ಮಾದಕ ದ್ರವ್ಯ ಮುಕ್ತ ಭಾರತ ನಿರ್ಮಾಣದ ಸಂಕಲ್ಪ: ಕೇಂದ್ರ ಗೃಹ ಸಚಿವ ಅಮಿತ್ ಶಾ

Update: 2023-03-24 11:59 GMT

ಬೆಂಗಳೂರು, ಮಾ.24: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರವು ಮಾದಕ ದ್ರವ್ಯ ಮುಕ್ತ ಭಾರತ ನಿರ್ಮಾಣ ಮಾಡಲು, ಮಾದಕ ದ್ರವ್ಯಗಳ ವಿರುದ್ಧ ಶೂನ್ಯ ಸಹಿಷ್ಣುತೆಯ ನೀತಿಯನ್ನು ಅನುಸರಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದರು.

ಶುಕ್ರವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ಆಯೋಜಿಸಲಾಗಿದ್ದ ಮಾದಕ ದ್ರವ್ಯಗಳ ಕಳ್ಳಸಾಗಣಿಕೆ ಹಾಗೂ ರಾಷ್ಟ್ರೀಯ ಭದ್ರತೆ ಕುರಿತ ದಕ್ಷಿಣ ರಾಜ್ಯಗಳ ಪ್ರಾದೇಶಿಕ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ 2022ರ ಜೂ.1ರಿಂದ ಆರಂಭಿಸಲಾದ 75 ದಿನಗಳ ಅಭಿಯಾನದಲ್ಲಿ 75 ಸಾವಿರ ಕೆಜಿ ಮಾದಕ ದ್ರವ್ಯವನ್ನು ನಾಶಗೊಳಿಸುವ ಗುರಿಯನ್ನು ನೀಡಲಾಗಿತ್ತು. ಆದರೆ, ಈವರೆಗೆ 8,409 ಕೋಟಿ ರೂ.ಮೌಲ್ಯದ ಒಟ್ಟು 5,9,620 ಕೆಜಿ ಮಾದಕ ದ್ರವ್ಯವನ್ನು ನಾಶಗೊಳಿಸಲಾಗಿದೆ. ಈ ಪೈಕಿ 3,138 ಕೋಟಿ ರೂ.ಮೌಲ್ಯದ 1,29,363 ಕೆಜಿ ಮಾದಕ ದ್ರವ್ಯವನ್ನು ಎನ್‍ಸಿಬಿ(ನಾರ್ಕೋಟಿಕ್ಸ್ ನಿಯಂತ್ರಣ ವಿಭಾಗ) ವತಿಯಿಂದಲೆ ನಾಶಗೊಳಿಸಲಾಗಿದೆ ಎಂದು ಅವರು ಹೇಳಿದರು. 

ಪ್ರಧಾನಮಂತ್ರಿಯ ನಿರ್ದೇಶನದಂತೆ ಗೃಹ ಸಚಿವಾಲಯವು ಮಾದಕ ದ್ರವ್ಯ ವಿರುದ್ಧದ ಕಾರ್ಯಾಚರಣೆಗಾಗಿ ಮೂರು ಹಂತಗಳ ಸೂತ್ರವನ್ನು ಅನುಸರಿಸುತ್ತಿದೆ. ಮೊದಲನೆಯದಾಗಿ ಸಾಂಸ್ಥಿಕ ರಚನೆಗಳನ್ನು ಬಲಪಡಿಸುವುದು, ಮಾದಕ ದ್ರವ್ಯ ತಡೆಗಟ್ಟುವಿಕೆಯಲ್ಲಿ ತೊಡಗಿರುವ ಎಲ್ಲ ಏಜೆನ್ಸಿಗಳನ್ನು ಬಲಪಡಿಸುವುದು ಮತ್ತು ಸಮನ್ವಯಗೊಳಿಸುವುದು ಹಾಗೂ ಬೃಹತ್ ಮಟ್ಟದ ಜಾಗೃತಿ ಅಭಿಯಾನವನ್ನು ಪ್ರಾರಂಭಿಸುವುದಾಗಿದೆ ಎಂದು ಅವರು ಹೇಳಿದರು.

ಮಾದಕ ದ್ರವ್ಯಗಳ ಕಳ್ಳಸಾಗಣೆ ಕೇವಲ ಕೇಂದ್ರ ಅಥವಾ ಯಾವುದೊ ಒಂದು ರಾಜ್ಯದ ಸಮಸ್ಯೆಯಲ್ಲ, ಇದು ರಾಷ್ಟ್ರೀಯ ಸಮಸ್ಯೆಯಾಗಿದೆ. ಇದನ್ನು ಎದುರಿಸಲು ರಾಷ್ಟ್ರಮಟ್ಟದಲ್ಲಿ ಏಕೀಕೃತವಾಗಿ ಆಗಬೇಕಿದೆ. ಮಾದಕ ವಸ್ತುಗಳ ವಿರುದ್ಧದ ಹೋರಾಟ ಕೇವಲ ಒಂದು ಸರಕಾರದ ಹೋರಾಟವಲ್ಲ, ಇದು ಪ್ರತಿಯೊಬ್ಬರ ಹೋರಾಟವಾಗಬೇಕಿದೆ ಎಂದು ಅಮಿತ್ ಶಾ ತಿಳಿಸಿದರು.

ಮಾದಕ ದ್ರವ್ಯಗಳ ಕಳ್ಳಸಾಗಣೆ ತಡೆಗಟ್ಟಲು ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ‘ಎನ್‍ಸಿಒಆರ್‍ಡಿ(ರಾಷ್ಟ್ರೀಯ ನಾರ್ಕೋಟಿಕ್ಸ್ ಕೋ ಆರ್ಡಿನೇಷನ್ ಪೋರ್ಟಲ್)’ಯ ಸಭೆಗಳನ್ನು ಆಯೋಜಿಸಬೇಕಿದೆ. ಇಲ್ಲದಿದ್ದರೆ, ಮಾದಕ ದ್ರವ್ಯಗಳ ವಿರುದ್ಧದ ಹೋರಾಟವನ್ನು ಜನಾಂದೋಲನವಾಗಿ ಪರಿವರ್ತಿಸಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಮಾದಕ ದ್ರವ್ಯಗಳ ಸರಬರಾಜಿನ ಜಾಲವನ್ನು ನಾಶಗೊಳಿಸಲು, ಪ್ರತಿಯೊಂದು ಪ್ರಕರಣವನ್ನು ಸೂಕ್ಷ್ಮವಾಗಿ ಅವಲೋಕಿಸಬೇಕು. 2006-13ರ ನಡುವೆ ಒಟ್ಟು 1257 ಪ್ರಕರಣಗಳು ಈ ಸಂಬಂಧ  ದಾಖಲಾಗಿದ್ದವು. 2014-22ರ ನಡುವೆ ಇದು ಶೇ.152ರಷ್ಟು ಹೆಚ್ಚಳವಾಗಿ 3172 ಪಕ್ರರಣಗಳಾದವು. ಬಂಧಿತರ ಸಂಖ್ಯೆಯು 4888(ಶೇ.260ರಷ್ಟು ಹೆಚ್ಚು) ಆಗಿದೆ ಎಂದು ಅಮಿತ್ ಶಾ ತಿಳಿಸಿದರು. 

2006-13ರ ಅವಧಿಯಲ್ಲಿ 1.52 ಲಕ್ಷ ಕೆಜಿ ಮಾದಕ ದ್ರವ್ಯಗಳನ್ನು ವಶಕ್ಕೆ ಪಡೆಯಲಾಗಿತ್ತು. 2014-22ರ ಅವಧಿಯಲ್ಲಿ 3.30 ಲಕ್ಷ ಕೆಜಿ ಮಾದಕ ದ್ರವ್ಯಗಳನ್ನು ವಶಕ್ಕೆ ಪಡೆಯಲಾಗಿದೆ. 2006-13ರ ನಡುವೆ 768 ಕೋಟಿ ರೂ.ಮೌಲ್ಯದ ಮಾದಕ ದ್ರವ್ಯಗಳನ್ನು ವಶಕ್ಕೆ ಪಡೆದಿದ್ದರೆ, 2014-22ರ ಅವಧಿಯಲ್ಲಿ 20 ಸಾವಿರ ಕೋಟಿ ರೂ.ಮೌಲ್ಯದ ಮಾದಕ ದ್ರವ್ಯಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ದೇಶದಿಂದ ಮಾದಕ ದ್ರವ್ಯಗಳನ್ನು ಸಂಪೂರ್ಣ ನಿರ್ನಾಮ ಮಾಡಲು ನರೇಂದ್ರ ಮೋದಿ ಸರಕಾರವು ನಾಲ್ಕು ಪ್ರಮುಖ ಅಂಶಗಳನ್ನು ಒಳಗೊಂಡ ಅಭಿಯಾನವನ್ನು ಆರಂಭಿಸಿದೆ. ಮಾದಕ ದ್ರವ್ಯಗಳನ್ನು ಪತ್ತೆ ಹಚ್ಚುವುದು, ಇದರ ಸಂಪರ್ಕ ಜಾಲವನ್ನು ನಾಶ ಮಾಡುವುದು, ಆರೋಪಿಗಳನ್ನು ಬಂಧಿಸುವುದು ಹಾಗೂ ಮಾದಕ ವ್ಯಸನಿಗಳಿಗೆ ಪುನರ್ವಸತಿ ಕಲ್ಪಿಸುವುದು ಎಂದು ಅವರು ಹೇಳಿದರು.

ಎಲ್ಲ ರಾಜ್ಯಗಳು ಮಾದಕ ವಸ್ತುಗಳ ಕಳ್ಳಸಾಗಣೆ ವಿರುದ್ಧ ಪರಿಣಾಮಕಾರಿ ಕಾರ್ಯಾಚರಣೆ ಮಾಡಲು ‘ಎನ್‍ಸಿಒಆರ್‍ಡಿ’ ಪೋರ್ಟಲ್ ಹಾಗೂ ‘ನಿಧಾನ್’ ವೇದಿಕೆಯನ್ನು ಸಮಪರ್ಕವಾಗಿ ಬಳಸಿಕೊಳ್ಳಬೇಕು. ಕರಾವಳಿ ಪ್ರದೇಶ ಹಾಗೂ ಸಮುದ್ರ ಮಾರ್ಗಗಳ ಮೇಲೂ ಹದ್ದಿನ ಕಣ್ಣು ಇಡಲಾಗುವುದು. ದಕ್ಷಿಣ ಭಾರತದ ಸಮುದ್ರ ಮಾರ್ಗದಲ್ಲಿ ಹೆಚ್ಚಿನ ಬಿಗಿ ಬಂದೋಬಸ್ತ್ ಏರ್ಪಡಿಸಲಾಗುವುದು ಎಂದು ಅಮಿತ್ ಶಾ ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಮಾದಕ ವಸ್ತುಗಳ ನಿಯಂತ್ರಣಕ್ಕೆ ಸಮಾಜದ ಸಹಕಾರ ಮುಖ್ಯ. ಅಮಿತ್ ಶಾ ಮಾರ್ಗದರ್ಶನದಲ್ಲಿ ಅಪರಾಧವನ್ನು ನಿಯಂತ್ರಿಸುವ ಕೆಲಸವಾಗುತ್ತಿದೆ ಎಂದರು.

ಮೊದಲು ಪ್ರತಿ ವರ್ಷ ಸಾವಿರ ಪ್ರಕರಣಗಳು ದಾಖಲಾಗುತ್ತಿದ್ದವು. ಆದರೆ ಈಗ ಪ್ರತಿ ವರ್ಷ ಐದು ಸಾವಿರ ಪ್ರಕರಣಗಳು ದಾಖಲಾಗುತ್ತಿವೆ. ಹೆಚ್ಚಿನ ಸಂಖ್ಯೆಯಲ್ಲಿ ಹೆಚ್ಚಿನ ಜನರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿರುವುದಲ್ಲದೆ ಬಹಳ ಪ್ರಕರಣಗಳಲ್ಲಿ ಶಿಕ್ಷೆಗೂ  ಒಳಪಡಿಸಿದ್ದೇವೆ ಎಂದು ಅವರು ಹೇಳಿದರು.

ಬೆಂಗಳೂರು ಅಂತರ್‍ರಾಷ್ಟ್ರೀಯ ನಗರ ಕೇವಲ 60 ಕಿ.ಮಿ. ಅಂತರದಲ್ಲಿ ತಮಿಳುನಾಡು ಗಡಿ ಇದೆ. ಹಾಗಾಗಿ ಮಾದಕ ವಸ್ತು ವಿಚಾರದಲ್ಲಿ ಎರಡೂ ರಾಜ್ಯಗಳ  ನಡುವೆ ಸಹಕಾರ ಅತ್ಯಂತ ಮುಖ್ಯ. ಎನ್‍ಡಿಪಿಎಸ್ ಕಾಯ್ದೆಯನ್ನು ಸರಳೀಕರಣಗೊಳಿಸಿ ಹೆಚ್ಚಿನ ಪ್ರಕರಣ ದಾಖಲಿಸಲು ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಮುಖ್ಯಮಂತ್ರಿ ತಿಳಿಸಿದರು.

Similar News