ಸುಳ್ಯ-ಕೊಡಿಯಾಲಬೈಲ್-ದುಗ್ಗಲಡ್ಕ ರಸ್ತೆ ಅಭಿವೃದ್ಧಿಗೆ ನಿಧಿ ಸಂಗ್ರಹದ ಮೂಲಕ ಪ್ರತಿಭಟನೆ

Update: 2023-03-14 15:53 GMT

ಸುಳ್ಯ - ಕೊಡಿಯಾಲಬೈಲ್- ದುಗ್ಗಲಡ್ಕ ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಸುಳ್ಯ ನಗರ ಪಂಚಾಯತ್ ಎದುರಿನಲ್ಲಿ ನಾಗರಿಕ ಹೋರಾಟ ಸಮಿತಿಯ ನೇತೃತ್ವದಲ್ಲಿ ನಿಧಿ ಸಂಗ್ರಹ ಅಭಿಯಾನ ನಡೆಸುವ ಮೂಲಕ ಪ್ರತಿಭಟನೆ ನಡೆಸಲಾಯಿತು.‌

ಪ್ರತಿಭಟನೆಯಲ್ಲಿ ಮಾತನಾಡಿದ ಉದ್ಯಮಿ ಸುರೇಶ್ಚಂದ್ರ ಕಮಿಲ 'ಬೇರೆ ವಿಧಾನ ಸಭಾ ಕ್ಷೇತ್ರಗಳಿಗೆ ಅಭಿವೃದ್ಧಿಗೆ ಕೋಟಿ ಕೋಟಿ ಅನುದಾನ ಬರುತ್ತಿದ್ದರೆ, ಸುಳ್ಯಕ್ಕೆ ಮಾತ್ರ ಅಭಿವೃದ್ಧಿಗೆ ಅನುದಾನ ಬರುತ್ತಿಲ್ಲ, ಇಲ್ಲಿ ಜನರ ನಿದ್ದೆಗೆಡಿಸಲು ಆನೆ ಮಾತ್ರ ಬರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಮುಂದೆ ಕೆಲಸ ಮಾಡಿದವರಿಗೆ ಮಾತ್ರ ಓಟು ಹಾಕುವುದು ಎಂದು ಅವರು ಹೇಳಿದರು.

ಸಿಎ ಪಿ.ಗಣೇಶ್ ಭಟ್ ಮಾತನಾಡಿ 'ಆಡಳಿತ ವ್ಯವಸ್ಥೆ ನಿಷ್ಕ್ರೀಯವಾದಾಗ ಜನರು ಪ್ರತಿಭಟನೆ ಮಾಡಬೇಕಾದ ಅನಿವಾರ್ಯತೆ ಉಂಟಾಗುತ್ತದೆ ಎಂದರು. ಸುಳ್ಯ ಶಾಸಕರು ಸಚಿವರಾದಾಗ ಕೊಡಿಯಾಲಬೈಲು-ದುಗ್ಗಲಡ್ಕ ರಸ್ತೆ ಅಭಿವೃದ್ಧಿ ಆಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ರಸ್ತೆ ಅಭಿವೃದ್ಧಿ ಆಗದೇ ಇರುವುದು ದುರದೃಷ್ಠಕರ ಎಂದು ಹೇಳಿದರು.

ಬಾಲಕೃಷ್ಣನ್ ನಾಯರ್ ನೀರಬಿದಿರೆ ಮಾತನಾಡಿ' ಇಷ್ಟು ವರ್ಷದಿಂದ ಬಿಜೆಪಿ ಪಕ್ಷಕ್ಕಾಗಿ ದುಡಿದರೂ ನಮ್ಮ ಬಹು ಬೇಡಿಕೆಯಾದ ರಸ್ತೆ ಅಭಿವೃದ್ಧಿಗೆ ಅನುದಾನ ಒದಗಿಸದೇ ಇರುವುದು ನಮಗೆ ಬಹಳ ಬೇಸರ ತಂದಿದೆ ಎಂದು ಹೇಳಿದರು. ದುಗ್ಗಲಡ್ಕ ಕೊಡಿಯಾಲಬೈಲ್ ರಸ್ತೆ ಅಭಿವೃದ್ಧಿಗೆ ಪದೇ ಪದೇ ಗುದ್ದಲಿ ಪೂಜೆ ಮಾಡುತ್ತಾರೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಸೀತಾನಂದ ಬೇರ್ಪಡ್ಕ, ದಿನೇಶ್ ಮಡಪ್ಪಾಡಿ, ಸುರೇಶ್ ಎಂ.ಎಚ್.ಮಾತನಾಡಿದರು. ಡಾ.ಗಣೇಶ್ ಭಟ್, ಡಾ.ರಘುರಾಮ, ನಟರಾಜ ಶರ್ಮ, ಕುಶ ನೀರಬಿದಿರೆ, ಉಬರಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷೆ ಚಿತ್ರಾ ಕುಮಾರಿ, ಮನೋಜ್ ಪಾನತ್ತಿಲ, ರಾಧಾಕೃಷ್ಣ ಬೇರ್ಪಡ್ಕ, ಗಿರೀಶ್ ಪಾಲಡ್ಕ, ಖಲಂದರ್ ಎಲಿಮಲೆ, ಜಯಪ್ರಕಾಶ್ ಕೊಡಿಯಾಲಬೈಲು, ಶಿವರಾಮ ಎಂ.ಪಿ, ಡಾ.ಅಶೋಕ್, ಶಂಬಯ್ಯ ಪಾರೆ, ಮಧುಕಿರಣ್, ಭವಾನಿಶಂಕರ ಕಲ್ಮಡ್ಕ, ಶಿಹಾಬ್ ಜಟ್ಟಿಪಳ್ಳ, ಬಾಲಚಂದ್ರ, ಮೋಹನ್ ಬೇರ್ಪಡ್ಕ ಮತ್ತಿತರರು ಉಪಸ್ಥಿತರಿದ್ದರು.

Similar News