×
Ad

ಬೆಂಗಳೂರು: ಚಾಕುವಿನಿಂದ ಇರಿದು ಸ್ನೇಹಿತನ ಕೊಲೆ

Update: 2023-03-23 22:35 IST

ಬೆಂಗಳೂರು, ಮಾ.23: ಮದ್ಯದ ಅಮಲಿನಲ್ಲಿ ಮೂವರು ಸ್ನೇಹಿತರ ನಡುವೆ ನಡೆದ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಉಪ್ಪಾರಪೇಟೆ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ.

ಗಣೇಶ ದೇವಾಲಯದ ಬಳಿ ಗುರುವಾರ ರಾತ್ರಿ ಈ ಘಟನೆ ನಡೆದಿದ್ದು, ಕಲಬುರ್ಗಿ ಮೂಲದ ಮಲ್ಲಿನಾಥ್ ಬಿರಾದಾರ್(36) ಕೊಲೆಯಾಗಿದ್ದಾನೆ ಎಂದು ಪೊಲೀಸರು ಗುರುತಿಸಿದ್ದಾರೆ‌. ಘಟನೆಯಲ್ಲಿ ಮಂಜುನಾಥ್ ಮತ್ತು ಕೃತ್ಯ ಎಸಗಿದ ಆರೋಪಿಯಾದ ಚಿಕ್ಕಮಗಳೂರಿನ ಗಣೇಶ್ ಎಂಬಾತ ಕೂಡ ಗಾಯಗೊಂಡಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆನ್ನಲಾಗಿದೆ. 

ಉತ್ತರ ಕರ್ನಾಟಕ ಮೂಲದ ಮಲ್ಲಿನಾಥ್ ಬಿರಾದರ್, ಮಂಜುನಾಥ್ ಮತ್ತು ಚಿಕ್ಕಮಗಳೂರಿನ ಗಣೇಶ್ ಸ್ನೇಹಿತರಾಗಿದ್ದು, ಕೆಲ ತಿಂಗಳಿಂದ ಮೆಜೆಸ್ಟಿಕ್ ಸುತ್ತ-ಮುತ್ತ ವಾಸವಾಗಿದ್ದರು. ಅಡುಗೆ ಹಾಗೂ ಇತರೆ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡು, ಬಂದ ಹಣದಲ್ಲಿ ರಾತ್ರಿ ವೇಳೆ ಮದ್ಯ ಸೇವಿಸಿ ಮೆಜೆಸ್ಟಿಕ್ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಮಲಗುತ್ತಿದ್ದರು ಎನ್ನಲಾಗಿದೆ.

ಬುಧವಾರ ರಾತ್ರಿ ಮೂವರ ನಡುವೆ ಸಿಗರೇಟ್ ಸೇದುವ ವಿಚಾರಕ್ಕೆ ಜಗಳ ಉಂಟಾಗಿ  ಮಂಜುನಾಥ್ ಮತ್ತು ಮಲ್ಲಿನಾಥ್ ಬಿರಾದರ್, ಆರೋಪಿ ಗಣೇಶ್ ಮೇಲೆ ಹಲ್ಲೆ ನಡೆಸಿದ್ದರು. ಬಳಿಕ ಮೂವರು ಸಮಾಧಾನಗೊಂಡಿದ್ದರು. 

ಇಂದು ಸಂಜೆ ಮತ್ತೆ ಮೂವರು ಒಟ್ಟಿಗೆ ಮದ್ಯ ಸೇವಿಸಿ ನಿನ್ನೆಯ ಘಟನೆ ಕುರಿತು ಗಣೇಶ್, ತನ್ನ ಬಳಿಯಿದ್ದ ಚಾಕುವಿನಿಂದ ಮಂಜುನಾಥ್, ಮಲ್ಲಿನಾಥ್‌ನ ಹೊಟ್ಟೆಯ ಭಾಗಕ್ಕೆ ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದ ಮಲ್ಲಿನಾಥ್ ಬಿರಾದಾರ್ ಮೃತಪಟ್ಟಿದ್ದಾನೆ. 

ಮಂಜುನಾಥ್‌ಗೆ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ

Similar News