ಬೆಂಗಳೂರು ಮೆಟ್ರೋ ರೈಲು ನಿಗಮದ ವಿವಿಧ 236 ಹುದ್ದೆಗಳಿಗೆ ಅರ್ಜಿ ಆಹ್ವಾನ

Update: 2023-03-24 12:33 GMT

ಬೆಂಗಳೂರು, ಮಾ.24: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. 

ನಿಗಮದಲ್ಲಿ ಸೆಕ್ಷನ್ ಇಂಜಿನಿಯರ್, ಮೇಂಟೇನರ್ ಮತ್ತು ಸ್ಟೇಷನ್ ಕಂಟ್ರೋಲರ್, ಟ್ರೈನ್ ಆಪರೇಟರ್ ಸೇರಿದಂತೆ ಒಟ್ಟು 236 ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಆಸಕ್ತಿ ಹೊಂದಿರುವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಇವುಗಳಲ್ಲಿ 29 ಹುದ್ದೆಗಳು ಕಲ್ಯಾಣ ಕರ್ನಾಟಕ ಅಭ್ಯರ್ಥಿಗಳಿಗಾಗಿ ಮೀಸಲಿರಿಸಲಾಗಿದೆ.

ಇನ್ನು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಬಿಇ, ಬಿ.ಟೆಕ್‍ನಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವಿ, ಐಟಿಐ ಮತ್ತು ಡಿಪ್ಲೊಮಾ ಪದವಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಕನಿಷ್ಟ 18 ವರ್ಷದಿಂದ ಗರಿಷ್ಠ 35 ವರ್ಷ ವಯೋಮಿತಿಯನ್ನು ನಿಗದಿಗೊಳಿಸಲಾಗಿದೆ. 

ಪ್ರವರ್ಗ-2, 3, 2ಬಿ, 3ಎ ಮತ್ತು 3ಬಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಪ.ಜಾ, ಪ.ಪಂ ಮತ್ತು ಪ್ರವರ್ಗ 1 ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆಗೊಳಿಸಲಾಗಿದೆ.

ಆಸಕ್ತರು ಬಿಎಂಆರ್‍ಸಿಎಲ್‍ನಲ್ಲಿ ಪ್ರಕಟವಾಗಿರುವ ಅಧಿಕೃತ ಅರ್ಜಿಯಲ್ಲಿ ಆನ್‍ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕಾಗಿದ್ದು, ನಿಬಂಧನೆಗಳನ್ನು ಸರಿಯಾಗಿ ಪರಿಶೀಲಿಸಿ ಸಾಮಾನ್ಯ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ 1,180, ಪ.ಜಾ, ಪ.ಪಂ ಅಭ್ಯರ್ಥಿಗಳಿಗೆ 590 ರೂ. ಅರ್ಜಿ ಶುಲ್ಕವನ್ನು ಆನ್‍ಲೈನ್ ಮತ್ತು ಚಲನ್ ಮೂಲಕ ಪಾವತಿಸಬಹುದಾಗಿದೆ. ಲಿಖಿತ ಪರೀಕ್ಷೆಯ ಬಳಿಕ ಮೆರಿಟ್ ಆಧಾರದ ಮೇಲೆ ಸಂದರ್ಶನ ಸಹ ನಡೆಸಲಾಗುತ್ತದೆ ಎಂದು ನಿಗಮ ತಿಳಿಸಿದೆ.

ಮಾ.24ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಏಪ್ರಿಲ್ 24ರವರೆಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅರ್ಜಿ ಶುಲ್ಕ ಪಾವತಿಕ್ಕೆ ಏಪ್ರಿಲ್ 27 ಕೊನೆಯ ದಿನವಾಗಿದೆ ಎಂದು ನಿಗಮ ಪ್ರಕಟನೆಯಲ್ಲಿ ತಿಳಿಸಿದೆ.

Similar News