ಕಾಂಗ್ರೆಸ್ ಸೇರಿದ ಬಾಬುರಾವ್ ಚಿಂಚನಸೂರ್

Update: 2023-03-22 12:46 GMT

ಬೆಂಗಳೂರು: ಬಿಜೆಪಿಯ ಹಿರಿಯ ಮುಖಂಡ ಹಾಗೂ ಮಾಜಿ ವಿಧಾನಪರಿಷತ್‌ ಸದಸ್ಯ ಬಾಬುರಾವ್ ಚಿಂಚನಸೂರ್ ಅವರು ಬುಧವಾರ ಕಾಂಗ್ರೆಸ್ ಸೇರ್ಪಡೆಯಾದರು. 

ಬಾಬುರಾವ್ ಚಿಂಚನಸೂರ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ತಮ್ಮ ಸದಾಶಿವ ನಗರದ ನಿವಾಸದಲ್ಲಿ ಕಾಂಗ್ರೆಸ್ ಶಾಲು, ಹೂಗುಚ್ಛ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು. 

ಈ ಸಂದರ್ಭದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಈಗಾಗಲೇ ಹಳ್ಳಿಗಳಿಂದ ರಾಜ್ಯ ಮಟ್ಟದವರೆಗೆ ನೂರಾರು ಅನ್ಯ ಪಕ್ಷಗಳ ನಾಯಕರು ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಕೆಲ ದಿನಗಳ ಹಿಂದೆ ವಿಧಾನ ಪರಿಷತ್ ಸದಸ್ಯರಾಗಿ ನಾಲ್ಕೂವರೆ ವರ್ಷಗಳ ಕಾಲ ಅಧಿಕಾರ ಇದ್ದರೂ ಪುಟ್ಟಣ್ಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದರು.

ಈಗ ಮಾಜಿ ಸಚಿವರಾದ ಬಾಬುರಾವ್ ಚಿಂಚನಸೂರು ಅವರು ಪರಿಷತ್ ಸದಸ್ಯರಾಗಿ ಒಂದೂವರೆ ವರ್ಷಗಳ ಕಾಲ ಅಧಿಕಾರ ಬಾಕಿ ಇದ್ದರೂ, ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ನಾನು ಅವರು ಜತೆಯಲ್ಲಿ ಅನೇಕ ಬಾರಿ ಮಂತ್ರಿಯಾಗಿ ಕೆಲಸ ಮಾಡಿದ್ದೇವೆ ಎಂದು ತಿಳಿಸಿದರು. 

ಈ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಬಡವರ ಕಲ್ಯಾಣವಾಗಿ, ಅವರ ಜೀವನ ಭದ್ರಾವಾಗಲಿದೆ. ಈ ಸಮಾಜಕ್ಕೆ ನ್ಯಾಯ ಸಿಗಲಿದೆ ಎಂದು ನಂಬಿಕೆ ಇಟ್ಟು, ಮಲ್ಲಿಕಾರ್ಜುನ ಖರ್ಗೆ ಅವರ ಮೇಲೆ ವಿಶ್ವಾಸ ಇಟ್ಟು, ಅವರ ಅನುಯಾಯಿಯಾಗಿ ಪಕ್ಷ ಸೇರುತ್ತಿದ್ದಾರೆ. ಅವರ ರಾಜೀನಾಮೆ ನಿನ್ನೆ ಅಂಗೀಕಾರವಾಗಿದ್ದು, ಇಂದು ಹೊಸ ವರ್ಷದ ಹೊಸ ದಿನ ಆರಂಭವಾಗಲಿ ಎಂದು ಪಕ್ಷಕ್ಕೆ ಸೇರುತ್ತಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ವಕ್ತಾರ ಹಾಗೂ ಮಾಜಿ ಸಚಿವ ಡಾ. ಶರಣ ಪ್ರಕಾಶ ಪಾಟೀಲ್‌ ಉಪಸ್ಥಿತರಿದ್ದರು. 

ಸೋಮವಾರ ರಾತ್ರಿ ವಿಧಾನಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಭೇಟಿಯಾಗಿ ಪರಿಷತ್‌ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದ ಚಿಂಚನಸೂರ್, ಅದೇ ದಿನ ಬಿಜೆಪಿ ಸದಸ್ಯತ್ವಕ್ಕೂ ರಾಜೀನಾಮೆ ಸಲ್ಲಿಸಿದ್ದರು.

ಇದನ್ನೂ ಓದಿಮಾಜಿ ಶಾಸಕ, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ವೆಂಕಟಸ್ವಾಮಿಗೆ ಹೃದಯಾಘಾತ

Similar News