ಆಟೋರಿಕ್ಷಾ ಚಾಲಕರ ಮುಷ್ಕರ: ಹಲವರನ್ನು ವಶಕ್ಕೆ ಪಡೆದ ಪೊಲೀಸರು

Update: 2023-03-20 17:30 GMT

ಬೆಂಗಳೂರು, ಮಾ.20: ‘ಆ್ಯಪ್ ಆಧಾರಿತ ರ್ಯಾಪಿಡೋ ಬೈಕ್ ಟ್ಯಾಕ್ಸಿ ಸೇವೆ ರದ್ದುಪಡಿಸಬೇಕೆಂದು ಆಗ್ರಹಿಸಿ ಬೆಂಗಳೂರು ಆಟೋ ರಿಕ್ಷಾ ಚಾಲಕರ ಸಂಘಟನೆಗಳ ಒಕ್ಕೂಟದಿಂದ ಸೋಮವಾರ ಕರೆ ನೀಡಿದ್ದ ಆಟೋ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. 

ಮುಷ್ಕರದ ಹಿನ್ನೆಲೆಯಲ್ಲಿ ನಗರದ ವಿವಿಧ ಭಾಗಗಳಿಂದ ಆಟೋರಿಕ್ಷಾ ಚಾಲಕರು ಒಂದೆಡೆ ಜಮಾವಣೆಗೊಂಡು ಆಟೋಗಳಿಗೆ ಕಪ್ಪು ಬಾವುಟಗಳನ್ನು ಕಟ್ಟಿಕೊಂಡು ಪ್ರತಿಭಟನೆಗೆ ಮುಂದಾದಾಗ ಪೊಲೀಸರು ಚಾಲಕರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು. 

ಈ ಸಂದರ್ಭದಲ್ಲಿ ಮಾತನಾಡಿದ ರಿಕ್ಷಾ ಚಾಲಕರ ಯೂನಿಯನ್ ಅಧ್ಯಕ್ಷ ಸಿ.ಎನ್.ಶ್ರೀನಿವಾಸ್, ಆಟೋ ಚಾಲಕ ಸಂಘಟನೆಗಳು ಸರಕಾರಕ್ಕೆ ಈಗಾಗಲೇ 3 ದಿನಗಳ ಗಡುವು ನೀಡಿದ್ದು, ರ್ಯಾಪಿಡೋ ಬೈಕ್ ಟ್ಯಾಕ್ಸಿನಂತಹ ಅನಧಿಕೃತ ಸಂಚಾರಿ ಸೇವೆಗಳನ್ನು ನಿಷೇಧಿಸಬೇಕೆಂದು ಆಗ್ರಹಿಸುತ್ತಿದ್ದೇವೆ. ಆದರೆ, ಸರಕಾರ ಆನ್‍ಲೈನ್ ಸೇವೆ ಆಧಾರಿತ ಖಾಸಗಿ ಸಂಸ್ಥೆಗಳಿಗೆ ಸಹಾಯವಾಗುವಂತೆ ತಮ್ಮ ಹಠಮಾರಿ ಧೋರಣೆಯನ್ನು ಕೈಬಿಡುತ್ತಿಲ್ಲ. ಇದರಿಂದ ಆಟೊ ಚಾಲಕರು ಸಂಪಾದನೆಯಿಲ್ಲದೆ ಪರದಾಡುವಂತಹ ಸ್ಥಿತಿ ಸೃಷ್ಠಿಯಾಗಿದೆ ಎಂದು ದೂರಿದರು.

ಸರಕಾರ ಕೂಡಲೇ ಆಟೋ ಚಾಲಕರ ಆದಾಯಕ್ಕೆ ಕುತ್ತಾಗಿರುವ ಸಮಸ್ಯೆಗಳನ್ನು ಬಗೆಹರಿಸಬೇಕು. ಅನುಮತಿ ಇಲ್ಲದೆ, ಅನಧಿಕೃತವಾಗಿ ಬೈಕ್ ಟ್ಯಾಕ್ಸಿಗಳು ಸಂಚಾರ ಮಾಡುತ್ತಿದ್ದರೂ, ಸರಕಾರ ಮತ್ತು ಸಾರಿಗೆ ಇಲಾಖೆ ಮಾತ್ರ ಕ್ರಮಕೈಗೊಳ್ಳುತ್ತಿಲ್ಲ. ಪ್ರತಿಬಾರಿ ಪ್ರತಿಭಟನೆ ಮಾಡಿದಾಗಲೂ ಕೇವಲ ಭರವಸೆ ನೀಡುತ್ತಿದ್ದಾರೆ ಹೊರತು ಬೇಡಿಕೆಗಳನ್ನು ಈಡೇರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಎಆರ್‍ಡಿಯು ಉಪಾಧ್ಯಕ್ಷ ಆರ್.ನವೀನ್ ಶೆಣೈ ಮಾತನಾಡಿ, ಆಟೋ ಚಾಲಕರು ಸಾರಿಗೆ ಇಲಾಖೆಯ ನಿಯಮಗಳನ್ನು ಅನುಸರಿಸಿ ಕರ್ತವ್ಯ ಮಾಡುತ್ತಿದ್ದೇವೆ. ಪ್ರತಿನಿತ್ಯ ತೆರಿಗೆ ಕಟ್ಟುವವರು ನಾವು ಆದರೆ ಬಿಜೆಪಿ ಸರಕಾರ ನಮ್ಮಂಥ ಆಟೋ ಚಾಲಕರತ್ತ ಗಮನ ಹರಿಸುತ್ತಿಲ್ಲ. ದಿನ ಬಳಕೆ ವಸ್ತುಗಳು, ಮಕ್ಕಳ ಶಿಕ್ಷಣ, ಇತ್ಯಾದಿ ಖರ್ಚುಗಳ ಅಧಿಕವಾಗಿದೆ. ಆದರೂ ಆಟೋ ಚಾಲಕರ ಆದಾಯ ಮಾತ್ರ ಏರಿಕೆಯಾಗಿಲ್ಲ. ಚಾಲಕರು ಮತ್ತು ಪ್ರಯಾಣಿಕರ ಹಿತದೃಷ್ಟಿಯಿಂದ ಚಾಲಕರಿಗೆ ಅನುಕೂಲವಾಗುವಂತೆ ಯೋಜನೆಗಳನ್ನು ರೂಪಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಗೆ ಕರೆ ನೀಡಿದ್ದ ವಿವಿಧ ಆಟೋ ಸಂಘಟನೆಗಳ ಮುಖಂಡರು ಮತ್ತು ಚಾಲಕರು, ಮಹಿಳಾ ಆಟೋ ಚಾಲಕರು ಒಳಗೊಂಡು ಸುಮಾರು 300 ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. ಆಟೋ ಸಂಘಟನೆಗಳ ನಿಯೋಗ ಮುಖ್ಯಮಂತ್ರಿ ಗೃಹ ಕಚೇರಿಯಲ್ಲಿ ಬೇಡಿಕೆಗಳ ಕುರಿತು ಮನವಿ ಸಲ್ಲಿಸಿತು. 

ಪ್ರತಿಭಟನೆಯಲ್ಲಿ ಎಆರ್‍ಡಿಯು ಸಂಘಟನೆ ಮುಖಂಡರಾದ ಜಾವೀದ್ ಅಹ್ಮದ್, ಎನ್.ನಾಗರಾಜ್, ಮೊಹಮ್ಮದ್ ರಿಯಾಜ್, ಎನ್. ನರಸಿಂಹಮೂರ್ತಿ, ಬಸವರಾಜು, ಆದರ್ಶ ಆಟೋ ಮತ್ತು ಟ್ಯಾಕ್ಸಿ ಡ್ರೈವರ್ಸ್ ಯೂನಿಯನ್ ಅಧ್ಯಕ್ಷ ಎಂ.ಮಂಜುನಾಥ್, ಕರವೇ ಆಟೋ ಘಟಕ ಅಧ್ಯಕ್ಷ ಜಿ.ಎಸ್. ಕುಮಾರ್, ಪೀಸ್ ಆಟೋ ಮತ್ತು ಟ್ಯಾಕ್ಸಿ ಡ್ರೈವರ್ಸ್ ಅಸೋಸಿಯೇಷನ್ ಅಧ್ಯಕ್ಷ ರಘು ನಾರಾಯಣ ಗೌಡ, ಬೆಂಗಳೂರು ಆಟೋ ಸೇನೆ ಅಧ್ಯಕ್ಷ ಎಂ.ಆರ್ ಚೇತನ್ ಸೇರಿದಂತೆ ಹಲವರು ಇದ್ದರು.

Full View

Similar News