ಲಾಲ್‍ಬಾಗ್-ಕಬ್ಬನ್‍ಪಾರ್ಕ್ ಮಾದರಿಯಲ್ಲಿ ಬೃಹತ್ ಉದ್ಯಾನವನ ನಿರ್ಮಾಣ: ಸಚಿವ ಆರ್.ಅಶೋಕ್

Update: 2023-03-23 16:13 GMT

ಬೆಂಗಳೂರು, ಮಾ.23: ಲಾಲ್‍ಬಾಗ್ ಹಾಗೂ ಕಬ್ಬನ್ ಪಾರ್ಕ್ ಮಾದರಿಯಲ್ಲಿ ಬೆಂಗಳೂರು ಉತ್ತರ ಭಾಗದಲ್ಲಿ ಬೃಹತ್ ಉದ್ಯಾನವನ ಹಾಗೂ ನಾಡಪ್ರಭು ಕೆಂಪೇಗೌಡರ ಏಕಶಿಲಾ ಪ್ರತಿಮೆ ನಿರ್ಮಿಸಲು ರಾಜ್ಯ ಸರಕಾರ ತೀರ್ಮಾನಿಸಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

ಗುರುವಾರ ವಿಧಾನಸೌಧದಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೆಂಪೇಗೌಡರ ಹುಟ್ಟೂರು ಬಳಿಯ ಆವತಿ ಸಮೀಪದ ಬೆಟ್ಟ ಹಲಸೂರಿನಲ್ಲಿ ಕಂದಾಯ ಇಲಾಖೆಗೆ ಸೇರಿದ 184 ಎಕರೆ ಜಮೀನಿನಲ್ಲಿ ಕೆಂಪೇಗೌಡರ ಹೆಸರಿನಲ್ಲಿ ಈ ಬೃಹತ್ ಉದ್ಯಾನವನ ನಿರ್ಮಿಸಲಾಗುತ್ತದೆ. ಇದು ಕಬ್ಬನ್ ಪಾರ್ಕ್‍ಗಿಂತಲೂ ದೊಡ್ಡ ಉದ್ಯಾನವನ ಆಗಿರಲಿದೆ ಎಂದರು.

ಇದರೊಂದಿಗೆ ಜಾರಕ ಬಂಡೆ ಬಳಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹೆಸರಿನಲ್ಲಿ ಮತ್ತೊಂದು ಉದ್ಯಾನವನ ನಿರ್ಮಿಸಲಾಗುವುದು. 184 ಎಕರೆ ಸಂಪೂರ್ಣವಾಗಿ ಸರಕಾರದ್ದಾಗಿದ್ದು, ರೈತರ ಯಾವುದೆ ಭೂಮಿಯನ್ನು ಸ್ವಾಧ್ವೀನ ಪಡಿಸಿಕೊಳ್ಳುತ್ತಿಲ್ಲ. ನಾನು ಮತ್ತು ತೋಟಗಾರಿಕೆ ಸಚಿವ ಮುನಿರತ್ನ ಬೆಂಗಳೂರಿನವರಾಗಿದ್ದು, ಬೆಂಗಳೂರಿನ ಜನರ ಋಣ ತೀರಿಸಲು ಈ ಕೆಲಸ ಮಾಡುತ್ತಿದ್ದೇವೆ ಎಂದು ಅಶೋಕ್ ಹೇಳಿದರು.

ಸುಮಾರು 500 ಕೋಟಿ ರೂ.ವೆಚ್ಚದಲ್ಲಿ ಈ ಕೆಂಪೇಗೌಡ ಉದ್ಯಾನವನ ನಿರ್ಮಾಣವಾಗಲಿದೆ. ವಿವಿಧ ಸರ್ವೆ ನಂಬರ್‍ಗಳಿಗೆ ಸೇರಿದ ಈ ಪ್ರದೇಶವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿ ಮರ, ಗಿಡಗಳನ್ನು ಬೆಳೆಸಲು ಮತ್ತು ಸಂರಕ್ಷಿಸಲು ಉದ್ದೇಶಿಸಲಾಗಿತ್ತು. ಆದರೆ ಈಗ ಅದನ್ನು ತೋಟಗಾರಿಕೆ ಇಲಾಖೆಗೆ ವರ್ಗಾವಣೆ ಮಾಡಲಾಗುವುದು. ಶೀಘ್ರದಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಉದ್ಯಾನವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಜೊತೆಗೆ, ಯಲಹಂಕ ಸಮೀಪ ವಾಜಪೇಯಿ ಉದ್ಯಾನವನ ನಿರ್ಮಿಸಲಾಗುವುದು ಎಂದು ಅವರು ಹೇಳಿದರು.

ತೋಟಗಾರಿಕೆ ಸಚಿವ ಮುನಿರತ್ನ ಮಾತನಾಡಿ, ಬೆಟ್ಟಹಲಸೂರು ಉದ್ಯಾನವನದಲ್ಲಿ ಕೆಂಪೇಗೌಡರ ಏಕಶಿಲೆ ಪ್ರತಿಮೆ ನಿರ್ಮಾಣ ಮಾಡಬೇಕೆಂಬುದು ನಮ್ಮ ಯೋಜನೆಯಿದೆ. ಮಲೇಶಿಯಾ, ಸಿಂಗಾಪುರದ ಕಂಪನಿಗಳು ಇದನ್ನು ಅಭಿವೃದ್ಧಿ ಮಾಡಲು ಮುಂದೆ ಬಂದಿವೆ ಎಂದರು.

100 ಅಡಿ ಎತ್ತರದ ಪ್ರತಿಮೆ ನಿರ್ಮಾಣಕ್ಕೆ ಯೋಜಿಸಲಾಗಿದೆ. ಶ್ರವಣಬೆಳಗೊಳದಲ್ಲಿರುವ  ಗೊಮ್ಮಟೇಶ್ವರ  ಪ್ರತಿಮೆಯನ್ನು ಮೀರಿಸುವ ಅತೀ ದೊಡ್ಡ ಕೆಂಪೇಗೌಡ ಪ್ರತಿಮೆ ನಿರ್ಮಾಣ ಮಾಡಲಾಗುವುದು. ಅದೇ ರೀತಿ ಯಲಹಂಕ-ದೊಡ್ಡಬಳ್ಳಾಪುರ ರಸ್ತೆಯಲ್ಲಿ ಸುಮಾರು 300 ಎಕರೆ ಪ್ರದೇಶದಲ್ಲಿ ಲಾಲ್ ಬಾಗ್ ಮಾದರಿಯಲ್ಲಿ ವಾಜಪೇಯಿ ಉದ್ಯಾನವನ ನಿರ್ಮಾಣ ಮಾಡಲಾಗುವುದು. ಮುಖ್ಯಮಂತ್ರಿ ಇದಕ್ಕಾಗಿ ಬಜೆಟ್ ನಲ್ಲಿ 100 ಕೋಟಿ ರೂ.ಘೋಷಿಸಿದ್ದಾರೆ ಎಂದು ಅವರು ಹೇಳಿದರು.

Similar News