ಮಂಗಳೂರು: ಫ್ಲ್ಯಾಟ್ ಕೊಡಿಸುವುದಾಗಿ ಹೇಳಿ ವಂಚನೆ; ಪ್ರಕರಣ ದಾಖಲು

Update: 2023-03-23 15:23 GMT

ಮಂಗಳೂರು: ನಗರ ಹೊರವಲಯದ ನೀರುಮಾರ್ಗದ ವಸತಿ ಸಮುಚ್ಚಯದಲ್ಲಿ ನಿರ್ಮಾಣವಾಗುತ್ತಿರುವ ಫ್ಲ್ಯಾಟ್ ಕೊಡಿಸುವುದಾಗಿ ಹೇಳಿ ಹಣವನ್ನು ಪಡೆದು ವಂಚಿಸಿರುವ ಬಗ್ಗೆ ಫ್ಲೋರಿನ್ ಪಿರೇರಾ ಮತ್ತು ಆಲ್ವಿನ್ ಜಾನ್ ಡಿಸೋಜಾ ಎಂಬವರು ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಎರಡು ಪ್ರತ್ಯೇಕ ದೂರುಗಳನ್ನು ನೀಡಿದ್ದಾರೆ.

ಫ್ಲೋರಿನ್ ಪಿರೇರಾ 102 ನಂಬರಿನ ಫ್ಲ್ಯಾಟ್ ಖರೀದಿ ಮಾಡುವ ಬಗ್ಗೆ ಒಪ್ಪಂದ ಮಾಡಿಕೊಂಡು, 21.27 ಲಕ್ಷ ರೂ. ಪಾವತಿಸಿದ ಬಳಿಕ ವಾಸ್ತವ್ಯ ಹೂಡಿದ್ದಾರೆ. ಈ ವೇಳೆ ಮುರಳೀಧರ ಪೈ ಎಂಬಾತ ಗೂಂಡಾಗಳೊಂದಿಗೆ ಫ್ಲ್ಯಾಟ್‌ಗೆ ಬಂದು ತಾನು ಈ ಮನೆಯನ್ನು ಖರೀದಿಸಿರುವೆ. ನಿನ್ನನ್ನು ಮತ್ತು ಕುಟುಂಬದವರನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ. ಮೊದಲನೇ ಆರೋಪಿ ಜಾಯ್ಸಿ ರೀನಾ ರಸ್ಕಿನ್ಹಾ ಎಂಬಾತ ತನಗಿಂತ ಮೊದಲೇ ಮುರಳೀದರ ಪೈಗೆ ಮನೆಯನ್ನು ಮಾರಾಟ ಮಾಡಿ ಮೋಸ ಮಾಡಿರುವುದಾಗಿ ಫ್ಲೋರಿನ್ ದೂರಿನಲ್ಲಿ ತಿಳಿಸಿದ್ದಾರೆ.

ಆಲ್ವಿನ್ ಡಿಸೋಜಾ ಎಂಬವರು ಕೂಡ ಅದೇ ಆಪಾರ್ಟ್‌ಮೆಂಟ್‌ನಲ್ಲಿ ಎರಡು ಫ್ಲ್ಯಾಟ್ ಖರೀದಿಸಿದ್ದು, ಹಂತ ಹಂತವಾಗಿ ತಲಾ 9.65 ಲಕ್ಷ ಮತ್ತು 15.77 ಲಕ್ಷ ರೂ. ಪಾವತಿಸಿದ್ದಾರೆ ಎನ್ನಲಾಗಿದೆ. ಬಳಿಕ 104ನೇ ಫ್ಲ್ಯಾಟ್‌ನಲ್ಲಿ ವಾಸಿಸಲು ಆರಂಭಿಸಿದ್ದಾರೆ. ಈ ವೇಳೆ ಅಲ್ಲಿಗೆ ತನ್ನ ಗೂಂಡಾಗಳೊಂದಿಗೆ ಬಂದ ಎರಡನೇ ಆರೋಪಿ ಮುರಳೀಧರ ಪೈ ತನಗೆ ಜೀವ ಬೆದರಿಕೆ ಹಾಕಿದ್ದಾರೆ. ಈ ಫ್ಲ್ಯಾಟನ್ನು ಜಾಯ್ಸಿ ರೀನಾ ರಸ್ಕಿನ್ಹಾ ಮೊದಲೇ ಮಾರಾಟ ಮಾಡಿ  ತನಗೆ  ಮೋಸ ಮಾಡಿದ್ದಾರೆ ಎಂದು ಆಲ್ವಿನ್ ಡಿಸೋಜ ದೂರಿನಲ್ಲಿ ತಿಳಿಸಿದ್ದಾರೆ.

Similar News