ಎಸ್.ಬಿ.ಮಿನರಲ್ಸ್ ಒಡೆತನದ ಆಸ್ತಿ ಜಪ್ತಿ ಮಾಡಿದ ಈಡಿ

Update: 2023-03-19 15:06 GMT

ಬೆಂಗಳೂರು, ಮಾ.19: ಅಕ್ರಮ ಗಣಿಗಾರಿಕೆ ಸಂಬಂಧ ಎಸ್.ಬಿ.ಮಿನರಲ್ಸ್ ಒಡೆತನದ ಎರಡು ಗಣಿ ಕಂಪೆನಿಗೆ ಸೇರಿದ 5 ಕೋಟಿಗೂ ಅಧಿಕ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯವು(ಈಡಿ) ಜಪ್ತಿ ಮಾಡಿದೆ. 

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಬಿ.ಪಿ.ಆನಂದ್ ಕುಮಾರ್, ಪಾಂಡುರಂಗ ಸಿಂಗ್, ಗೋಪಾಲ್ ಸಿಂಗ್ ಪಾಲುದಾರಿಕೆಯ ಎಸ್‍ಬಿಮಿನರಲ್ಸ್ ಒಡೆತನದ ದಿನೇಶ್ ಕುಮಾರ್ ಪಾಲುದಾರಿಕೆಯ ಭಾರತ್ ಮಿನರಲ್ಸ್ ಮೈನ್ಸ್ ಹಾಗೂ ಶಾಂತಲಕ್ಷ್ಮೀ ಮತ್ತು ಜೆ.ಮಿಥಿಲೇಶ್ವರ್ ಗಣಿಗೆ ಸೇರಿದ 5.21 ಕೋಟಿ ಮೌಲ್ಯದ ಒಟ್ಟು ಆರು ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಏನಿದು ಪ್ರಕರಣ?: ಎರಡು ಕಂಪೆನಿಗಳು ಕಬ್ಬಿಣದ ಅದಿರನ್ನು ಪರವಾನಗಿ ಇಲ್ಲದೆ ಅಕ್ರಮವಾಗಿ ಸಾಗಿಸಿ ಸರಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದವು. ಪ್ರಕರಣ ಸಂಬಂಧ ಎಸ್‍ಬಿ ಮಿನರಲ್ ಎಂಟರ್ ಪ್ರೈಸಸ್ ಲಿಮಿಟೆಡ್, ಸರಕಾರಿ ನೌಕರರು ಮತ್ತು ಇತರರ ವಿರುದ್ಧ ಜಾರಿ ನಿರ್ದೇಶನಾಲಯಕ್ಕೆ (ಈಡಿ) ಲೋಕಾಯುಕ್ತ ಎಸ್‍ಐಟಿ ದೂರು ದಾಖಲಿಸಿತ್ತು. ದೂರಿನ ಅನ್ವಯ ಕಂಪೆನಿಗಳ ವಿರುದ್ಧ ಈಡಿ ಅಧಿಕಾರಿಗಳು ಎಫ್‍ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದರು. ಅಲ್ಲದೆ, ಅಕ್ರಮ ಗಣಿಗಾರಿಕೆ ಬಗ್ಗೆ ತನಿಖೆ ನಡೆಸಲು ಸುಪ್ರೀಂಕೋರ್ಟ್ ಕೇಂದ್ರ ಸಶಕ್ತ ಸಮಿತಿ ರಚಿಸಿತ್ತು. ಅದರಂತೆ ನಡೆದ ತನಿಖೆ ವೇಳೆ ನಾಲ್ಕು ಗಣಿಗಳು ಅಕ್ರಮ ನಡೆಸಿರುವುದು ಪತ್ತೆಯಾಗಿದೆ.

Similar News