ಸಿಐಐ ದಕ್ಷಿಣ ವಿಭಾಗದ ನೂತನ ಅಧ್ಯಕ್ಷರಾಗಿ ಕಮಲಾ ಬಾಲಿ ಆಯ್ಕೆ

Update: 2023-03-18 13:22 GMT

ಬೆಂಗಳೂರು, ಮಾ.18: ಸಿಐಐ ದಕ್ಷಿಣ ವಿಭಾಗದ 2023-24ನೇ ಸಾಲಿನ ನೂತನ ಅಧ್ಯಕ್ಷರಾಗಿ ಬೆಂಗಳೂರಿನ ವೋಲ್ವೋ ಗ್ರೂಪ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಅಧ್ಯಕ್ಷರಾಗಿರುವ ಕಮಲಾ ಬಾಲಿ ಆಯ್ಕೆಯಾಗಿದ್ದಾರೆ.

ಕಮಲಾ ಬಾಲಿ 2022-23ನೇ ಸಾಲಿನಲ್ಲಿ ಸಿಐಐ ದಕ್ಷಿಣ ವಿಭಾಗದ ಉಪಾಧ್ಯಕ್ಷರಾಗಿ ಹಾಗೂ 2017-18ನೇ ಸಾಲಿನಲ್ಲಿ ಸಿಐಐ ಕರ್ನಾಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 2020-21ರಲ್ಲಿ ಸಿಐಐ-ಎಸ್.ಆರ್.ನ ಉತ್ಪಾದನಾ ಉಪಸಮಿತಿಯ ಅಧ್ಯಕ್ಷರಾಗಿ ಹಾಗೂ 2019-20ರಲ್ಲಿ ಸಿಐಐ ದಕ್ಷಿಣ ವಿಭಾಗದ ಉದ್ಯಮಿಗಳು ಹಾಗೂ ಸ್ಟಾರ್ಟ್ ಅಪ್ ಫೋರಂನ ಸಹ-ಅಧ್ಯಕ್ಷರಾಗಿದ್ದರು. ಸಿಐಐ ನ್ಯಾಶನಲ್ ಕೌನ್ಸಿಲ್ ಸದಸ್ಯರಾಗಿಯೂ ಇವರು ಸೇವೆ ಸಲ್ಲಿಸಿದ್ದಾರೆ.

ಬಾಲಿ ವಿವಿಧ ಪ್ರತಿಷ್ಠಿತ ಸಂಸ್ಥೆಗಳ ಉನ್ನತ ಹುದ್ದಗಳನ್ನು ಅಲಂಕರಿಸಿದ್ದಾರೆ. ವೋಲ್ವೋ ಫೈನಾನ್ಸಿಯಲ್ ಸರ್ವಿಸಸ್ ಹಾಗೂ ಇನ್ವೆಸ್ಟ್ ಕರ್ನಾಟಕ ಫೋರಂನ ಬೋರ್ಡ್ ಸದಸ್ಯರಾಗಿ, ಭಾರತ ಸರ್ಕಾರದ ಡಿಪಾರ್ಟ್ ಮೆಂಟ್ ಆಫ್ ಸ್ಪೇಸ್ ಬೋರ್ಡ್ ನ ಸ್ವತಂತ್ರ ನಿರ್ದೇಶಕರಾಗಿ, ಗಾಂಧಿ ನಗರದ ಇಂಡಿಯನ್ ಇನ್ ಸ್ಟಿಟ್ಯೂಟ್ ನ ಬೋರ್ಡ್ ಆಫ್ ಗವರ್ನರ್ಸ್ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕೊಯಂಬತ್ತೂರಿನ ಚಂದ್ರ ಟೆಕ್ಸ್ ಟೈಲ್ಸ್ ಪ್ರೈ.ಲಿ.ನ ವ್ಯವಸ್ಥಾಪಕ ನಿರ್ದೇಶಕ ಡಾ.ಆರ್.ನಂದಿನಿ ಸಿಐಐ ದಕ್ಷಿಣ ವಿಭಾಗಕ್ಕೆ 2023-24ನೇ ಸಾಲಿನ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅವರು ಪ್ರಸಕ್ತ ಸಿಐಐ ದಕ್ಷಿಣ ವಿಭಾಗ ಕೌನ್ಸಿಲ್ ಸದಸ್ಯರಾಗಿ ಹಾಗೂ ಸಿಐಐ ನ್ಯಾಶನಲ್ ಕೌನ್ಸಿಲ್ ಟಾಸ್ಕ್ ಫೋರ್ಸ್ (ಗ್ರಾಮೀಣಾಭಿವೃದ್ಧಿ ಹಾಗೂ ವಲಸೆ ಕಾರ್ಮಿಕರ ಅಭಿವೃದ್ಧಿ) ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2022-23ರಲ್ಲಿ ಇವರು ಶಿಕ್ಷಣ ಉಪವಿಭಾಗದ ನಿಕಟಪೂರ್ವ ಅಧ್ಯಕ್ಷರಾಗಿ, 2010-11ರಲ್ಲಿ ಸಿಐಐ ತಮಿಳುನಾಡಿನ ನಿಕಟಪೂರ್ವ ಅಧ್ಯಕ್ಷರಾಗಿ ಹಾಗೂ ಸಿಐಐ ಇಂಡಿಯನ್ ವುಮೆನ್ ನೆಟ್ ವರ್ಕ್ ನ ಮಾಜಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.

ನಂದಿನಿ ಅವರು ಕಾಗ್ನಿಝೆಂಟ್ ಸಂಸ್ಥೆಯ ಸಿಎಸ್ಆರ್ ವಿಭಾಗವಾದ ಕಾಗ್ನಿಝೆಂಟ್ ಫೌಂಡೇಶನ್ ಬೋರ್ಡ್ ನಿರ್ದೇಶಕರಾಗಿದ್ದಾರೆ. ಜೊತೆಗೆ ತಮಿಳುನಾಡು ಇಂಡಸ್ಟ್ರಿಯಲ್ ಡೆವಲಪ್ ಮೆಂಟ್ ಕಾರ್ಪೊರೇಶನ್ ಲಿಮಿಟೆಡ್ ನ ಸ್ವತಂತ್ರ ನಿರ್ದೇಶಕರಾಗಿ ಹಾಗೂ ತಿರುಚನಾಪಳ್ಳಿಯ ಎನ್ಐಟಿ ಬೋರ್ಡ್ ಆಫ್ ಗವರ್ನರ್ಸ್ ಮಾಜಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.

Similar News