ಮಾ.22ರಿಂದ ಮಂಗಳೂರಿನಲ್ಲಿ ಸ್ಟ್ರೀಟ್ ಫುಡ್ ಫೆಸ್ಟಿವಲ್
ಮಂಗಳೂರು, ಮಾ.17: ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಮಂಗಳೂರು ಇದರ ಪ್ರಾಯೋಜಕತ್ವದಲ್ಲಿ ಕರಾವಳಿಯ ಅತೀ ದೊಡ್ಡ ಆಹಾರೋತ್ಸವ ಮಾ.22ರಿಂದ 26ರವರೆಗೆ ನಡೆಯಲಿದೆ ಎಂದು ಯತೀಶ್ ಬೈಕಂಪಾಡಿ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಂಜೆ 5ರಿಂದ ರಾತ್ರಿ 11ರವರೆಗೆ ಕರಾವಳಿ ಉತ್ಸವ ಮೈದಾನದಿಂದ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ಮುಖಾಂತರ ಮಣ್ಣಗುಡ್ಡೆ ಗುರ್ಜಿ ಜಂಕ್ಷನ್ ವರೆಗೆ ಆಹಾರೋತ್ಸವ ಆಯೋಜಿಸಲಾ ಗಿದ್ದು ವಿಶೇಷವಾಗಿ ತುಳುನಾಡಿನ ಸಾಂಪ್ರದಾಯಿಕ ತಿಂಡಿ ತಿನಿಸುಗಳು ಸೇರಿದಂತೆ ಹೊರ ರಾಜ್ಯಗಳ ಸಸ್ಯಾಹಾರ ಹಾಗೂ ಮಾಂಸಾಹಾರ ಆಹಾರಗಳಿಗೆ ಆದ್ಯತೆ ಕಲ್ಪಿಸಲಾಗುತ್ತದೆ ಎಂದರು.
ತುಳುನಾಡಿನ ಆಹಾರ ವೈವಿಧ್ಯತೆ ಪರಿಚಯಿಸುವುದರೊಂದಿಗೆ ಸ್ವಉದ್ಯೋಗಕ್ಕೆ ಪೂರಕ ವೇದಿಕೆ ನಿರ್ಮಿಸುವ ಪ್ರಯತ್ನ ಇದಾಗಿದೆ. ಹೋಟೆಲ್ ಉದ್ಯಮ, ಐಸ್ ಕ್ರೀಮ್ ಸೇರಿದಂತೆ ಮನ ಉತ್ಪನ್ನಗಳು, ಸ್ವಾವಲಂಬಿ ಉತ್ಪಾದಕರು ಆಹಾರೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಜೊತೆಗೆ ಮನೋರಂಜನಾ ಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ನಡೆಯಲಿದ್ದು ಕರಾವಳಿಯಲ್ಲಿ ಹೊಸ ಭಾಷ್ಯ ಬರೆಯಲಿದೆ ಎಂದು ಸಂಘಟಕರು ಹೇಳಿದರು.
ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕ ವೇದವ್ಯಾಸ್ ಕಾಮತ್ ಅವರ ನೇತೃತ್ವಲ್ಲಿ ಫುಡ್ ಫೆಸ್ಟಿವಲ್ ನಡೆಯಲಿದೆ. ಈ ಸಂದರ್ಭದಲ್ಲಿ ನೃತ್ಯ, ಹಾಡು, ಮಿಮಿಕ್ರಿ, ನಟನೆ, ಬೀದಿ ಜಾದೂ, ಕರೊಕೆ, ವಾದ್ಯಗೋಷ್ಠಿ, ಬೀದಿ ಸರ್ಕಸ್, ಸೈಕಲ್ ಬ್ಯಾಲೆನ್ಸ್, ಬಗ್ಗಿ ವಾಹನ, ಗೇಮ್ಸ್, ಜುಂಬಾ, ಫಿಟ್ ನೆಸ್ ಕ್ರೀಡೆ, ಯೋಗ ಹಾಗೂ ಇನ್ನಷ್ಟು ಪ್ರದರ್ಶನ ಮತ್ತು ಮನೋರಂಜನಾ ಕಾರ್ಯಕ್ರಮಗಳು ನಡೆಯಲಿದೆ. ದೇಹದಾರ್ಡ್ಯ, ಪಟಾಕಿ ಪ್ರದರ್ಶನ, ಪಾದ ಮಸಾಜ್, ಚೆಂಡೆ ಮತ್ತು ನಾಸಿಕ್ ಬ್ಯಾಂಡ್, ಕಿರು ಮ್ಯೂಸಿಕ್ ಬ್ಯಾಂಡ್, ಬೆಂಕಿ ನೃತ್ಯ, ಸೆಲ್ಲಿ ಕೌಂಟರ್, ಫ್ಲಾಶ್ ಬೆಳಕಿನಾಟ ಆಯೋಜಿಸಲಾಗಿದೆ.
ಕಾರ್ಯಕ್ರಮಕ್ಕೆ ಹೆಚ್ಚಿನ ಮೆರಗು ನೀಡುವ ಸಲುವಾಗಿ ವಿಶೇಷವಾಗಿ ವರ್ಣ ರಂಜಿತ ವಿದ್ಯುತ್ ದೀಪಾಲಂಕಾರ, ತಾಲೀಮು ಪ್ರದರ್ಶನ, ಸಂಗೀತ ಕಾರ್ಯಕ್ರಮ, ಹುಲಿವೇಷ ಬಣ್ಣಗಾರಿಕೆ ಸ್ಪರ್ಧೆ, ಗೂಡು ದೀಪ ಮುಂತಾದವು ಗಳನ್ನು ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರತಿ ಜಂಕ್ಷನ್ ಗಳಲ್ಲಿ ವೇದಿಕೆಗಳ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮ, ಮಕ್ಕಳಿಗಾಗಿ ಪ್ರತ್ಯೇಕ ವಲಯ, ಕುದುರೆ ಸವಾರಿ, ಒಂಟೆ ಸವಾರಿ, ಸೆಲ್ಫಿ ಬೂತ್, ಹಳೆಯ ಮಾದರಿಯ ಕಾರುಗಳ ಪ್ರದರ್ಶನ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿರಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಗಿರಿಧರ್ ಶೆಟ್ಟಿ, ಅಶ್ವಥ್ ಕೊಟ್ಟಾರಿ, ಲಲಿತ್, ಜಗದೀಶ್ ಕದ್ರಿ ಉಪಸ್ಥಿತರಿದ್ದರು.