‘ಉರಿಗೌಡ-ನಂಜೇಗೌಡ’ ಸುಳ್ಳು ಸುದ್ದಿ: ಸ್ವಾಮೀಜಿ ನೇತೃತ್ವದಲ್ಲಿ ಒಕ್ಕಲಿಗರ ಸಂಘದಿಂದ ಪ್ರತಿಭಟನೆಯ ಎಚ್ಚರಿಕೆ

Update: 2023-03-19 14:37 GMT

ಬೆಂಗಳೂರು, ಮಾ. 19: ‘ಇತ್ತೀಚೆಗೆ ಕೆಲವರು ಉರಿಗೌಡ ಮತ್ತು ನಂಜೇಗೌಡ ಎಂಬ ಒಕ್ಕಲಿಗರ ಹೆಸರು ತೆಗೆದುಕೊಂಡು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದು, ಇತಿಹಾಸದಲ್ಲಿ ಎಲ್ಲಿಯೂ ಇಲ್ಲದ ವ್ಯಕ್ತಿಗಳನ್ನು ಸೃಷ್ಟಿಸಿ ಈಗ ಪ್ರಚಾರ ಮಾಡುತ್ತಿರುವುದರ ಹಿಂದಿನ ಹುನ್ನಾರವೇನು? ಎಂದು ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ, ಶಾಸಕ ಸಿ.ಎನ್.ಬಾಲಕೃಷ್ಣ ಪ್ರಶ್ನಿಸಿದ್ದಾರೆ.

ರವಿವಾರ ಈ ಸಂಬಂಧ ಪ್ರಕಟನೆ ನೀಡಿರುವ ಅವರು, ‘ಹಸಿ ಸುಳ್ಳಿನ ಮೂಲಕ ಒಕ್ಕಲಿಗ ಸಮುದಾಯವನ್ನು ಅವಮಾನಿಸುವ ಪ್ರಯತ್ನವನ್ನು ಒಕ್ಕಲಿಗ ಸಮುದಾಯ ಸಹಿಸುವುದಿಲ್ಲ. ಬಹುಶಃ ಹತ್ತಿರದಲ್ಲಿರುವ ವಿಧಾನಸಭಾ ಚುನಾವಣೆಯಲ್ಲಿ ಲಾಭ ಗಳಿಸುವ ಉದ್ದೇಶದಿಂದ ಈ ರೀತಿ ಮಾಡುತ್ತಿರುವ ಸಾಧ್ಯತೆಯಿದ್ದು, ಯಾವುದೇ ಕಾರಣಕ್ಕೂ ಸ್ವಾಭಿಮಾನಿ ಒಕ್ಕಲಿಗ ಸಮುದಾಯ ಸುಳ್ಳುಗಳಿಗೆ ಮಾರುಹೋಗುವುದಿಲ್ಲ ಎಂದು ತಿಳಿಸಿದ್ದಾರೆ.

ಸುಳ್ಳು ಪ್ರಚಾರದ ಮೂಲಕ ಒಕ್ಕಲಿಗರನ್ನು ಅವಮಾನಿಸುವ ಕುತಂತ್ರದ ಹಿಂದೆ ಯಾರಿದ್ದಾರೆಯೋ ಅವರನ್ನು ಪತ್ತೆ ಹಚ್ಚಿ ಸರಕಾರ ಅಂಥವರ ಮೇಲೆ ಕಠಿಣ ಕ್ರಮ ಕೈಗೊಳ್ಖಬೇಕು. ರಾಜ್ಯ ಸರಕಾರವು ಈ ರೀತಿ ಸುಳ್ಳು ಸುದ್ದಿ ಹಬ್ಬುವಿಕೆಯನ್ನು ತಡೆಯದಿದ್ದರೆ ಆದಿಚುಂಚನಗಿರಿಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮತ್ತು ಪಟ್ಟನಾಯಕನಹಳ್ಳಿ ಸ್ಪಟಿಕಪುರಿ ಮಠದ ಶ್ರೀ ನಂಜಾವಧೂತ ಸ್ಬಾಮೀಜಿಯವರ ನೇತೃತ್ವದಲ್ಲಿ ರಾಜ್ಯ ಒಕ್ಕಲಿಗರ ಸಂಘವು ಉಗ್ರ  ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಬಾಲಕೃಷ್ಣ ಎಚ್ಚರಿಸಿದ್ದಾರೆ.

ನಗರದಲ್ಲಿನ ಬಡ ಒಕ್ಕಲಿಗರಿಗೆ ಇಡಬ್ಲ್ಯೂಎಸ್ ಪ್ರಮಾಣ ಪತ್ರ ನೀಡುವ ಸರಕಾರದ ನಿರ್ಧಾರವನ್ನು ಶ್ಲಾಘಿಸಿರುವ ಬಾಲಕೃಷ್ಣ, ಒಕ್ಕಲಿಗರಿಗೆ ಅವರ ಜನಸಂಖ್ಯೆಗನುಗುಣವಾಗಿ ಮೀಸಲಾತಿಯನ್ನು ಜಾರಿ ಮಾಡಲು ಯಾವುದೇ ಕ್ರಮ ಕೈಗೊಂಡಿಲ್ಲ. 2 ‘ಸಿ’ ಎಂಬ ಹೊಸ ಪ್ರವರ್ಗದ ಅಡಿಯಲ್ಲಿ ಒಕ್ಕಲಿಗರಿಗೆ ಮೀಸಲಾತಿ ಹೆಚ್ಚಳ ಮಾಡುವುದಾಗಿ ಸರಕಾರ ಹೇಳಿರುವುದು ಕಣ್ಣೊರೆಸುವ ತಂತ್ರವಾಗಿದೆ. ಇದರಿಂದ ಒಕ್ಕಲಿಗರಿಗೆ ಮೀಸಲಾತಿ ಹೆಚ್ಚಳ ವಿಷಯದಲ್ಲಿ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಿದ್ದಾರೆ.

Similar News