ಉಪ್ಪಿನಂಗಡಿ: ಮಗಳ ಮದುವೆಗೆ ಚಿನ್ನ ಖರೀದಿಸಲು ತೆರಳುತ್ತಿದ್ದ ವ್ಯಕ್ತಿಯ ನಗದು ಎಗರಿಸಿದ ಪ್ರಕರಣ; ಓರ್ವ ಸೆರೆ

Update: 2023-03-23 15:50 GMT

ಉಪ್ಪಿನಂಗಡಿ: ಮಗಳ ಮದುವೆಗೆ ಚಿನ್ನಾಭರಣ ಖರೀದಿಸಲೆಂದು ದ್ವಿಚಕ್ರ ವಾಹನದಲ್ಲಿ ಹತ್ತು ಲಕ್ಷ ರೂ. ಕೊಂಡೊಯ್ಯುತ್ತಿದ್ದ ವೇಳೆ ಅಪರಿಚಿತ ಯುವಕನೋರ್ವ ಹಣದ ಕಟ್ಟನ್ನು ಕಿತ್ತೊಯ್ದ ಪ್ರಕರಣಕ್ಕೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದು, ಆತನಿಂದ 9 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ.

ಇಳಂತಿಲ ಗ್ರಾಮದ ಪೆದಮಲೆಯ ಸರಳೀಕಟ್ಟೆ ರಸ್ತೆಯಲ್ಲಿ ಸೋಮವಾರ ಈ ಪ್ರಕರಣ ಸಂಭವಿಸಿದ್ದು, ಕಾಯರ್ಪಾಡಿ ನಿವಾಸಿ  60 ವರ್ಷ ಪ್ರಾಯದ  ಮಹಮ್ಮದ್  ಎಂಬವರು  ತನ್ನ ಮಗಳ ಮದುವೆಗೆಂದು  ಸಂಗ್ರಹಿಸಿಟ್ಟಿದ್ದ ಹತ್ತು ಲಕ್ಷ ರೂ. ಹಣವನ್ನು ಚಿನ್ನಾಭರಣ ಖರೀದಿಸುವ ಸಲುವಾಗಿ ಚೀಲವೊಂದರಲ್ಲಿ ಹಾಕಿ ಪೆದಮಲೆ - ಸರಳೀಕಟ್ಟೆ ರಸ್ತೆಯ ರಿಫಾಯಿನಗರ ಎಂಬಲ್ಲಿ ನಿಲ್ಲಿಸಿದ್ದ ತನ್ನ ದ್ವಿಚಕ್ರ ವಾಹನದ ಸೀಟಿನ ಅಡಿಯಲ್ಲಿ  ಇಡಲೆತ್ನಿಸುವಾಗ ಹಿಂದಿನಿಂದ ಬಂದ ಅಪರಿಚಿತ ವ್ಯಕ್ತಿಯೋರ್ವ ಅವರ ಕೈಯಲ್ಲಿದ್ದ ಹಣದ ಕಟ್ಟನ್ನು ಕಿತ್ತುಕೊಂಡು ಪರಾರಿಯಾಗಿದ್ದ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಉಪ್ಪಿನಂಗಡಿ ಪೊಲೀಸರು ತನಿಖೆ ನಡೆಸಿ ಇಳಂತಿಲ ಗ್ರಾಮದ ಕಡವಿನಬಾಗಿಲು ನಿವಾಸಿ ಮುಸ್ತಫಾ (41) ಎಂಬಾತನನ್ನು ಗುರುವಾರ ಬಂಧಿಸಿ ಆತ ಎರಡು ಕಡೆಗಳಲ್ಲಿ ಅಡಗಿಸಿಟ್ಟಿದ್ದ 9 ಲಕ್ಷ ರೂ. ಹಣವನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದ ಇನ್ನೋರ್ವ ಆರೋಪಿ ಒಂದು ಲಕ್ಷ ರೂಪಾಯಿಯೊಂದಿಗೆ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸ್ ಕಾರ್ಯಾಚರಣೆ ಮುಂದುವರೆದಿದೆ.

Similar News