ಕಸಾಪದ ಪ್ರಜಾಪ್ರಭುತ್ವ ವಿರೋಧಿ ಸುತ್ತೋಲೆಯನ್ನು ಹಿಂಪಡೆಯುವಂತೆ ಒತ್ತಾಯ

Update: 2023-03-21 16:27 GMT

ಬೆಂಗಳೂರು, ಮಾ. 21: ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸಭೆಗಳ ಕುರಿತು ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ ಅವರು ಹೊರಡಿಸಿರುವ ಸುತ್ತೋಲೆಯು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದ್ದು, ಸುತ್ತೋಲೆಯನ್ನು ಹಿಂಪಡೆಯಬೇಕು ಎಂದು ಬೆಂಗಳೂರು ನಗರ ಜಿಲ್ಲ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪ್ರಕಾಶಮೂರ್ತಿ ಆಗ್ರಹಿಸಿದ್ದಾರೆ. 

ಈ ಕುರಿತು ಪ್ರಕಟನೆ ಹೊರಡಿಸಿರುವ ಅವರು, ಕಸಾಪ ಹೊರಡಿಸಿರುವ ಸುತ್ತೋಲೆಯು ಚುನಾವಣೆ ಮೂಲಕ ಆಯ್ಕೆಗೊಂಡಿರುವ ಕಸಾಪದ ಜಿಲ್ಲಾಧ್ಯಕ್ಷರುಗಳಿಗೂ ಅನ್ವಯ ಮಾಡುವುದು ಪ್ರಜಾಪ್ರಭುತ್ವ ವಿರೋಧಿ ನಡೆಯಾಗುತ್ತದೆ. ಚುನಾಯಿತ ಜಿಲ್ಲಾಧ್ಯಕ್ಷರುಗಳಿಗೂ ಸಭಾ ಮರ್ಯಾದೆಯ ಅರಿವಿದೆ. ಆದುದರಿಂದ ಸಭೆಯ ಕಟ್ಟುಪಾಡುಗಳನ್ನು ಪಾಲಿಸಲು ಚುನಾಯಿತ ಪ್ರತಿನಿಧಿಗಳಿಗೆ ಅನ್ವಯ ಮಾಡುವುದು ಸೂಕ್ತವಲ್ಲ ಎಂದು ತಿಳಿಸಿದ್ದಾರೆ. 

ಈ ಹಿಂದಿನ ಏಳು ಕಾರ್ಯಕಾರಿ ಸಮಿತಿಯ ಸಭೆಗಳ ಪೈಕಿ ತಾವು ನಾಲ್ಕು ಕಾರ್ಯಕಾರಿ ಸಮಿತಿ ಸಭೆಗಳ ಸಂಪೂರ್ಣ ವಿಡಿಯೋ ಚಿತ್ರೀಕರಣವನ್ನು ಮಾಡಿಸಿದ್ದೀರಿ. ನಂತರ ನಡೆದ ಸಭೆಗಳ ವಿಡಿಯೋ ಚಿತ್ರೀಕರಣ ಮಾಡಿಸುತ್ತಿರುವುದಿಲ್ಲ. ಅದಕ್ಕೆ ಕಾರಣ ತಿಳಿದಿಲ್ಲ. ಪಾರದರ್ಶಕತೆ ದೃಷ್ಟಿಯಿಂದ ಮುಂದೆ ನಡೆಯುವ ಕಾರ್ಯಕಾರಿ ಸಮಿತಿ ಸಭೆಗಳಲ್ಲಿ ನಡೆಯುವ ಎಲ್ಲ ಚರ್ಚೆಗಳನ್ನು ಮತ್ತು ನಡವಳಿಕೆಗಳನ್ನು ಕಡ್ಡಾಯವಾಗಿ ವಿಡಿಯೋ ಚಿತ್ರೀಕರಣ ಮಾಡಿಸಬೇಕು ಎಂದು ಅವರು ಮಹೇಶ್ ಜೋಶಿ ಅವರನ್ನು ಒತ್ತಾಯಿಸಿದ್ದಾರೆ. 

Similar News