ಆಟೋ ಚಾಲಕರ ಮುಷ್ಕರ: ನಾಳೆ(ಮಾ.20) ಬೆಂಗಳೂರಿನಲ್ಲಿ ರಿಕ್ಷಾ ಸೇವೆ ವ್ಯತ್ಯಯ ಸಾಧ್ಯತೆ

Update: 2023-03-19 16:07 GMT

ಬೆಂಗಳೂರು, ಮಾ. 19: ಆ್ಯಪ್ ಆಧಾರಿತ ಬೈಕ್ ಟ್ಯಾಕ್ಸಿ ನಿಷೇಧಿಸಲು ಆಗ್ರಹಿಸಿ ನಾಳೆ(ಮಾ.20) ಬೆಂಗಳೂರು ನಗರದ ಆಟೋರಿಕ್ಷಾ ಚಾಲಕರ ಸಂಘಟನೆಗಳ ಒಕ್ಕೂಟ ಆಟೋ ಸಂಚಾರ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದು, ನಾಳೆ ಇಡೀ ದಿನ ಸಾರ್ವಜನಿಕರಿಗೆ ರಿಕ್ಷಾ ಸೇವೆ ಸ್ಥಗಿತಗೊಳ್ಳುವ ಸಾಧ್ಯತೆಗಳಿವೆ.

ಮಾ.19ರ ಸಂಜೆ ವೇಳೆಗೆ ಬೈಕ್ ಟ್ಯಾಕ್ಸಿ ಸೇವೆ ರದ್ದು ಮಾಡದಿದ್ದರೇ ಆಟೋರಿಕ್ಷಾ ಸಂಚಾರ ಸ್ಥಗಿತಗೊಳಿಸಲಾಗುವುದು ಎಂದು ರಾಜ್ಯ ಸರಕಾರಕ್ಕೆ ರಿಕ್ಷಾ ಚಾಲಕರ ಸಂಘಟನೆಗಳ ಒಕ್ಕೂಟ ಎಚ್ಚರಿಕೆ ನೀಡಿತ್ತು. ಸಾರಿಗೆ ಇಲಾಖೆ ಕುಮ್ಮಕ್ಕಿನಿಂದ ಬೆಂಗಳೂರಿನಲ್ಲಿ ಎರಡು ವರ್ಷಗಳಿಂದ ಆ್ಯಪ್ ಆಧಾರಿತ ಅನಧಿಕೃತ ವೈಟ್ ಬೋರ್ಡ್ ಬೈಕ್ ಟ್ಯಾಕ್ಸಿಗಳ ಹಾವಳಿ ಹೆಚ್ಚಾಗಿದೆ.

‘ಇದರಿಂದ ಆಟೊರಿಕ್ಷಾ ಚಾಲಕರ ಸಂಪಾದನೆಯನ್ನು ಲೂಟಿ ಮಾಡಲಾಗುತ್ತಿದೆ. ಕೋವಿಡ್ ಸಾಂಕ್ರಾಮಿಕದ ಕಾರಣಕ್ಕೆ ಸಂಕಷ್ಟಕ್ಕೆ ಸಿಲುಕಿದ್ದ ರಿಕ್ಷಾ ಚಾಲಕರು, ಇದೀಗ ಬೈಕ್ ಟ್ಯಾಕ್ಸಿ ಕಾರಣಕ್ಕೆ ಚಾಲಕರ ಭವಿಷ್ಯಕ್ಕೆ ಮಾರಕವಾಗಿದ್ದು, ತಕ್ಷಣವೇ ಬೈಕ್ ಟ್ಯಾಕ್ಸಿ ಸೇವೆಯನ್ನು ಬಂದ್ ಮಾಡಬೇಕು’ ಎಂದು ಒಕ್ಕೂಟ ಆಗ್ರಹಿಸಿದೆ.

‘ಬೆಂಗಳೂರು ನಗರದಲ್ಲಿ ಒಟ್ಟು 21 ಆಟೊರಿಕ್ಷಾ ಚಾಲಕರ ಸಂಘಟನೆಗಳಿದ್ದು, ಸುಮಾರು 2.10 ಲಕ್ಷಕ್ಕೂ ಅಧಿಕ ಆಟೊರಿಕ್ಷಾಗಳಿವೆ. ಹೊಸದಿಲ್ಲಿ, ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಬೈಕ್ ಟ್ಯಾಕ್ಸಿ ನಿಷೇಧಿಸಲಾಗಿದೆ. ವಿಧಾನಸಭೆ ಚುನಾವಣೆಗೆ ಮೊದಲು ಆ್ಯಪ್ ಆಧಾರಿತ ಬೈಕ್ ಟ್ಯಾಕ್ಸಿ ನಿಷೇಧಿಸದಿದ್ದರೆ ಚುನಾವಣೆ ಬಹಿಷ್ಕಾರ ಮಾಡಲಾಗುವುದು’ ಎಂದು ಒಕ್ಕೂಟ ಎಚ್ಚರಿಸಿದೆ.

Similar News