ಜಗದಗಲ

Update: 2023-04-04 09:16 GMT

ಬಹುತ್ವ ಬಲಪಡಿಸುವ ಹೆಜ್ಜೆ

ದಕ್ಷಿಣ ಏಶ್ಯದ ಶ್ರೀಮಂತ ಸಾಹಿತ್ಯವನ್ನು ಇಂಗ್ಲಿಷ್ ಭಾಷಿಕ ದೇಶಗಳಿಗೆ ಮುಟ್ಟಿಸುವ ಯೋಜನೆಯೊಂದು ಈ ಬೇಸಿಗೆಯಲ್ಲಿ ಶುರುವಾಗುತ್ತಿದೆ. ಕ್ರಾಸ್-ಕಾಂಟಿನೆಂಟಲ್ ಸೌತ್ ಏಶ್ಯನ್ ಲಿಟರೇಚರ್ ಇನ್ ಟ್ರಾನ್ಸ್ಲೇಶನ್ (ಸಾಲ್ಟ್) ಎಂಬ ಈ ಯೋಜನೆ ಚಿಕಾಗೋ ವಿಶ್ವವಿದ್ಯಾನಿಲಯ, ಅಮೆರಿಕನ್ ಲಿಟರರಿ ಟ್ರಾನ್ಸ್ಲೇಟರ್ಸ್ ಅಸೋಸಿಯೇಷನ್, ಇಂಗ್ಲಿಷ್ ಪೆನ್, ವರ್ಡ್ಸ್ ವಿಥೌಟ್ ಬಾರ್ಡರ್ಸ್ ಮತ್ತು ಬ್ರಿಟಿಷ್ ಕೌನ್ಸಿಲ್ ಸಹಭಾಗಿತ್ವದಲ್ಲಿದೆ. ಇಂಗ್ಲಿಷ್ ಸಾಹಿತ್ಯ ಲೋಕದಲ್ಲಿ ಪ್ರಕಾಶನ ಸರಪಣಿ ಬಲಪಡಿಸುವುದು ಈ ಬಹು ವರ್ಷದ ಯೋಜನೆಯ ಉದ್ದೇಶವಾಗಿದೆ ಎಂದು ಚಿಕಾಗೋ ವಿವಿ ಹೇಳಿದೆ.

ದಕ್ಷಿಣ ಏಶ್ಯದ ಭಾಷೆಗಳೊಂದಿಗೆ ಕೆಲಸ ಮಾಡುವ ಭಾಷಾಂತರಕಾರರಿಗೆ ಮಾರ್ಗದರ್ಶನ, ದಕ್ಷಿಣ ಏಶ್ಯ ಕೇಂದ್ರಿತ ಸಾಹಿತ್ಯಿಕ ಅನುವಾದದ ಬೇಸಿಗೆ ಶಾಲೆ, ದಕ್ಷಿಣ ಏಶ್ಯದಾದ್ಯಂತ ಪ್ರಕಾಶಕರಿಗೆ ಕಾರ್ಯಾಗಾರ, ಪ್ರಕಾಶಕರು ಮತ್ತು ಭಾಷಾಂತರಕಾರರನ್ನು ಬೆಂಬಲಿಸಲು ವಿವಿಧ ನಿಧಿ ಮತ್ತು ಅನುದಾನ ಒದಗಿಸುವ ಯೋಜನೆಗಳನ್ನು ಈ ಯೋಜನೆ ಹೊಂದಿದೆ.

ಸಾಲ್ಟ್ ಪ್ರಾಜೆಕ್ಟ್, ಬ್ರಿಟಿಷ್ ಬರಹಗಾರ ಮತ್ತು ಅನುವಾದಕ ಡೇನಿಯಲ್ ಹಾನ್ ಹಾಗೂ ಚಿಕಾಗೋ ವಿಶ್ವವಿದ್ಯಾನಿಲಯದ ದಕ್ಷಿಣ ಏಶ್ಯದ ಭಾಷೆಗಳು ಮತ್ತು ನಾಗರಿಕತೆಗಳ ವಿಭಾಗದ ಪ್ರಾಧ್ಯಾಪಕ ಮತ್ತು ಅನುವಾದಕ ಜೇಸನ್ ಗ್ರುನೆಬಾಮ್ ಅವರ ಪರಿಕಲ್ಪನೆ. 

‘‘ದಕ್ಷಿಣ ಏಶ್ಯವು ವಿಶ್ವದ ಜನಸಂಖ್ಯೆಯ ಕಾಲು ಭಾಗದಷ್ಟು ಜನರಿಗೆ ನೆಲೆ. ಆದರೆ ದಕ್ಷಿಣ ಏಶ್ಯದ ಭಾಷೆಗಳಿಂದ ಅನುವಾದಿಸಲಾದ ಸಾಹಿತ್ಯ ಕೃತಿಗಳ ಅತ್ಯಲ್ಪ ಪ್ರಮಾಣವಷ್ಟೇ ಅಮೆರಿಕ ಮತ್ತಿತರ ಪಾಶ್ಚಿಮಾತ್ಯ ಆಂಗ್ಲಭಾಷಿಕ ಮಾರುಕಟ್ಟೆಗಳನ್ನು ತಲುಪುತ್ತದೆ. ದಕ್ಷಿಣ ಏಶ್ಯದ ಭಾಷೆಗಳಿಂದಾದ ಅನುವಾದ ಕಳೆದ 10 ವರ್ಷಗಳಲ್ಲಿ ಅಮೆರಿಕದಲ್ಲಿ ಪ್ರಕಟವಾದ ಎಲ್ಲಾ ಅನುವಾದಿತ ಸಾಹಿತ್ಯದ ಶೇ. 1ಕ್ಕಿಂತ ಕಡಿಮೆ’’ ಎನ್ನುತ್ತಾರೆ ಹಾನ್ ಮತ್ತು ಗ್ರುನೆಬಾಮ್.

‘‘ನಿರಂಕುಶ ಮಾರುಕಟ್ಟೆಯ ಆಕ್ರಮಣಕಾರಿ ಜಾಗತೀಕರಣದ ವಿರುದ್ಧ ಮಾನವೀಯ ಮತ್ತು ಬಹುತ್ವದ ಜಾಗತಿಕತೆಗೆ ಒತ್ತುಕೊಡುವ ನಿಟ್ಟಿನಲ್ಲಿ ನಿಜವಾಗಿಯೂ ಮಹತ್ವದ ಹೆಜ್ಜೆ’’ ಎಂದು ಈ ಯೋಜನೆಯನ್ನು ಹಿಂದಿ ಲೇಖಕಿ ಗೀತಾಂಜಲಿ ಶ್ರೀ ಬಣ್ಣಿಸಿದ್ದಾರೆ. ತಮ್ಮ ಕಾದಂಬರಿಯ ಇಂಗ್ಲಿಷ್ ಅನುವಾದ ‘ಟಾಂಬ್ ಆಫ್ ಸ್ಯಾಂಡ್’ಗೆ 2022ರ ಅಂತರ್ರಾಷ್ಟ್ರೀಯ ಬೂಕರ್ ಪ್ರಶಸ್ತಿ ಪಡೆದವರು ಅವರು.

‘ಟಾಂಬ್ ಆಫ್ ಸ್ಯಾಂಡ್’ ಅನುವಾದಕಿ ಡೈಸಿ ರಾಕ್ವೆಲ್, ಲೇಖಕ ಮತ್ತು ಉರ್ದು ಭಾಷಾಂತರಕಾರ ಮುಷರಫ್ ಅಲಿ ಫಾರೂಕಿ ಮತ್ತು ಬಂಗಾಳಿ ಅನುವಾದಕ ಅರುಣವ ಸಿನ್ಹಾ ಸಾಲ್ಟ್ ಸಲಹಾ ಮಂಡಳಿಯಲ್ಲಿದ್ದಾರೆ. ‘‘ಅಮೆರಿಕ ಮತ್ತು ಇಂಗ್ಲೆಂಡ್ ಪ್ರಕಾಶನ ಲೋಕ ಬಿಳಿಯರಿಗೇ ಆದ್ಯತೆ ನೀಡುತ್ತದೆ. ಪ್ರಕಟವಾಗುವ ಹೆಚ್ಚಿನ ಅನುವಾದಗಳು ಪಶ್ಚಿಮ ಯುರೋಪಿಯನ್ ಭಾಷೆಗಳಿಂದ ಬಂದಿವೆ. ಆದರೆ ಸಾಲ್ಟ್ ಯೋಜನೆ ದಕ್ಷಿಣ ಏಶ್ಯದ ಸಾಹಿತ್ಯವನ್ನು ಪಾಶ್ಚಿಮಾತ್ಯ ಪ್ರಕಾಶಕರು ಹೊರತರಲು ಸಾಧ್ಯವಾಗು ವಂತೆ ಮಾಡಲಿದೆ’’ ಎನ್ನುತ್ತಾರೆ ಡೈಸಿ ರಾಕ್ವೆಲ್.

-----------------------------------

ಮರುಬಳಕೆಯ ಹೊಸ ಸಾಧ್ಯತೆ

ಸಿರಿಯಾದಲ್ಲಿ ನಾಶವಾದ ಕಟ್ಟಡಗಳಿಂದ ಕಾಂಕ್ರಿಟ್ ಅವಶೇಷಗಳನ್ನು ಸುರಕ್ಷಿತವಾಗಿ ಹೊಸ ಕಾಂಕ್ರಿಟ್ ಆಗಿ ಮರುಬಳಕೆ ಮಾಡಬಹುದು ಎಂಬುದನ್ನು ವಿಜ್ಞಾನಿಗಳು ನಿರೂಪಿಸಿದ್ದಾರೆ. ಈ ಆವಿಷ್ಕಾರ ಯುದ್ಧಪೀಡಿತ ದೇಶದ ಪುನರ್ನಿರ್ಮಾಣವನ್ನು ಬೇಗ, ಸುಲಭವಾಗಿ ಮತ್ತು ಪರಿಸರ ಸ್ನೇಹಿಯಾಗಿ ಸಾಧ್ಯವಾಗಿಸಲಿದೆ ಎನ್ನಲಾಗಿದೆ.

ಫೆಬ್ರವರಿಯಲ್ಲಿ ಭಾರೀ ಭೂಕಂಪದಿಂದ ಹಾನಿಗೊಳಗಾದ ಸಿರಿಯಾದಲ್ಲಿ ಅಪಾರ ಪ್ರಮಾಣದ ಕಾಂಕ್ರಿಟ್ ಅವಶೇಷಗಳು ಬಿದ್ದಿವೆ. ಈ ತ್ಯಾಜ್ಯ ಮರುಬಳಕೆ ಮಾಡಿದರೆ ಸಾಂಪ್ರದಾಯಿಕ ಕಾಂಕ್ರಿಟ್ನಷ್ಟೇ ಬಲ ಮತ್ತು ಸುರಕ್ಷಿತವಾಗಿರಲಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಿದೆ.

ಮರುಬಳಕೆಯ ಕಾಂಕ್ರಿಟ್ ಬಳಕೆಯಿಂದ ಕಟ್ಟಡಗಳ ಸುರಕ್ಷತೆಗೆ ಧಕ್ಕೆಯಿಲ್ಲ ಎಂಬುದನ್ನು ಸಿರಿಯಾ, ಇಂಗ್ಲೆಂಡ್ ಮತ್ತು ಟರ್ಕಿಯ ವಿಜ್ಞಾನಿಗಳು ದೃಢಪಡಿಸಿದ್ದಾರೆ. ನಾಶವಾದ ಕಟ್ಟಡಗಳ ಕಲ್ಲುಮಣ್ಣುಗಳನ್ನು ಬಳಸಿ ತಯಾರಿಸಿದ ಕಾಂಕ್ರಿಟ್ ಸುರಕ್ಷಿತ ಎಂದು ನಿರೂಪಿಸಿರುವುದು ಇದೇ ಮೊದಲ ಬಾರಿ. ಆದರೆ ಕಾಂಕ್ರಿಟ್ ತಯಾರಿಕೆ ವಿಧಾನ ಪ್ರತೀ ಪ್ರದೇಶದಲ್ಲಿ ಬೇರೆಬೇರೆಯಿರುವುದರಿಂದ ಗುಣಮಟ್ಟ ಪರೀಕ್ಷೆ ಅಗತ್ಯ ಎಂದಿದ್ದಾರೆ ವಿಜ್ಞಾನಿಗಳು.

ಅದೇನೇ ಇದ್ದರೂ, ಸಂಶೋಧಕರು ನಿಗದಿಗೊಳಿಸಿದ ಎಲ್ಲ ಮಾನದಂಡಗಳಲ್ಲಿ ಮರುಬಳಕೆ ಕಾಂಕ್ರಿಟ್ ಪರಿಣಾಮಕಾರಿ ಎಂಬುದು ಸಾಬೀತಾಗಿದೆ ಎಂದಿವೆ ವರದಿಗಳು.

------------------------------------

ಗೆಬ್ರೂ ಎಂಬ ಸ್ವಯಂಪ್ರಭೆ

ಇಥಿಯೋಪಿಯನ್ ಸನ್ಯಾಸಿನಿ, ಸಂಗೀತ ಸಂಯೋಜಕಿ ಮತ್ತು ಪಿಯಾನೋ ವಾದಕಿ ಎಮಾಹೋಯ್ ಸೆಗ್ವಿ ಮಯಮ್ ಗೆಬ್ರೂ 99ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.
ಅವರು ಜೆರುಸಲೆಮ್ನಲ್ಲಿ ನಿಧನರಾಗಿರು ವುದಾಗಿ ಫನಾ ಬ್ರಾಡ್ಕಾಸ್ಟಿಂಗ್ ಕಾರ್ಪೊರೇಟ್ ಸುದ್ದಿಸಂಸ್ಥೆ ತಿಳಿಸಿದೆ.
ಗೆಬ್ರೂ ಸುಮಾರು 40 ವರ್ಷಗಳಿಂದ ಇಥಿಯೋಪಿಯನ್ ಧಾರ್ಮಿಕ ಕೇಂದ್ರದಲ್ಲಿ ವಾಸಿಸುತ್ತಿದ್ದರು.
ಬಾಲ್ಯದಲ್ಲಿ ಯುದ್ಧಕೈದಿಯಾಗಿ ಬಹುಸಮಯವನ್ನು ಕಳೆಯಬೇಕಾಗಿ ಬಂದ ಅವರು, ಕೈರೋದಲ್ಲಿ ಪೋಲಿಷ್ ಪಿಟೀಲು ವಾದಕ ಅಲೆಕ್ಸಾಂಡರ್ ಕೊಂಟೊರೊವಿಚ್ ಬಳಿ ಶಿಕ್ಷಣ ಪಡೆದರು.

ಗೆಬ್ರೂ ಮೊದಲ ಆಲ್ಬಂ ಬಿಡುಗಡೆಯಾ ದದ್ದು 967ರಲ್ಲಿ. ಯುದ್ಧದಿಂದ ಅನಾಥರಾದ ಇಥಿಯೋಪಿಯದ ಮಕ್ಕಳಿಗೆ ಸಹಾಯ ಮಾಡಲು ಅವರು ತಮ್ಮ ಸಂಗೀತದಿಂದ ಬಂದ ಹಣವನ್ನು ಬಳಸುತ್ತಿದ್ದರು. ಸಂಗೀತ ಕಲಿಯಲು ಹಂಬಲಿಸುವ ಮಕ್ಕಳಿಗೆ ನೆರವಾಗಲೆಂದೇ ಎಮಾಹೋಯ್ ಸೆಗ್ವಿ ಮಯಮ್ ಮ್ಯೂಸಿಕ್ ಫೌಂಡೇಶನ್ ಕೂಡ ಸ್ಥಾಪಿಸಲಾಗಿತ್ತು.

ಗೆಬ್ರೂ ಸಂಗೀತವನ್ನು 2020ರ ಆಸ್ಕರ್ ನಾಮನಿರ್ದೇಶಿತ ಸಾಕ್ಷ್ಯಚಿತ್ರ ‘ಟೈಮ್’ನಲ್ಲಿ ಮತ್ತು ರೆಬೆಕಾ ಹಾಲ್ನ ನೆಟ್ಫ್ಲ್ಲಿಕ್ಸ್ ನಾಟಕ ‘ಪಾಸಿಂಗ್’ನಲ್ಲಿ ಬಳಸಲಾಗಿದೆ. ಗೆಬ್ರೂ ಪಿಯಾನೋ, ಆರ್ಗನ್, ಒಪೆರಾ ಮತ್ತು ಚೇಂಬರ್ ಮೇಳಗಳಿಗೆ 150ಕ್ಕೂ ಹೆಚ್ಚು ಮೂಲ ಸಂಗೀತವನ್ನು ಸಂಯೋಜಿಸಿದ್ದಾರೆ.

ಪತ್ರಕರ್ತೆ ಮತ್ತು ಲೇಖಕಿ ಕೇಟ್ ಮೊಲ್ಲೆಸನ್ ಬಿಬಿಸಿ ರೇಡಿಯೊ ಫೋರ್ಗಾಗಿ ಮಾಡಿದ್ದ ಸಾಕ್ಷ್ಯಚಿತ್ರದಲ್ಲಿ, ‘‘ಧಾರ್ಮಿಕ ಸ್ವಯಂ ಗಡಿಪಾರು ಮತ್ತು ಸ್ವತಂತ್ರ ಚಿಂತನೆಯ ಲಿಂಗ ಹೋರಾಟ ಮತ್ತು ಇಥಿಯೋಪಿಯದ 20ನೇ ಶತಮಾನದ ರಾಜಕೀಯ ಇತಿಹಾಸದಿಂದ ಅವರ ಆಯ್ಕೆಗಳು ನಿರ್ಧರಿತವಾಗಿದ್ದವು ಮತ್ತು ಈ ಹಾದಿಯಲ್ಲಿ ಅವರು ಏಕಾಂಗಿಯಾಗಿದ್ದರು’’ ಎಂದು ಗೆಬ್ರೂ ಅವರನ್ನು ಬಣ್ಣಿಸಿದ್ದಾರೆ.
ಗೆಬ್ರೂ ಒಮ್ಮೆ ಮೊಲ್ಲೆಸನ್ ಅವರಲ್ಲಿ ಹೇಳಿದ್ದು ಹೀಗೆ: ‘‘ಜೀವನ ಏನನ್ನು ತರುತ್ತದೆ ಎಂಬುದನ್ನು ನಾವು ಯಾವಾಗಲೂ ಆಯ್ಕೆ ಮಾಡಲು ಸಾಧ್ಯವಿಲ್ಲ. ಆದರೆ ಹೇಗೆ ಪ್ರತಿಕ್ರಿಯಿಸಬೇಕೆಂದು ನಾವು ಆಯ್ಕೆ ಮಾಡಬಹುದು.’’

Similar News

ಜಗ ದಗಲ