ಔದ್ಯೋಗಿಕ ಮೀಸಲಾತಿಗೆ ಬಲಿಜ ಸಮುದಾಯದ ಉಪಪಂಗಡಗಳನ್ನು 2ಎ ವರ್ಗಕ್ಕೆ ಸೇರಿಸಿ: ರಮೇಶ್ ಬಾಬು ಆಗ್ರಹ
ಬೆಂಗಳೂರು, ಮಾ.14: ಬಲಿಜ ಮತ್ತು ಅದರ ಉಪಪಂಗಡಗಳನ್ನು ಔದ್ಯೋಗಿಕ ಮೀಸಲಾತಿಗಾಗಿ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯ 2ಎ ವರ್ಗಕ್ಕೆ ಸೇರಿಸಿ ಮೀಸಲಾತಿಗೆ ನಿರ್ದೇಶನ ನೀಡಬೇಕೆಂದು ಒತ್ತಾಯಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದು ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ಮನವಿ ನೀಡಿದ್ದಾರೆ.
2018ರಲ್ಲಿ ಬಿಜೆಪಿ ಪಕ್ಷವು ಬಲಿಜ ಮತ್ತು ಉಪಪಂಗಡಗಳನ್ನು ಔದ್ಯೋಗಿಕ ಮತ್ತು ರಾಜಕೀಯ ಮೀಸಲಾತಿಗಾಗಿ ಹಾಲಿ ಇರುವ 3ಎ ಪ್ರವರ್ಗದಿಂದ 2ಎ ಪ್ರವರ್ಗಕ್ಕೆ ವರ್ಗಾಯಿಸುವ ಆಶ್ವಾಸನೆಯನ್ನು ನೀಡಿತ್ತು. ಆದರೆ ಇಲ್ಲಿಯವರೆಗೆ 3ಎ ಪ್ರವರ್ಗದಿಂದ 2ಎ ಪ್ರವರ್ಗಕ್ಕೆ ವರ್ಗಾಯಿಸುವ ಯಾವುದೇ ಪ್ರಕ್ರಿಯೆ ನಡೆದಿಲ್ಲ ಎಂದು ಅವರು ಹೇಳಿದ್ದಾರೆ.
ಆದುದರಿಂದ, ತಾವು ದಯಮಾಡಿ ಹಿಂದುಳಿದ ವರ್ಗಗಳ ಇಲಾಖೆಯ ಮುಖಾಂತರ ಅಗತ್ಯವಾದ ವರದಿಯನ್ನು ತಯಾರಿಸಿ 3ಎ ಇಂದ 2ಎ ಪ್ರವರ್ಗದ ಮೀಸಲಾತಿ ಕಲ್ಪಿಸಬೇಕು ಎಂದು ರಮೇಶ್ ಬಾಬು ಮನವಿ ಮಾಡಿದ್ದಾರೆ.
ನಿಗಮ ಸ್ಥಾಪನೆ ಸ್ವಾಗತಾರ್ಹ: ರಾಜ್ಯ ಸರಕಾರ ಬಲಿಜ ಸಮುದಾಯ ಹಾಗೂ ಇದರ ಇನ್ನಿತರೆ ಉಪಜಾತಿಗಳ ಅಭಿವೃದ್ಧಿಗಾಗಿ ‘ಕರ್ನಾಟಕ ಬಲಿಜ ಸಮುದಾಯ ಅಭಿವೃದ್ಧಿ ನಿಗಮ’ವನ್ನು ಸ್ಥಾಪಿಸಿ ಆದೇಶಿಸಿರುವುದು ಸ್ವಾಗತಾರ್ಹ. ಅಂತೆಯೇ ವಿಧಾನಸಭಾ ಚುನಾವಣೆಗೆ ಇನ್ನೆರಡು ವಾರಗಳಲ್ಲಿ ಕೇಂದ್ರ ಚುನಾವಣಾ ಆಯೋಗವು ಅಧಿಸೂಚನೆಯನ್ನು ಹೊರಡಿಸಲಿದೆ ಎಂದು ಅವರು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಸರಕಾರವು ತ್ವರಿತಗತಿಯಲ್ಲಿ ನಿಗಮವನ್ನು ಆಡಳಿತಾತ್ಮಕವಾಗಿ ಅನುದಾನದ ಬಿಡುಗಡೆಯೊಂದಿಗೆ ಜಾರಿಗೊಳಿಸಬೇಕು. ಅಭಿವೃದ್ಧಿ ನಿಗಮಕ್ಕೆ ಅವಶ್ಯಕವಾದ ಸಿಬ್ಬಂದಿ ಮತ್ತು ಸ್ಥಳಾವಕಾಶದ ವ್ಯವಸ್ಥೆ ಮಾಡಬೇಕು. ಬಲಿಜ ಮತ್ತು ಅದರ ಸುಮಾರು 27 ಉಪಜಾತಿ, ಉಪಪಂಗಡಗಳ ಅಭಿವೃದ್ಧಿಗಾಗಿ ಸ್ಥಾಪನೆಯಾಗಿರುವ ನಿಗಮಕ್ಕೆ ಕೂಡಲೇ 500 ಕೋಟಿ ರೂಪಾಯಿಗಳ ಅನುದಾನವನ್ನು ಆರ್ಥಿಕ ಇಲಾಖೆಯ ಏಕ ಅನುದಾನದ ಆದೇಶದ ಮೂಲಕ ಬಿಡುಗಡೆ ಮಾಡಬೇಕು ಎಂದು ರಮೇಶ್‍ಬಾಬು ಒತ್ತಾಯಿಸಿದ್ದಾರೆ.