ತ್ಯಾಜ್ಯ ವಿಲೇವಾರಿ ಮಾಡಿಸದಿದ್ದಲ್ಲಿ ಶಾಸಕರ ಮನೆ ಮುಂದೆ ತ್ಯಾಜ್ಯ ಸುರಿದು ಪ್ರತಿಭಟನೆ: ಡಿವೈಎಫ್‌ಐ ದ.ಕ.ಜಿಲ್ಲಾಧ್ಯಕ್ಷ

Update: 2023-03-21 18:01 GMT

ಮಂಗಳೂರು: ಕಳೆದ 10 ದಿನಗಳಿಂದ ರಾಜ್ಯಾದ್ಯಂತ ಪೌರ ಕಾರ್ಮಿಕರು,ಮುನ್ಸಿಪಲ್ ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಮುಂದಿಟ್ಟು ಅನಿರ್ದಿಷ್ಟಾವಧಿ ಹೋರಾಟ ನಡೆಸುತ್ತಿದ್ದರೂ ಕೂಡ ಡಬ್ಬಲ್ ಇಂಜಿನ್ ಸರಕಾರವೆಂದು ಹೇಳಿಕೊಳ್ಳುತ್ತಿರುವ ಬಿಜೆಪಿ ಸರಕಾರವು ಯಾವುದೇ ರೀತಿಯ ಸ್ಪಂದನ ಮಾಡದೆ ತನ್ನ ಕ್ರೌರ್ಯವನ್ನು ಪ್ರದರ್ಶಿಸಿದೆ. ನಗರದಲ್ಲಿ ತ್ಯಾಜ್ಯವನ್ನು ತಕ್ಷಣ ವಿಲೇವಾರಿ ಮಾಡಿಸದಿದ್ದಲ್ಲಿ ಶಾಸಕರ ಮನೆ ಮುಂದೆ ತ್ಯಾಜ್ಯ ಸುರಿದು ಪ್ರತಿಭಟನೆ ಮಾಡಲಾಗುವುದು ಎಂದು ಡಿವೈಎಫ್‌ಐ ದ.ಕ.ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಎಚ್ಚರಿಸಿದ್ದಾರೆ.

ಪೌರ ಕಾರ್ಮಿಕರ ಹೋರಾಟವನ್ನು ಬೆಂಬಲಿಸಿ ವಿವಿಧ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ನಗರದ ಮನಪಾ ಕಚೇರಿಯ ಮುಂದೆ ಮಂಗಳವಾರ ನಡೆದ ಪ್ರತಿಭಟನಾ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಗರ ಪ್ರದೇಶದ ಸುಂದರೀಕರಣ ಹಾಗೂ ಸ್ವಚ್ಛತೆಗಾಗಿ ತನ್ನ ಸರ್ವಸ್ವವನ್ನೂ ಮುಡಿಪಾಗಿಟ್ಟ ಪೌರ ಕಾರ್ಮಿಕರ ಉತ್ತಮ ಬದುಕಿಗಾಗಿ ಎಳ್ಳಷ್ಟೂ ಕಾಳಜಿ ವಹಿಸದ ರಾಜ್ಯ ಸರಕಾರ ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಕೋಟ್ಯಂತರ ರೂ.ವನ್ನು ದುರುಪಯೋಗ ಪಡಿಸುತ್ತಿದೆ. ತೀರಾ ಸಂಕಷ್ಟದಲ್ಲಿರುವ ಪೌರ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕಾದ ಶಾಸಕ ವೇದವ್ಯಾಸ ಕಾಮತ್  ಕಾರ್ಮಿಕರ ಜೊತೆ ದರ್ಪ ತೋರಿಸಿ ಬೆದರಿಕೆ ಹಾಕಿರುವುದು ಖಂಡನೀಯ ಎಂದರು.

ಸಿಪಿಎಂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ರೈತ ಸಂಘದ ಜಿಲ್ಲಾ ನಾಯಕ ಯಾದವ ಶೆಟ್ಟಿ, ಮಾಜಿ ಮೇಯರ್ ಅಶ್ರಫ್ ಕೆ.  ಮಾತನಾಡಿದರು.

ಪ್ರತಿಭಟನೆಯಲ್ಲಿ ಡಿವೈಎಫ್‌ಐ ಜಿಲ್ಲಾ ನಾಯಕರಾದ ನವೀನ್ ಕೊಂಚಾಡಿ, ಜಗದೀಶ್ ಬಜಾಲ್, ತಯ್ಯುಬ್ ಬೆಂಗ್ರೆ, ಸಿಐಟಿಯು ಜಿಲ್ಲಾ ನಾಯಕರಾದ ಯೋಗೀಶ್ ಜಪ್ಪಿನಮೊಗರು, ಮುಹಮ್ಮದ್ ಮುಸ್ತಫಾ, ವಿಲ್ಲಿ ವಿಲ್ಸನ್, ಮುಹಮ್ಮದ್ ಆಸಿಫ್, ಹರೀಶ್ ಪೂಜಾರಿ, ಮಹಿಳಾ ಸಂಘಟನೆಯ ಮುಖಂಡರಾದ ಭಾರತಿ ಬೋಳಾರ, ಪ್ರಮೀಳಾ ದೇವಾಡಿಗ, ಅಸುಂತಾ ಡಿಸೋಜ, ಯೋಗಿತಾ ಉಳ್ಳಾಲ, ಎಸ್‌ಎಫ್‌ಐ ನಾಯಕ ವಿನೀತ್ ದೇವಾಡಿಗ, ಯುವ ವಕೀಲರಾದ ನಿತಿನ್ ಕುತ್ತಾರ್, ಸುನಂದಾ ಕೊಂಚಾಡಿ, ಮಾಜಿ ಕಾರ್ಪೊರೇಟರ್ ದಯಾನಂದ ಶೆಟ್ಟಿ, ಸಫಾಯಿ ಕರ್ಮಚಾರಿ ಸಂಘದ ಮುಖಂಡರಾದ ರಾಜೇಶ್, ಪದ್ಮನಾಭ, ಸಂತೋಷ್,ಅಶ್ವಿನ್ ಮುಂತಾದವರು ಪಾಲ್ಗೊಂಡಿದ್ದರು.

Similar News