ಮಂಗಳೂರು ವಿವಿಯ ಗೌರವ ಡಾಕ್ಟರೇಟ್ ಪುರಸ್ಕೃತರಿಗೆ ಪೌರ ಸನ್ಮಾನ

Update: 2023-03-23 13:08 GMT

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಪದವಿ ಪುರಸ್ಕೃತರಾದ ಹಾಜಿ ಯು.ಕೆ. ಕಣಚೂರು ಮೋನು, ಡಾ. ರಾಮಕೃಷ್ಣ ಆಚಾರ್, ಡಾ. ಎಂ.ಬಿ. ಪುರಾಣಿಕ್ ಅವರನ್ನು ತುಳುನಾಡ ಪೌರ ಸನ್ಮಾನ ಸಮಿತಿಯ ವತಿಯಿಂದ ಗುರುವಾರ ನಗರದ ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಅಶೀರ್ವಚನ ನೀಡಿದ ಎಡನೀರು ಮಠದ ಸಚ್ಚಿದಾನಂದ ಭಾರತಿ ಸ್ವಾಮೀಜಿ ‘ಮನುಷ್ಯ ಜನ್ಮ ಪ್ರಾಪ್ತವಾಗುವುದು ದುರ್ಲಭ. ಅದರಲ್ಲೂ ವಿದ್ಯೆ ಪಡೆಯುವುದು, ಶೀಲವಂತರಾಗಿ ಬದುಕುವುದು ಮತ್ತೂ ದುರ್ಲಭ. ಇವೆನ್ನೆಲ್ಲಾ ಮೀರಿ ವಿನಯವಂತಿಕೆಯಿಂದ ಉನ್ನತ ಸಾಧನೆ ಮಾಡುವುದು ಶ್ರೇಷ್ಠ. ಇಂತಹ ಸಾಧನೆಗಳ ಮೂಲಕ ಮಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್ ಪದವಿಗೆ ಭಾಜನರಾದ ಮೂವರು ಅಭಿನಂದನೆಗೆ ಅರ್ಹರು ಎಂದು ಹೇಳಿದರು.

ಮಸ್‌ನವೀ ಗ್ಲೋಬಲ್ ಅಕಾಡಮಿಯ ಪ್ರಧಾನ ಕಾರ್ಯದರ್ಶಿ ಡಾ. ಎಮ್ಮೆಸ್ಸೆಂ ಅಬ್ದುರ‌್ರಶೀದ್ ಸಖಾಫಿ ಝೈನಿ ಕಾಮಿಲ್ ಮಾತನಾಡಿ, ಮನುಷ್ಯ ತನಗೆ ಲಭಿಸಿದ ಶಕ್ತಿ, ಸಾಮರ್ಥ್ಯ, ಕೌಶಲವನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು. ಇಲ್ಲದಿದ್ದರೆ ಅದು ಆ ವ್ಯಕ್ತಿಗೆ ಮಾತ್ರವಲ್ಲ, ಆತ ಪ್ರತಿನಿಧಿಸುವ ಸಮಾಜ, ಸಮುದಾಯಕ್ಕೂ ನಷ್ಟವಾಗುತ್ತದೆ. ದೇವರು ಕೊಟ್ಟ ಅವಕಾಶವನ್ನು ಬಳಸಿಕೊಂಡು ಸಮಾಜದಲ್ಲಿ ಮಿಂಚಬೇಕು. ಇಂದು ಸನ್ಮಾನಿಸಲ್ಪಟ್ಟ ಮೂವರು ಸಾಧಕರು ಕೂಡ ಆಯಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿ ಸಮಾಜವನ್ನು ಬೆಳಗಿಸಿದ್ದಾರೆ ಎಂದರು.

ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಗರದ ಶರವು ಮಹಾಗಣಪತಿ ದೇವಸ್ಥಾನದ ಶಿಲೆಶಿಲೆ ಮೊಕ್ತೇಸರ ರಾಘವೇಂದ್ರ ಶಾಸ್ತ್ರಿ ಮಾತನಾಡಿ  ಸಾಧಕರ ಸನ್ಮಾನವು ಇತರರಿಗೆ ಪ್ರೇರಣೆಯಾಗಲಿ ಎಂದರು.

ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ವಿನಯ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಶ್ರೀನಿವಾಸ ವಿಶ್ವವಿದ್ಯಾನಿ ಲಯದ ಕುಲಾಧಿಪತಿ ಸಿಎ ರಾಘವೇಂದ್ರ ರಾವ್, ಯೆನೆಪೊಯ ಡೀಮ್ಡ್ ವಿಶ್ವವಿದ್ಯಾನಿಲಯದ ಕುಲಾಧಿಪತಿ ಯೆನೆಪೊಯ ಅಬ್ದುಲ್ಲ ಕುಂಞ, ಧರ್ಮದರ್ಶಿ ಹರಿಕೃಷ್ಣ ಪುನರೂರು ಶುಭ ಹಾರೈಸಿದರು.

ವೇದಿಕೆಯಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ.ರಾಜು ಕೃಷ್ಣ, ಯು.ಟಿ. ಫರೀದ್ ಫೌಂಡೇಷನ್‌ನ ಅಧ್ಯಕ್ಷ ಯು.ಟಿ. ಇಫ್ತಿಕಾರ್ ಅಲಿ, ಸೀತಾರಾಮ ಆಚಾರ್ಯ ಉಪಸ್ಥಿತರಿದ್ದರು.

ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪಕುಮಾರ್ ಕಲ್ಕೂರ ಸ್ವಾಗತಿಸಿದರು. ಪತ್ರಕರ್ತ ಮನೋಹರ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

Similar News