ಪ್ಲ್ಯಾಟ್‌ಫಾರ್ಮ್ ಮೇಲೆ ವಾಹನ ಸಂಚಾರ ಬೇಕಿತ್ತೇ?

ರೈಲ್ವೆ ಬವಣೆ

Update: 2023-03-22 06:29 GMT

ಯಾವುದೇ ರೈಲ್ವೆ ಪ್ಲ್ಯಾಟ್‌ಫಾರ್ಮ್‌ನ ಎಡ ಹಾಗೂ ಬಲಬದಿಗೆ ಎರಡು ಲೆವೆಲ್ ಕ್ರಾಸಿಂಗ್‌ಗಳಿದ್ದು; ಪ್ಲ್ಯಾಟ್‌ಫಾರ್ಮ್‌ನ ಒಂದು ಬದಿಯಿಂದ ಇನ್ನೊಂದು ಬದಿಗೆ ವಾಹನಗಳು ತೆರಳಲು ಸೂಕ್ತ ಡಾಂಬರು ರಸ್ತೆ ಇದ್ದರೂ; ಪ್ಲ್ಯಾಟ್‌ಫಾರ್ಮ್ ಮಧ್ಯದಿಂದಲೇ ವಾಹನಗಳು ಆಚೀಚೆ ಹೋಗಲು ಮೂರನೆಯ ರಸ್ತೆ ಮಾಡಿದ್ದು ಫರಂಗಿಪೇಟೆ ರೈಲು ನಿಲ್ದಾಣದಲ್ಲಿ ಕಾಣಸಿಗುತ್ತದೆ.

ವಿಶೇಷವೇನೆಂದರೆ ಹಳಿ ಹಾಗೂ ಪ್ಲ್ಯಾಟ್‌ಫಾರ್ಮ್ ರಸ್ತೆಗಿಂತ ಎತ್ತರದಲ್ಲಿದ್ದು ರಸ್ತೆಯಿಂದ ಹಳಿ ಮೇಲೆ ವಾಹನ ಸಂಚರಿಸಲು ಮಣ್ಣಿನ ರಸ್ತೆ ನಿರ್ಮಿಸುವಾಗಲೇ ಇದನ್ನು ನೈರುತ್ಯ ರೈಲ್ವೆಯು ತಡೆಯಬಹುದಿತ್ತು, ಆದರೆ ಹಾಗಾಗಲಿಲ್ಲ. ಬದಲಿಗೆ ಯಾವುದೇ ಅಡ್ಡಿ ಆತಂಕವಿಲ್ಲದೆ, ರೈಲು ಅಧಿಕಾರಿಗಳ ಭಯವಿಲ್ಲದೆ, ಪ್ಲ್ಯಾಟ್‌ಫಾರ್ಮ್ ಮಧ್ಯದಿಂದಲೇ ಎರಡೂ ಬದಿಗಳಿಂದ ವಾಹನಗಳು ಪ್ಲ್ಯಾಟ್‌ಫಾರ್ಮ್ ಹಾಗೂ ಹಳಿಗಳ ಮೇಲಿನಿಂದಲೇ ಸಂಚರಿಸುತ್ತವೆ.

ಆಶ್ಚರ್ಯವೇನೆಂದರೆ ಪ್ಲ್ಯಾಟ್‌ಫಾರ್ಮ್ ಆರಂಭ ಹಾಗೂ ಅಂತ್ಯವಾಗುವ ಕಡೆ ಹೀಗೆ ಒಂದಲ್ಲ ಎರಡು ಲೆವೆಲ್ ಕ್ರಾಸಿಂಗ್ ಇದ್ದರೂ ಪ್ಲ್ಯಾಟ್‌ಫಾರ್ಮ್ ಮಧ್ಯದಿಂದಲೇ ಮೂರನೇ ರಸ್ತೆ ಮಾಡುವ ಅಗತ್ಯವೇನಿತ್ತು?. ಇಲ್ಲಿ ವಾಹನಗಳನ್ನು ತಡೆಯುವ ಗೇಟ್ ಇಲ್ಲ. ನೋಡಿಕೊಳ್ಳಲು ಸಿಬ್ಬಂದಿ ಇಲ್ಲ. ಹಳಿ ಎತ್ತರದಲ್ಲಿದ್ದು, ವೇಗವಾಗಿ ವಾಹನಗಳು ಮೇಲೇರಿದಾಗ, ರೈಲು ತೀರಾ ಹತ್ತಿರವಿದ್ದರೆ, ಸಾವು ನೋವು ಉಂಟಾಗುವ ಸಾಧ್ಯತೆ ಇದೆ. ಅಚಾನಕ್ಕಾಗಿ ರೈಲು ನೋಡಿ ಕೂಡಲೇ ಬ್ರೇಕ್ ಹಾಕಿದರೆ ವಾಹನಗಳು ಸ್ಕಿಡ್ ಆಗಬಹುದು.

ಪ್ಲ್ಯಾಟ್‌ಫಾರ್ಮ್ ಹಾಗೂ ರಸ್ತೆಯ ಎತ್ತರವು ಸಮಾನವಾಗಿದ್ದು ರೈಲು ಹತ್ತುವುದಾದರೆ ಕಷ್ಟವೇ. ೧೯೯೬ರ ತನಕ ಮಂಗಳೂರು-ಮೈಸೂರು- ಬೆಂಗಳೂರು ಮಧ್ಯೆ ಸಂಚರಿಸುವ ಎಲ್ಲಾ ರೈಲುಗಳು ಇಲ್ಲಿ ನಿಲ್ಲುತ್ತಿದ್ದವು. ಆದರೆ ಈಗ ಯಾವುದೇ ರೈಲಿಗೆ ಇಲ್ಲಿ ನಿಲುಗಡೆ ಇಲ್ಲ. ಶೌಚಾಲಯ ವ್ಯವಸ್ಥೆಯೂ ಇಲ್ಲ. ಕಟ್ಟಡವೇನೋ ಇದೆ, ಆದರೆ ಕಲ್ಲು, ಮಣ್ಣು, ಗಿಡ-ಕಂಟಿಗಳಿಂದ ಸುತ್ತುವರಿದಿದ್ದು ಉಪಯೋಗಿಸುವಂತಿಲ್ಲ. ಹಳಿಗೆ ತೀರಾ ಹತ್ತಿರವಾಗಿ ವಿದ್ಯುತ್ ಪವರ್ ಹೌಸ್ ನಿರ್ಮಾಣವಾಗುತ್ತಿದೆ. ಇದನ್ನು ಸ್ವಲ್ಪದೂರದಲ್ಲಿ ಮಾಡಿದ್ದರೆ ಮುಂದೆ, ಇನ್ನೂ ಎರಡು ಹೆಚ್ಚುವರಿ ರೈಲು ಹಳಿಗಳನ್ನು ಹಾಸಬಹುದು.

Similar News

ಜಗದಗಲ
ಜಗ ದಗಲ