ಮಾ.20ರಂದು ದೇರಳಕಟ್ಟೆಯಲ್ಲಿ ರೈತರ ಹಕ್ಕೊತ್ತಾಯ ಪ್ರತಿಭಟನಾ ಜಾಥಾ
ಉಳ್ಳಾಲ, ಮಾ.18: ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ, ಉಳ್ಳಾಲ ತಾಲೂಕು ಘಟಕದ ವತಿಯಿಂದ ಸರಕಾರದ ರೈತ ವಿರೋಧಿ ಧೋರಣೆ ಖಂಡಿಸಿ ಹಾಗೂ ಕೆಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ರೈತರ ಹಕ್ಕೊತ್ತಾಯ ಪ್ರತಿಭಟನಾ ಜಾಥಾವು ಮಾ.20ರಂದು ಬೆಳಗ್ಗೆ 10ಕ್ಕೆ ದೇರಳಕಟ್ಟೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನ ದಿಂದ ತಹಶೀಲ್ದಾರ್ ಕಚೇರಿಯವರೆಗೆ ನಡೆಯಲಿದೆ ಎಂದು ಸಂಘಟನಾ ಕಾರ್ಯದರ್ಶಿ ಅಝೀಝ್ ಪರ್ತಿಪ್ಪಾಡಿ ತಿಳಿಸಿದ್ದಾರೆ.
ಅವರು ಪ್ರೆಸ್ ಕ್ಲಬ್ ನಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಸಭೆಯನ್ನುದ್ದೇಶಿಸಿ ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಶಾಂತಿ ಪ್ರಸಾದ್ ಹೆಗ್ಡೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದರು.
ಉಳ್ಳಾಲ ತಾಲೂಕಿನಲ್ಲಿ ಕಳೆದ ಐದು ವರ್ಷಗಳಿಂದ ರೈತರ ಕುಮ್ಕಿ ಜಾಗದ ಹಕ್ಕನ್ನು ವಿರಹಿತ ಗೋಳಿಸುವ ಪ್ರಕ್ರಿಯೆ ಶುರುವಾಗಿದೆ. ಅಲ್ಲದೆ ಪಂಚಾಯತ್ ಪಿಡಿಒ ಮತ್ತು ಅಧಿಕಾರಿಗಳು ಕಾನೂನುಬಾಹಿರ ಭೂ ಮಾಫಿಯಾ ಚಟುವಟಿಕೆಗಳ ಬಗ್ಗೆ ಶಾಮಿಲಾಗಿದ್ದು, ಇದನ್ನು ವಿರೋಧಿಸಿ ಪ್ರತಿಭಟನಾ ಜಾಥಾ ನಡೆಸಿ ಕೆಲವು ಹಕ್ಕೊತ್ತಾಯಗಳನ್ನು ಮಂಡಿಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಿಸಾನ್ ಸಂಘದ ತಾಲೂಕು ಕಾರ್ಯದರ್ಶಿ ಹರೀಶ್ ಬಿ., ಉಮೇಶ್ ಶೆಟ್ಟಿ, ಸಮೀರಾ ರಾವ್ , ಸತ್ಯನಾರಾಯಣ ಭಟ್, ನಾರಾಯಣ ಕಿಲ್ಲೆ, ಗಣೇಶ್ ಕಾವ, ಮಹಾಬಲ ರೈ, ಪ್ರವೀಣ ಕೈರಂಗಳ, ಚಂದ್ರ ಹಾಸ್ , ಚಂದ್ರ ಶೇಖರ್, ರಮೇಶ್ ರೈ ಕೊಣಾಜೆ ಮತ್ತಿತರರು ಉಪಸ್ಥಿತರಿದ್ದರು.