KPTCL ಹುದ್ದೆ ನೇಮಕಾತಿ ಗೊಂದಲ | ಸಿಎಂ ಕೊಟ್ಟ ಉತ್ತರದಿಂದ ಸಿಟ್ಟಾಗಿ ಅರ್ಜಿ ಹರಿದು ಹಾಕಿದ ಯುವಕ

ನಿಮಗೇನೂ ಮಾಡಲಾಗಲ್ಲ ಎಂದರೆ ಅಧಿಕಾರವೇಕೆ? ಎಂದು ಪ್ರಶ್ನಿಸಿದ ಕಾಂಗ್ರೆಸ್

Update: 2023-03-23 15:20 GMT

ಬೆಂಗಳೂರು: ಕೆಪಿಟಿಸಿಎಲ್ ಹುದ್ದೆ ನೇಮಕಾತಿ ಗೊಂದಲ ವಿಚಾರವಾಗಿ ಮುಖ್ಯಮಂತ್ರಿ ಕೊಟ್ಟ ಉತ್ತರದಿಂದ ಆಕ್ರೋಶಿತಗೊಂಡ ಯುವಕನೊಬ್ಬನು ಅರ್ಜಿ ಹರಿದು ಹಾಕಿದ ಘಟನೆ ಗೃಹ ಕಚೇರಿ ಕೃಷ್ಣಾ ಬಳಿ ನಡೆಯಿತು.

ನೇಮಕಾತಿ ವಿಚಾರದಲ್ಲಿ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದೆ, ಈ ಗೊಂದಲ ಸರಿಡಪಿಸಿ ಎಂದು ಮುಖ್ಯಮಂತ್ರಿಗೆ ಯುವಕನು ಅರ್ಜಿ ಕೊಟ್ಟನು. ಇದಕ್ಕೆ ಪ್ರತಿಕ್ರಿಯಿಸಿದ ಬಸವರಾಜ ಬೊಮ್ಮಾಯಿ, ''ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದ್ದರೆ ನೀವೆ ನೋಡಿಕೊಳ್ಳಬೇಕು'' ಎಂದರು. ಇದಕ್ಕೆ ಕೋಪಗೊಂಡ ಯುವಕ,  ಕಳೆದ ಐದಾರು ವರ್ಷಗಳಿಂದ ಬರೆದಿರುವ ಪರೀಕ್ಷೆಗಳ ನೇಮಕಾತಿಗಳನ್ನೆಲ್ಲ ರದ್ದು ಮಾಡಲಾಗಿದೆ. ಈ ಬಾರಿ ಕೆಪಿಟಿಸಿಎಲ್ ಹುದ್ದೆಗೆ ಪರೀಕ್ಷೆ ಬರೆದಿದ್ದೆ. ಈ ಸಲವೂ ನೇಮಕಾತಿ ರದ್ದು ಮಾಡಲಾಗುತ್ತಿದೆ ಎಂದು ತಾನು ತಂದಿದ್ದ ಅರ್ಜಿಯನ್ನು ಹರಿದು ಹಾಕಿದ್ದಾನೆ. 

ಘಟನೆಗೆ ಸಂಬಂಧಸಿದ ವಿಡಿಯೋ ಒಂದನ್ನು ಹಂಚಿಕೊಂಡಿರುವ ವಿಪಕ್ಷ ಕಾಂಗ್ರೆಸ್,  ''ಎಲ್ಲಾ ಸರ್ಕಾರಿ ನೇಮಕಾತಿಗಳಲ್ಲಿ ಅಕ್ರಮ ನಡೆಯಲು ಬಿಟ್ಟ ಬಸವರಾಜ ಬೊಮ್ಮಾಯಿ ಅವರು ಉದ್ಯೋಗಾಕ್ಷಾಂಕ್ಷಿಗಳ ನೋವು ಆಲಿಸದೆ ಅಹಂಕಾರದಿಂದ ವರ್ತಿಸಿದ್ದಾರೆ. ಉದ್ಯೋಗಕ್ಕೆ ಹಪಹಪಿಸುತ್ತಿರುವ ಯುವಜನತೆಗೆ ಬಿಜೆಪಿ ಸರ್ಕಾರದಿಂದ ನಯಾಪೈಸೆ ನ್ಯಾಯ ಸಿಗುವುದಿಲ್ಲ ಎಂಬುದಕ್ಕೆ ಘಟನೆಯೇ ಸಾಕ್ಷಿ. ಯುವಜನರನ್ನು ಕಂಡರೆ ಏಕಿಷ್ಟು ಅಸಹನೆ?'' ಎಂದು ಟ್ವೀಟ್ ಮೂಲಕ ಪ್ರಶ್ನೆ ಮಾಡಿದೆ. 

''ನೇಮಕಾತಿಯ ಗೊಂದಲ ಸೃಷ್ಟಿಸಿದ್ದು ಸರ್ಕಾರ, ಸರ್ಕಾರದ ಯಡವಟ್ಟಿನಿಂದ ತಡೆಯಾಜ್ಞೆ ಬಂದಿದೆ. ಉದ್ಯೋಗಾಕಾಂಕ್ಷಿಗಳ ಬದುಕು ಛಿದ್ರವಾಗಿದೆ. "ನಾನೇನು ಮಾಡ್ಬೇಕು, ಕೋರ್ಟಲ್ಲಿ ನೋಡ್ಕೊಳ್ಳಿ" ಎಂಬ ಹಾರಿಕೆ ಉತ್ತರ ಕೊಡುವ ಸಿಎಂಗೆ ಯುವಜನರ ಮೇಲೆ ಕನಿಷ್ಠ ಕಾಳಜಿ ಇಲ್ಲವೇಕೆ? ಬಸವರಾಜ ಬೊಮ್ಮಾಯಿ ಅವರೇ, ನಿಮಗೇನೂ ಮಾಡಲಾಗಲ್ಲ ಎಂದರೆ ಅಧಿಕಾರವೇಕೆ?'' ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. 

Similar News