​"ಮಂಗಳೂರು ಯೂನಿವರ್ಸಿಟಿ ಕೆರಿಯರ್ ಸೆಂಟರ್" ಆ್ಯಪ್ ಶುಭಾರಂಭ

Update: 2023-03-18 16:06 GMT

ಮಂಗಳೂರು: "ನ್ಯೂಮರೋ ಉನೋ ಪಾರ್ಟ್ ನರ್ಸ್" ಸಹಯೋಗದೊಂದಿಗೆ ಮಂಗಳೂರು ಯೂನಿವರ್ಸಿಟಿ ಕೆರಿಯರ್ ಸೆಂಟರ್ ಅಪ್ಲಿಕೇಶನ್ ಅನ್ನು ಶನಿವಾರ ಸಂಜೆ ನಗರದ ಖಾಸಗಿ ಹೋಟೆಲ್ ನಲ್ಲಿ ಮಂಗಳೂರು ವಿಶ್ವವಿದ್ಯಾಲಯ ಉಪಕುಲಪತಿ ಡಾ.ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, "ವಿದ್ಯಾರ್ಥಿಗಳು ಮೌಲ್ಯಯುತವಾಗಿ ಶಿಕ್ಷಣ ಪಡೆದಾಗ ಯಶಸ್ಸು ಪ್ರಾಪ್ತಿಯಾಗುತ್ತದೆ. ಇದಕ್ಕಾಗಿ ನ್ಯೂಮರೋ ಉನೋ ಜೊತೆಗೆ ಕೆರಿಯರ್ ಸೆಂಟರ್ ಅಪ್ಲಿಕೇಶನ್ ಅನ್ನು ಆರಂಭಿಸಲಾಗಿದೆ. ವಿದ್ಯಾರ್ಥಿಗಳು ಈ ಅಪ್ಲಿಕೇಶನ್ ಮೂಲಕ ತಮ್ಮ ಕೆರಿಯರ್ ಅನ್ನು ವೃದ್ಧಿಸಿ ತಮ್ಮ ಮುಂದಿನ ದಾರಿಯನ್ನು ಸುಗಮಗೊಳಿಸಿ ಜೀವನದಲ್ಲಿ ಯಶಸ್ಸು ಕಾಣಬಹುದು. ಕೆರಿಯರ್ ಸೆಂಟರ್ ಅಪ್ಲಿಕೇಶನ್ ಬಳಸುವಂತೆ ವಿಶ್ವವಿದ್ಯಾಲಯ ಅಧೀನದಲ್ಲಿರುವ ಎಲ್ಲಾ ಕಾಲೇಜುಗಳಿಗೆ ಈಗಾಗಲೇ ತಿಳಿಸಲಾಗಿದೆ. ಕಡ್ಡಾಯವಾಗಿ ಇದನ್ನು ಬಳಸಲೇಬೇಕು ಎಂದು ಹೇಳುತ್ತಿಲ್ಲ. ವಿದ್ಯಾರ್ಥಿಗಳಿಗೆ ಅನುಕೂಲವಾದಲ್ಲಿ ಇಂತಹ ಅಪ್ಲಿಕೇಶನ್ ಸಹಾಯ ಪಡೆದುಕೊಳ್ಳಿ" ಎಂದರು.

ಪ್ರಾಸ್ತಾವಿಕ ಮಾತನ್ನಾಡಿದ ನ್ಯೂಮರೋ ಉನೋ ಸಂಸ್ಥೆಯ ಎಂ.ಡಿ. ಶಿವ್ ಬಸವ್ ಅವರು, "ಕೆರಿಯರ್ ಸೆಂಟರ್ ಒಂದು ಸ್ಪೆಷಲಿಸ್ಟ್ ಡಿಜಿಟಲ್ ಪ್ಲಾಟ್‌ಫಾರ್ಮ್ ಆಗಿದ್ದು ಇದು ವಿದ್ಯಾರ್ಥಿಗಳ ಪ್ರೊಫೈಲ್ ಬಿಲ್ಡಿಂಗ್ ಮೂಲಕ ಅವರಿಗೆ ಶಿಕ್ಷಣದ ಬಳಿಕ ಪ್ಲೇಸ್‌ಮೆಂಟ್‌ಗಳನ್ನು ಸುಗಮಗೊಳಿಸುತ್ತದೆ. ಮಂಗಳೂರು ವಿಶ್ವವಿದ್ಯಾನಿಲಯ ಕೆರಿಯರ್ ಸೆಂಟರ್ (MUCC) ಒಂದು ಸಮಗ್ರ ಕ್ಲೌಡ್ ಆಧಾರಿತ ಅಪ್ಲಿಕೇಶನ್ ಪ್ಲಾಟ್‌ಫಾರ್ಮ್ ಆಗಿದ್ದು ಇದು ವಿಶ್ವವಿದ್ಯಾಲಯ, ಕಾಲೇಜುಗಳು, ವಿದ್ಯಾರ್ಥಿಗಳು, ಕಾರ್ಪೊರೇಟ್‌ ಕಂಪೆನಿಗಳು, ಕೋರ್ಸ್ ಪೂರೈಕೆದಾರರು, ಪ್ರಮಾಣಪತ್ರ ಏಜೆನ್ಸಿಗಳನ್ನು ಸಂಪರ್ಕಿಸುವ ವ್ಯವಸ್ಥೆಯನ್ನು ಕಲ್ಪಿಸುತ್ತದೆ. ಈ ಮೂಲಕ ಉದ್ಯೋಗ ಪ್ಲೇಸ್ ಮೆಂಟ್ ಗಳನ್ನು ಪಡೆಯಲು ಸಹಕಾರಿಯಾಗಿದೆ" ಎಂದರು.

ಸಂಸ್ಥೆಯ ರಾಜೀವ್ ಮೆನನ್ ಮಾತನಾಡಿ, "ಡಿಗ್ರಿ ಪಡೆಯುವುದರಿಂದ ಮಾತ್ರ ಉದ್ಯೋಗ ಪಡೆಯಲಾಗುವುದಿಲ್ಲ. ವಿದ್ಯಾರ್ಥಿಗಳು ಅವರ ಬೌದ್ಧಿಕ ಸಾಮರ್ಥ್ಯ ಹಾಗೂ ಸ್ಕಿಲ್ ಅನ್ನು ಕೌಶಲ್ಯವನ್ನು ವೃದ್ಧಿಸುವುದು ಅತ್ಯವಶ್ಯವಾಗಿದೆ. ತಮ್ಮ ಪ್ರೊಫೈಲ್ ಅನ್ನು ವೃದ್ಧಿಸಿ ಕಾಲೇಜ್ ಶಿಕ್ಷಣ ಪಡೆಯುವ ಅವಧಿಯಲ್ಲಿ ಹತ್ತಾರು ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮನ್ನು ತಾವು ಅಪ್ ಡೇಟ್ ಆಗಿಟ್ಟುಕೊಳ್ಳಬಹುದು. ಇಂಟರ್ನ್ ಶಿಪ್ ಮೂಲಕ ವಿವಿಧ ಕಂಪೆನಿಗಳು ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಅರಿತು ನೇರವಾಗಿ ಸಂದರ್ಶನ ನಡೆಸಿ ಉದ್ಯೋಗ ಕಲ್ಪಿಸಲು ಸಾಧ್ಯವಾಗುತ್ತದೆ. ಕೆರಿಯರ್ ಸೆಂಟರ್ ಅಪ್ಲಿಕೇಶನ್ ಇಂತಹ ಹಲವಾರು ಅವಕಾಶಗಳನ್ನು ಸುಲಭವಾಗಿ ವಿದ್ಯಾರ್ಥಿಗಳಿಗೆ ಒದಗಿಸುತ್ತದೆ ಎಂದರು.

ಬಳಿಕ ವಿವಿಧ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು ಹಾಗೂ ಶಿಕ್ಷಕರ ಜೊತೆಗೆ ಸಂವಾದ ನಡೆಯಿತು.

ವೇದಿಕೆಯಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಪಿ. ಸುಬ್ರಮಣ್ಯ ಯಡಪಡಿತ್ತಾಯ, ನ್ಯೂಮರೋ ಉನೋ ಎಂ.ಡಿ. ಶಿವ್ ಬಸವ್ , ಪ್ರೊ. ಜಯಶಂಕರ್, ಪ್ರೊ. ಮಂಜುನಾಥ್ ಪಟ್ಟಾಭಿ, ರಾಜೀವ್ ಮೆನನ್, ಉಪಸ್ಥಿತರಿದ್ದರು.

Similar News