ಕರ್ನಾಟಕದ ಆರ್ಥಿಕ ನೀತಿ ಹೇಗಿರಬೇಕು?

Update: 2023-03-24 07:31 GMT

ಸರಣಿ 1

ಆಂತರಿಕ ಉತ್ಪನ್ನದ ಮೌಲ್ಯವನ್ನು 2022-23ರಲ್ಲಿ 22.41 ಲಕ್ಷ ಕೋಟಿಯಿಂದ 2032ಕ್ಕೆ 99.5 ಲಕ್ಷ ಕೋಟಿ ರೂ.ಗೆ ಏರಿಸುವ ಗುರಿಯನ್ನು ರಾಜ್ಯ ಸರಕಾರ ಘೋಷಿಸಿದೆ. ಡಾಲರ್ ಲೆಕ್ಕದಲ್ಲಿ ಈಗಿನ 0.27 ಟ್ರಿಲಿಯ ಮಟ್ಟದಿಂದ 1 ಟ್ರಿಲಿಯ ಮಟ್ಟಕ್ಕೆ ರಾಜ್ಯದ ಆರ್ಥಿಕತೆಯನ್ನು ತಲುಪಿಸುವ ಯೋಜನೆ ಇದು. ಈ ಮಹತ್ವಾಕಾಂಕ್ಷೆಯ ಗುರಿಯನ್ನು ಸಾಧಿಸುವ ಜೊತೆಗೆ ಕೆಲವು ಮೂಲಭೂತ ಪ್ರಶ್ನೆಗಳ ಕಡೆಗೂ ಸರಕಾರವು ಗಮನ ಹರಿಸಬೇಕು.

ಚುನಾವಣೆಯ ಹೊಸ್ತಿಲಲ್ಲಿ ಇರುವ ಕರ್ನಾಟಕ ರಾಜ್ಯದ ಹೊಸ ಆರ್ಥಿಕ ನೀತಿಯ ಗುರಿ ಏನಿರಬೇಕು? ಇದರ ಬಗ್ಗೆ ಎಲ್ಲ ಪಕ್ಷಗಳು ಸದ್ಯದಲ್ಲಿಯೇ ಘೋಷಣೆಗಳ ಮಹಾಪೂರವನ್ನು ಜನರ ಮುಂದೆ ಹರಿಯಬಿಡಲಿವೆ. ಈ ಹಿನ್ನೆಲೆಯಲ್ಲಿ ಕೆಲವು ಮೂಲಭೂತವಾದ ಆದ್ಯತೆಗಳ ಬಗ್ಗೆ ಗಮನ ಹರಿಸುವ ಸ್ಥೂಲವಾದ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.

ಮಹತ್ವಾಕಾಂಕ್ಷೆಯ 1 ಟ್ರಿಲಿಯ ಡಾಲರ್ ಆರ್ಥಿಕತೆ: 
2022-23ರ ಕರ್ನಾಟಕ ರಾಜ್ಯದ ಆರ್ಥಿಕ ಸಮೀಕ್ಷೆಯಲ್ಲಿ ರಾಜ್ಯದ ಆರ್ಥಿಕತೆಯನ್ನು ಮುಂದಿನ 10 ವರ್ಷಗಳಲ್ಲಿ ಸುಮಾರು 4 ಪಟ್ಟು ವೃದ್ಧಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ (ಇತ್ತೀಚೆಗಿನ ಚುನಾವಣಾ ಪೂರ್ವ ಬೃಹತ್ ಜಾಹೀರಾತುಗಳಲ್ಲಿ ರಾಜ್ಯ ಸರಕಾರ ಇದನ್ನು ಮತ್ತೆ ಉಲ್ಲೇಖಿಸಿದೆ ಎಂಬುದು ಗಮನಾರ್ಹ.) ಅಂದರೆ ಆಂತರಿಕ ಉತ್ಪನ್ನದ ಮೌಲ್ಯವನ್ನು 2022-23ರಲ್ಲಿ 22.41 ಲಕ್ಷ ಕೋಟಿಯಿಂದ 2032ಕ್ಕೆ 99.5 ಲಕ್ಷ ಕೋಟಿ ರೂ.ಗೆ ಏರಿಸುವ ಗುರಿಯನ್ನು ರಾಜ್ಯ ಸರಕಾರ ಘೋಷಿಸಿದೆ. ಡಾಲರ್ ಲೆಕ್ಕದಲ್ಲಿ ಈಗಿನ 0.27 ಟ್ರಿಲಿಯ ಮಟ್ಟದಿಂದ 1 ಟ್ರಿಲಿಯ ಮಟ್ಟಕ್ಕೆ ರಾಜ್ಯದ ಆರ್ಥಿಕತೆಯನ್ನು ತಲುಪಿಸುವ ಯೋಜನೆ ಇದು. ಈ ಮಹತ್ವಾಕಾಂಕ್ಷೆಯ ಗುರಿಯನ್ನು ಸಾಧಿಸುವ ಜೊತೆಗೆ ಕೆಲವು ಮೂಲಭೂತ ಪ್ರಶ್ನೆಗಳ ಕಡೆಗೂ ಸರಕಾರವು ಗಮನ ಹರಿಸಬೇಕು.

ಸರ್ವಜನಾಂಗದ ಅಭಿವೃದ್ಧಿ: 

ಅತಿ ಮುಖ್ಯವಾಗಿ, ಆರ್ಥಿಕ ಪ್ರಗತಿಯ ಲಾಭಗಳು ಸರ್ವರಿಗೂ ಸಿಗುವ ದಾರಿಗಳಿಗೆ ಪ್ರಾಶಸ್ತ್ಯ ನೀಡುವ ತುರ್ತು ಇಂದಿದೆ. ಇದಕ್ಕೆ ಬೇಕಾದ ಮಾರ್ಗವನ್ನು ರಾಜ್ಯ ಸರಕಾರ ಒಪ್ಪಿಕೊಂಡಿರುವ ವಿಶ್ವಸಂಸ್ಥೆಯ (United Nations Organisation) ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು (Sustainable Development Goals-SDGs) ತಲುಪುವ ಕ್ರಮಗಳಿಗೆ ಒತ್ತು ನೀಡುವುದರಲ್ಲಿದೆ.  ಹೊಸ ಚುನಾಯಿತ ಸರಕಾರದ ಆರ್ಥಿಕ ನೀತಿಯನ್ನು ಸುಸ್ಥಿರ  ಅಭಿವೃದ್ಧಿಯ ಗುರಿಗಳಿಗೆ ಪೂರಕವಾಗುವಂತೆ ರೂಪಿಸಬೇಕು. 

ಸಾಧಿಸುವ ಐದು ಮಾರ್ಗಗಳು: 
1. ಮೊದಲನೆಯ ಹೆಜ್ಜೆ: ರಾಜ್ಯದಲ್ಲಿ ಕೇಂದ್ರದ ನೀತಿ ಆಯೋಗದ ಮಾನದಂಡಗಳನ್ನು ಉಪಯೋಗಿಸಿಯೇ ಎಷ್ಟು ಮಂದಿ ಬಡವರಿದ್ದಾರೆ ಎಂಬುದರ ಮತ್ತು ರಾಜ್ಯದ ನಿರುದ್ಯೋಗಿಗಳ ಮತ್ತು ಸುಪ್ತ/ಅಗೋಚರ ನಿರುದ್ಯೋಗಿಗಳ ಕುರಿತಾದ ನಿಖರ ಮಾಹಿತಿಯನ್ನು ಮುಂದಿನ ಸೆಪ್ಟಂಬರ್‌2023ರ ಒಳಗೆ ಪಡೆಯಬೇಕು. 2011-12ರಲ್ಲಿ ರಾಜ್ಯದಲ್ಲಿದ್ದ ಬಡವರ ಪ್ರಮಾಣ ಸುಮಾರು ಶೇ. 21ರಷ್ಟಿತ್ತು; ಆ ಮೇಲಿನ ಐದು ವರ್ಷಗಳಲ್ಲಿ ಪರಿಸ್ಥಿತಿ ಸುಧಾರಿಸಿದರೂ 2016ರಿಂದ ಬಡತನ ಹೆಚ್ಚಿದೆ. ಸುಮಾರಾಗಿ ರಾಜ್ಯದ ಐದು ಮಂದಿಯಲ್ಲಿ ಒಬ್ಬರು ಬಡತನದಿಂದ ಬವಣೆ ಗೀಡಾಗಿದ್ದಾರೆ. ರಾಜ್ಯದ ಹೊಸ ಆರ್ಥಿಕ ನೀತಿಯು ನಿರುದ್ಯೋಗವನ್ನು ಪರಿಹರಿಸುವ ಮತ್ತು ಆ ಮೂಲಕ ಬಡತನವನ್ನು 2033ಕ್ಕೆ ಸಂಪೂರ್ಣವಾಗಿ ಹೋಗಲಾಡಿಸುವ ಗುರಿಯನ್ನು ಹೊಂದಿರಬೇಕು.

2. ಎರಡನೆಯ ಹೆಜ್ಜೆ: ಇತ್ತೀಚೆಗಿನ ಕೆಲವು ಘೋಷಣೆಗಳು ಮೂಲ ಸೌಕರ್ಯಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿವೆ-ಹೊಸ ವಿಮಾನ ನಿಲ್ದಾಣಗಳು, ಕೈಗಾರಿಕಾ ಕೇಂದ್ರಗಳು, ಚತುಷ್ಪಥ/ಷಟ್ಪಥ ರಸ್ತೆಗಳು ಪ್ರಗತಿಗೆ ಅಗತ್ಯ, ಆದರೆ ಮೂಲಸೌಕರ್ಯಗಳ ಬೆಳವಣಿಗೆಯಿಂದ ರಾಜ್ಯದ ಎಲ್ಲ ಜನತೆಗೂ ಪ್ರಯೋಜನ ವಾಗಬೇಕು. ಉದ್ಯೋಗಕ್ಕಾಗಿ ಪ್ರಯಾಣಿಸುವವರಿಗೆ ದಕ್ಷವಾದ ರೈಲು ಮತ್ತು ಬಸ್ಸು ಸೌಕರ್ಯ, ಗ್ರಾಮೀಣ ಪ್ರದೇಶಗಳಲ್ಲಿ ಬೆಳೆದ ಕೃಷ್ಯುತ್ಪನ್ನಗಳನ್ನು ಮಾರುಕಟ್ಟೆಗಳಿಗೆ ಸುಲಭವಾಗಿ ಸಾಗಿಸಲು ವ್ಯವಸ್ಥೆ, ಹೊಸ ಕೈಗಾರಿಕಾ ಕೇಂದ್ರಗಳಲ್ಲಿ ವಸತಿ ಸಂಕೀರ್ಣಗಳು, ಕುಡಿಯುವ ನೀರಿನ ಅನುಕೂಲ, ಸಾರಿಗೆವ್ಯವಸ್ಥೆ, ಆಸ್ಪತ್ರೆ, ಶಾಲೆ ಮುಂತಾದ ಮೂಲ ಸೌಕರ್ಯಗಳ ಅಭಿವೃದ್ಧಿಯತ್ತ ಗಮನ ಹರಿಸಬೇಕು. 

3. ಮೂರನೆಯ ಹೆಜ್ಜೆ: ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಹೊಸ ಕೈಗಾರಿಕಾ ಪ್ರದೇಶಗಳನ್ನು ಗುರುತಿಸಿ ಆ ಪ್ರದೇಶಗಳಲ್ಲಿ ಹೊಸ ಉದ್ದಿಮೆಗಳ ಸ್ಥಾಪನೆಗೆ ಪ್ರೋತ್ಸಾಹ ನೀಡಬೇಕು. ಉದ್ಯೋಗಗಳನ್ನು ಸೃಷ್ಟಿಸಬಲ್ಲ ಹೊಸ ಉದ್ದಿಮೆಗಳನ್ನು ಸ್ಥಾಪಿಸಲು ಆಡಳಿತವನ್ನು ಎಲ್ಲ ಹಂತದಲ್ಲಿಯೂ ಉದ್ಯಮ ಸ್ನೇಹಿಯಾಗಿ ಮಾಡಬೇಕು. ಅಗತ್ಯದ ಪರವಾನಿಗೆ, ದಾಖಲೆಗಳು, ಪ್ರಮಾಣಪತ್ರ ಮುಂತಾದವುಗಳನ್ನು ಪೂರ್ವನಿರ್ಧಾರಿತ ಅವಧಿಯ ಒಳಗೆ ನವೋದ್ಯಮಿಗಳಿಗೆ ಲಭಿಸುವ ವಾತಾವರಣವು ಸೃಷ್ಟಿಯಾಗಬೇಕು. ‘ಉದ್ಯಮ ಸ್ನೇಹಿ ವಾತಾವರಣ’ವು ಘೋಷಣೆಯಿಂದ ಕಾರ್ಯರೂಪಕ್ಕೆ ಬರುವಂತೆ ಆಡಳಿತಾತ್ಮಕ ಸುಧಾರಣೆಗಳು ಆಗಬೇಕು.

4. ನಾಲ್ಕನೆಯ ಹೆಜ್ಜೆ: 2021ರಲ್ಲಿ ನೀತಿ ಆಯೋಗವು ಪ್ರಕಟಿಸಿದ ಬಹು ಆಯಾಮದ ಬಡತನದ ಸೂಚ್ಯಂಕದ (Multidimensional Poverty Index-MPI) ಪ್ರಕಾರ ರಾಜ್ಯದ ಆರ್ಥಿಕ ಪ್ರಗತಿಯಲ್ಲಿ ಭೌಗೋಳಿಕ ಅಸಮಾನತೆ ಇದೆ. ಬೆಂಗಳೂರು, ಮೈಸೂರು, ಮಂಡ್ಯ, ಕರಾವಳಿ ಜಿಲ್ಲೆಗಳಿಗಿಂತ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಜಿಲ್ಲೆಗಳು ಬಹಳ ಹಿಂದಿವೆ. ಈ ಪ್ರದೇಶದಲ್ಲಿ ಹೊಸ ಉದ್ದಿಮೆಗಳ ಬೆಳವಣಿಗೆಗೆ ಆದ್ಯತೆಯನ್ನು ನೀಡಬೇಕು. 

5. ಐದನೆಯ ಹೆಜ್ಜೆ: ವಿಶ್ವ ಸಂಸ್ಥೆ ಶಿಫಾರಸು ಮಾಡಿದ ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸಲು ಅಗತ್ಯವಾದ ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ಮಹಿಳೆಯರ ಸಬಲೀಕರಣ ಮುಂತಾದವುಗಳ ಗುರಿಗಳತ್ತ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಬೇಕು. ವೆಚ್ಚ ಮತ್ತು ಅನುದಾನಗಳ ಘೋಷಣೆಗಿಂತಲೂ ಮುಖ್ಯವಾಗಿ ಅವುಗಳ ಅನುಷ್ಠಾನದ ಕುರಿತು ತುರ್ತಾಗಿ ಗಮನ ಹರಿಸಬೇಕು.

ಎಲ್ಲಿಂದ ಆರಂಭಿಸಬೇಕು?
ನಿರುದ್ಯೋಗ ಸಮಸ್ಯೆಯ ಪರಿಹಾರದ ಮೊತ್ತಮೊದಲ ಕ್ರಮ ಅಂದರೆ ಸರಕಾರದ ಎಲ್ಲ ವಿಭಾಗಗಳಲ್ಲಿ, ಸರಕಾರಿ ಸಂಸ್ಥೆಗಳಲ್ಲಿ, ಸರಕಾರದ ಅನುದಾನ ಪಡೆಯುತ್ತಿರುವ ಸಂಸ್ಥೆಗಳಲ್ಲಿ ಇರುವ ಎಲ್ಲಾ ಖಾಲಿ ಹುದ್ದೆಗಳಿಗೆ ನೇಮಕಾತಿ ಮಾಡುವುದು ಮತ್ತು ಈಗಾಗಲೇ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಉದ್ಯೋಗಿಗಳ ನೇಮಕಾತಿಯನ್ನು ಖಾಯಂಗೊಳಿಸುವುದು.


ಪಾರದರ್ಶಕ ಆಡಳಿತೆ
ಯಾವುದೇ ಅರ್ಥನೀತಿಯ ಸಫಲತೆಗೆ ಆಡಳಿತವು ಪಾರದರ್ಶಕವಾಗಿರಬೇಕು. ಸಮಾಜದ ಭಾಗೀದಾರರು ಮತ್ತು ಸರಕಾರದ ನಡುವೆ ಮುಕ್ತ ಹಾಗೂ ನಿರಂತರ ವಿಚಾರವಿನಿಮಯ ನಡೆಯಬೇಕು. ಆ ಮೂಲಕ ಆಡಳಿತ ವ್ಯವಸ್ಥೆಯಲ್ಲಿರುವ ಸುಕ್ಕುಗಳನ್ನು ತ್ವರಿತವಾಗಿ ಪರಿಹರಿಸಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ತುರ್ತು ರಾಜ್ಯದ ಮುಂದಿದೆ.


ಇನ್ನೇನು ಕೆಲವೇ ದಿನಗಳಲ್ಲಿ ರಾಜ್ಯದ ವಿಧಾನ ಸಭಾ ಚುನಾವಣೆ ಘೋಷಣೆಯಾಗಲಿದೆ. ರಾಜ್ಯದ ಅಧಿಕಾರ ಸೂತ್ರವನ್ನು ಹಿಡಿಯಲು ಎಲ್ಲ ರಾಜಕೀಯ ಪಕ್ಷಗಳೂ ಸಜ್ಜಾಗಿವೆ. ಈ ನಿಟ್ಟಿನಲ್ಲಿ ರಾಜ್ಯದ ಸರ್ವ ಪಕ್ಷಗಳಿಗೆ ಮಾರ್ಗಸೂಚಿಯಾಗುವಂತೆ ಕರ್ನಾಟಕದ ಭವಿಷ್ಯದ ಸರ್ವತೋಮುಖ ಅಭಿವೃದ್ಧಿ ಹೇಗಿರಬೇಕೆಂಬ ‘ಜನ ಪ್ರಣಾಳಿಕೆ’ಯನ್ನು ರಾಜ್ಯದ ಹಲವು ಕ್ಷೇತ್ರಗಳಲ್ಲಿ ಪರಿಣಿತರಾದ ಚಿಂತಕರು ಸರಣಿ ರೂಪದಲ್ಲಿ ದಾಖಲಿಸಿದ್ದಾರೆ.

Similar News