‘ಬಿಫೆಸ್’ ಎಂಬ ಅಂತರ್‌ರಾಷ್ಟ್ರೀಯ ‘ಕನ್ನಡ’ ಚಲನಚಿತ್ರೋತ್ಸವ

Update: 2023-03-22 07:54 GMT

ಸ್ಪರ್ಧಾ ವಿಭಾಗಗಳಲ್ಲಿ ಕನ್ನಡ ಚಿತ್ರಗಳ ಪಾಲ್ಗೊಳ್ಳುವಿಕೆಯಲ್ಲಿ ಸರಿ-ತಪ್ಪುಗಳ ಲೆಕ್ಕಾಚಾರ ಹಾಕುವುದರಲ್ಲಿ ಅರ್ಥವಿಲ್ಲ.

ಹಾಗೆಂದು ಈ ಚಿತ್ರಗಳ ಆಯ್ಕೆ ವಿವಾದಾತೀತ ಎಂದೇನೂ ಭಾವಿಸಬೇಕಿಲ್ಲ. ದಲಿತರ ನೋವಿನ ಕಥೆಯ ಹಂದರವಿರುವ ಜೀವ ನವೀನ್ ನಿರ್ದೇಶಿಸಿರುವ ‘ಪಾಲಾರ್’ ಚಿತ್ರ, ಚಿತ್ರೋತ್ಸವದಲ್ಲಿ ಆಯ್ಕೆಯಾಗದಿರುವುದು ನಿಜಕ್ಕೂ ಆಶ್ಚರ್ಯ ಹುಟ್ಟಿಸುತ್ತದೆ. ಈ ಚಿತ್ರದ ಟ್ರೇಲರ್ ಬಿಡುಗಡೆಗೆ ಕೂಡ ಆಡಿಯೋ ಸಂಸ್ಥೆಗಳು ಒಪ್ಪದೆ ವಿವಾದ ಹುಟ್ಟಿಕೊಂಡಿತ್ತು. ಈ ಚಿತ್ರ ಆಯ್ಕೆಯಾಗದಿರಲು ಆಯ್ಕೆ ಸಮಿತಿಯವರು ನೀಡುತ್ತಿರುವ ಕಾರಣ; ‘‘ಇದು ಸೂಕ್ಷ್ಮ ವಸ್ತುವನ್ನಾಧರಿಸಿದ್ದು’’. ದಲಿತರ ಬದುಕನ್ನು ಆಧರಿಸಿ ಚಿತ್ರಗಳು ಇತ್ತೀಚೆಗೆ ‘ಸೂಕ್ಷ್ಮ’ ಎಂಬ ಹಣೆಪಟ್ಟಿ ಕಟ್ಟಿಕೊಂಡದ್ದಾದರೂ ಹೇಗೆ? ಮತ್ತು ಏಕೆ? ಎಂಬ ಪ್ರಶ್ನೆಗಳಿಗೆ ಯಾರಲ್ಲಿಯೂ ಉತ್ತರವಿಲ್ಲ.

ಕನ್ನಡ ಚಿತ್ರರಂಗಕ್ಕೆ ಮುಂದಿನ ವರ್ಷಕ್ಕೆ ತೊಂಭತ್ತರ ಹರೆಯ. ಮಾರ್ಚ್ 3, 1934ಲ್ಲಿ ಬಿಡುಗಡೆಯಾದ ಕನ್ನಡದ ಪ್ರಥಮ ವಾಕ್ಚಿತ್ರ ‘ಸತಿ ಸುಲೋಚನ’ ಚಿತ್ರವನ್ನು ಕನ್ನಡದ ಚಲನಚಿತ್ರ ಇತಿಹಾಸದಲ್ಲಿ ಬಿಡುಗಡೆಯಾದ ಮೊದಲ ಚಿತ್ರವೆಂದು ಗುರುತಿಸಲಾಗುತ್ತಿದೆ. ಮಾರ್ಚ್ 3ನೇ ದಿನವನ್ನು, ಕಳೆದ ಬೆಂಗಳೂರು ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವ (ಬಿಫೆಸ್) ಉದ್ಘಾಟನಾ ಸಮಾರಂಭದಲ್ಲಿ ಇಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ‘ವಿಶ್ವ ಕನ್ನಡ ಚಲನಚಿತ್ರದಿನ’ವೆಂದು ಘೋಷಿಸಿದ್ದಲ್ಲದೆ, ಪ್ರತೀವರ್ಷ ಇದೇ ದಿನಾಂಕದಂದು ಬಿಫೆಸ್ ನಿಯಮಿತವಾಗಿ ಆರಂಭವಾಗುತ್ತದೆ ಎಂದು ವಚನ ನೀಡಿದ್ದರು. ಆದರೆ ಬಿಫೆಸ್ ಮಾರ್ಚ್ 23ರಂದು ಆರಂಭವಾಗಲಿರುವ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿರುವ ಚಿತ್ರಗಳನ್ನು ಗಮನಿಸಿದರೆ, ಒಂದು ವರ್ಷದ ಮೊದಲೇ ಕನ್ನಡ ಚಿತ್ರರಂಗದ 90ನೇ ವರ್ಷವನ್ನು ಆಚರಿಸುತ್ತಿರುವಂತೆ ಭಾಸವಾಗುತ್ತದೆ. ಈ ರೀತಿಯ ಭಾವನೆ ಬರುವುದಕ್ಕೆ ಸಕಾರಣವೂ ಇದೆ. ಬಿಫೆಸ್‌ನ ಜಾಲತಾಣಕ್ಕೆ ಒಮ್ಮೆ ಭೇಟಿ ನೀಡಿದರೆ, ಅದರಲ್ಲಿ ಪ್ರದರ್ಶನಗೊಳ್ಳುವ 200ಕ್ಕೂ ಹೆಚ್ಚು ಚಿತ್ರಗಳ ಪೈಕಿ, ಹೆಚ್ಚು ಕಡಿಮೆ 50 ಚಿತ್ರಗಳು ಕಾಣಸಿಗುತ್ತವೆ.

ಚಿತ್ರೋತ್ಸವದ ಮೂರು ಸ್ಪರ್ಧಾತ್ಮಕ ವಿಭಾಗಗಳನ್ನು ಗಮನಿಸಿದರೆ, ಕನ್ನಡ ಸ್ಪರ್ಧಾತ್ಮಕ ಚಿತ್ರಗಳಲ್ಲಿ, ಇತ್ತೀಚೆಗೆ ಬಿಡುಗಡೆಯಾಗಿ ಸಾಕಷ್ಟು ಸದ್ದು-ಸುದ್ದಿ ಮಾಡುತ್ತಿರುವ ಮಂಜುನಾಥ ಸೋಮಕೇಶವ ರೆಡ್ಡಿ (ಮನ್ಸೋರೆ) ಅವರ ‘19:20:21’, ಪುನೀತ್ ರಾಜ್ ಕುಮಾರ್ ಅವರ ಕೊನೆಯ ಚಿತ್ರವೆಂಬ ಹೆಗ್ಗಳಿಕೆಯ ‘ಗಂಧದ ಗುಡಿ’, ಜಗದೀಶ್ ಹಂಪಿ ಅವರ ‘ಗುರು ಶಿಷ್ಯರು’, ಪೃಥ್ವಿ ಕೊಣಜೂರು ಅವರ ‘ಹದಿನೇಳೆಂಟು’, ವಿಶಾಲ್ ರಾಜ್ ಅವರ ‘ಕನಕ ಮಾರ್ಗ’, ಶಿವಧ್ವಜ ಶೆಟ್ಟಿ ಅವರ ‘ಕೊರಮ್ಮ’, ರಘು ರಾಮಚರಣ್ ಅವರ ‘ಕುಬುಸ’, ಪ್ರದೀಪ್ ಶೆಟ್ಟಿ ಅವರ ‘ಮೇಡ್ ಇನ್ ಬೆಂಗಳೂರು’, ತಿರುಪತಿ ಸುಂದರ್ ಅವರ ‘ನಲ್ಕೆ’, ಕೃಷ್ಣೇಗೌಡರ ‘ನಾನು ಕುಸುಮ’, ಸುನಿಲ್ ಮೈಸೂರು ಅವರ ‘ಆರ್ಕೆಸ್ಟ್ರಾ ಮೈಸೂರು’, ಉತ್ಸವ್ ಗಾಂವ್ಕರ್ ಅವರ ‘ಫೋಟೊ’, ರವೀಂದ್ರ ಜೋಶಿ ಅವರ ‘ಮತ’ ಹಾಗೂ ರಿಷಿಕಾ ಶರ್ಮಾ ಅವರ ‘ವಿಜಯಾನಂದ’ ಸೇರಿದಂತೆ 14 ಚಿತ್ರಗಳಿವೆ.

ಇನ್ನು ಭಾರತೀಯ ಸ್ಪರ್ಧಾ ವಿಭಾಗದಲ್ಲಿ, ಸಂದೀಪ್ ಶೆಟ್ಟಿ ಅವರ ‘ಆರಾರಿರೋ’, ಇಸ್ಲಾಹುದ್ದೀನ್ ಅವರ ‘ಅನ್ನ’, ಚಂಪಾ ಶೆಟ್ಟಿ ಅವರ ‘ಕೋಳಿ ಎಸರು’, ಕೆ. ಸುಚೇಂದ್ರ ಪ್ರಸಾದ್ ಅವರ ‘ಮಾವು-ಬೇವು’, ಹರೀಶ್ ಕುಮಾರ್ ಅವರ ‘ತನುಜಾ’ ಸೇರಿದಂತೆ ಐದು ಚಿತ್ರಗಳಿದ್ದರೆ, ಏಶ್ಯನ್ ವಿಭಾಗದಲ್ಲಿ, ಬಡಿಗೇರ್ ದೇವೇಂದ್ರ ಅವರ ‘ಇನ್’, ಕೆ. ಶಿವರುದ್ರಯ್ಯ ಅವರ ‘ಸಿಗ್ನಲ್‌ಮ್ಯಾನ್-1971’, ಬಿ.ಎಸ್. ಲಿಂಗದೇವರು ಅವರ ‘ವಿರಾಟಪುರದ ವಿರಾಗಿ’ ಎಂಬ ಮೂರು ಚಿತ್ರಗಳಿವೆ. ಸ್ಪರ್ಧಾ ವಿಭಾಗಗಳಲ್ಲಿ ಕನ್ನಡ ಚಿತ್ರಗಳ ಪಾಲ್ಗೊಳ್ಳುವಿಕೆಯಲ್ಲಿ ಸರಿ-ತಪ್ಪುಗಳ ಲೆಕ್ಕಾಚಾರ ಹಾಕುವುದರಲ್ಲಿ ಅರ್ಥವಿಲ್ಲ.

ಹಾಗೆಂದು ಈ ಚಿತ್ರಗಳ ಆಯ್ಕೆ ವಿವಾದಾತೀತ ಎಂದೇನೂ ಭಾವಿಸಬೇಕಿಲ್ಲ. ದಲಿತರ ನೋವಿನ ಕಥೆಯ ಹಂದರವಿರುವ ಜೀವ ನವೀನ್ ನಿರ್ದೇಶಿಸಿರುವ ‘ಪಾಲಾರ್’ ಚಿತ್ರ, ಚಿತ್ರೋತ್ಸವದಲ್ಲಿ ಆಯ್ಕೆಯಾಗದಿರುವುದು ನಿಜಕ್ಕೂ ಆಶ್ಚರ್ಯ ಹುಟ್ಟಿಸುತ್ತದೆ. ಈ ಚಿತ್ರದ ಟ್ರೇಲರ್ ಬಿಡುಗಡೆಗೆ ಕೂಡ ಆಡಿಯೋ ಸಂಸ್ಥೆಗಳು ಒಪ್ಪದೆ ವಿವಾದ ಹುಟ್ಟಿಕೊಂಡಿತ್ತು. ಈ ಚಿತ್ರ ಆಯ್ಕೆಯಾಗದಿರಲು ಆಯ್ಕೆ ಸಮಿತಿಯವರು ನೀಡುತ್ತಿರುವ ಕಾರಣ; ‘‘ಇದು ಸೂಕ್ಷ್ಮ ವಸ್ತುವನ್ನಾಧರಿಸಿದ್ದು’’. ದಲಿತರ ಬದುಕನ್ನು ಆಧರಿಸಿ ಚಿತ್ರಗಳು ಇತ್ತೀಚೆಗೆ ‘ಸೂಕ್ಷ್ಮ’ ಎಂಬ ಹಣೆಪಟ್ಟಿ ಕಟ್ಟಿಕೊಂಡದ್ದಾದರೂ ಹೇಗೆ? ಮತ್ತು ಏಕೆ? ಎಂಬ ಪ್ರಶ್ನೆಗಳಿಗೆ ಯಾರಲ್ಲಿಯೂ ಉತ್ತರವಿಲ್ಲ. ಇದೇ ರೀತಿಯ ಸಮಸ್ಯೆಯಾಗಿರುವುದು, ಖ್ಯಾತ ನಿರ್ದೇಶಕ ನಂಜುಂಡೇಗೌಡ ಅವರ ‘ಕಾಸಿನ ಸರ’ ಚಿತ್ರಕ್ಕೆ.

ವಿವಿಧ ಸ್ಪರ್ಧಾ ವಿಭಾಗಗಳಲ್ಲಿ ಪಾಲ್ಗೊಳ್ಳುತ್ತಿರುವ 22 ಚಿತ್ರಗಳನ್ನು ಹೊರತುಪಡಿಸಿ, ಸಮಕಾಲೀನ ವಿಶ್ವ ಸಿನೆಮಾ ಹಾಗೂ ಭಾರತೀಯ ಕ್ಲಾಸಿಕ್ ಚಿತ್ರಗಳ ಪುನರ್ ನೋಟ ಭಾಗದಲ್ಲಿ ಕನ್ನಡ ಚಿತ್ರಗಳ ಇರುವಿಕೆ ಎದ್ದು ಕಾಣಿಸುತ್ತದೆ. ಈ ಭಾಗದಲ್ಲಿ, ‘ಜನುಮದ ಜೋಡಿ’, ‘ಕೃಷ್ಣದೇವರಾಯ’, ‘ಕಸ್ತೂರಿ ನಿವಾಸ’, ‘ಭೂತಯ್ಯನ ಮಗ ಅಯ್ಯು’, ‘ಅಮೆರಿಕ ಅಮೆರಿಕ’, ‘ಬಂಗಾರದ ಮನುಷ್ಯ’, ಪ್ರಶಾಂತ್ ಪಂಡಿತ್ ಅವರ ನಿಘಂಟು ಗುರು ರೆವರೆಂಡ್ ಕಿಟ್ಟಲ್‌ರ ಬದುಕನ್ನು ಕುರಿತಾದ ‘ಅರಿವು ಮತ್ತು ಗುರುವು’, ಎಂ.ಎಸ್. ಪ್ರಕಾಶ್ ಬಾಬು ಅವರ ‘ಅತ್ತಿ ಹಣ್ಣು ಮತ್ತು ಕಣಜ’, ‘ಹೆಡ್ ಬುಷ್’, ‘ಬೈ-ಟೂ ಲವ್’, ಸದ್ದುಗದ್ದಲ ಮಾಡಿದ ಸುದೀಪ್ ಅವರ ‘ವಿಕ್ರಾಂತ್ ರೋಣ’, ‘777 ಚಾರ್ಲಿ’, ಪುನೀತ್ ರಾಜ್ ಕುಮಾರ್ ಅವರ ‘ಗಂಧದ ಗುಡಿ’, ರಿಷಭ್ ಶೆಟ್ಟಿಯವರ ‘ಕಾಂತಾರ’, ಯಶ್ ಅವರ ‘ಕೆಜಿಎಫ್’, ಶಿವರಾಜ್ ಕುಮಾರ್ ಅವರ ವೇದ, ಯೋಗರಾಜ್ ಭಟ್ ಅವರ ‘ಗಾಳಿಪಟ-2’ ಚಿತ್ರಗಳು ಪ್ರದರ್ಶನಗೊಳ್ಳಲಿವೆ.

ಐವತ್ತರ ಸಮೀಪ

ಈಗಾಗಲೇ ಕನ್ನಡ ಚಿತ್ರಗಳ ಸಂಖ್ಯೆ 48ನ್ನು ದಾಟಿದ್ದು, ಚಿತ್ರರಂಗದ ಬೇರೆಬೇರೆ ಸಂಘ ಸಂಸ್ಥೆ, ಪ್ರತಿಷ್ಠಿತ ಒತ್ತಡದಿಂದ ಕೊನೆಯ ವೇಳೆಗೆ 50 ಚಿತ್ರಗಳು ಪ್ರದರ್ಶನಗೊಂಡರೂ ಅಚ್ಚರಿಪಡಬೇಕಿಲ್ಲ. ಚಿತ್ರೋತ್ಸವ ಸಮಿತಿಯ ಸದಸ್ಯರೊಬ್ಬರು, ಈ ಪ್ರಮಾಣದ ಕನ್ನಡ ಚಿತ್ರಗಳ ಸೇರ್ಪಡೆಗೆ ಚಿತ್ರೋತ್ಸವದ ಸಂಘಟನಾ ಸಮಿತಿಯ ಮುಖ್ಯಸ್ಥರು, ಕಂದಾಯ ಸಚಿವರಾದ ಆರ್. ಅಶೋಕರತ್ತ ಬೆರಳು ಮಾಡುತ್ತಾರೆ. ಬಿಫೆಸ್‌ನ ಮೊದಲ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅಶೋಕ್, ‘‘ಹಿಂದೆ ಉತ್ತಮ ಗುಣಮಟ್ಟದ ಚಿತ್ರಗಳು ಕನ್ನಡದಲ್ಲಿ ಬರುತ್ತಿದ್ದವು. ಈಗ ಮತ್ತೆ ಅವುಗಳ ಶಕೆ ಆರಂಭವಾಗಿದೆ. ಅಂಥ ಚಿತ್ರಗಳನ್ನೂ ಚಿತ್ರೋತ್ಸವದಲ್ಲಿ ಸೇರಿಸುವಂತೆ ನಾನು ಆಯ್ಕೆ ಸಮಿತಿಯವರಿಗೆ ಸೂಚಿಸಿದ್ದೇನೆ’’ ಎಂದಿದ್ದರು. ಆಯ್ಕೆ ಸಮಿತಿ ಅಶೋಕ್ ಅವರ ಆದೇಶವನ್ನು ಶಿರಸಾವಹಿಸಿ ಪಾಲಿಸಿದೆ.

ಮಹನೀಯರ ಶತಮಾನೋತ್ಸವ: ಚಿತ್ರಗಳಿಲ್ಲ

ಕನ್ನಡ ಚಿತ್ರರಂಗಕ್ಕೆ 90ರ ಹರೆಯವಾದರೆ, ಕನ್ನಡ ಚಿತ್ರರಂಗಕ್ಕೆ ಅಪಾರ ಕಾಣಿಕೆ ನೀಡಿರುವ, ಹಾಸ್ಯ ಚಕ್ರವರ್ತಿ ನರಸಿಂಹರಾಜು, ನಿರ್ಮಾಪಕ ನಿರ್ದೇಶಕ ಎಸ್.ಕೆ. ಅನಂತಾಚಾರಿ, ಎಂ.ವಿ. ಕೃಷ್ಣಸ್ವಾಮಿ ಹಾಗೂ ಚಲನಚಿತ್ರ ಛಾಯಾಗ್ರಹಣಕ್ಕಾಗಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರಾದ ಕನ್ನಡದವರೇ ಆದ ವಿ.ಕೆ. ಮೂರ್ತಿ ಅವರ ಶತಮಾನೋತ್ಸವದ ವರ್ಷವಿದು. ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಈ ಮಹನೀಯರಲ್ಲಿ, ವಿ.ಕೆ. ಮೂರ್ತಿ ಅವರು ಕನ್ನಡದವರೇ ಆದ ಗುರುದತ್ ಪಡುಕೋಣೆ ಅವರ ಹಿಂದಿ ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ. ವಿ.ಕೆ.ಮೂರ್ತಿ ಅವರೇ ಛಾಯಾಗ್ರಹಣ ಮಾಡಿದ ಕನ್ನಡದ ಕ್ಲಾಸಿಕ್ ಎಂದೇ ಪರಿಗಣಿಸಲಾಗಿರುವ ಎಸ್. ವಿ. ರಾಜೇಂದ್ರಸಿಂಗ್ ಬಾಬು ಅವರ ‘ಹೂವು-ಹಣ್ಣು’ ಚಿತ್ರವೇಕೋ ಆಯ್ಕೆ ಸಮಿತಿಯ ಸದಸ್ಯರ ಕಣ್ಣಿಗೆ ಬಿದ್ದಂತೆ ಕಾಣುವುದಿಲ್ಲ. ನರಸಿಂಹರಾಜು ಅವರು ಡಾ. ರಾಜ್ ಕುಮಾರ್ ಅವರ ಸಮಕಾಲೀನರಾಗಿದ್ದು, ರಾಜ್-ರಾಜು ಜೋಡಿ ಕನ್ನಡ ಚಿತ್ರರಂಗದಲ್ಲಿ ದಶಕಗಳ ಕಾಲ ಮಾಡಿದ ಮೋಡಿ ಮರೆಯಲು ಸಾಧ್ಯವೇ? ಆದರೆ ನರಸಿಂಹರಾಜು ಅವರ ಚಿತ್ರ ಪ್ರದರ್ಶನಗೊಳ್ಳುವ ಚಿತ್ರಗಳ ಪಟ್ಟಿಯಲ್ಲಿ ಇಲ್ಲ. ಇನ್ನು ಎಸ್.ಕೆ. ಆನಂತಾಚಾರಿ 60 ಮತ್ತು 70ರ ದಶಕದಲ್ಲಿ ‘ಗೌರಿ’, ‘ಮನೆ ಆಳಿಯ’, ‘ನವಕೋಟಿ ನಾರಾಯಣ’, ‘ಮಾವನ ಮಗಳು’, ‘ಮಧುಮಾಲತಿ’, ‘ಮಧುರ ಮಿಲನ’, ‘ಮುಕುಂದ ಚಂದ್ರ’, ‘ಸೋತುಗೆದ್ದವಳು’, ‘ಕುಂಕುಮರಕ್ಷೆ’ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಇವರ ಯಾವುದೇ ಚಿತ್ರವೂ ಪ್ರದರ್ಶನಗೊಳ್ಳುವ ಚಿತ್ರಗಳ ಪಟ್ಟಿಯಲ್ಲಿಲ್ಲ. ಎಂ.ವಿ.ಕೆ. ಮೂರ್ತಿ ಅವರು ‘ಸುಬ್ಬಾ ಶಾಸ್ತ್ರಿ’, ‘ಪಾಪ ಪುಣ್ಯ’ ಎಂಬ ಎರಡು ಕನ್ನಡ ಚಿತ್ರಗಳನ್ನು ನಿರ್ದೇಶಿರುವುದೇ ಅಲ್ಲದೆ, ಸಾಕ್ಷ್ಯಚಿತ್ರ ಜಗತ್ತಿನ ದೊಡ್ಡ ಹೆಸರು. ಇವರ ಚಿತ್ರವೂ ಪಟ್ಟಿಯಲ್ಲಿ ಕಾಣಸಿಗುವುದಿಲ್ಲ. ಆದರೆ ಈ ಮಹನೀಯರ ಚಿತ್ರಗಳ ಕುರಿತಾದ ವಿಚಾರ ಸಂಕಿರಣ, ತಜ್ಞರೊಂದಿಗೆ ಸಂವಾದ ನಡೆಸಲಾಗುತ್ತದೆ. ಇದೊಂದು ವಿಪರ್ಯಾಸ.

ಹೀಗೊಂದು ಪ್ರಶ್ನೆ?

ಹಾಗಾದರೆ ಕನ್ನಡ ಚಿತ್ರಗಳನ್ನು ಬಿಫೆಸ್‌ನಲ್ಲಿ ಸಂಭ್ರಮಿಸುವುದು ತಪ್ಪೇ? ಎಂಬ ಪ್ರಶ್ನೆಯೂ ಮೂಡುತ್ತದೆ. ಅಂತರ್‌ರಾಷ್ಟ್ರೀಯ ಚಿತ್ರೋತ್ಸವದ ಉದ್ದೇಶ, ಸಾಮಾನ್ಯ ಚಿತ್ರಮಂದಿರಗಳಲ್ಲಿ ವೀಕ್ಷಿಸಲಾಗದ, ಒಟಿಟಿ ವೇದಿಕೆಗಳಲ್ಲಿ ನೋಡಲು ಸಿಗದ, ಅಂತರ್‌ರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಮಾತ್ರ ದಕ್ಕುವ ಚಿತ್ರಗಳನ್ನು ನೋಡುವ ಅವಕಾಶವನ್ನು ಚಿತ್ರಪ್ರೇಮಿಗಳಿಗೆ ಕಲ್ಪಿಸುವುದು. ನೀವು, ಇದುವರೆಗೆ ನಡೆದಿರುವ ಅಂತರ್‌ರಾಷ್ಟ್ರೀಯ ಚಿತ್ರೋತ್ಸವಗಳನ್ನು ಗಮನಿಸಿ. ಕೇರಳದಲ್ಲಿ ನಡೆದ ಚಿತ್ರೋತ್ಸವದಲ್ಲಿ ಇದ್ದದ್ದು 10 ಮಲಯಾಳಂ ಚಿತ್ರಗಳು ಮಾತ್ರ. ಗೋವಾದಲ್ಲಿ ನಡೆದ ನಿಜ ಚಿತ್ರೋತ್ಸವದಲ್ಲಿ ಕಂಡಿದ್ದು ಬೆರಳೆಣಿಕೆಯಷ್ಟು ಕೊಂಕಣಿ ಚಿತ್ರಗಳು. ಈ ನಿಯಮಕ್ಕೆ, ಕೋಲ್ಕ್ಕತಾ, ಮುಂಬೈ ಚಿತ್ರೋತ್ಸವಗಳು ಹೊರತಲ್ಲ. ಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿರುವ ಕೆಲವು ಚಿತ್ರಗಳು, ಈಗಾಗಲೇ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡು, ಒಟಿಟಿ ವೇದಿಕೆಗಳಲ್ಲಿ ಪ್ರೇಕ್ಷಕರಿಗೆ ಲಭ್ಯವಿದೆ. ಹಾಗಿರುವಾಗ ಅವುಗಳನ್ನು ಪುನಃ ಚಿತ್ರೋತ್ಸವದಲ್ಲಿ ಪ್ರದರ್ಶಿಸುವ ಅಗತ್ಯವೇನಿದೆ? ಎಂಬುದು, ಹಲವಾರು ಅಂತರ್‌ರಾಷ್ಟ್ರೀಯ ಚಿತ್ರೋತ್ಸವಗಳಿಗೆ ತೆರಳಿರುವ ಚಿತ್ರ ವೀಕ್ಷಕರೊಬ್ಬರ ಪ್ರಶ್ನೆ.

ಇಂಥ ಪ್ರಶ್ನೆಗಳಿಗೆ ಸದ್ಯಕ್ಕೆ ಉತ್ತರ ಕೊಡುವುದು ಚಿತ್ರೋತ್ಸವದ ಸಂಘಟನೆಕಾರರಿಗೆ ಕಷ್ಟವಂತೂ ಹೌದು. ಭಾರತದಾದ್ಯಂತ ಹಾಗೂ ವಿಶ್ವದ ಅನೇಕ ಭಾಗಗಳಿಂದ ಬರುವ ಚಿತ್ರ ರಸಿಕರಿಗೆ, ವಿಮರ್ಶಕರಿಗೆ ಚಲನಚಿತ್ರ ಇತಿಹಾಸಕಾರರಿಗೆ ಇದರಿಂದ 90 ವರ್ಷದ ಕನ್ನಡ ಚಿತ್ರರಂಗದ ಪಕ್ಷಿ ನೋಟ ದಕ್ಕುತ್ತದೆ ಎನ್ನುವುದು ಅವರ ಸಮಜಾಯಿಷಿ. ಅವರ ಉತ್ತರ ಸಮರ್ಪಕವೆನ್ನಿಸದಿದ್ದರೂ, ಕನ್ನಡ ಚಿತ್ರಗಳನ್ನು ನೋಡಿ ಸಂತಸಪಡುವ ಅವಕಾಶವನ್ನೇಕೆ ತಪ್ಪಿಸಿಕೊಳ್ಳಬೇಕು? ಆಲ್ಲವೇ?

Similar News