಕ್ಷಕ್ಕೆ ಬನ್ನಿ ಎಂದು ನಾನು ಹೇಳಿಲ್ಲ. ನಾವು ನಮ್ಮ ಕೆಲಸ ಮಾಡಿಕೊಂಡು ಇದ್ದೇವೆ. ನಾವು ಬೆಳಗಾವಿ ಅಧಿವೇಶನ ಮುಗಿಸಿಕೊಂಡು ವಿಮಾನದಲ್ಲಿ ಒಟ್ಟಿಗೆ ಪ್ರಯಾಣ ಮಾಡಿದ್ದೆವು. ಆಗ ತೆಗೆದಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

Similar News