ಉಡುಪಿ: ಕಳವು ಪ್ರಕರಣದ 74.52 ಲಕ್ಷ ರೂ. ಮೌಲ್ಯದ ಸೊತ್ತು ವಾರೀಸುದಾರರಿಗೆ ಹಸ್ತಾಂತರ

Update: 2023-03-21 12:14 GMT

ಉಡುಪಿ: ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕಳವು ಪ್ರಕರಣಗಳಲ್ಲಿ ವಶಪಡಿಸಿಕೊಂಡ ಒಟ್ಟು 74,52,170ರೂ. ಮೌಲ್ಯದ ಸೊತ್ತುಗಳನ್ನು ನ್ಯಾಯಾಲಯದಿಂದ ಅನುಮತಿ ಪಡೆದು ವಾರೀಸುದಾರರಿಗೆ ಮಂಗಳವಾರ ಹಸ್ತಾಂತರಿಸಲಾಯಿತು.

ಉಡುಪಿಯ ಪೊಲೀಸ್ ಕವಾಯತು ಮೈದಾನದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಎಂ.ಎಚ್. ಸಂಬಂಧಪಟ್ಟ ವಾರೀಸುದಾರರಿಗೆ ಸೊತ್ತುಗಳನ್ನು ಹಸ್ತಾಂತರಿಸಿದರು. ಬಳಿಕ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಕರಣಗಳನ್ನು ಪತ್ತೆ ಹಚ್ಚುವಂತೆ ಪೊಲೀಸ್ ಅಧಿ ಕಾರಿಗಳಿಗೆ ಸೂಚನೆ ನೀಡಿದರು.

ಕಾರ್ಕಳ ಗ್ರಾಮಾಂತರ ಠಾಣೆಯ 1 ಪ್ರಕರಣ, ಹಿರಿಯಡ್ಕ 1, ಬೈಂದೂರು 1, ಕೊಲ್ಲೂರು 1, ಕಾಪು 1, ಕೋಟ 2, ಮಲ್ಪೆ 2, ಉಡುಪಿ ನಗರ 3, ಕುಂದಾಪುರ 5, ಪಡುಬಿದ್ರಿ 4, ಕುಂದಾಪುರ ಗ್ರಾಮಾಂತರ 4, ಬ್ರಹ್ಮಾವರ 5 ಹಾಗೂ ಮಣಿಪಾಲ ಠಾಣೆಯ 10ಪ್ರಕರಣ ಸೇರಿ ಒಟ್ಟು 40 ಪ್ರಕರಣಗಳಲ್ಲಿ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಪ್ರಕರಣಗಳಲ್ಲಿ 2.94ಲಕ್ಷ ರೂ. ಮೌಲ್ಯದ 7 ದ್ವಿಚಕ್ರ ವಾಹನ, 68,23,810ರೂ. ಮೌಲ್ಯದ 1.195ಕೆ.ಜಿ. ಚಿನ್ನ, 88510ರೂ. ಮೌಲ್ಯದ 1.192ಕೆ.ಜಿ. ಬೆಳ್ಳಿ, 75,700ರೂ. ಮೌಲ್ಯದ 10 ಮೊಬೈಲ್ ಫೋನು ಮತ್ತು 1,70,150ರೂ. ನಗದು ಹಣವನ್ನು ವಶಪಡಿಸಿಕೊಂಡು ಸಂಬಂಧಪಟ್ಟ ನ್ಯಾಯಾಲಯದಿಂದ ಅನುಮತಿ ಪಡೆದು ವಾರೀಸುದಾರರಿಗೆ ಹಿಂತಿರುಗಿಸ ಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಎಸ್.ಟಿ. ಸಿದ್ದಲಿಂಗಪ್ಪ, ಡಿವೈಎಸ್ಪಿಗಳಾದ ದಿನಕರ್ ಪಿ.ಕೆ., ಕೆ.ವಿ.ಬೆಳ್ಳಿಯಪ್ಪ, ಅರವಿಂದ ಹಾಗೂ ಪೊಲೀಸ್ ನಿರೀಕ್ಷಕರು ಹಾಗೂ ಉಪನಿರೀಕ್ಷಕರು ಹಾಜರಿದ್ದರು.

ಪ್ರತಿದಿನ 100ಗಿಂತ ಹೆಚ್ಚು ಜನ ಬಂದು ಹೋಗುವ ಸ್ಥಳದಲ್ಲಿ ಕಡ್ಡಾಯವಾಗಿ ಕ್ಯಾಮೆರಾ ಅಳವಡಿಸಬೇಕೆಂಬ ಆದೇಶ ಇದೆ. ಅದರಲ್ಲಿ ಕ್ಯಾಮೆರಾ ಹೈ ರೆಸೊಲ್ಯೂಶನ್ ಇರಬೇಕು ಮತ್ತು ಒಂದು ಕ್ಯಾಮೆರಾ ಸಾರ್ವಜನಿಕರ ಚಲ ವಲನ ಗಮನಿಸಲು ಅಳವಡಿಸಬೇಕು ಎಂದು ಎಸ್ಪಿ ಅಕ್ಷಯ್ ತಿಳಿಸಿದರು.

ಮನೆ, ಅಂಗಡಿ ಮಾಲಕರು ತಮ್ಮ ಸೊತ್ತುಗಳ ರಕ್ಷಣೆಗಾಗಿ ಸುರಕ್ಷತಾ ಕ್ರಮ ಗಳನ್ನು ತೆಗೆದುಕೊಳ್ಳಬೇಕು. ಕಳ್ಳತನ ನಡೆದ ಬಳಿಕ ಹುಡುಕಾಟ ನಡೆಸುವ ಬದಲು ಕಳ್ಳತನ ಆಗದಂತೆ ತಡೆಯಲು ಮುಂಜಾಗ್ರತಾ ಕ್ರಮಗಳನ್ನು ಅಳವಡಿಸ ಬೇಕು. ಮನೆ ಅಂಗಡಿಗಳನ್ನು ಸುರಕ್ಷಿತವಾಗಿರಿಸಲು ಅಲರಾಮ್, ಸೆನ್ಸಾರ್ ಕ್ಯಾಮೆರಾ, ಸಿಸಿಟಿವಿಗಳನ್ನು ಅಳವಡಿಸಬೇಕು ಎಂದರು.

ಗ್ರಾಮೀಣ ಪ್ರದೇಶದಲ್ಲಿ ಹಗಲಿನಲ್ಲಿ ಹೆಚ್ಚು ಕಳ್ಳತನ ನಡೆಯುತ್ತಿದೆ. ಇದಕ್ಕೆ ಮನೆಯವರು ಮನೆಯ ಕೀಗಳನ್ನು ಅಲ್ಲೇ ಇಟ್ಟು ಹೋಗುವುದು ಮುಖ್ಯ ಕಾರಣ. ಜನರು ತಮ್ಮ ಪರಿಸರದಲ್ಲಿ ಸುತ್ತಾಡುವ ಸಂಶಯಾಸ್ಪದ ವ್ಯಕ್ತಿಗಳ ಬಗ್ಗೆ ಕೂಡಲೇ ಸ್ಥಳೀಯ ಠಾಣೆಗಳಿಗೆ ಮಾಹಿತಿ ನೀಡಬೇಕು. ಇದರಿಂದ ಕಳ್ಳತನ ಪ್ರಕರಣಗಳನ್ನು ತಡೆಯಬಹುದು ಎಂದು ಅವರು ಹೇಳಿದರು.

ಬೈಕಿಗೆ ಹಾನಿ: ಮೂವರ ಬಂಧನ
ಉದ್ಯಾವರ ಮಠದಕುದ್ರು ಪರಿಸರದಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ವಿಚಾರವಾಗಿ ಅದಮಾರು ಸ್ವಾಮೀಜಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ  ಭಾಗವಹಿಸಿ ವಿಷಯ ಪ್ರಸ್ತಾಪ ಮಾಡಿದ್ದ ಭಾಸ್ಕರ ಕರ್ಕೇರ ಎಂಬವರ ಬೈಕಿಗೆ ಹಾನಿ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಬಂಧಿಸ ಲಾಗಿದೆ ಎಂದು ಎಸ್ಪಿ ಅಕ್ಷಯ್ ಹಾಕೇ ತಿಳಿಸಿದ್ದಾರೆ.

ಈ ವಿಚಾರ ತಿಳಿದ ಕೂಡಲೇ ಜಿಲ್ಲಾಧಿಕಾರಿ ಜೊತೆ ಮಾತುಕತೆ ನಡೆಸಿ, ತಹಶೀಲ್ದಾರ್, ಪೊಲೀಸ್ ಅಧಿಕಾರಿಗಳು, ಗಣಿ ಇಲೇಆಖೆ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಲಾಗಿತ್ತು. ಅವರು ಇಲ್ಲಿ ಯಾವುದೇ ಮರಳುಗಾರಿಕೆ ನಡೆಯದಂತೆ ಕ್ರಮ ತೆಗೆದುಕೊಂಡಿದ್ದಾರೆ. ಮುಂದೆ ಇಂತಹ ಅಕ್ರಮ ಚಟುವಟಿಕೆ ಕಂಡು ಬಂದರೆ ಕೂಡಲೇ 112 ಕಂಟ್ರೋಲ್ ರೂಮಿಗೆ ಕರೆ ಮಾಡಬೇಕು ಎಂದರು.

Similar News