ಎಪ್ರಿಲ್ 1ರಿಂದ ಟೋಲ್ ದರ ಹೆಚ್ಚಳ: ರಾಜ್ಯಾದ್ಯಂತ ಟೋಲ್ ಪ್ಲಾಝಾಗಳ ಎದುರು ಪ್ರತಿಭಟನೆಗೆ ಹೋರಾಟ ಸಮಿತಿ ಮನವಿ

Update: 2023-03-21 05:24 GMT

ಮಂಗಳೂರು, ಮಾ.21:  ಎಪ್ರಿಲ್ ಒಂದರಿಂದ ದೇಶಾದ್ಯಂತ ಟೋಲ್ ದರಗಳನ್ನು 5ರಿಂದ 10 ಶೇ.ದ ವರಗೆ ಏರಿಸಲು ರಾಷ್ಟೀಯ ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದೆ. ಇದು ಏಕಪಕ್ಷೀಯ, ಅನೈತಿಕ ನಿಲುವಾಗಿದ್ದು, ವಾಹನ ಸವಾರರ ಮೇಲೆ ವಿಪರೀತ ಹೊರೆಬೀಳಲಿದೆ. ಕೇಂದ್ರ ಸರಕಾರದ ಈ ನಿರ್ದಯ ಸುಲಿಗೆ ನೀತಿಯನ್ನು ವಿರೋಧಿಸಿ ಎಪ್ರಿಲ್ ಒಂದರಂದು ರಾಜ್ಯಾದ್ಯಂತ ಟೋಲ್ ಗೇಟ್ ಗಳ ಮುಂಭಾಗ ಜನಪರ ಸಂಘಟನೆಗಳು ಪ್ರತಿಭಟನೆ ನಡೆಸುವಂತೆ ಸುರತ್ಕಲ್ 'ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಮನವಿ ಮಾಡಿದೆ.

ಈಗಾಗಲೆ ಬೆಲೆಯೇರಿಕೆ, ನಿರುದ್ಯೋಗ, ಆದಾಯ ಕುಸಿತದಿಂದ ಜನತೆ ಕಂಗೆಟ್ಟಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಸಾರ್ವಕಾಲಿಕ ಕುಸಿತ ಕಂಡಿದ್ದರೂ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ದರ ವಿಪರೀತ ಹೆಚ್ಚಿದೆ. ಇದರಿಂದ ಸರಕು ಸಾಗಣೆ ದುಬಾರಿಯಾಗಿ ಜನತೆಯ ಜೇಬಿಗೆ ಕತ್ತರಿ ಬಿದ್ದಿದೆ. ರಸ್ತೆಗಳಲ್ಲಿ ವಾಹನಗಳ ಓಡಾಟದ ಹೆಚ್ಚಳದಿಂದ ಟೋಲ್ ಕಂಪೆನಿಗಳು ದೊಡ್ಡ ಮಟ್ಟದ ಲಾಭ ಗಳಿಸುತ್ತಿವೆ. ಅವರ ಹೂಡಿಕೆಯ ಬಂಡವಾಳ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ವಾಪಸ್ ಬರುತ್ತಿದೆ. ಫಾಸ್ಟ್ ಟ್ಯಾಗ್ ನಿಯಮದಿಂದ ಟೋಲ್ ಕಂಪೆನಿಗಳ ನಿರ್ವಹಣೆ ವೆಚ್ಚವೂ ಕಡಿಮೆಯಾಗಿದೆ. ಹಾಗಿರುವಾಗ ವರ್ಷದಿಂದ ವರ್ಷಕ್ಕೆ ಟೋಲ್ ಸುಂಕದಲ್ಲಿ ಕಡಿತ ಆಗಬೇಕಿತ್ತು. ಅದರ ಬದಲಿಗೆ ಪ್ರತಿವರ್ಷ ಎಪ್ರಿಲ್ ನಲ್ಲಿ ಕಡ್ಡಾಯ ಎಂಬಂತೆ ಟೋಲ್ ದರವನ್ನು ಹೆಚ್ಚಿಸುತ್ತಾ ಬರಲಾಗುತ್ತಿದೆ. ಇದು ಅಕ್ರಮ ಮಾತ್ರ ಅಲ್ಲ, ಸಂಕಷ್ಟದಲ್ಲಿ ಇರುವ ಜನರಿಂದ ಅಧಿಕಾರದ ಬಲದ ಮೂಲಕ ಬಲವಂತವಾಗಿ ನಡೆಸುವ ಸುಲಿಗೆ ಎಂದು ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ವರ್ಷದಿಂದ ವರ್ಷಕ್ಕೆ ಟೋಲ್ ಸುಂಕ ವಿಧಿಸುವ ರಸ್ತೆಗಳ ಸಂಖ್ಯೆ ಏರುತ್ತಿದೆ. ರಾಜ್ಯ ಹೆದ್ದಾರಿಗಳಿಗೂ ಟೋಲ್ ಗೇಟ್ ಗಳನ್ನು ಅಳವಡಿಸಲಾಗುತ್ತಿದೆ. ವಾಹನ ಸವಾರರು ರಸ್ತೆಗೆ ಇಳಿಯಲು ಭಯಪಡುವಂತಾಗಿದೆ. ಇಂತಹ ಸಂದರ್ಭದಲ್ಲಿ ಟೋಲ್ ದರದ ಹೆಚ್ಚಳವನ್ನು ಮೌನವಾಗಿ ಸಹಿಸಿದರೆ ಮುಂದಿನ ದಿ‌ನಗಳಲ್ಲಿ ರಸ್ತೆಗಳ ಬಳಕೆಯೇ ಜನಸಾಮಾನ್ಯರಿಗೆ ಅಸಾಧ್ಯ ಆಗಲಿದೆ. ಈ ಎಲ್ಲ ಕಾರಣಗಳಿಗೆ ಟೋಲ್ ದರ ಹೆಚ್ಚಳವನ್ನು ನಾಗರಿಕ ಸಮಾಜ ಬಲವಾಗಿ ವಿರೋಧಿಸಬೇಕಿದೆ. ಎಪ್ರಿಲ್ ಒಂದರಂದು ಟೋಲ್ ದರ ಹೆಚ್ಚಳದ ಸಂದರ್ಭದಲ್ಲೇ ಆಯಾಯ ಭಾಗದ ‌‌ನಾಗರಿಕ ಸಂಘಟನೆಗಳು ರಾಜ್ಯದ ಟೋಲ್ ಗೇಟ್ ಗಳ ಮುಂಭಾಗದಲ್ಲಿ ಸ್ವಯಂ ಪ್ರೇರಣೆಯಿಂದ ಪ್ರತಿಭಟನೆ ನಡೆಸುವ ಮೂಲಕ ಸರಕಾರಗಳಿಗೆ ಪ್ರಬಲ ಎಚ್ಚರಿಕೆಯನ್ನು ರವಾನಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

Similar News