ಯೆನೆಪೋಯದಲ್ಲಿ `ಸಿವಿಲ್ ಯೆನ್' ನಾಗರಿಕ ಸೇವೆಗಳ ಪರೀಕ್ಷೆ ತರಬೇತಿ ಕೇಂದ್ರಕ್ಕೆ ಚಾಲನೆ

Update: 2023-03-23 12:40 GMT

ಕೊಣಾಜೆ:  ನಾಗರಿಕ ಸೇವೆಗಳ ಪರೀಕ್ಷೆ ಎದುರಿಸುವಂತಹ ಕೋರ್ಸನ್ನು ಪದವಿ ವಿದ್ಯಾರ್ಥಿಗಳಿಗೆ ಆರಂಭಿಸುವ ಮೂಲಕ ಯೆನೆಪೋಯ ಸಂಸ್ಥೆ ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನೀಡಲು ಹೊರಟಿದೆ. ಇಂತಹ ತರಬೇತಿ ಗಳು ದೇಶದ ಹಲವು ವಿಶ್ವವಿದ್ಯಾನಿಲಯಗಳಲ್ಲಿ ಸ್ಥಾಪನೆಯಾಗುವುದಕ್ಕೆ ಯೆನೆಪೋಯ ಸಂಸ್ಥೆ ಸ್ಪೂರ್ತಿಯಾ ಗಲಿದೆ  ಎಂದು ಮಂಗಳೂರು ಕ್ಷೇತ್ರದ ಶಾಸಕ ಯು.ಟಿ ಖಾದರ್ ಅಭಿಪ್ರಾಯಪಟ್ಟರು.

ಅವರು ಯೆನೆಪೋಯ ಪರಿಗಣಿತ ವಿಶ್ವವಿದ್ಯಾನಿಲಯ ಅಧೀನದ  ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್, ಸೈನ್ಸ್, ಕಾಮರ್ಸ್ ಮ್ಯಾನೇಜ್ಮೆಂಟ್ ಇದರ ಸೆಂಟರ್ ಫಾರ್ ಸಿವಿಲ್ ಸರ್ವಿಸಸ್ ಎಕ್ಸಾಮಿನೇಷನ್( ನಾಗರಿಕ ಸೇವಾ ಪರೀಕ್ಷೆ ಕೇಂದ್ರ)  `ಸಿವಿಲ್ ಯೆನ್' ಮತ್ತು ಬಿ.ಎ ಪದವಿ ಕೋರ್ಸುಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ರಾಜ್ಯದ ವಿದ್ಯಾರ್ಥಿಗಳು ಹೊರರಾಜ್ಯಕ್ಕೆ ತೆರಳಿ ನಾಗರಿಕ ಸೇವೆಗಳ ಪರೀಕ್ಷಾ ಪೂರ್ವ ತಯಾರಿಯನ್ನು ಮಾಡಲು ಅನುಕೂಲವಾಗದಂತಹ ಸ್ಥಿತಿಯಿದೆ. ರಾಜ್ಯದೊಳಗೇ ಪರೀಕ್ಷೆಗಳನ್ನು 15 ವರ್ಷದವರೆಗೆ ಎದುರಿಸಿ ಬಳಿಕ ಖಿನ್ನತೆಗೆ ಒಳಗಾಗುವ ಹಂತಕ್ಕೆ ತಲುಪುತ್ತಾರೆ.  ಶೈಕ್ಷಣಿಕ ನಗರಿ ಮಂಗಳೂರಿಗೆ ಇಂತಹ ವಿಭಾಗದ ಅವಶ್ಯಕತೆ ಹೆಚ್ಚಿತ್ತು. ಉತ್ತಮ ರಾಜಕಾರಣಿಗಳಾಗಲೂ ಕಾಲೇಜುಗಳಲ್ಲಿ ತರಬೇತಿ ಆರಂಭಿಸುವ ಅವಶ್ಯಕತೆಯಿದೆ. ಸದನದಲ್ಲಿ  ರಾಜಕಾರಣಿಗಳು ಹೊಡೆದಾಡಿಕೊಂಡರೂ ಅಲ್ಲಿಂದ ಹೊರಬರುವಾಗ ಎಲ್ಲರೂ ಒಗ್ಗಟ್ಟಾಗುತ್ತಾರೆ. ಆದರೆ ನಾಗರಿಕ ಸೇವೆ ನಡೆಸುವ ಐಎಎಸ್, ಐಪಿಎಸ್ ಅಧಿಕಾರಿಗಳು ಒಂದು ಬಾರಿ ಗಲಾಟೆಯಾದರೆ ಅದನ್ನೇ ತಲೆಯಲ್ಲಿ ಇಟ್ಟುಕೊಂಡು ಭವಿಷ್ಯದಲ್ಲಿ ಕೆಲಸಗಳನ್ನು ನೆರವೇರಸದೆ ಸೇಡು ತೀರಿಸುವುದು ಇದೆ. ಈ ನಿಟ್ಟಿನಲ್ಲಿ ನಾಗರಿಕ ಸೇವೆಗಳ ಜೊತೆಗೆ ಮಾನವೀಯ ಮೌಲ್ಯಗಳ ಪ್ರತಿಪಾದನೆಯೂ ಅಗತ್ಯ ಬೇಕಿದೆ ಎಂದರು.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಿನೇಂದ್ರ ಕೋಟ್ಯಾನ್ ಮಾತನಾಡಿ,  ವಿಭಿನ್ನ ಕೋರ್ಸ್ ಸ್ಥಾಪನೆಗೊಳಿಸುವ ಮೂಲಕ ಯೆನೆಪೋಯ ಸಂಸ್ಥೆ ಹೊಸ ಹಾದಿಗೆ ನಾಂದಿ ಹಾಡಿದೆ. ಪದವಿ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳು ಪೊಲೀಸ್ ಪರೀಕ್ಷೆ ಯಿಂದ ಹಿಡಿದು ಐಎಎಸ್‍ನ ಅತ್ಯುನ್ನತ ಪರೀಕ್ಷೆಯನ್ನು ಎದುರಿಸುವ ಸಾಮರ್ಥ್ಯವನ್ನು ಸಾಧಿಸಬಹುದು. ಇಲಾಖೆ ವತಿಯಿಂದಲೂ ಸ್ಕಾಲರ್‍ಶಿಪ್ ನೀಡಿ ವಿದ್ಯಾರ್ಥಿಗಳನ್ನು ದೆಹಲಿ, ಹೈದರಾಬಾದ್ ನಲ್ಲಿ ತರಬೇತಿಯನ್ನು ನೀಡಲಾಗುತ್ತಿದೆ. ವಿದ್ಯಾಸಿರಿ ಯೋಜನೆಯಡಿ ರೂ.6 ಕೋಟಿ ಅನುದಾನ ವಿನಿಯೋಗಿಸಲಾಗಿದ್ದು, 4,000 ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.  ವಿದ್ಯಾರ್ಥಿಗಳಿಗೆ ಮಾಹಿತಿ ಕೊರತೆಯಾಗಬಾರದು ಅನ್ನುವ ಉದ್ದೇಶದಿಂದ ಫೇಸ್ಬುಕ್ ಪೇಜ್ ನಲ್ಲಿ ದಿನ ದಿನದ ಮಾಹಿತಿಯನ್ನು ಇಲಾಖೆ ವತಿಯಿಂದ ಒದಗಿಸಲಾಗುತ್ತಿದೆ ಎಂದರು.

ಮುಖ್ಯ ಅತಿಥಿಯಾಗಿ  ಭಾಗವಹಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಪ್ರೊ. ಪಿ.ಯಲ್ ಧರ್ಮ ಮಾತನಾಡಿ ` ಮಂಗಳೂರಿನಲ್ಲಿ ಮಾನವೀಯತೆಯ ವಿಚಾರಗಳ ಕಲಿಕೆಯನ್ನು  ಮುಚ್ಚಿಹಾಕುವಂತಹ ಸಂದರ್ಭ ಯೆನೆಪೋಯ ಸಂಸ್ಥೆಯ ಪ್ರಯತ್ನ ಅದ್ಭುತವಾದುದು. ಭಾರತೀಯ ಸಂವಿಧಾನದ ಆಶಯದಂತೆ ಸದ್ಯ ಎಲ್ಲರೂ ಸ್ವಂತ ಮನೆಯನ್ನು ಹೊಂದಿರಬೇಕಿತ್ತು. ಆದರೆ ಮೂಲಭೂತ ವಿಚಾರಗಳನ್ನು ಮರೆತಿರುವ ಹಿನ್ನೆಲೆಯಲ್ಲಿ ಇಂತಹ ದುರಾವಸ್ಥೆ ಉಂಟಾಗಿದೆ. ರಾಷ್ಟ್ರೀಯತೆ ಉಳಿಯಬೇಕಾದಲ್ಲಿ ಸಂವಿಧಾನದ ಆಶಯಗಳು ಜಾರಿಯಾಗಬೇಕು. ಇದನ್ನು ಯೆನೆಪೋಯ ಸಂಸ್ಥೆ ವಿದ್ಯಾರ್ಥಿ ಜೀವನದಲ್ಲಿ ಅಳವಡಿಸುವಂತೆ ಮಾಡಿದೆ.  ಪದವಿಯನ್ನು ತ್ಯಜಿಸುತ್ತಿರು ವಂತಹ ಕಾಲಘಟ್ಟದಲ್ಲಿ ನಾಗರಿಕ ಪರೀಕ್ಷೆಗಳನ್ನು ಜೊತೆಯಾಗಿ ಆರಂಭಿಸುವ ಮೂಲಕ ದೇಶದಲ್ಲೇ ಹೊಸ ಮೈಲಿಗಲ್ಲು ಸ್ಥಾಪಿಸಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯೆನೆಪೋಯ ಪರಿಗಣಿತ ವಿ.ವಿ ಕುಲಾಧಿಪತಿ ಡಾ. ಯೆನೆಪೋಯ ಅಬ್ದುಲ್ಲಾ ಕುಂಞಿ ಮಾತನಾಡಿ , ಯುವಸಮುದಾಯ ಹೆಮ್ಮೆಯಿಂದ ದೇಶಸೇವೆಯನ್ನು ನಡೆಸಲು ಸಂಸ್ಥೆ ಮಾಡಿಕೊಟ್ಟಿರುವ ಉತ್ತಮ ಅವಕಾಶವಿದು. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನಾಗರಿಕ ಸೇವೆ ಪರೀಕ್ಷೆಗಳ ತಯಾರಿಗೆ ಹೈದರಾಬಾದ್, ದೆಹಲಿಯತ್ತ ಹೋಗಬೇಕಾಗಿತ್ತು. ಇದೀಗ ಜಿಲ್ಲೆಯಲ್ಲೇ ತರಬೇತಿ ದೊರಕುವ ಹಿನ್ನೆಲೆಯಲ್ಲಿ  ಕೋರ್ಸಿನ ಸದುಪಯೋಗಪಡಿಸಬೇಕು ಎಂದರು.

ಸಹಕುಲಪತಿ ಡಾ. ಬಿ.ಎಚ್. ಶ್ರೀಪತಿ ರಾವ್, ಕುಲಸಚಿವ ಡಾ. ಗಂಗಾಧರ ಸೋಮಯಾಜಿ ಕೆ.ಎಸ್, ಪರೀಕ್ಷಾಂಗ ಕುಲಸಚಿವ ಡಾ ಬಿ.ಟಿ. ನಂದೀಶ್ ಉಪಸ್ಥಿತರಿದ್ದರು.

ಪ್ರಾಂಶುಪಾಲ ಡಾ.ಅರುಣ್ ಎ ಭಾಗವತ್ ಸ್ವಾಗತಿಸಿದರು.  ಡಾ.ಶರೀನಾ ಪಿ. ವಂದಿಸಿದರು. ಡಾ.ಸಕೀನಾ ನಾಸ್ಸೆರ್ ಅತಿಥಿಗಳ ಪರಿಚಯಿಸಿದರು. ಮೊಹಮ್ಮದ್ ಅಲಿ ರೂಮಿ  ನೂತನ ತರಬೇತಿಯ ವಿವರ ನೀಡಿದರು.

Similar News