ಮತದಾರರಿಗೆ ಆಮಿಷ: 9.29 ಕೋಟಿ ರೂ.ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದ ಚು.ಆಯೋಗ

Update: 2023-03-19 15:02 GMT

ಬೆಂಗಳೂರು, ಮಾ.19: ರಾಜ್ಯ ವಿಧಾನಸಭಾ ಚುನಾವಣೆಗೆ ಅಧಿಸೂಚನೆ ಹೊರಬೀಳುವ ಮುನ್ನವೆ ರಾಜಕೀಯ ಪಕ್ಷಗಳು ಮತದಾರರಿಗೆ ಆಮಿಷ ಒಡ್ಡುವ ಮೂಲಕ ತಮ್ಮತ್ತ ಸೆಳೆಯಲು ಕಸರತ್ತು ಆರಂಭಿಸಿವೆ. ಈ ನಿಟ್ಟಿನಲ್ಲಿ ಮತದಾರರಿಗೆ ಹಂಚಲು ಸಂಗ್ರಹಿಸಿಟಿದ್ದ 1.21 ಕೋಟಿ ರೂ.ನಗದು ಸೇರಿದಂತೆ 9.29 ಕೋಟಿ ರೂ.ಮೌಲ್ಯದ ವಸ್ತುಗಳನ್ನು ಚುನಾವಣಾ ಆಯೋಗ ವಶಕ್ಕೆ ಪಡೆದುಕೊಂಡಿರುವುದಾಗಿ ಪ್ರಕಟಿಸಿದೆ.

ಚುನಾವಣಾ ಆಯೋಗವು ಮಾ.18ರ ಮುಂಜಾನೆ 6 ಗಂಟೆಯವರೆಗೆ ಸುಮಾರು 1.21 ಕೋಟಿ ರೂಪಾಯಿ ನಗದು, ಮತದಾರರಿಗೆ ಹಂಚಲು ಸಾಗಿಸುತ್ತಿದ್ದ ಸುಮಾರು 2.66 ಕೋಟಿ ರೂ.ಮೌಲ್ಯದ 59,265 ಲೀಟರ್ ಮದ್ಯ, 1.88 ಕೋಟಿ ರೂ.ಮೌಲ್ಯದ 577 ಕೆ.ಜಿ. ವಿವಿಧ ಮಾದಕ ವಸ್ತುಗಳು, ಚಿನ್ನ, ಬೆಳ್ಳಿ ಸೇರಿದಂತೆ ಇತರ ಮೌಲ್ಯಯುತ ವಸ್ತುಗಳನ್ನು ಚುನಾವಣಾ ಆಯೋಗದ ಸೂಚನೆಯಂತೆ ಪೆÇಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಪೈಕಿ 1.87 ಕೋಟಿ ರೂ.ಮೌಲ್ಯದ 5.32 ಕೆಜಿ ಚಿನ್ನ ಹಾಗೂ 80 ಲಕ್ಷ ರೂ.ಮೌಲ್ಯದ 15 ಕೆ.ಜಿ. ಬೆಳ್ಳಿಯನ್ನು ಜಪ್ತಿ ಮಾಡಲಾಗಿದೆ. ಇನ್ನು ಸುಮಾರು 20,114 ಸೀರೆ, ಕುಕ್ಕರ್, ಲ್ಯಾಪ್‍ಟಾಪ್ ಸೇರಿದಂತೆ ಇತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಈವರೆಗೆ ರಾಜ್ಯಾದ್ಯಂತ ಸುಮಾರು 9.29 ಕೋಟಿ ರೂ.ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Similar News