ಬೆಂಗಳೂರು | 3 ಕ್ಷೇತ್ರಗಳ ಮತದಾರರ ಪಟ್ಟಿ ಕುರಿತು ಮತ್ತೊಮ್ಮೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಿದ ಆಯೋಗ

Update: 2023-03-21 15:29 GMT

ಬೆಂಗಳೂರು, ಮಾ. 21: ವಿವಾದಕ್ಕೆ ಗುರಿಯಾಗಿದ್ದ ಶಿವಾಜಿನಗರ ಹಾಗೂ ಶಾಂತಿನಗರ ಹಾಗೂ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಥಳಾಂತರಿತ ಮತ್ತು ನಿಧನರಾದ ಮತದಾರರ ಪ್ರಕರಣದಲ್ಲಿ ಕ್ರಮ ಕೈಗೊಳ್ಳುವ ಜೊತೆಗೆ ಆಕ್ಷೇಪಣೆಗೂ ಅವಕಾಶ ನೀಡಲಾಗುವುದು ರಾಜ್ಯ ಚುಣಾವಣಾ ಆಯೋಗ ತಿಳಿಸಿದೆ ಎಂದು ವರದಿಯಾಗಿದೆ.

ಮಂಗಳವಾರ ಈ ಕುರಿತು ಪತ್ರಿಕಾ ಪ್ರಕಟನೆ ಬಿಡುಗಡೆ ಮಾಡಿರುವ ಆಯೋಗ, ಶಾಂತಿನಗರ, ರಾಜರಾಜೇಶ್ವರಿ ನಗರ, ಶಿವಾಜಿನಗರ ಕ್ಷೇತ್ರದಲ್ಲಿ ಸ್ಥಳ ತಪಾಸಣೆ ಮತ್ತು ಮನೆ-ಮನೆ ಸರ್ವೆ ಮೂಲಕ 16,040 ಸ್ಥಳಾಂತರಿತ ಹಾಗೂ ನಿಧನರಾದ ಮತದಾರರನ್ನು ಗುರುತಿಸಲಾಗಿದೆ. ಈ ಪಟ್ಟಿಯನ್ನು ರಾಜಕೀಯ ಪಕ್ಷಗಳ ಜೊತೆಗೂ ಹಂಚಿಕೊಳ್ಳಲಾಗಿದೆ. ಈ ಸಂಬಂಧ ಹೆಸರು ರದ್ದು ಆಗಿರುವುದನ್ನು ಸರಿಪಡಿಸಲು 7 ದಿನಗಳ ಸಾಮಾನ್ಯ ನೋಟಿಸ್ ನೀಡಲಾಗುವುದು ಎಂದು ಹೇಳಿದೆ.

ಇನ್ನೂ, ಆರ್.ಆರ್.(ರಾಜರಾಜೇಶ್ವರಿ)ನಗರ, ಶಾಂತಿನಗರ ಮತ್ತು ಶಿವಾಜಿನಗರದಲ್ಲಿ ಸ್ಥಳಾಂತರಿತ ಹಾಗೂ ನಿಧನರಾದ ಮತದಾರರ ಹೆಸರು ರದ್ದು ಮಾಡಲು ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಸೂಚಿಸಲಾಗಿದೆ. ಈಗಾಗಲೇ ಎಲ್ಲಾ ಅಂಶಗಳನ್ನು ಪರಿಗಣಿಸಿ, ಸಾಕಷ್ಟು ಪರಿಶೀಲನೆಯ ಬಳಿಕ ಮೂರು ಕ್ಷೇತ್ರಗಳಲ್ಲಿ ಸ್ಥಳಾಂತರಿತ ಮತ್ತು ನಿಧನರಾದ ಮತದಾರರ ಹೆಸರನ್ನು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದೆ.

ಅಂಕಿ ಅಂಶಗಳ ಪ್ರಕಾರ, ಶಿವಾಜಿನಗರದಲ್ಲಿ ಸ್ಥಳಾಂತರಿತ ಮತದಾರರು 8,281, ಸಾವಿಗೀಡಾದ ಮತದಾರರು 1,684, ಶಾಂತಿನಗರದಲ್ಲಿ 2,247 ಸ್ಥಳಾಂತರಿತ ಹಾಗೂ 526 ನಿಧನ ಹೊಂದಿದ ಮತದಾರರು ಮತ್ತು ಆರ್.ಆರ್. ನಗರದಲ್ಲಿ ಸ್ಥಳಾಂತರಿತ 2,547, ನಿಧನ ಹೊಂದಿದ 755 ಮತದಾರರನ್ನು ಗುರುತಿಸಲಾಗಿದೆ.

ಅಲ್ಲದೆ, ಮತದಾರರ ಹೆಸರು ರದ್ದು ಪ್ರಕ್ರಿಯೆಯ ಮುನ್ನ ಅತ್ಯಂತ ಎಚ್ಚರಿಕೆ ವಹಿಸಬೇಕಾಗಿದೆ. ಸ್ಥಳಾಂತರಿತ ಮತ್ತು ನಿಧನರಾದವರನ್ನು ಮತದಾರರೆಂದು ಗುರುತಿಸಲು ಸಾಕಷ್ಟು ಪರಿಶೀಲನೆ ನಡೆಸಬೇಕು. ಮತದಾರರ ಪಟ್ಟಿಯಿಂದ ತಪ್ಪಾಗಿ ಹೆಸರು ರದ್ದು ಮಾಡುವ ಮೂಲಕ ಯಾರೊಬ್ಬ ಮತದಾರನು ಮತ ಹಕ್ಕಿನಿಂದ ವಂಚಿತನಾಗಬಾರದು. ಈ ನಿಟ್ಟಿನಲ್ಲಿ ಇನ್ನೊಂದು ಅವಕಾಶ ನೀಡಲಾಗುವುದು ಎಂದು ಚುನಾವಣಾಧಿಕಾರಿ ಪ್ರಕಟನೆಯಲ್ಲಿ ಉಲ್ಲೇಖಿಸಿದ್ದಾರೆ.

Similar News