ಸಚಿವ ನಾರಾಯಣಗೌಡ, ಶಾಸಕಿ ಪೂರ್ಣಿಮಾ ಕಾಂಗ್ರೆಸ್ ಸೇರ್ಪಡೆ ವಿಚಾರ: ಡಿಕೆಶಿ ಹೇಳಿದ್ದೇನು?

Update: 2023-03-23 14:28 GMT

ಬೆಂಗಳೂರು, ಮಾ.23: 'ಸಚಿವ ನಾರಾಯಣ ಗೌಡ ಹಾಗೂ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಎಂದು ನಾನು ಎಲ್ಲಾದರೂ ಹೇಳಿದ್ದೀನಾ?' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.

ನಾರಾಯಣಗೌಡ ಹಾಗೂ ಪೂರ್ಣಿಮಾ ಕಾಂಗ್ರೆಸ್‍ಗೆ ಹೋಗುವುದಿಲ್ಲ ಅವರ ಜೊತೆ ನಾನು ಮಾತನಾಡಿದ್ದೇನೆ ಎಂದು ಮಾಜಿ ಸಿಎಂ ಯಡಿಯೂರಪ್ಪ ನೀಡಿರುವ ಹೇಳಿಕೆ ಕುರಿತು ಗುರುವಾರ ಸದಾಶಿವನಗರದಲ್ಲಿರುವ ತಮ್ಮ ನಿವಾಸದ ಬಳಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಈ ಮೇಲಿನಂತೆ ಪ್ರತಿಕ್ರಿಯಿಸಿದರು.

ನಾರಾಯಣಗೌಡ ಹಾಗೂ ಪೂರ್ಣಿಮಾ ಕಾಂಗ್ರೆಸ್ ಸೇರುತ್ತಿದ್ದಾರೆ ಎಂದು ಅವರಿಗೆ ಹೇಳಿದರು ಯಾರು? ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿರುವುದೇಕೆ? ಅವರು ಏನು ಮಾಡಿಕೊಳ್ಳುತ್ತಿದ್ದಾರೋ ನಮಗೆ ಗೊತ್ತಿಲ್ಲ ಎಂದು ಶಿವಕುಮಾರ್ ಹೇಳಿದರು.

ಬಿಜೆಪಿಯವರು ಪಕ್ಷ ಬಿಟ್ಟು ಹೋಗುತ್ತಾರೆ ಎಂಬ ಭಯದಲ್ಲಿ ಐಟಿ, ಈಡಿ ದಾಳಿ ಮಾಡಿಸುತ್ತಿದ್ದಾರೆ. ಬಿಜೆಪಿ ಸಚಿವರು ಹಣ ಮಾಡಿಲ್ಲವೇ? ಅವರ ಮನೆ ಮೇಲೆ ದಾಳಿ ಏಕಿಲ್ಲ? ಯಡಿಯೂರಪ್ಪ ಹಾಗೂ ಅವರ ಕುಟುಂಬದವರನ್ನು ನಿಯಂತ್ರಿಸಲು ಕೆಲವು ಅಧಿಕಾರಿಗಳನ್ನು ಬಿಟ್ಟಿದ್ದಾರೆ. ಅವರ ಮೂಲಕ ಯಡಿಯೂರಪ್ಪ ಅವರನ್ನು ನಿಯಂತ್ರಿಸಲಾಗುತ್ತಿದೆ ಎಂದು ಅವರು ಹೇಳಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಬಿಟ್ಟು ಹೋಗಿದ್ದವರ ಪೈಕಿ ಕೆಲವರು ಮತ್ತೆ ಪಕ್ಷಕ್ಕೆ ಹಿಂದಿರುಗುತ್ತಿದ್ದಾರೆ. ಈಗ ಅವರ ಹೆಸರು ಪ್ರಸ್ತಾಪ ಮಾಡುವುದಿಲ್ಲ. ಅವರು ಕೆಲವರ ಮೇಲೆ ಅನುಮಾನ ಪಡುತ್ತಾ ಅವರಿಗೆ ಕಿರುಕುಳ ನೀಡುತ್ತಿದ್ದಾರೆ. ನಾವು ಯಾರನ್ನು ಆಹ್ವಾನಿಸುತ್ತಿಲ್ಲ. ಸ್ವಇಚ್ಛೆಯಿಂದ ಯಾರು ಪಕ್ಷ ಸೇರಲು ಬಯಸುತ್ತಾರೋ ಅವರನ್ನು ನಾವು ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ ಎಂದು ಶಿವಕುಮಾರ್ ತಿಳಿಸಿದರು.

ರಾಜ್ಯವನ್ನು ಭ್ರಷ್ಟಾಚಾರದ ರಾಜಧಾನಿ ಮಾಡಲಾಗಿದೆ: ಕೆಪಿಎಸ್ಸಿ ಸೇರಿದಂತೆ ಅನೇಕ ಇಲಾಖೆ ನೇಮಕಾತಿ ನೆನೆಗುದಿಗೆ ಬಿದ್ದು, ಎಲ್ಲ ಅಭ್ಯರ್ಥಿಗಳು, ನಿರುದ್ಯೋಗಿಗಳಿಗೆ ಇಡೀ ಯುವ ಸಮೂಹಕ್ಕೆ ಬಿಜೆಪಿಯ ಬ್ರಹ್ಮಾಂಡ ಭ್ರಷ್ಟಾಚಾರದಿಂದ ಅನ್ಯಾಯವಾಗುತ್ತಿದೆ. ರಾಜ್ಯಕ್ಕೆ ಭ್ರಷ್ಟಾಚಾರದ ರಾಜಧಾನಿ ಎಂಬ ಕಳಂಕವನ್ನು ಈ ಸರಕಾರ ತಂದಿದೆ ಎಂದು ಅವರು ಕಿಡಿಗಾರಿದರು.

ನಿರುದ್ಯೋಗಿಗಳಿಗೆ ನೆರವಾಗುವ ಉದ್ದೇಶದಿಂದ ನಾವು ಯುವನಿಧಿ ಯೋಜನೆ ಮೂಲಕ ಪದವೀಧರರಿಗೆ ಪ್ರತಿ ತಿಂಗಳು 3 ಸಾವಿರ ರೂ., ಡಿಪ್ಲೊಮಾ ಮಾಡಿರುವವರಿಗೆ ಪ್ರತಿ ತಿಂಗಳು 1500 ರೂ.ನಿರುದ್ಯೋಗ ಭತ್ತೆ ನೀಡಲು ತೀರ್ಮಾನಿಸಿದ್ದೇವೆ. ಇದರ ಜತೆಗೆ 200 ಯುನಿಟ್ ಉಚಿತ ವಿದ್ಯುತ್, ಮನೆಯೊಡತಿಗೆ 2 ಸಾವಿರ ರೂ. ಪ್ರೋತ್ಸಾಹ ಧನ, 10 ಕೆ.ಜಿ ಅಕ್ಕಿ ನೀಡುವ ಗ್ಯಾರಂಟಿ ಯೋಜನೆ ಪ್ರಕಟಿಸಿದ್ದೇವೆ ಎಂದು ಶಿವಕುಮಾರ್ ಹೇಳಿದರು.

ಇದು ಹೇಗೆ ಸಾಧ್ಯವಾಗುತ್ತದೆ ಎಂಬ ಚರ್ಚೆಗೆ ಬೊಮ್ಮಾಯಿ, ಕಟೀಲ್ ಸಿದ್ಧರಿದ್ದರೆ ಮಾಧ್ಯಮಗಳ ವೇದಿಕೆ ಮುಂದೆ ಬಂದು ಚರ್ಚೆ ಮಾಡಲಿ. ಅವರ ಪ್ರಣಾಳಿಕೆ, 15 ಲಕ್ಷ ನೀಡುವ ಭರವಸೆ ಸೇರಿದಂತೆ ಎಲ್ಲದರ ಬಗ್ಗೆ ಚರ್ಚೆ ಮಾಡೋಣ ಎಂದು ಶಿವಕುಮಾರ್ ತಿಳಿಸಿದರು.

Similar News