ಸ್ವಸಹಾಯ ಸಂಘಗಳ ಸಾಲಗಳ ಅರ್ಜಿಗೆ ಆದ್ಯತೆ ನೀಡಿ: ಜಿಪಂ ಸಿಇಒ ಡಾ. ಕುಮಾರ್ ಸೂಚನೆ

ದ.ಕ.ಜಿಲ್ಲಾ ಮಟ್ಟದ ಲೀಡ್ ಬ್ಯಾಂಕ್ ಸಭೆ

Update: 2023-03-23 14:11 GMT

ಮಂಗಳೂರು, ಮಾ.23: ಸ್ವಸಹಾಯ ಸಂಘಗಳು ಗುಂಪು ಸಾಲಗಳಿಗೆ ಅರ್ಜಿ ಸಲ್ಲಿಸಿದರೆ ಅದನ್ನು ನಿರ್ಲಕ್ಷಿಸ ಬಾರದು. ಸ್ವಸಹಾಯ ಸಂಘಗಳು ಸಾಲಕ್ಕೆ ಅರ್ಜಿ ಸಲ್ಲಿಸಿದಾಗ ಅದನ್ನು ವೈಯಕ್ತಿಕ ಸಾಲದ ಮಾದರಿಯಲ್ಲಿ ಪರಿಗಣಿಸಲೂ ಬಾರದು. ಹೆಚ್ಚಿನ ಆದ್ಯತೆ ನೀಡಲು ಗಮನ ಹರಿಸಬೇಕು. ಈ ದೇಶದ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಬಲ್ಲವು ಎಂದು ದ.ಕ. ಜಿಪಂ ಸಿಇಒ ಡಾ. ಕುಮಾರ್ ಹೇಳಿದರು.

ನಗರದ ಕೊಟ್ಟಾರದಲ್ಲಿರುವ ದ.ಕ.ಜಿಪಂ ನೇತ್ರಾವತಿ ಸಭಾಂಗಣದಲ್ಲಿ ಗುರುವಾರ ನಡೆದ ಲೀಡ್ ಬ್ಯಾಂಕ್ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ  ಸ್ವಉದ್ಯೋಗ ಉದ್ದೇಶವನ್ನಿಟ್ಟುಕೊಂಡು ಅನೇಕ ಸ್ವಸಹಾಯ ಸಂಘಗಳು ಮುಂದೆ ಬರುತ್ತಿದೆ. ಬ್ಯಾಂಕ್‌ ಗಳಿಗೆ ಅರ್ಜಿ ಸಲ್ಲಿಸಿದಾಗ ಅವರನ್ನು ಸತಾಯಿಸಬಾರದು. ಸಾಲಕ್ಕೆ ಬೇಕಾದ ದಾಖಲೆಗಳಿಗೆ ಮಾರ್ಗದರ್ಶನ ನೀಡಿ ಅವರನ್ನು ಪ್ರೋತ್ಸಾಹಿಸಬೇಕು. ಸ್ವಸಹಾಯ ಸಂಘಗಳ ಮೂಲಕ ಯೋಜನೆ ರೂಪಿಸಿ ದಾಗ ಗುಂಪಿನ ಸದಸ್ಯರ ಮನೆ ಮಾತ್ರವಲ್ಲದೆ ಸಮಾಜದ ಅಭಿವೃದ್ಧಿ ಸಾಧ್ಯವಿದೆ ಸರಕಾರದ ಯಾವುದೇ ಯೋಜನೆಯಡಿ ಮನೆ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಿದವರ ಅರ್ಹತೆಯನ್ನು ಪರಿಗಣಿಸಿ ಶೀಘ್ರ ವಿಲೇವಾರಿ ಮಾಡಬೇಕು. ಪಿಎಂಎವೈ ಅಥವಾ ಬಸವ ವಸತಿ (1.25ಲಕ್ಷ ರೂ., ಎಸ್‌ಸಿ/ಎಸ್‌ಟಿ 1.75 ಲಕ್ಷ ರೂ.) ಅಥವಾ ಇತರ ಯೋಜನೆಗಳಡಿ ವಸತಿ ಸಾಲಕ್ಕೆ ಅರ್ಹರಾದವರ ಅರ್ಜಿಯನ್ನು ಶೀಘ್ರ ವಿಲೇವಾರಿಗೊಳಿಸಬೇಕು. 8,000 ವಸತಿ ಫಲಾನುಭವಿಗಳ ಅರ್ಜಿ ಬಾಕಿಯಿದ್ದು ಅದನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು ಎಂದರು.

ಗ್ರಾಪಂ ಮಟ್ಟದಲ್ಲಿ  ನಿರುದ್ಯೋಗಿ ಯುವಕರಿಗೆ (18-29) ರೂಪಿಸಲಾದ 10 ಸಾವಿರ ರೂ. ಆವರ್ತನಿಧಿ ಯೋಜನೆಯನ್ನು 7 ದಿನದೊಳಗೆ ಇತ್ಯರ್ಥಗೊಳಿಸಬೇಕು. ಗುಂಪು ಸಾಲವು 5ಲಕ್ಷ ರೂ. ಯೋಜನೆಯಾಗಿದ್ದು, 1 ಲಕ್ಷ ರೂ. ಸಹಾಯಧನ, 4 ಲಕ್ಷ ರೂ. ಸಾಲವಾಗಿದೆ. ಈಗಾಗಲೇ 175ಕ್ಕೂ ಅಧಿಕ ಪ್ರಸ್ತಾವನೆ ಬಂದಿದೆ. ಪ್ರತಿ ದಿನ 10 ಲಕ್ಷಕ್ಕೂ ಹೆಚ್ಚಿನ ವ್ಯವಹಾರವಾಗಿರುವ ಸಂದೇಹಾಸ್ಪದ ವಹಿವಾಟಿನ ಬಗ್ಗೆ ಸಂಬಂಧಪಟ್ಟವರಿಗೆ ವರದಿ ಮಾಡಿ, ವಶಪಡಿಸಿಕೊಂಡ ನಗದನ್ನು ಸಿಇಒ ನೇತೃತ್ವದ ಸಮಿತಿಯು ವಿಚಾರಣೆ ನಡೆಸಲಿದೆ ಎಂದರು.

ಸಭೆಯಲ್ಲಿ  ಲೀಡ್ ಬ್ಯಾಂಕ್ ಅಧಿಕಾರಿ ಗುರುರಾಜ್ ಆಚಾರ್ಯ, ನಬಾರ್ಡ್ ಡಿಡಿಎಂ ಸಂಗೀತಾ ಎಸ್. ಕರ್ತ, ಮಂಗಳೂರು ಕೆನರಾ ಬ್ಯಾಂಕ್ ವೃತ್ತ ಕಚೇರಿ ಉಪಮಹಾಪ್ರಬಂಧಕ ಶ್ರೀಕಾಂತ್ ವಿ.ಕೆ., ಜಿಲ್ಲಾ ಲೀಡ್ ಬ್ಯಾಂಕ್ ಮುಖ್ಯ ಪ್ರಬಂಧಕ ಪ್ರವೀಣ್ ಎಂ.ಪಿ. ಉಪಸ್ಥಿತರಿದ್ದರು.

Similar News