ತಮಿಳುನಾಡಿನಲ್ಲಿ ಕ್ರಿಶ್ಚಿಯನ್ ಪಾದ್ರಿಯಿಂದ ಹಣ ಸುಲಿಗೆ ಯತ್ನ: ವಿಎಚ್‌ಪಿ ನಾಯಕನ ಬಂಧನ

Update: 2023-03-16 10:30 GMT

ಚೆನ್ನೈ: ಕ್ರಿಶ್ಚಿಯನ್ ಪಾದ್ರಿಯೊಬ್ಬರ ಬಳಿ ಹಣ ಸುಲಿಗೆ ಮಾಡಲು ಯತ್ನಿಸಿದ ಆರೋಪದಲ್ಲಿ ವಿಎಚ್‌ಪಿ ನಾಯಕ ಮುತ್ತುವೇಲ್ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ತಮಿಳುನಾಡಿನ ಅರಿಯಲೂರು ಜಿಲ್ಲೆಯಲ್ಲಿ ನಡೆದಿದೆ ಎಂದು thenewsminute.com ವರದಿ ಮಾಡಿದೆ.

ಈ ಕುರಿತು ಅರಿಯಲೂರಿನ ಅವರ್ ಲೇಡಿ ಆಫ್ ಲೂರ್ಡ್ಸ್ ಚರ್ಚ್‌ನ ಪಾದ್ರಿ ಡೊಮಿನಿಕ್ ಸೇವಿಯೊ ಪೊಲೀಸರಿಗೆ ದೂರು ನೀಡಿದ್ದು, ನನಗೆ ರೂ. 25 ಲಕ್ಷ ರೂಪಾಯಿ ನೀಡಬೇಕು, ಇಲ್ಲವಾದರೆ ನೀನು ಶಾಲೆಯ ಮಕ್ಕಳಿಗೆ ಕಿರುಕುಳ ನೀಡುತ್ತಿದ್ದೀಯಾ ಎಂದು ಹೇಳುವುದಾಗಿ ಮುತ್ತುವೇಲ್ ನನಗೆ ಬೆದರಿಕೆ ಒಡ್ಡಿದ ಎಂದು ಆರೋಪಿಸಿದ್ದಾರೆ.

ಈ ಸಂಬಂಧ ಪ್ರಾಥಮಿಕ ಮಾಹಿತಿ ವರದಿ ದಾಖಲಾಗಿದ್ದು, ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 (ಗಲಭೆ ಸೃಷ್ಟಿಸುವ ಉದ್ದೇಶದಿಂದ ಪ್ರಚೋದನೆ), ಸೆಕ್ಷನ್ 153A (ಧರ್ಮ, ಬಣ್ಣ, ಜಾತಿ, ಜನ್ಮಸ್ಥಳದ ಆಧಾರದಲ್ಲಿ ಎರಡು ಗುಂಪುಗಳ ನಡುವೆ ದ್ವೇಷ ಹರಡುವುದು), ಸೆಕ್ಷನ್ 298 (ಯಾವುದೇ ವ್ಯಕ್ತಿಯ ಧಾರ್ಮಿಕ ಭಾವನೆಗಳಿಗೆ ಘಾಸಿ ಮಾಡುವಂತಹ ಭಾಷೆ ಬಳಸುವುದು), ಸೆಕ್ಷನ್ 389 (ವ್ಯಕ್ತಿಗೆ ಭೀತಿ ಹುಟ್ಟಿಸಿ, ಸುಲಿಗೆ ಮಾಡಿದ ಆರೋಪ), ಸೆಕ್ಷನ್ 505(i)(b) (ಸಾರ್ವಜನಿಕ ಭೀತಿ ಅಥವಾ ಭೀತಿ ಹರಡುವ ಉದ್ದೇಶ) ಹಾಗೂ 505(i)(c) (ಅಪರಾಧ ಎಸಗುವಂತೆ ಒಂದು ಸಮುದಾಯವನ್ನು ಪ್ರಚೋದಿಸುವುದು) ಅನ್ವಯ ದೂರು ದಾಖಲಿಸಿಕೊಳ್ಳಲಾಗಿದೆ.

Similar News