ಪಲ್ಲವಿಸುವ ನಿಸರ್ಗವೂ ಮನುಷ್ಯನ ಪರಿಸರ ಪ್ರಜ್ಞೆಯೂ

ಯುಗಾದಿಯ ಆಚರಣೆಯನ್ನು ಬೇವು-ಬೆಲ್ಲದಿಂದಾಚೆಗೂ ವಿಸ್ತರಿಸಿದಾಗ ಪರಿಸರ ಉಳಿಯುತ್ತದೆ

Update: 2023-03-22 06:21 GMT

ಭಾರತದಲ್ಲಿ ಆಚರಿಸಲಾಗುವ ಅನೇಕ ಹಬ್ಬಗಳು ಜನಸಾಂಸ್ಕೃತಿಕ ಮೂಲಗಳಿಂದಲೇ ಉಗಮಿಸಿವೆ. ಪ್ರಮುಖ ಹಬ್ಬಗಳ ಮೂಲವನ್ನು ಶೋಧಿಸುತ್ತಾ ಹೋದರೆ ನಮ್ಮ ಶೋಧನೆಯ ನೆಲೆಗಳು ಭಾರತೀಯ ಸಮಾಜದ ಜನಸಾಂಸ್ಕೃತಿಕ ಬೇರುಗಳನ್ನು ತಲುಪುತ್ತದೆ. ಮನುಷ್ಯನ ನಿತ್ಯ ಬದುಕು ಮತ್ತು ಈ ಬದುಕಿಗೆ ಪೂರಕವಾದ ಪರಿಕರಗಳನ್ನು ಒದಗಿಸುವ ನಿಸರ್ಗ ಇವೆರಡರ ನಡುವೆ ಏರ್ಪಡುವ ಸೂಕ್ಷ್ಮ ಸಂಬಂಧಗಳನ್ನು ಗಮನಿಸಿದರೆ, ಈ ಹಬ್ಬಗಳ ಮಹತ್ವವೂ ಅರ್ಥವಾಗುತ್ತದೆ. ಇತಿಹಾಸದ ಕಾಲಕ್ರಮದಲ್ಲಿ, ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆಯ ಪ್ರಭಾವದಿಂದ ಮತ್ತು ಶತಮಾನಗಳ ವೈದಿಕಶಾಹಿ ಪಾರಮ್ಯದ ಪರಿಣಾಮವಾಗಿ ಯುಗಾದಿಯನ್ನೂ ಸೇರಿದಂತೆ ಅನೇಕ ಹಬ್ಬಗಳು ಜನಸಂಸ್ಕೃತಿಯ ಮೂಲ ನೆಲೆಗಳಿಂದ ಹೊರಬಂದು, ಯಾವುದೋ ನಿರ್ದಿಷ್ಟ ಆಚರಣೆ, ವಿಧಿವಿಧಾನಗಳ ಅಂಗಳದಲ್ಲಿ ಸಂಭ್ರಮಿಸಲ್ಪಡುತ್ತಿವೆ.

ಆದರೂ ನಿರ್ದಿಷ್ಟ ಪ್ರಾದೇಶಿಕ-ಧಾರ್ಮಿಕ ನಂಬಿಕೆ ಮತ್ತು ಆಚರಣೆಗಳನ್ನು ದಾಟಿ ನಿಸರ್ಗ ಸೃಷ್ಟಿ ಮತ್ತು ಕಾಲಕಾಲಕ್ಕೆ ಪಲ್ಲವಿಸುವ ನಿಸರ್ಗದ ಸೌಂದರ್ಯವನ್ನು ಗಮನದಲ್ಲಿಟ್ಟು ನೋಡಿದಾಗ, ಯುಗಾದಿ ಕೇವಲ ಒಂದು ದಿನದ ಬೇವು-ಬೆಲ್ಲ ಅಥವಾ ವರ್ಷತೊಡಕಿನ ಆಚರಣೆಯೊಂದಿಗೆ ಮುಗಿಯುವುದಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಯುಗದ ಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರ ‘ಯುಗಾದಿ’ ಎಂಬ ಕವಿತೆಯ ಮೊದಲ ಈ ನಾಲ್ಕು ಸಾಲುಗಳು:

‘‘ಯುಗ ಯುಗಾದಿ ಕಳೆದರೂ/ಯುಗಾದಿ ಮರಳಿ ಬರುತಿದೆ/ಹೊಸ ವರುಷಕೆ ಹೊಸ ಹರುಷವ/ಹೊಸತು ಹೊಸತು ತರುತಿದೆ’’

ಕನ್ನಡ ಜಗತ್ತಿನ ಮಟ್ಟಿಗೆ ಯುಗಾದಿಯ ಆಚರಣೆಯ ಬಗ್ಗೆ ಒಂದು ಹೊಸ ಚಿಂತನೆಯನ್ನೇ ಮೂಡಿಸಿದೆ. ನಿಸರ್ಗದ ಚಲನೆ ಮತ್ತು ಕ್ರಿಯೆ ಎರಡೂ ನಿರಂತರವಾದದ್ದು, ಚೈತ್ರ ಮಾಸದ ನವ ಚಿಗುರು ಆಧುನಿಕ ಜಗತ್ತಿಗೆ ನಿಯತಕಾಲಿಕವಾಗಿ ತನ್ನ ಚೆಲುವನ್ನು ಪರಿಚಯಿಸುತ್ತಲೇ, ತನ್ನ ಪಾಡಿಗೆ ತಾನು ಸದ್ದಿಲ್ಲದೆ ಒಣಗಿ ಸುರುಟಿಹೋದ ಕೊಂಬೆ ರೆಂಬೆಗಳಲ್ಲೂ ನವ ವಸಂತದ ರಾಗವನ್ನು ಪಲ್ಲವಿಸುವ ಮೂಲಕ ಮನುಷ್ಯ ಕುಲಕ್ಕೆ ಬಿಸಿಲಿನ ಝಳದಲ್ಲೂ ತಂಪನ್ನೆರೆಯುತ್ತದೆ.

ಸಂಕ್ರಾಂತಿ ಮತ್ತು ಯುಗಾದಿ ಈ ಎರಡೂ ಹಬ್ಬಗಳು ನೆಲ ಮೂಲದ ಹಬ್ಬಗಳು. ಈ ಎರಡೂ ಹಬ್ಬಗಳ ಮೂಲ ಧಾತು ಇರುವುದು ಧರಿತ್ರಿಯಲ್ಲಿ ಮತ್ತು ಧರೆಯನ್ನು ಸದಾ ಕಾಲವೂ ತಮ್ಮದೇ ಕೂಸಿನಂತೆ ಪೋಷಿಸುವ ರೈತಾಪಿಯ ಬದುಕಿನಲ್ಲಿ. ಮಾನವನ ಅಭ್ಯುದಯದ ಹಾದಿಯನ್ನು ಗಮನಿಸಿದಂತೆಲ್ಲಾ, ನಿಸರ್ಗ, ನಿಸರ್ಗದ ಒಡಲು ಮತ್ತು ಸೌಂದರ್ಯ ಇವೆಲ್ಲವನ್ನೂ ಕಾಪಾಡುವ ಹೊಣೆ ಹೊತ್ತುಕೊಂಡು, ಇಂದಿಗೂ ಸಹ ಅದನ್ನು ಪೂಜ್ಯಭಾವದೊಂದಿಗೆ ಕಾಪಾಡುತ್ತಲೇ ಬಂದಿರುವ ಒಂದು ಸಮುದಾಯವನ್ನು ಗುರುತಿಸಬಹುದಾದರೆ ಅದು, ಮಣ್ಣಲ್ಲೇ ದುಡಿದು, ಮಣ್ಣಲ್ಲೇ ಬದುಕಿ, ಮಣ್ಣಿನ ನಡುವೆಯೇ ತಮ್ಮ ಬದುಕು ಕಟ್ಟಿಕೊಳ್ಳುವ ಮಣ್ಣಿನ ಮಕ್ಕಳ ಜೀವನದಲ್ಲಿ. ವಸಂತ ಋತುವನ್ನು ಸ್ವಾಗತಿಸಲು ಚೈತ್ರ ಮಾಸದಲ್ಲಿ ನಿಸರ್ಗ ಸೃಷ್ಟಿಸುವ ತಳಿರು ತೋರಣಗಳಿಗೆ ಮಾನವ ಸಮಾಜ ರೂಪಿಸಿಕೊಂಡಿರುವ ಯಾವುದೇ ಅಸ್ಮಿತೆ, ಅನನ್ಯತೆಗಳೂ ಅನ್ವಯಿಸುವುದಿಲ್ಲ. ತನ್ನ ಪಾಡಿಗೆ ತಾನು ಮರುಜೀವ ಪಡೆದುಕೊಳ್ಳುವ ಯಾಂತ್ರಿಕತೆ ನಿಸರ್ಗ ಪ್ರಕ್ರಿಯೆಯ ಒಂದು ಮಹತ್ತರವಾದ ಶಕ್ತಿ ಎನ್ನುವುದನ್ನು ಮನುಕುಲ ಇನ್ನಾದರೂ ಗ್ರಹಿಸಬೇಕಲ್ಲವೇ? ಭೂಮಿ, ಅರಣ್ಯ, ಬೆಟ್ಟಗುಡ್ಡಗಳು, ಪರ್ವತಗಳು, ಹುಲ್ಲುಗಾವಲುಗಳು ನಿಸರ್ಗದ ಸಹಜ ಸೃಷ್ಟಿಗಳೆಂಬ ಅರಿವಿದ್ದರೂ, ಮಾನವ ಸಮಾಜ ಈ ಪರಿಸರ ಸಂಪತ್ತಿನ ಮೇಲೆ ತನ್ನ ಯಜಮಾನಿಕೆಯನ್ನು ಸ್ಥಾಪಿಸಲೆಂದೇ ಹಲವು ಮಾರ್ಗಗಳನ್ನು ಸೃಷ್ಟಿಸಿಕೊಂಡಿದೆ.

ವಿವಿಧ ರಾಜ್ಯಗಳಲ್ಲಿ ವಿವಿಧ ಸ್ವರೂಪಗಳಲ್ಲಿ ಆಚರಿಸಲ್ಪಡುವ ಯುಗಾದಿ ಹಬ್ಬದ ಮೂಲ ಧಾತು ಇರುವುದು ನಿಸರ್ಗದಲ್ಲೇ. ಇದು ಎಲ್ಲ ಹಬ್ಬಗಳಂತೆಯೂ ಅಲ್ಲ. ನಂಬಿಕಸ್ಥರಿಗೆ ಇದು ಹೊಸ ವರ್ಷದ ಆರಂಭ. ಹಿಂದೂ ಧಾರ್ಮಿಕ ಆಚರಣೆಗಳನ್ನು, ವೈದಿಕ ಪರಂಪರೆಯನ್ನು ಅನುಸರಿಸುವವರಿಗೆ ಇದು ಹೊಸ ಸಂವತ್ಸರದ ಆರಂಭ. ಆದರೆ ಈ ಚೌಕಟ್ಟಿನಿಂದಾಚೆಗೆ ನಿಂತು ನೋಡಿದಾಗ, ಯುಗಾದಿ ಪ್ರಕೃತಿಯ ಹಬ್ಬದಂತೆಯೇ ಕಾಣುತ್ತದೆ. ಪ್ರಕೃತಿಯು ತನ್ನ ಒಡಲೊಳಗಿಂದಲೇ ತಂತಾನೇ ನೀಡುವ ಬೇವು ಮತ್ತು ಮನುಷ್ಯ ಬೆವರು ಸುರಿಸಿ, ಶ್ರಮವಹಿಸಿ ಕಬ್ಬು ಬೆಳೆದು, ಅದನ್ನು ಅರೆದು ತಯಾರಿಸುವ ಬೆಲ್ಲ, ಎರಡನ್ನೂ ಒಟ್ಟಿಗೆ ಸೇವಿಸುವ ಒಂದು ಆಚರಣೆಯು ಯುಗಾದಿ ಹಬ್ಬವನ್ನು ಕಳೆಗಟ್ಟಿಸುತ್ತದೆ. ಇಲ್ಲಿ ನಮಗೆ ಮಾನವನ ಶ್ರಮ ಮತ್ತು ನಿಸರ್ಗದ ಸಹಜ ಪ್ರವೃತ್ತಿ ಎರಡೂ ಒಂದರೊಳಗೊಂದು ಬೆರೆತು ಸಾಗಿದಾಗ ಮಾತ್ರವೇ ನಿಸರ್ಗದ ಸಮತೋಲನವನ್ನು ಕಾಪಾಡಿಕೊಂಡು ಹೋಗಲು ಸಾಧ್ಯ ಎಂಬ ಸೂಕ್ಷ್ಮ ಸಂದೇಶವೂ ಕಾಣುತ್ತದೆ. ಈ ಬೇವು ಬೆಲ್ಲದ ಸೇವನೆಯನ್ನು ಸುಖ-ದುಃಖಗಳನ್ನು ಸಮಾನವಾಗಿ ಕಾಣಬೇಕೆನ್ನುವ ಸಂದೇಶವಾಗಿಯೂ ನಮ್ಮ ಸಮಾಜ ನೋಡುತ್ತದೆ.

ಪರಿಸರ ಮತ್ತು ಯುಗಾದಿಯ ಸಂವಾದ

ಆದರೆ ನಾವು ನೋಡಬೇಕಿರುವುದು ಮನುಷ್ಯ ಸಮಾಜದ ಸುಖ ಮತ್ತು ನಿಸರ್ಗದ ದುಃಖ ಇವೆರಡೂ ಪರಸ್ಪರ ಸ್ಪಂದಿಸುತ್ತಿವೆಯೇ ಎಂಬ ವಾಸ್ತವವನ್ನು. ಆಧುನಿಕ ಮಾನವ ತನ್ನ ಬದುಕು ಕಟ್ಟಿಕೊಳ್ಳುವ ಭರದಲ್ಲಿ ಪ್ರಕೃತಿಯ ಎಲ್ಲ ಮೂಲ ನೆಲೆಗಳನ್ನೂ ಧ್ವಂಸ ಮಾಡುತ್ತಲೇ ತನ್ನ ರಾಕ್ಷಸ ಬಾಹುಗಳನ್ನು ಚಾಚುತ್ತಿದ್ದಾನೆ. ನಿಸರ್ಗ ತನ್ನೊಳಗೇ ಸೃಷ್ಟಿಸಿಕೊಳ್ಳುವ ಸೌಂದರ್ಯದ ತಾಣಗಳು ಆಧುನಿಕ ಮನುಷ್ಯನ ಮನತಣಿಸುವ ಮನರಂಜನೆಯ ಸರಕುಗಳಂತಾಗಿವೆ. ಹಾಗೆಯೇ ಪ್ರಕೃತಿಯು ಮಾನವ ಸಮಾಜವನ್ನು, ಸಕಲ ಜೀವ ಚರಾಚರಗಳನ್ನು ಕಾಪಾಡಲೆಂದೇ ಸೃಷ್ಟಿಸುವ ಮೂಲ ಸೆಲೆಗಳನ್ನು ಮನುಷ್ಯ ಸಮಾಜ ಬತ್ತುವಂತೆ ಮಾಡುವುದರಲ್ಲಿ ನಿರಂತರವಾಗಿ ತೊಡಗಿರುತ್ತದೆ. ತಾನೇ ಸೃಷ್ಟಿಸಿಕೊಂಡಿರುವ ಐಷಾರಾಮಿ ಭೋಗ ಜೀವನಕ್ಕೆ ಪೂರಕವಾದಂತಹ ವಾತಾವರಣವನ್ನು ಸೃಷ್ಟಿಸಿಕೊಳ್ಳಲು ಮನುಷ್ಯನು ಪ್ರಕೃತಿಯ ಬೇರುಗಳನ್ನೇ ಕಿತ್ತೊಗೆಯಲೂ ಹಿಂಜರಿಯದ ಒಂದು ಪರಿಸ್ಥಿತಿಯನ್ನು ನಾವು ಎದುರಿಸುತ್ತಿದ್ದೇವೆ.

ಪ್ರಕೃತಿ ಸಮನ್ವಯದ ಯುಗಾದಿ

ಬದಲಾಗುತ್ತಿರುವ ಹವಾಮಾನ, ಏರುಪೇರಾಗುತ್ತಿರುವ ಚಳಿಗಾಲ, ಮಳೆಗಾಲ ಮತ್ತು ಬೇಸಿಗೆ ಕಾಲಗಳು, ಏರುತ್ತಿರುವ ಜಾಗತಿಕ ತಾಪಮಾನ ಇವೆಲ್ಲದರ ನಡುವೆ ಮಾನವ ಸಮಾಜದಲ್ಲಿ ಸೃಷ್ಟಿಯಾಗುತ್ತಿರುವ ತಲ್ಲಣಗಳನ್ನು ಒಮ್ಮೆ ನೆನೆಸಿಕೊಂಡಾಗ, ಭಾವನಾತ್ಮಕ ನೆಲೆಯಲ್ಲಾದರೂ ಪ್ರಕೃತಿ ಮಾನವ ಸಮಾಜದ ಮೇಲೆ ಮುನಿಸಿಕೊಂಡಿದೆ ಎನಿಸುವುದು ಸಹಜ. ಆದರೆ ವಾಸ್ತವದಲ್ಲಿ ಪ್ರಕೃತಿಗೆ ಕಿರುಕುಳ ಕೊಡುತ್ತಿರುವುದು ಇದೇ ಮನುಷ್ಯ ಜಗತ್ತು. ಒಂದು ಬೇವಿನ ಮರದ ಔಷಧೀಯ, ನೈಸರ್ಗಿಕ ಮತ್ತು ಮಾನವೀಯ ಉಪಯೋಗಗಳನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ನೂರಾರು ಪಕ್ಷಿಗಳಿಗೆ ಒಮ್ಮೆಲೆ ಆಶ್ರಯ ನೀಡುವ ಹಚ್ಚ ಹಸಿರಿನ ಈ ಅಮೂಲ್ಯ ವೃಕ್ಷವನ್ನು ಕಡಿಯಕೂಡದು ಎಂಬ ಅಲಿಖಿತ ನಿಯಮವನ್ನು ನಮ್ಮ ಪೂರ್ವಿಕರು ಮಾಡಿದ್ದುದೂ ಇದೇ ಕಾರಣಕ್ಕಾಗಿಯೇ. ಆದರೆ ಆಧುನಿಕ ಮಾನವ ಇದನ್ನು ಪೂಜಿಸುವ ಮೌಢ್ಯವನ್ನು ರೂಢಿಸಿಕೊಂಡಿದ್ದಾನೆಯೇ ಹೊರತು ರಕ್ಷಿಸುವ ವ್ಯವಧಾನವನ್ನಲ್ಲ. ನಮ್ಮ ಮನೆ ಎದುರಿನ ೮೦ ಅಡಿ ರಸ್ತೆಗೋ, ಹೆದ್ದಾರಿಗೋ, ಮೇಲ್ಸೇತುವೆಗೋ ಅವಶ್ಯವೆಂದಾದಲ್ಲಿ ಬೇವಿನ ಮರವನ್ನೂ ಬುಡಮೇಲು ಮಾಡುತ್ತೇವೆ. ಹಾಗೆಯೇ ಬೆಲ್ಲದ ಮೂಲ ಧಾತು, ಕೃಷಿ ಭೂಮಿಯನ್ನೂ ಕಬಳಿಸುತ್ತೇವೆ.

ಪ್ರಕೃತಿಯೊಡನೆ ಸಂವಾದಿಸುತ್ತಾ ಸಮನ್ವಯ ಸಾಧಿಸುವ ವಿವೇಕವನ್ನೇ ಕಳೆದುಕೊಂಡಿರುವ ಆಧುನಿಕ ಮಾನವ ಸಮಾಜ, ಬೇವು-ಬೆಲ್ಲವನ್ನು ಹಂಚುವ ಮೂಲಕ ಸಾಧಿಸಲೆತ್ನಿಸುವ ಸಮನ್ವಯ ಅಥವಾ ಸೌಹಾರ್ದ ನಮ್ಮ ಸ್ವಾರ್ಥ ಬದುಕಿನ ಒಂದು ಭಾಗವಷ್ಟೇ. ನಾವು ಸಮನ್ವಯ ಸಾಧಿಸಬೇಕಿರುವುದು ಪ್ರಕೃತಿಯೊಡನೆ. ಪ್ರಕೃತಿಯ ಆರಾಧಕರಾಗಿ ಅಲ್ಲ ಸಂರಕ್ಷಕರಾಗಿ. ಜಲಸ್ಫೋಟ, ಬೆಟ್ಟಗಳ ಕುಸಿತ, ಘಟ್ಟಗಳ ಕುಸಿತ, ಹಿಮಕುಸಿತ, ಕಾಡ್ಗಿಚ್ಚು ಇವೆಲ್ಲದರ ನಡುವೆಯೇ ನಾವು ಇತ್ತ ಯುಗಾದಿಯನ್ನೂ ಸಂಭ್ರಮಿಸುತ್ತೇವೆ. ಈ ಸಂಭ್ರಮದ ಪ್ರತಿ ಕ್ಷಣದಲ್ಲೂ ನಮಗೆ ನೆನಪಾಗಬೇಕಿರುವುದು ಪರಿಸರಕ್ಕೆ ನಾವು ಉಂಟುಮಾಡುತ್ತಿರುವ ಹಾನಿ ಮತ್ತು ಮಾಲಿನ್ಯ. ಹಕ್ಕಿಗಳಿಗೆ ಗೂಡು ಕಟ್ಟಲೂ ಜಾಗವಿಲ್ಲದಂತೆ ನಗರಾಭಿವೃದ್ಧಿಯತ್ತ ನಾವು ದಾಪುಗಾಲು ಹಾಕುತ್ತಿದ್ದೇವೆ. ಗುಬ್ಬಚ್ಚಿಯ ಚಿಂವ್‌ಚಿಂವ್ ಸದ್ದು ಕೇಳಲು ಅಂತರ್ಜಾಲವನ್ನೋ, ಚಾಟ್‌ಜಿಪಿಟಿಯನ್ನೋ ಅವಲಂಬಿಸುವ ಅನಿವಾರ್ಯತೆಯನ್ನು ಎದುರಿಸುತ್ತಿದ್ದೇವೆ. ಆದರೆ ನಾವು ಬದುಕಲೋಸುಗ ಸಮನ್ವಯ, ಸೌಹಾರ್ದ, ಭ್ರಾತೃತ್ವವನ್ನು ಬೆಳೆಸಿಕೊಳ್ಳಲು ಬೇವು-ಬೆಲ್ಲ ಹಂಚಿ ಸಂಭ್ರಮಿಸುತ್ತಿದ್ದೇವೆ.

ಮನುಜ ಸಮಾಜ ಎಂಬ ಬೇವು, ಪ್ರಕೃತಿಯೊಡಲಿನ ಬೆಲ್ಲ ಇವೆರಡನ್ನೂ ಸಮತೋಲನದಿಂದ ಕಾಪಾಡುವ ಮನುಷ್ಯ ವಿವೇಕವನ್ನು ಆಧುನಿಕತೆ, ಬಂಡವಾಳಶಾಹಿ ಅಭಿವೃದ್ಧಿಯ ಚಿಂತನೆಗಳು ಮತ್ತು ಮಾರುಕಟ್ಟೆಯ ಬದುಕು ನಿರಂತರವಾಗಿ ನಾಶಪಡಿಸುತ್ತಲೇ ಬರುತ್ತಿವೆ. ಬೇವು-ಬೆಲ್ಲ ಸೇವಿಸುವ ಮೂಲಕ ಸುಖ-ದುಃಖವನ್ನು ಸಮನಾಗಿ ಕಾಣಲು ಹಪಹಪಿಸುವ ಆಧುನಿಕ ಮನುಜ ಜಗತ್ತು, ಮಾನವ ಲೋಕದ ಭೋಗಜೀವನದ ಸುಖ ಮತ್ತು ನಿಸರ್ಗದೊಡಲಿನ ದುಃಖ ಇವೆರಡನ್ನೂ ಸಮಾನ ನೆಲೆಯಲ್ಲಿ ಗ್ರಹಿಸಿ, ಪರಿಸರವನ್ನು ರಕ್ಷಿಸಲು ಮುಂದಾದಾಗ ಮಾತ್ರ ನಾವು ಆಚರಿಸುವ ಯುಗಾದಿಯೂ ಅರ್ಥಪೂರ್ಣವಾದೀತು. ಬೇಂದ್ರೆಯವರ ಸಾಲುಗಳು, ಯುಗಾದಿ ಎಂಬ ಕವಿತೆ, ಸಾರ್ವಕಾಲಿಕವಾಗಿ ಪ್ರಸ್ತುತವಾಗುವುದೂ ಈ ಕಾರಣಕ್ಕಾಗಿಯೇ.

Similar News