ಬೆಂಗಳೂರು: ರೈಲ್ವೇ ನಿಲ್ದಾಣದಲ್ಲಿ ಯವತಿಯೊಂದಿಗೆ ಅನುಚಿತ ವರ್ತನೆ; ಟಿಟಿಇ ಅಮಾನತ್ತು

Update: 2023-03-15 15:54 GMT

ಬೆಂಗಳೂರು: ಕೋಲ್ಕತ್ತಾದಿಂದ ಅಮೃತಸರಕ್ಕೆ ತೆರಳುತ್ತಿದ್ದ ರೈಲಿನಲ್ಲಿ ಪ್ರಯಾಣಿಕರೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪದ ಮೇಲೆ ರೈಲ್ವೇ ಪ್ರಯಾಣ ಟಿಕೆಟ್ ಪರೀಕ್ಷಕರನ್ನು (ಟಿಟಿಇ) ಬಂಧಿಸಿದ ಘಟನೆ ಬೆನ್ನಲ್ಲೇ, ಮತ್ತೊಬ್ಬ ಟಿಟಿಇ ಬೆಂಗಳೂರಿನ ಕೃಷ್ಣರಾಜಪುರ ನಿಲ್ದಾಣದಿಂದ ಹೊರಡುವಾಗ ರೈಲಿನ ಮಹಿಳಾ ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪ ಕೇಳಿಬಂದಿದೆ. ಟಿಟಿಇಯನ್ನು ರೈಲ್ವೇ ಇಲಾಖೆ ಅಮಾನತುಗೊಳಿಸಿದ್ದು, ತನಿಖೆ ನಡೆಯುತ್ತಿದೆ ಎಂದು ವರದಿಯಾಗಿದೆ.

ರೈಲ್ವೇ ಇಲಾಖೆ ಪ್ರಕಾರ, ರೈಲು ಕ್ರಾಸಿಂಗ್‌ ಮಾಡಲು ಕೃಷ್ಣರಾಜಪುರಂನಲ್ಲಿ ರೈಲು ನಿಂತಿದ್ದು, ಈ ಸಮಯದಲ್ಲಿ ಟಿಟಿಇ ಯವತಿ ಬಳಿ ಬಂದು ಟಿಕೆಟ್ ತೋರಿಸಲು ಒತ್ತಾಯಿಸಿ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ.

ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಯುವತಿಯನ್ನು ಟಿಟಿಇ ತರಾಟೆಗೆ ತೆಗೆದುಕೊಳ್ಳುತ್ತಿರುವ ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಂತ್ರಸ್ತ ಯುವತಿ ಟಿಟಿಇಯನ್ನು ಪ್ರಶ್ನಿಸುತ್ತಿರುವುದು ಕಂಡು ಬಂದಿದೆ. ತನ್ನ ಟಿಕೆಟ್‌ಗಳನ್ನು ತೋರಿಸಿದ ನಂತರ ತನ್ನನ್ನು ಏಕೆ ಎಳೆದಾಡಿದ್ದೀರಿ ಎಂದು ಆಕೆ ಪ್ರಶ್ನಿಸುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಟಿಟಿಇ ಯುವತಿಯ ಮೇಲೆ ಕಿರುಚಾಡುತ್ತಿದ್ದಂತೆ, ಅಲ್ಲೇ ನಿಂತು ಘಟನೆ ನಡೆಯುವುದನ್ನು ನೋಡುತ್ತಿದ್ದ ಜನರ ಗುಂಪು ಆಕೆಯ ಸಹಾಯಕ್ಕೆ ಬಂದಿದೆ. ಅಲ್ಲದೆ, ಸ್ಥಳದಿಂದ ಪರಾರಿಯಾಗಲು ಯತ್ನಿಸಿದ ಟಿಟಿಇಯನ್ನು ಹಿಡಿದು ನಿಲ್ಲಿಸಿದ್ದಾರೆ. “ಆತ ಕುಡಿದಿದ್ದಾನೆ, ಪೊಲೀಸರಿಗೆ ಕರೆ ಮಾಡಿ'' ಎಂದು ಜನರ ಗುಂಪಿನಲ್ಲಿ ಯಾರೋ ಹೇಳುವುದನ್ನು ವಿಡಿಯೋದಲ್ಲಿ ಕೇಳಬಹುದು.

ಘಟನೆ ಕುರಿತು ಹೇಳಿಕೆ ನೀಡಿರುವ ರೈಲ್ವೇ ಕಚೇರಿ, ಬೆಂಗಳೂರು, ''ರೈಲು ಸಂಖ್ಯೆ 22863, ಹೆಚ್‌ಡಬ್ಲ್ಯೂಹೆಚ್ (ಹೌರಾ)-ಎಸ್‌ಎಂವಿಬಿ (ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್, ಬೆಂಗಳೂರು) ಎಕ್ಸ್‌ಪ್ರೆಸ್ ಸಾಪ್ತಾಹಿಕ ಹಮ್ಸಫರ್ ಎಕ್ಸ್‌ಪ್ರೆಸ್ ಆಗಿದ್ದು, ಕೃಷ್ಣರಾಜಪುರದಲ್ಲಿ ಯಾವುದೇ ನಿಲುಗಡೆ ಇರುವುದಿಲ್ಲ. ವೀಡಿಯೋದಲ್ಲಿ ಕಂಡುಬರುವ ಟಿಟಿಇ ಕೆಜೆಎಂ ನಿಲ್ದಾಣದ ಟಿಟಿಇಯಾಗಿದ್ದು, ಆನ್‌ಬೋರ್ಡ್ ಟಿಟಿಇ ಅಲ್ಲ ಎಂದು ತಿಳಿಸಿದ್ದಾರೆ, 'ಅವರು ಮಹಿಳೆ ಪ್ರಯಾಣಿಕರನ್ನು ರೈಲಿನಿಂದ ಹೊರಕ್ಕೆ ಎಳೆದಿದ್ದಾರೆ ಎಂದು ಆರೋಪಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.

ಕರ್ತವ್ಯದ ವೇಳೆ ಪಾನಮತ್ತನಾಗಿದ್ದ ಎಂದು ಆರೋಪಿಸಲಾಗಿದೆ. ತನಿಖೆ ಬಾಕಿ ಉಳಿದಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ಟಿಟಿಇಯನ್ನು ಅಮಾನತುಗೊಳಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

Similar News