ಬಸ್ಸಿನಿಂದ ಎಸೆಯಲ್ಪಟ್ಟು ಮೃತಪಟ್ಟ ಬಾಲಕನ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಒದಗಿಸಿಕೊಟ್ಟ ಯು.ಟಿ.ಖಾದರ್

Update: 2023-03-21 05:06 GMT

ಉಳ್ಳಾಲ, ಮಾ.21: ಆರು ತಿಂಗಳ ಹಿಂದೆ ಬಸ್ಸಿನಿಂದ ಎಸೆಯಲ್ಪಟ್ಟ ಪರಿಣಾಮ ಮೆದುಳು ನಿಷ್ಕ್ರಿಯಗೊಂಡಿದ್ದ ಪಿಯು ಕಾಲೇಜು ವಿದ್ಯಾರ್ಥಿಯ ಅಂಗಾಂಗ ದಾನ ಮಾಡಿ ಸಮಾಜಕ್ಕೆ ಮಾದರಿಯಾಗಿದ್ದ ಸಂತ್ರಸ್ತ ಕುಟುಂಬಕ್ಕೆ ಸ್ಥಳೀಯ ಶಾಸಕ, ವಿಧಾನಸಭೆ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಅವರು ಮುಖ್ಯಮಂತ್ರಿಯವರ ವಿಶೇಷ ಅನುದಾನದಿಂದ 5 ಲಕ್ಷ ರೂ. ಪರಿಹಾರ ಒದಗಿಸಿಕೊಟ್ಟಿದ್ದಾರೆ.

ಉಳ್ಳಾಲ ಮಾಸ್ತಿಕಟ್ಟೆ, ಬೈದೆರೆಪಾಲು ನಿವಾಸಿಗಳಾದ ತ್ಯಾಗರಾಜ್ ಮತ್ತು ಮಮತಾ ಕರ್ಕೇರ ದಂಪತಿಯ ಪುತ್ರ ಯಶರಾಜ್(16) ಕಳೆದ ಸೆಪ್ಟಂಬರ್ 7ರಂದು ಉಳ್ಳಾಲದಿಂದ ಮಂಗಳೂರಿನ ಕಾಲೇಜಿಗೆಂದು ಬಸ್ಸಿನಲ್ಲಿ ಪಯಣಿಸುತ್ತಿದ್ದಾಗ ಬಸ್ಸಿನಿಂದ ರಸ್ತೆಗೆ ಎಸೆಯಲ್ಪಟ್ಟಿದ್ದರು. ಈ ವೇಳೆ ತಲೆಗೆ ಗಂಭೀರ ಗಾಯಗಳಾಗಿದ್ದ ಯಶರಾಜ್ ರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದ ಕಾರಣ ಸೆ.13ರಂದು ಯಶರಾಜ್ ರ ಮೆದುಳು ನಿಷ್ಕ್ರಿಯಗೊಂಡಿದ್ದಾಗಿ ವೈದ್ಯರು ಘೋಷಿಸಿದ್ದರು. ಈ ವೇಳೆ ಪೋಷಕರ ನಿರ್ಧಾರದಂತೆ ಯಶರಾಜ್ ರ ಅಂಗಾಂಗಗಳನ್ನು ದಾನ ಮಾಡಲಾಗಿತ್ತು.

ಈ ಸಂದರ್ಭ ಯಶರಾಜ್ ಮನೆಗೆ ಭೇಟಿ ನೀಡಿದ ಶಾಸಕ ಯು.ಟಿ.ಖಾದರ್ ಅವರು ಮುಖ್ಯಮಂತ್ರಿಗಳ ವಿಶೇಷ ಅನುದಾನದಿಂದ‌ ಪರಿಹಾರ ಕೊಡಿಸುವುದಾಗಿ ಭರಸವೆ ನೀಡಿದ್ದರು. ಈ ಸಂಬಂಧ ತನ್ನ ಆಪ್ತ ಸಹಾಯಕರ ಮೂಲಕವೇ ಎಲ್ಲಾ ದಾಖಲೆಗಳನ್ನು ಸರಕಾರಕ್ಕೆ ಸಲ್ಲಿಸಿದ್ದರು. ಇದೀಗ ಯಶರಾಜ್ ತಂದೆ ತ್ಯಾಗರಾಜ್ ಅವರ ಬ್ಯಾಂಕ್ ಖಾತೆಗೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಿಂದ 5 ಲಕ್ಷ ರೂ. ಜಮೆ‌ ಆಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ತ್ಯಾಗರಾಜ್, ನಮ್ಮಂತಹ ನೊಂದ ಕುಟುಂಬಕ್ಕೆ ಪರಿಹಾರ ಒದಗಿಸಿ ಕೊಟ್ಟ ಶಾಸಕ ಖಾದರ್ ಅವರ ಸರಳತೆ, ಕಾಳಜಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಯು.ಟಿ.ಖಾದರ್, ಅಂಗಾಂಗ ದಾನ ಎಂಬುದು ಭಾವನಾತ್ಮಕ ವಿಚಾರ. ಇದರ ಬಗ್ಗೆ ಜನಜಾಗೃತಿ ಮೂಡಿಸಬೇಕು. ಯಶರಾಜ್ ರ ಮೆದುಳು ನಿಷ್ಕ್ರಿಯಗೊಂಡಿದ್ದ ಸಂದರ್ಭದಲ್ಲೂ ನೊಂದ ಕುಟಂಬಸ್ಥರು ಸಂಯಮ ಕಾಯ್ದುಕೊಂಡು ಆತನ ಅಂಗಾಂಗ ದಾನ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಆತನಿಂದ ಇವತ್ತು ಆರು ಮಂದಿ ಜೀವಿಸುವಂತಾಗಿದೆ. ಸಂತ್ರಸ್ತ ಕುಟುಂಬಕ್ಕೆ ಮುಖ್ಯಮಂತ್ರಿಯವರಲ್ಲಿ ಮಾತನಾಡಿ ಪರಿಹಾರ ಕೊಡಿಸಿದ್ದೇನೆ ಎಂದರು.

ಇತ್ತೀಚಿಗೆ ಕುತ್ತಾರ್ ನಲ್ಲಿ ನಡೆದ ಅಪಘಾತದಲ್ಲಿ ಕಲ್ಲಾಪು ನಿವಾಸಿ ಭೂಷಣ್ ರೈ ಎಂಬ ಯುವಕನ ಮೆದುಳು ನಿಷ್ಕ್ರಿಯಗೊಂಡು ಅಂಗಾಂಗ ದಾನ ಮಾಡಲಾಗಿತ್ತು. ಆ ಬಡ ಕುಟುಂಬಕ್ಕೂ ಸಹಾಯವಾಗುವ ನಿಟ್ಟಿನಲ್ಲಿ ಪರಿಹಾರಕ್ಕಾಗಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದು, ಶೀಘ್ರವೇ ಪರಿಹಾರಧನ ಬಿಡುಗಡೆಯಾಗಲಿದೆ ಎಂದು ಖಾದರ್ ತಿಳಿಸಿದ್ದಾರೆ.

Similar News