ಎವರೆಸ್ಟ್ ಎತ್ತರ ಅಳೆದ ರೋಚಕತೆ ಮತ್ತು ಏರುವ ಧಾವಂತದಲ್ಲಿ ಪ್ರಾಣ ಕಳೆದುಕೊಳ್ಳುವವರು...

Update: 2023-06-07 06:26 GMT

ಚೀನಾ-ನೇಪಾಳ ಗಡಿಯಲ್ಲಿ ಸಮುದ್ರ ಮಟ್ಟದಿಂದ 29,031 ಅಡಿಗಳ (ಅಂದಿನ ದಿನಗಳಲ್ಲಿ ತಿಳಿದ ಎತ್ತರ) ಎತ್ತರದಲ್ಲಿರುವ ಎವರೆಸ್ಟ್ ಏರುವುದಕ್ಕೆ ಮುಖ್ಯವಾಗಿ ಎರಡು ದಾರಿಗಳಿದ್ದವು. ಏರುವಾಗ ಪರ್ವತಾರೋಹಿಗಳು ಆಲ್ಟಿಟ್ಯೂಡ್ ಸಿಕ್ನೆಸ್, ಹವಾಮಾನ ವೈಪರೀತ್ಯ ಮತ್ತು ಹಿಮಪಾತಗಳನ್ನು ಎದುರಿಸಬೇಕಾಗುತ್ತದೆ. 2022ರ ನವೆಂಬರ್ವರೆಗೆ 310 ಪರ್ವತಾರೋಹಿಗಳು ಏರುವ ಧಾವಂತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಇದರಲ್ಲಿ ಸುಮಾರು 200 ಶವಗಳನ್ನು ತೆಗೆಯಲಾಗದೆ ಇಂದಿಗೂ ಎವರೆಸ್ಟ್ ಕೊರಕಲುಗಳಲ್ಲಿ ಹಾಗೇ ಉಳಿದುಕೊಂಡಿವೆ. ಸತ್ತವರ ದೇಹಗಳು ಐಸ್ ಕೆಳಗೆ ನೂರಾರು ವರ್ಷಗಳಾದರೂ ಹಾಗೆ ಉಳಿದುಕೊಂಡಿರುತ್ತವೆ.

ಎಪ್ಪತ್ತು ವರ್ಷಗಳ ಹಿಂದೆ ಮೇ ತಿಂಗಳ 29ರಂದು ನೇಪಾಳದ ಶೆರ್ಪಾ (ಪರ್ವತಾರೋಹಿ) ತೆನ್ಜಿಂಗ್ ನೋರ್ಗೆ ಮತ್ತು ನ್ಯೂಝಿಲ್ಯಾಂಡಿನ ಎಡ್ಮಂಡ್ ಹಿಲರಿ (ಪರ್ವತಾರೋಹಿ ಮತ್ತು ಫಿಲಾಂಥ್ರೋಪಿಸ್ಟ್) ಭೂಮಿಯ ಮೇಲಿನ ಅತ್ಯುನ್ನತ ಬಿಂದು ಎವರೆಸ್ಟ್ ಶಿಖರ ಏರಿ ನಿಂತಿದ್ದರು. ಪ್ರಸಕ್ತ ಎವರೆಸ್ಟ್ ಏರುವ ಪರ್ವತಾರೋಹಿಯೊಬ್ಬರಿಗೆ ಸುಮಾರು 25-50 ಲಕ್ಷ ರೂ. ಖರ್ಚಾಗುತ್ತದೆ ಎನ್ನಲಾಗಿದೆ. 

ಚೀನಾ-ನೇಪಾಳ ಗಡಿಯಲ್ಲಿ ಸಮುದ್ರ ಮಟ್ಟದಿಂದ 29,031 ಅಡಿಗಳ (ಅಂದಿನ ದಿನಗಳಲ್ಲಿ ತಿಳಿದ ಎತ್ತರ) ಎತ್ತರದಲ್ಲಿರುವ ಎವರೆಸ್ಟ್ ಏರುವುದಕ್ಕೆ ಮುಖ್ಯವಾಗಿ ಎರಡು ದಾರಿಗಳಿದ್ದವು. ಏರುವಾಗ ಪರ್ವತಾರೋಹಿಗಳು ಆಲ್ಟಿಟ್ಯೂಡ್ ಸಿಕ್ನೆಸ್, ಹವಾಮಾನ ವೈಪರೀತ್ಯ ಮತ್ತು ಹಿಮಪಾತಗಳನ್ನು ಎದುರಿಸಬೇಕಾಗುತ್ತದೆ. 2022ರ ನವೆಂಬರ್ವರೆಗೆ 310 ಪರ್ವತಾರೋಹಿಗಳು ಏರುವ ಧಾವಂತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಇದರಲ್ಲಿ ಸುಮಾರು 200 ಶವಗಳನ್ನು ತೆಗೆಯಲಾಗದೆ ಇಂದಿಗೂ ಎವರೆಸ್ಟ್ ಕೊರಕಲುಗಳಲ್ಲಿ ಹಾಗೇ ಉಳಿದುಕೊಂಡಿವೆ. ಸತ್ತವರ ದೇಹಗಳು ಐಸ್ ಕೆಳಗೆ ನೂರಾರು ವರ್ಷಗಳಾದರೂ ಹಾಗೆ ಉಳಿದುಕೊಂಡಿರುತ್ತವೆ. 

ಎವರೆಸ್ಟ್ ಏರುವ ಪ್ರಯತ್ನವನ್ನು ಮೊದಲಿಗೆ ಮಾಡಿದ್ದು ಬ್ರಿಟಿಷ್ ಪರ್ವತಾರೋಹಿಗಳು. ಆಗ ನೇಪಾಳ, ವಿದೇಶಿಯರಿಗೆ ಪ್ರವೇಶ ನಿರಾಕರಿಸಿದ ಕಾರಣ ಬ್ರಿಟಿಷರು ಟಿಬೆಟ್ ಕಡೆಯಿಂದ ಉತ್ತರ ರಿಡ್ಜ್/ಏಣು ಮಾರ್ಗದಲ್ಲಿ ಪ್ರಯತ್ನ ನಡೆಸಿದರು. 1921ರಲ್ಲಿ ಮೊದಲಿಗೆ 22,970 ಅಡಿಗಳನ್ನು ಹತ್ತಿದರೆ, 1922ರಲ್ಲಿ 27,300 ಅಡಿಗಳವರೆಗೂ ಏರಿದ್ದರು. 1936ರಲ್ಲಿ ನಡೆದ ಪರ್ವತಾರೋಹಣ ಇಂದಿಗೂ ರಹಸ್ಯವಾಗಿಯೇ ಉಳಿದುಕೊಂಡಿದೆ. ಜಾರ್ಜ್ ಮಲ್ಲೋರಿ ಮತ್ತು ಆ್ಯಂಡ್ರೂ ಇರ್ವಿನ್ ಎಂಬಿಬ್ಬರು ಜೂನ್ 8ರಂದು ಅಂತಿಮ ಶಿಖರ ಏರುವ ಪ್ರಯತ್ನ ನಡೆಸಿದ್ದರು. ಆದರೆ ಅವರು ಹಿಂದಿರುಗಿ ಬರಲಿಲ್ಲ. ಅಂದರೆ ಮೊದಲಿಗೆ ಎವರೆಸ್ಟ್ ಶಿಖರ ತಲುಪಿದವರು ಇವರೇ? ಎನ್ನುವ ಪ್ರಶ್ನೆ ಹುಟ್ಟುಹಾಕಿತು. ಆದರೆ 1999ರಲ್ಲಿ ಮಲ್ಲೋರಿ ಹೆಸರಿರುವ ಚಿಂದಿಯಾದ ಶರ್ಟ್ ಧರಿಸಿದ್ದ ಮಮ್ಮೀಪೈಡ್ ದೇಹವನ್ನು ಗುರುತಿಸಲಾಯಿತು. 

ತೆನ್ಜಿಂಗ್ ನೋರ್ಗೆ ಮತ್ತು ಎಡ್ಮಂಡ್ ಹಿಲರಿ 1953ರ ಮೇ 29ರಂದು ಆಗ್ನೇಯ ಏಣು ಮಾರ್ಗವನ್ನು ಬಳಸಿಕೊಂಡು ಎವರೆಸ್ಟ್ ಏರಿದ ಮೊದಲಿಗರಾದರು. ಹಿಂದಿನ ವರ್ಷ 1952ರಲ್ಲಿ ಸ್ವಿಸ್ ಪರ್ವತಾರೋಹಿಗಳು 28,199 ಅಡಿಗಳನ್ನು ತಲುಪಿ ಹಿಂದಕ್ಕೆ ಬಂದಿದ್ದರು. 1960ರ ಮೇ 25ರಂದು ಚೀನಾದ ಪರ್ವತಾರೋಹಿ ಗಳಾದ ವಾಂಗ್ ಫುಝೌ, ಗೊನ್ಬೊ ಮತ್ತು ಕ್ಯೂ ಯನ್ಹುವಾ ತಂಡ ಎವರೆಸ್ಟ್ ಶಿಖರವನ್ನು ಮೊದಲ ಬಾರಿಗೆ ಉತ್ತರ ದಿಕ್ಕಿನಿಂದ ಅಂದರೆ ಚೀನಾ ಕಬಳಿಸಿಕೊಂಡ ಟಿಬೆಟ್ ಪರ್ವತ ಶ್ರೇಣಿಗಳ ಮೂಲಕ ಏರಿತ್ತು. 

1802ರಲ್ಲಿ ಬ್ರಿಟಿಷ್ ಸರ್ವೇಯರ್ಗಳು ಜಗತ್ತಿನ ಎತ್ತರದ ಪರ್ವತಗಳು ಮತ್ತು ಶಿಖರಗಳ ಎತ್ತರಗಳನ್ನು ಅಳೆಯಲು ಅಂದಿನ ತಂತ್ರಜ್ಞಾನ ಟ್ರೈಗೊನೊಮೆಟ್ರಿಕಲ್ ಸಮೀಕ್ಷೆಯನ್ನು ಪ್ರಾರಂಭಿಸಿ ಭಾರತದ ದಕ್ಷಿಣದಿಂದ ಪ್ರಾರಂಭಿಸಿ ಉತ್ತರದ ಹಿಮಾಲಯ ಶಿಖರಗಳ ಕಡೆಗೆ ಸಾಗಿದರು. ಇದಕ್ಕೆ 500 ಕೆ.ಜಿ.ಗಳ ತೂಕದ ಥಿಯೋಡೋಲೈಟ್ಗಳನ್ನು 12 ಜನರಿಂದ ಹೊತ್ತುಕೊಂಡು ಎತ್ತರವನ್ನು ಅಳೆಯಲಾಗುತ್ತಿತ್ತು. ನೇಪಾಳದ ಹಿಮಾಲಯ ಶಿಖರಗಳನ್ನು ತಲುಪಿದಾಗ ಪ್ರವೇಶ ದೊರಕಲಿಲ್ಲ. ಹಲವು ಬಾರಿ ವಿನಂತಿ ಮಾಡಿಕೊಂಡರೂ ಪ್ರವೇಶ ನಿರಾಕರಿಸಲಾಯಿತು. ಧಾರಾಕಾರ ಮಳೆ ಮತ್ತು ಹವಾಮಾನ ವೈಪರೀತ್ಯಗಳು ಮತ್ತು ಮಲೇರಿಯಾದಿಂದ ಹಲವು ಅಧಿಕಾರಿಗಳು ಪ್ರಾಣ ಕಳೆದುಕೊಂಡರು. 1847ರಲ್ಲಿ ಸರ್ವೇಯರ್ ಆ್ಯಂಡ್ರೂ ವಾಗ್ ಅವರ ತಂಡ ನೇಪಾಳದ ಗಡಿಯಿಂದ 240 ಕಿ.ಮೀ.ಗಳ ದೂರದ ಸವಾಜ್ಪುರದ ನಿಲ್ದಾಣಗಳಿಂದ ಹಿಮಾಲಯದ ಶಿಖರಗಳನ್ನು ಅವಲೋಕನ ಮಾಡಿತು. 

ಆಗ ಕಾಂಚನಜುಂಗಾ ಜಗತ್ತಿನ ಅತಿ ಎತ್ತರದ ಶಿಖರವೆಂದು ಪರಿಗಣಿಸಲಾಗಿತ್ತು. ಆದರೆ ಅದರ ಹಿಂದೆ ಸುಮಾರು 230 ಕಿ.ಮೀ.ಗಳ ಆಚೆಗೆ ಇನ್ನೊಂದು ಶಿಖರ ಇರುವುದನ್ನು ಗಮನಿಸಲಾಯಿತು. ಆ್ಯಂಡ್ರೂ ವಾಗ್ರ ಕೆಳಅಧಿಕಾರಿ ಜಾನ್ ಆರ್ಮ್ಸ್ಟ್ರಾಂಗ್ ಕೂಡ ಈ ಶಿಖರವನ್ನು ಪಶ್ಚಿಮದ ಕಡೆಯಿಂದ ಗುರುತಿಸಿ ‘ಶಿಖರ-ಬಿ’ ಎಂದು ಕರೆದರು. 1949ರಲ್ಲಿ ಇನ್ನಷ್ಟು ಹತ್ತಿರಕ್ಕೆ ಅಂದರೆ ಬಿ ಶಿಖರದಿಂದ 190ರಿಂದ 170 ಕಿ.ಮೀ.ಗಳ ದೂರದ ಐದು ಕೇಂದ್ರಗಳಿಂದ ಥಿಯೋಡೋಲೈಟ್ಗಳನ್ನು ಬಳಸಿ ಎತ್ತರವನ್ನು ನಿಖರವಾಗಿ ಅಳೆಯಲು ಹಲವಾರು ರೀತಿಯ ತಂತ್ರಗಳನ್ನು ಬಳಸಲಾಯಿತು. 

1849ರಲ್ಲಿ ಬ್ರಿಟಿಷ್ ಸರ್ವೇಯರ್ಗಳು ಹಿಮಾಲಯದಲ್ಲಿ ಸಮೀಕ್ಷೆ ಮಾಡುತ್ತ ಅಲ್ಲಿನ ಎತ್ತರದ ಶಿಖರಗಳಿಗೆ ಸ್ಥಳೀಯ ಹೆಸರುಗಳನ್ನು ಉಳಿಸಿಕೊಳ್ಳಲು ಆಲೋಚಿಸುತ್ತಿದ್ದಾಗ ಸರ್ವೇಯರ್ ಜನರಲ್, ಆ್ಯಂಡ್ರೂ ವಾಗ್ ಚೀನಾ, ಟಿಬೆಟ್ ಮತ್ತು ನೇಪಾಳಿ ಭಾಷೆಗಳಲ್ಲಿ ಬೇರೆಬೇರೆ ಹೆಸರುಗಳು ಇರುವುದನ್ನು ತಿಳಿಸಿ ಎತ್ತರದ ಶಿಖರಕ್ಕೆ ವಾಗ್ ಅವರ ಹಿಂದಿನ ಗುರು ಇಂಡಿಯನ್ ಸರ್ವೇಯರ್ ಜನರಲ್ ‘ಸರ್. ಜಾರ್ಜ್ ಎವರೆಸ್ಟ್’ ಹೆಸರನ್ನು ಸೂಚಿಸಿ ಕೊನೆಗೆ 1865ರಲ್ಲಿ ಅವರ ಹೆಸರನ್ನೇ ಇಡಲಾಯಿತು. 

1852ರಲ್ಲಿ ಡೆಹ್ರಾಡೂನ್ನ ಸರ್ವೇಯರ್ ಜನರಲ್ ಪ್ರಧಾನ ಕಚೇರಿಯಲ್ಲಿ ಬೀಡುಬಿಟ್ಟಿದ್ದ ಬಂಗಾಳದ ಭಾರತೀಯ ಗಣಿತಜ್ಞ/ಸರ್ವೇಯರ್ ರಾಧಾನಾಥ್ ಸಿಕ್ದಾರ್ ಅವರು ನಿಕೋಲ್ಸನ್ ಅವರ ಅಳತೆಗಳ ಆಧಾರದ ಮೇಲೆ ಟ್ರೈಗೊನೋಮೆಟ್ರಿಕ್ ಲೆಕ್ಕಗಳಿಂದ ಶಿಖರ-ಬಿ ಅನ್ನು ವಿಶ್ವದ ಅತಿ ಎತ್ತರದ ಬಿಂದು ಎಂದು ಗುರುತಿಸಿದರು. ಅಂತಿಮವಾಗಿ ಆ್ಯಂಡ್ರೂ ವಾಗ್ 1856ರ ಮಾರ್ಚ್ ನಲ್ಲಿ ಕೋಲ್ಕತಾದ ಕೇಂದ್ರ ಕಚೇರಿಗೆ ಪತ್ರ ಬರೆದು ಎವರೆಸ್ಟ್ ಶಿಖರದ ಎತ್ತರವನ್ನು 29,002 ಅಡಿಗಳು ಮತ್ತು ಕಾಂಚನಜುಂಗಾ ಶಿಖರವನ್ನು 28,156 ಅಡಿಗಳು ಎಂದು ತಿಳಿಸಿದರು. ಎವರೆಸ್ಟ್ ಎತ್ತರವನ್ನು ಕಂಡುಹಿಡಿಯುವ ಸಮೀಕ್ಷೆಯ ಪ್ರಕ್ರಿಯೆಯಲ್ಲಿ ಹಲವು ಅಧಿಕಾರಿಗಳು ಮತ್ತು ಪೋರ್ಟರ್ಗಳು ಪ್ರಾಣ ಕಳೆದುಕೊಂಡಿದ್ದರು. ಈಗ ಜಗತ್ತಿನ ಯಾವುದೇ ಮೂಲೆಯಲ್ಲಿ ನಿಂತುಕೊಂಡು ಜಿಪಿಎಸ್ ಸಹಾಯದಿಂದ ನಿಮ್ಮ ಮೊಬೈಲ್ಗಳಲ್ಲೇ ನೀವು ನಿಂತಿರುವ ಸ್ಥಳದ ಎತ್ತರವನ್ನು ತಿಳಿದುಕೊಳ್ಳಬಹುದು. 

ಎವರೆಸ್ಟ್ ಏರಲು ಮುಖ್ಯವಾಗಿ ಎರಡು ದಾರಿಗಳಿವೆ. ನೇಪಾಳದ ಕಡೆಯಿಂದ ಆಗ್ನೇಯ ಪರ್ವತದ ಏಣು ಮತ್ತು ಟಿಬೆಟ್ ಕಡೆಯಿಂದ ಉತ್ತರ ಪರ್ವತದ ಏಣು. ಆಗ್ನೇಯ ದಾರಿಯನ್ನು ಹೆಚ್ಚು ಬಳಸಲಾಗುತ್ತದೆ. ತೆನ್ಜಿಂಗ್ ಮತ್ತು ಹಿಲರಿ ಎವರೆಸ್ಟ್ ಏರಿದ್ದು ಇದೇ ದಾರಿಯಲ್ಲಿ. ಚೀನಾ, ಟಿಬೆಟನ್ನು ಕಬಳಿಸಿಕೊಂಡ ಮೇಲೆ ಈ ದಾರಿಯನ್ನು ಪರ್ವತಾರೋಹಿಗಳಿಗೆ ಮುಚ್ಚಲಾಯಿತು. ಈಗ ಬಹುತೇಕ ವಿದೇಶಿ ಪರ್ವತಾರೋಹಿಗಳು ನೇಪಾಳದ ಕಡೆಯಿಂದ ಆರೋಹಣ ಮಾಡುತ್ತಾರೆ.
ಪ್ರತೀ ವರ್ಷ ಮೇ ತಿಂಗಳು ಬಂತೆಂದರೆ ಎವರೆಸ್ಟ್ ಏರುವ ಪರ್ವತಾರೋಹಿಗಳ ದಂಡೇ ಈ ದಾರಿಯಲ್ಲಿ ದೌಡಾಯಿಸುತ್ತದೆ. ಇಡೀ ವರ್ಷದಲ್ಲಿ ಎಪ್ರಿಲ್ ಮತ್ತು ಮುಖ್ಯವಾಗಿ ಮೇ ತಿಂಗಳಲ್ಲಿ ಮಾತ್ರ ಎವರೆಸ್ಟ್ ಮೇಲೆ ಸೂರ್ಯನ ಬೆಳಕು ಬೀಳುವುದರೊಂದಿಗೆ ಮೋಡಗಳು ವಿಶ್ರಾಂತಿ ನೀಡುತ್ತವೆ. ಅದನ್ನೂ 24 ಗಂಟೆಗಳ ಕಾಲ ಉಪಗ್ರಹಗಳಿಂದ ಮಾನಿಟರ್ ಮಾಡುತ್ತ ಪರ್ವತಾರೋಹಿಗಳನ್ನು ಕೊನೆಹಂತದ ಕ್ಯಾಂಪುಗಳಿಗೆ ಬಿಡಲಾಗುತ್ತದೆ. ಪ್ರತೀ ವರ್ಷ ಸುಮಾರು 500 ಜನರಿಗೆ ಮಾತ್ರ ಎವರೆಸ್ಟ್ ಏರಲು ಅವಕಾಶ ನೀಡಲಾಗುತ್ತದೆ. ಯಾವುದೇ ಕ್ಷಣದಲ್ಲಾದರೂ ಹವಾಮಾನ ಬದಲಾಗಿ ದಿಢೀರನೆ ಬಿರುಗಾಳಿ, ಹಿಮಪಾತಗಳು ಸಂಭವಿಸಬಹುದು. ಕೆಲವೊಮ್ಮೆ ಕ್ಯಾಂಪ್ ಗುಡಾರಗಳೇ ಕಿತ್ತುಕೊಂಡು ಹೋಗಬಹುದು ಇಲ್ಲ ಹಿಮಪಾತದಿಂದ ಮುಚ್ಚಿಹೋಗಬಹುದು. ವಿಪರ್ಯಾಸವೆಂದರೆ ಅಂತಹ ಪರಿಸ್ಥಿತಿಗಳಲ್ಲಿ ಇಲ್ಲಿಗೆ ಹೆಲಿಕಾಪ್ಟರ್ಗಳು ಹಾರಿಬರಲು ಸಾಧ್ಯವಿರುವುದಿಲ್ಲ. 

ಮೊದಲನೇ ಬೇಸ್ ಕ್ಯಾಂಪ್ 17,700 ಅಡಿಗಳ ಎತ್ತರದಲ್ಲಿದ್ದು, ಕಠ್ಮಂಡುವಿನಿಂದ ಲುಕ್ಲಾಗೆ ಬಂದು ಇಲ್ಲಿಗೆ ತಲುಪಲು 6-8 ದಿನಗಳು ತೆಗೆದುಕೊಳ್ಳುತ್ತದೆ. ಇದರ ನಡುವೆ ಪರ್ವತಾರೋಹಿಗಳು ಹವಾಮಾನಕ್ಕೆ ಹೊಂದಿಕೊಳ್ಳಲು ಸಹಾಯವಾಗುತ್ತದೆ. ಅದಕ್ಕೂ ಮುಂಚೆ ಪರ್ವತಾರೋಹಿಗಳು ಕೆಲವು ತಿಂಗಳುಗಳ ಕಾಲ ಪರ್ವತಗಳನ್ನು ಹತ್ತಿಇಳಿದು ಅಭ್ಯಾಸ ಮಾಡಿಕೊಳ್ಳಬೇಕಾಗುತ್ತದೆ. ಪರ್ವತಾರೋಹಿಗಳ ಉಪಕರಣಗಳನ್ನು ಯಾಕ್ ಪ್ರಾಣಿಗಳು ಮತ್ತು ಪೋರ್ಟರುಗಳು ಬೇಸ್ಕ್ಯಾಂಪ್ವರೆಗೂ ಸಾಗಿಸುತ್ತಾರೆ. ಪರ್ವತಾರೋಹಿಗಳು ಇಲ್ಲಿ ಹವಾಮಾನಕ್ಕೆ ಹೊಂದಿಕೊಳ್ಳುತ್ತಿದ್ದಂತೆ ಶೆರ್ಪಾಗಳು ಎವರೆಸ್ಟ್ ಏರುವ ಕಡಿದಾದ ದಾರಿಯಲ್ಲಿ ಹಗ್ಗಗಳು ಮತ್ತು ಏಣಿಗಳನ್ನು ಜೋಡಿಸುವ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ. 

ಪರ್ವತಾರೋಹಿಗಳು ಸೂರ್ಯೋದಯಕ್ಕೆ ಮುಂಚಿತವಾಗಿ ಆರೋಹಣವನ್ನು ಪ್ರಾರಂಭಿಸುತ್ತಾರೆ. ಕ್ಯಾಂಪ್ ಒಂದರಿಂದ ಎರಡನೇ ಕ್ಯಾಂಪ್ (21,300 ಅಡಿ), ಅಲ್ಲಿಂದ ಮೂರು (24,500 ಅಡಿ) ಮತ್ತು ನಾಲ್ಕನೇ ಕ್ಯಾಂಪ್ (26,000 ಅಡಿ) ತಲುಪುತ್ತಾರೆ. ಈ ನಡುವೆ ಹಲವಾರು ಅಪಾಯಗಳನ್ನು ಹಾದುಹೋಗಬೇಕಾಗುತ್ತದೆ. ಜಿನೀವಾ ಸ್ಪರ್/ಹಳದಿ ಅಥವಾ ಅಮೃತ ಶಿಲೆಗಳು, ಫಿಲ್ಲೈಟ್ ಮತ್ತು ಶಿಸ್ಟ್ ಶಿಲೆಗಳ ಬಂಡೆಗಳು ಪಕ್ಕೆಲುಬಿನ ಆಕಾರದಲ್ಲಿ ಉಬ್ಬ್ಬಿಕೊಂಡಿವೆ. ಇದನ್ನು ಹಗ್ಗಗಳ ಸಹಾಯದಿಂದ ಏರಬೇಕಾಗುತ್ತದೆ. 

ಸೌತ್ ಕೋಲ್ ಎಂದು ಕರೆಯುವ ಈ ಸ್ಥಳ ಎವರೆಸ್ಟ್ ಮತ್ತು ಲೊಟ್ಸೆ ಏಣು ನಡುವಿನ ತೀಕ್ಷ್ಣ ಅಂಚಿನ ಕೋಲ್ ಅಪಾಯಕಾರಿ ಸ್ಥಳವಾಗಿದೆ. ಇದು ಭೀಕರವಾಗಿ ಗಾಳಿ ಬೀಸುವ ಸ್ಥಳವಾಗಿದ್ದು ಕೆಲವೊಮ್ಮೆ ಹಿಮಪದರು ಕೊಚ್ಚಿಹೋಗುತ್ತದೆ. ಹಾಗಾಗಿ ಇದು ಪರ್ವತಾರೋಹಿಗಳಿಗೆ ಸಾವಿನಕೂಪವಾಗಿದೆ. ಇಲ್ಲಿ ಎರಡುಮೂರು ದಿನಗಳಿಗಿಂತ ಹೆಚ್ಚು ಕಾಲ ಉಳಿದುಕೊಳ್ಳಲು ಸಾಧ್ಯವಿಲ್ಲ. ಗಾಳಿ ಬೀಸುತ್ತಿದ್ದರೆ ಅಲ್ಲಿಂದ ಬೇಸ್ ಕ್ಯಾಂಪ್ಗೆ ಹಿಂದಿರುಗಬೇಕಾಗುತ್ತದೆ. ಈ ಕ್ಯಾಂಪ್ನಿಂದ ಮಧ್ಯರಾತ್ರಿ ಟಾರ್ಚ್ ಬೆಳಕಿನಲ್ಲಿ ಎವರೆಸ್ಟ್ ಶಿಖರದ ದಾರಿಯಲ್ಲಿ ಯಾತ್ರೆ ಪ್ರಾರಂಭಿಸುತ್ತಾರೆ. ಮೊದಲಿಗೆ 27,600 ಅಡಿಗಳ ಎತ್ತರದಲ್ಲಿರುವ ಬಾಲ್ಕನಿಯನ್ನು ತಲುಪಬೇಕು. ಅಲ್ಲಿ ಸ್ವಲ್ಪಹೊತ್ತು ವಿಶ್ರಾಂತಿ ಪಡೆದುಕೊಂಡು ಮುಂಜಾನೆಯ ಬೆಳಕಿನಲ್ಲಿ ದಕ್ಷಿಣ ಮತ್ತು ಪೂರ್ವದ ಹಿಮಶಿಖರಗಳನ್ನು ವೀಕ್ಷಿಸಬಹುದು. 

ಪರ್ವತ ಶ್ರೇಣಿಯ ಮೇಲೆ ಮುಂದುವರಿಯುತ್ತಾ ಹೋದಂತೆ, ಭವ್ಯವಾದ ಬಂಡೆಯ ಮೆಟ್ಟಿಲುಗಳ ಸರಣಿಯನ್ನು ಎದುರಿಸಬೇಕಾಗುತ್ತದೆ. ಇದು ಗಂಭೀರ ಹಿಮಪಾತದ ವಲಯವೂ ಆಗಿರುತ್ತದೆ. ಮುಂದೆ ಎತ್ತರವಾದ ಮುಂಜುಗಡ್ಡೆ ಮತ್ತು ಹಿಮದ ಸಣ್ಣ ಮೇಜು ಗಾತ್ರದ ಗುಮ್ಮಟವು ದಕ್ಷಿಣದಲ್ಲಿರುವ ಶಿಖರವನ್ನು ಗುರುತಿಸುತ್ತದೆ. ಇಲ್ಲಿಂದ ‘ಕಾರ್ನಿಸ್ ಟ್ರಾವರ್ಸ್’ ಎಂದು ಕರೆಯುವ ಕತ್ತಿ-ಅಂಚಿನ ಆಗ್ನೇಯ ಶಿಖರವನ್ನು ಅನುಸರಿಸಬೇಕಾಗುತ್ತದೆ. ಇದು ಅತ್ಯಂತ ತೆರೆದ ಭಾಗವಾಗಿದ್ದು ಎಡಕ್ಕೆ 7,900 ಅಡಿಗಳ ಆಳದ ಪ್ರಪಾತದಿಂದ ತೆರೆದುಕೊಂಡಿರುತ್ತದೆ. ಆದರೆ ತಕ್ಷಣದ ಬಲಭಾಗದಲ್ಲಿ 10,010 ಅಡಿಗಳ ಕಾಂಗ್ಶುಂಗ್ ಮುಖವಿದೆ. ಇದರ ಕೊನೆಯಲ್ಲಿ 28,840 ಅಡಿಗಳ ಎತ್ತರದ ಹಿಲರಿ ಸ್ಟೆಪ್ ಎಂಬ ಭವ್ಯವಾದ ಬಂಡೆಯ ಗೋಡೆ ಕಾಣಿಸುತ್ತದೆ. 

ಹಿಲರಿ ಮತ್ತು ತೆನ್ಜಿಂಗ್ ಈ ಮೆಟ್ಟಿಲನ್ನು ಏರಿದ ಮೊದಲ ಆರೋಹಿಗಳು. ಇವರು ಹಳೆಯ ಐಸ್ ಕ್ಲೈಂಬಿಂಗ್ ಉಪಕರಣಗಳು ಮತ್ತು ಹಗ್ಗಗಳನ್ನು ಬಳಸಿಕೊಂಡು ಹತ್ತಿದ್ದರು. ಪ್ರಸಕ್ತ ಶೆರ್ಪಾಗಳು ಸ್ಥಾಪಿಸುವ ಸ್ಥಿರ ಹಗ್ಗಗಳನ್ನು ಬಳಸಿಕೊಂಡು ಪರ್ವತಾರೋಹಿಗಳು ಮುಂದೆ ಸಾಗುತ್ತಾರೆ. ಒಮ್ಮೆ ಮೆಟ್ಟಿಲುಗಳನ್ನು ಹತ್ತಿದ ನಂತರ ಮಧ್ಯಮ ಕೋನದ ಹಿಮ ಇಳಿಜಾರುಗಳಲ್ಲಿ ಮೇಲ್ಭಾಗಕ್ಕೆ ಸುಲಭವಾಗಿ ಏರಬಹುದು. ಆದರೆ ಈ ಹಂತದಲ್ಲಿ ಪರ್ವತ ಶ್ರೇಣಿಯ ಮೇಲಿನ ಹವಾಮಾನ ಒತ್ತಡ ವಿಪರೀತವಾಗಿರುತ್ತದೆ. ಜೊತೆಗೆ ಹಿಮದ ದೊಡ್ಡ ಬಂಡೆಗಳನ್ನು ಹಾದುಹೋಗಬೇಕು. ನೂರಕ್ಕೆ 95 ಪರ್ವತಾರೋಹಿಗಳು 26,000 ಅಡಿಗಳ ಎತ್ತರದಿಂದ ಆಮ್ಲಜನಕದ ಸಿಲಿಂಡರ್ಗಳನ್ನು ಹೆಚ್ಚಾಗಿ ಬಳಸುತ್ತಾರೆ. ಜೊತೆಗೆ ಹವಾಮಾನವನ್ನು ತಡೆದುಕೊಳ್ಳುವ ಬಟ್ಟೆ, ಬೂಟು, ಗ್ಲೌಸ್ ಒಂದಷ್ಟು ಚಾಕೊಲೇಟ್ಗಳನ್ನು ಕೊಂಡೊಯ್ಯುತ್ತಾರೆ. ಬೇರೆ ಆಹಾರ ತಿಂದರೆ ಬಹಿರ್ದೆಸೆಯ ಸಮಸ್ಯೆಯಾಗುತ್ತದೆ. ಕೇವಲ ಶೇ. 5 ಜನರು ಆಮ್ಲಜನಕದ ಸಿಲಿಂಡರುಗಳನ್ನು ಬಳಸದೆ ಹತ್ತಿದ್ದಾರೆ. ಇವರಲ್ಲಿ ಹೆಚ್ಚು ಸಾವು ಸಂಭವಿಸುವ ಸಾಧ್ಯತೆಯಿದೆ. 24,000 ಅಡಿಗಳಿಂದಲೇ ಗಾಳಿಯಲ್ಲಿ ಆಮ್ಲಜನಕದ ಅಂಶ ಕಡಿಮೆಯಾಗಿ ಮಿದುಳಿಗೆ ಆಮ್ಲಜನಕ ಸರಬರಾಜಾಗದೆ ಸೆರೆಬ್ಲ್ ಹೈಪೋಕ್ಸಿಯಾಗೆ ತುತ್ತಾಗುತ್ತಾರೆ. ಅಂದರೆ ಮಿದುಳಿನ ನರಕೋಶಗಳು ಸತ್ತುಹೋಗುತ್ತವೆ. 

ಎವರೆಸ್ಟ್ ಹತ್ತಿದ ಪರ್ವತಾರೋಹಿಗಳಲ್ಲಿ ಮಹಿಳೆಯರು, ಅಂಗವಿಕಲರು, ಕಾಯಿಲೆ ಇರುವವರು, ಅಂಧನೊಬ್ಬ ಮತ್ತು ಹತ್ತಾರು ಜನರ ತಂಡಗಳೂ ಸೇರಿವೆ. ಪೆಂಬಾ ದೋರ್ಜಿ ಎಂಬವನು ಅತಿಬೇಗನೆ 8:10 ಗಂಟೆಗಳಲ್ಲಿ ಹತ್ತಿದರೆ, 13 ವರ್ಷದ ಹುಡುಗ ಜೋರ್ಡಾನ್ ರೊಮಿರೋ ಕೂಡ ಹತ್ತಿಬಂದಿದ್ದಾನೆ. ಶೆರ್ಪಾಗಳ ದಾಖಲೆಗಳನ್ನು ಯಾರೂ ಮುರಿಯಲಾರರು. ಮೂವರು ಶೆರ್ಪಾಗಳು 21 ಸಲ, ಒಬ್ಬ 24 ಸಲ, ಇನ್ನೊಬ್ಬ 25 ಸಲ, ಮತ್ತೊಬ್ಬ 26 ಸಲ ಎವರೆಸ್ಟ್ ಏರಿ ಇಳಿದಿದ್ದಾರೆ. ಕಾಮಿ ರಿಟಾ ಶೆರ್ಪಾ ಎಂಬವನು 28 ಸಲ ಹತ್ತಿದ್ದು ಇದುವರೆಗೆ ಹೆಚ್ಚು ಸಲ ಹತ್ತಿ ಇಳಿದುಬಂದ ಭೂಪ ಇವನೆ. 

ಇನ್ನೊಂದು ವಿಪರ್ಯಾಸದ ಸಂಗತಿ ಎಂದರೆ ಮೇಲಿನ ಹಂತದ ಕ್ಯಾಂಪ್ಗಳಲ್ಲಿ ತಂಗುವ ಪರ್ವತಾರೋಹಿಗಳು ವಿಸರ್ಜಿಸುವ ಮಲ ತಂಪು ವಾತಾವರಣದಲ್ಲಿ ಕೊಳೆಯದೆ ಇರುವುದರಿಂದ ಐಸ್ ಕೆಳಗೆ ಹಾಗೆ ಮುಚ್ಚಿಡಲಾಗುತ್ತದೆ. ಅದು ವರ್ಷಗಳಾದರೂ ಹಾಗೆ ಉಳಿದುಕೊಂಡು ಪೀಕಲ್ ಬಾಂಬ್ (ದುರ್ನಾತ) ಆಗಿ ಪರಿವರ್ತನೆಯಾಗುತ್ತದೆ. ಕೆಳಗಿನ ಹಂತಗಳ ಕ್ಯಾಂಪ್ಗಳಲ್ಲಿ ಸಂಗ್ರಹವಾಗುವ ಇದೇ ಮಲವನ್ನು ಇನ್ನೂ ಕೆಳಹಂತಕ್ಕೆ ಡ್ರಮ್ಮುಗಳಲ್ಲಿ ಸಾಗಿಸಿ ತಂದು ನದಿಯ ದಡಗಳಲ್ಲಿ ಹೂಳುತ್ತಾರೆ. ಆದರೆ ಮೇಲಿನ ಹಂತಗಳ ಕ್ಯಾಂಪ್ಗಳು ಕೊಳಚೆ ಗಂಡಿಗಳಾಗಿ ಮಾರ್ಪಟ್ಟಿವೆ. ಕೆಲವು ವರ್ಷಗಳ ಹಿಂದೆ ಹಿಮಪಾತವಾಗಿ ಇದೆಲ್ಲ ಕೊಚ್ಚಿಕೊಂಡುಹೋಗಿ ಪೀಕಲ್ ಬಾಂಬ್ ದುರಂತ ಸಂಭವಿಸಿತ್ತು. ಒಟ್ಟಿನಲ್ಲಿ ಪರಿಸರ ಮಾಲಿನ್ಯ ಭೂಮಿ, ಆಕಾಶ, ಎವರೆಸ್ಟ್ ಶಿಖರವನ್ನೂ ಬಿಟ್ಟಿಲ್ಲ.

Similar News

ಜಗದಗಲ
ಜಗ ದಗಲ