ರಾಜ್ಯದಲ್ಲಿ 17 ಸಾವಿರಕ್ಕೂ ಹೆಚ್ಚು ಶತಾಯುಷಿ ಮತದಾರರು

Update: 2023-03-20 18:28 GMT

ಬೆಂಗಳೂರು, ಮಾ.20: ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾರರ ಪಟ್ಟಿಯಲ್ಲಿ 17 ಸಾವಿರಕ್ಕೂ ಹೆಚ್ಚು ನೋಂದಾಯಿತ ಮತದಾರರು 100 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾರೆ.

ರಾಜ್ಯದಲ್ಲಿ ಒಟ್ಟು 5.21 ಕೋಟಿ ನೋಂದಾಯಿತ ಮತದಾರರಿದ್ದು, ಅವರಲ್ಲಿ 2.59 ಕೋಟಿ ಮಹಿಳೆಯರಿದ್ದಾರೆ. ಮೊದಲ ಬಾರಿಗೆ ಮತದಾನ ಮಾಡುತ್ತಿರುವವರು 9.17 ಲಕ್ಷ ಮತ್ತು ತೃತೀಯ ಲಿಂಗ ಮತದಾರರು 4,699 ಹಾಗೂ 16,973 ಶತಾಯುಷಿ ಮತದಾರರಿದ್ದು ಅವರಲ್ಲಿ 9,985 ಮಹಿಳಾ ಶತಾಯಿಷಿಗಳಿದ್ದಾರೆ.

ಈ ಶತಾಯುಷಿಗಳಲ್ಲಿ ಹಲವರು ಮತದಾನ ಮಾಡಲು ಹೋಗಬಹುದು. ಆದರೆ ಅವರಲ್ಲಿ ಅನೇಕರು ವಯಸ್ಸಿಗೆ ಸಂಬಂಧಿಸಿದ ಸಮಸ್ಯೆಗಳಿಂದ ತಮ್ಮ ಮನೆಯಿಂದ ಹೊರಬರಲು ಸಾಧ್ಯವಾಗದಿರಬಹುದು. ಕೆಲವರು 80 ವರ್ಷಕ್ಕಿಂತ ಮೇಲ್ಪಟ್ಟ 12.15 ಲಕ್ಷ ನೋಂದಾಯಿತ ಮತದಾರರ ಭಾಗವಾಗಿದ್ದಾರೆ. ಅಂತಹ ಹಿರಿಯ ನಾಗರಿಕರಿಗೆ ಸಹಾಯ ಮಾಡಲು, ಚುನಾವಣಾ ಆಯೋಗವು ಈ ಬಾರಿ ಪೋಸ್ಟಲ್ ಬ್ಯಾಲೆಟ್ ಪರಿಚಯಿಸಿದೆ. ಅವರು ಮನೆಯಿಂದಲೇ ಮತ ಚಲಾಯಿಸಬಹುದು.

ಬೆಂಗಳೂರು ಜಿಲ್ಲೆ(ಬೆಂಗಳೂರು ಗ್ರಾಮಾಂತರ ಮತ್ತು ಬಿಬಿಎಂಪಿ ಮಿತಿಗಳನ್ನು ಒಳಗೊಂಡಂತೆ) 4,081 ಶತಾಯುಷಿ ಮತದಾರರನ್ನು ಹೊಂದಿದೆ. ಮೈಸೂರು (1,744) ಮತ್ತು ಬೆಳಗಾವಿ (1,536) ನಂತರದ ಸ್ಥಾನದಲ್ಲಿದೆ. ಈ ಮೂರು ಜಿಲ್ಲೆಗಳು ಎಲ್ಲಶತಾಯುಷಿ ಮತದಾರರಲ್ಲಿ ಶೇ. 40ರಷ್ಟಿದ್ದಾರೆ. ಕೊಡಗಿನಲ್ಲಿ ಕನಿಷ್ಠ ಅಂದರೆ 112, ಗದಗದಲ್ಲಿ 122, ಯಾದಗಿ ರಿಯಲ್ಲಿ 142, ವಿಜಯನಗರದಲ್ಲಿ 186 ಮತ್ತು ಉತ್ತರಕನ್ನಡದಲ್ಲಿ 193 ಮತದಾರರಿದ್ದಾರೆ.

ರಾಜ್ಯದಲ್ಲಿ ಮೊದಲ ವಿಧಾನಸಭಾ ಚುನಾವಣೆ ಮೈಸೂರು ರಾಜ್ಯವಾಗಿದ್ದಾಗ ಅಂದರೆ ಮಾರ್ಚ್ 1951ರಲ್ಲಿ ನಡೆಯಿತು. ಅಂದಿನಿಂದ ರಾಜ್ಯವು 15 ವಿಧಾನಸಭೆ ಮತ್ತು 17 ಲೋಕಸಭೆ ಚುನಾವಣೆಗಳನ್ನು ಕಂಡಿದೆ. 100 ವರ್ಷ ಮೇಲ್ಪಟ್ಟವರು ಈ ಚುನಾವಣೆಯಲ್ಲಿ ಮತ ಚಲಾಯಿಸಬೇಕೆಂದು ನಾವು ಬಯಸುತ್ತೇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಹಿರಿಯ ಮತದಾರರು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಸಾಕ್ಷಿಯಾಗಿದ್ದಾರೆ. ಅವರು ಪ್ರಜಾಪ್ರಭುತ್ವದ ಮೌಲ್ಯವನ್ನು ತಿಳಿದಿದ್ದಾರೆ. ಅವರಿಗೆ ಆರೋಗ್ಯ ಸಮಸ್ಯೆಗಳಿಲ್ಲದಿದ್ದರೆ ಅವರು ಮತ ಚಲಾಯಿಸುತ್ತಾರೆ ಎಂದು ಹೇಳಿದ್ದಾರೆ.

Similar News