ಮಂಗಳೂರು: ಮುಂದುವರಿದ ಹೊರಗುತ್ತಿಗೆ ನೌಕರರ ಪ್ರತಿಭಟನೆ; ವಿಲೇವಾರಿಯಾಗದ ತ್ಯಾಜ್ಯ

Update: 2023-03-24 14:57 GMT

ಮಂಗಳೂರು: ನಗರ ಸ್ಥಳೀಯಾಡಳಿತ ಸಂಸ್ಥೆಗಳ ಹೊರಗುತ್ತಿಗೆ ನೌಕರರ ವೇತನವನ್ನು ನೇರವಾಗಿ ಪಾವತಿ ಮಾಡಬೇಕು ಮತ್ತು ಹಂತ ಹಂತವಾಗಿ ಹುದ್ದೆಯನ್ನು ಖಾಯಂಗೊಳಿಸಬೇಕು ಹಾಗೂ ಸಮಾನ ವೇತನವನ್ನು ಪಾವತಿಸಬೇಕು ಎಂದು ಆಗ್ರಹಿಸಿ ಕಳೆದ 12 ದಿನದಿಂದ ನಡೆಯುವ ಹೊರಗುತ್ತಿಗೆ ನೌಕರರ ಮುಷ್ಕರವು ತಾರಕಕ್ಕೇರಿದೆ.

ಈ ಮುಷ್ಕರದಿಂದ ‘ಒಳಚರಂಡಿ’ಯು ಅವ್ಯವಸ್ಥೆಯ ಆಗರವಾಗಿದೆ. ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿಯಾಗದ ಕಾರಣ ‘ಮಂಗಳೂರು’ ಭಾಗಶಃ ದುರ್ನಾತಮಯವಾಗಿದೆ. ದ.ಕ.ಜಿಲ್ಲಾಡಳಿತ, ಮಂಗಳೂರು ಮಹಾನಗರ ಪಾಲಿಕೆ, ಶಾಸಕರು, ಸಂಸದರ ವಿರುದ್ಧ ಪೌರ ಕಾರ್ಮಿಕರು ಮತ್ತು ಹೊರಗುತ್ತಿಗೆ ನೌಕರರು ಮಾತ್ರವಲ್ಲ ಜನಸಾಮಾನ್ಯರು ಕೂಡ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಚುನಾವಣೆಯ ಸಮಯದಲ್ಲೇ ಜನಸಾಮಾನ್ಯರ ಸ್ಪಂದನಕ್ಕೆ ಕಿವಿಗೊಡದ ರಾಜಕಾರಣಿಗಳು ಚುನಾವಣೆಯ ಬಳಿಕ ಏನು ಮಾಡಿಯಾರು ಎಂದು ಪ್ರಶ್ನಿಸತೊಡಗಿದ್ದಾರೆ.

ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಾ.12ರಿಂದ ಬೆಂಗಳೂರಿನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಪೂರಕವಾಗಿ ನಗರದ ಕುದ್ರೋಳಿ ಅಳಕೆಯ ಮಾರುಕಟ್ಟೆಯ ಬಳಿಯೂ ಹೊರಗುತ್ತಿಗೆ ನೌಕರರು ಮತ್ತು ಪೌರಕಾರ್ಮಿಕರು ಪ್ರತಿಭಟನೆ  ಮುಂದುವರಿಸಿದ್ದಾರೆ.

ಇದರಿಂದ ನಗರದಲ್ಲಿ ತ್ಯಾಜ್ಯ ವಿಲೇವಾರಿ ಮತ್ತು ಒಳಚರಂಡಿ ವ್ಯವಸ್ಥೆಯು ಸಮಸ್ಯೆಯಾಗಿ ಕಾಡಿದೆ. ಶಾಸಕ ವೇದವ್ಯಾಸ ಕಾಮತ್ ಮತ್ತು ಮೇಯರ್ ಜಯಾನಂದ ಅಂಚನ್ ಕೆಲವು ದಿನದಿಂದ ಒಳಚರಂಡಿ ಕಾರ್ಮಿಕರನ್ನು ಮನವೊಲಿಸುವ ಪ್ರಯತ್ನ ನಡೆಸಿದ್ದರೂ ಪ್ರಯೋಜನವಾಗಲಿಲ್ಲ.

ಹಾಗಾಗಿ ನಗರದಲ್ಲಿ ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ನಡೆದಿಲ್ಲ. ಇದರಿಂದ ಮನೆ, ವಸತಿ ಸಮುಚ್ಚಯ, ಅಂಗಡಿಗಳ ಮುಂದೆ, ರಸ್ತೆ ಪಕ್ಕದ ಇಕ್ಕಡೆಗಳಲ್ಲಿ ಕಸದ ರಾಶಿ ಕಂಡು ಬಂದಿದೆ. ಬಹುತೇಕ ರಸ್ತೆ, ಓಣಿಗಳಲ್ಲಿ ರಾಶಿ ಬಿದ್ದ ಕಸ ಕೊಳೆತು ನಾರುತ್ತಿದೆ. ಕೆಲವು ಪ್ರಾಣಿಗಳಿಗೆ ಆಹಾರವಾಗುತ್ತಿದ್ದು, ನಗರದ ದುರ್ನಾತಮಯವಾಗಿದೆ. ಕಸದ ರಾಶಿಯ ಸುತ್ತ ಮುತ್ತ ಸೊಳ್ಳೆಗಳ ಹಾವಳಿಯಿದ್ದು, ಸಾಂಕ್ರಾಮಿಕ ರೋಗದ ಭೀತಿಯೂ ಉಂಟಾಗಿವೆ.

ಕೆಲವು ಮನೆಯವರು, ವಸತಿ ಸಮುಚ್ಚಯ, ಅಂಗಡಿಯವರು ಸ್ಥಳೀಯ ಕಾರ್ಪೊರೇಟರ್-ಮೇಯರ್-ಶಾಸಕ ರಿಗೋ ಕರೆ ಮಾಡಿಕೊಂಡು ತ್ಯಾಜ್ಯವನ್ನು ವಿಲೇವಾರಿ ಮಾಡಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಕೆಲವು ಕಡೆ ಕಸದ ರಾಶಿ ಹಾಗೇ ಇದೆ. ಒಳರಸ್ತೆಯಲ್ಲಂತೂ ಪರಿಸ್ಥಿತಿ ಬಿಗಡಾಯಿಸಿದೆ. ಹಸಿ ತ್ಯಾಜ್ಯದಿಂದಂತೂ ನಗರವು ದುರ್ನಾತಮಯವಾಗಿದೆ. ಹಸಿ ಮತ್ತು ಒಣಕಸಿ ವಿಲೇವಾರಿ ಪ್ರಕ್ರಿಯೆಯು ಪ್ರತ್ಯೇಕ ದಿನಗಳಲ್ಲಿ ನಡೆಯುತ್ತಿದ್ದು, ಮುಷ್ಕರದಿಂದಾಗಿ ಈಗ ಆ ಪ್ರಕ್ರಿಯೆಯೂ ಸ್ಥಗಿತವಾಗಿದೆ.

ಖಾಯಂ ಪೌರ ಕಾರ್ಮಿಕರು ಎಂದಿನಂತೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ದಿನದಿಂದ ದಿನಕ್ಕೆ ತ್ಯಾಜ್ಯದ ರಾಶಿ ಹೆಚ್ಚುತ್ತಿದೆ. ಹಾಗಾಗಿ ಶಾಸಕರು, ಜನಪ್ರತಿನಿಧಿಗಳು ಅನನುಭವಿ ನೌಕರರಿಂದ ತ್ಯಾಜ್ಯ ವಿಲೇವಾರಿ ಮಾಡಿಸಲು ಪ್ರಯತ್ನಿಸಿದ್ದಾರೆ. ಈ ಪೈಕಿ ಬಹುತೇಕ ನೌಕರರು ಒಂದೆರೆಡು ದಿನದಲ್ಲೇ ತ್ಯಾಜ್ಯ ವಿಲೇವಾರಿ ಮಾಡಲು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ. ಇದು ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ.

ಮೇಲಿಂದ ಮೇಲೆ ಮನವಿ, ಪ್ರತಿಭಟನೆ, ಧರಣಿ, ಮುಷ್ಕರ ನಡೆದಿದೆ. ಚುನಾವಣಾ ಬಹಿಷ್ಕಾರ ಮಾಡುವೆವು ಎಂಬ ಎಚ್ಚರಿಕೆ ಬ್ಯಾನರನ್ನೂ ಕೂಡ ಅಲ್ಲಲ್ಲಿ ಅಳವಡಿಸಲಾಗಿದೆ. ಈ ಮಧ್ಯೆ ಕಾಂಗ್ರೆಸ್, ಎಡ ಸಂಘಟನೆಗಳಲ್ಲದೆ, ಸಾಮಾಜಿಕ ಕಾರ್ಯಕರ್ತರು ಕೂಡ ಮನಪಾ ಮುಂದೆ ಪ್ರತಿಭಟನೆ ನಡೆಸಿದೆ. ಆದರೆ ಸಕಾಲಕ್ಕೆ ಸ್ಪಂದನ ಸಿಕ್ಕಿಲ್ಲ ಎಂಬ ಆರೋಪ ಕೇಳಿಬಂದಿವೆ.

"ಹೊರಗುತ್ತಿಗೆ ನೌಕರರ ಪ್ರತಿಭಟನೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.  ಹಾಗಾಗಿ ಪ್ರತಿಭಟನೆ ನಿರತ ನೌಕರರ ಮನವೊಲಿಸಲು ಪ್ರಯತ್ನ ಮುಂದುವರಿದಿದೆ. ರಾಜ್ಯಾದ್ಯಂತ ಈ ಸಮಸ್ಯೆ ಇರುವುದರಿಂದ ಸರಕಾರವೇ ಅವರ ಬೇಡಿಕೆಗಳನ್ನು ಈಡೇರಿಸಲು ಸೂಕ್ತ ನಿರ್ಧಾರ ಕೈಗೊಳ್ಳಬೇಕಿದೆ".

- ಜಯಾನಂದ ಅಂಚನ್ ಮೇಯರ್, ಮಂಗಳೂರು ಮಹಾ ನಗರ ಪಾಲಿಕೆ

"ಹೊರಗುತ್ತಿಗೆ ನೌಕರರು ದಿಢೀರ್ ಮುಷ್ಕರ ಹೂಡಿದ್ದಲ್ಲ. ಮೂರು ಬೇಡಿಕೆಗಳನ್ನು ಈಡೇರಿಸುವಂತೆ ವಾರದ ಹಿಂದೆಯೇ ಮನವಿ ಮಾಡಿದ್ದರು. ಇಲ್ಲದಿದ್ದರೆ ಯಾವುದೇ ಕೆಲಸ ಮಾಡುವುದಿಲ್ಲ ಎಂದು ಎಚ್ಚರಿಸಿದ್ದರು. ಆದರೆ, ಮನಪಾ ಆಡಳಿತ, ಶಾಸಕರು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಅವರ ಬೇಡಿಕೆಗೆ ಸ್ಪಂದಿಸುವುದರ ಜೊತೆಗೆ ಮುಷ್ಕರದಿಂದಾಗುವ ಸಮಸ್ಯೆಯ ಬಗ್ಗೆ ಯೋಚಿಸಬೇಕಿತ್ತು. ನಾವಂತೂ ಇದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಪೂರ್ಣ ಪ್ರಮಾಣದಲ್ಲಿ ತ್ಯಾಜ್ಯ ವಿಲೇವಾರಿಯಾಗದಿದ್ದರೆ ಹೋರಾಟಕ್ಕೆ ಸಿದ್ಧರಿದ್ದೇವೆ".
-ನವೀನ್ ಡಿಸೋಜ
ವಿಪಕ್ಷ ನಾಯಕರು, ಮಂಗಳೂರು ಮಹಾನಗರ ಪಾಲಿಕೆ

"ಒಳಚರಂಡಿ ನೌಕರರು, ಎಸ್‌ಟಿಪಿ ಆಪರೇಟರ್‌ಗಳು, ಪೌರ ಕಾರ್ಮಿಕರು, ಹೊರಗುತ್ತಿಗೆ ನೌಕರರ ಬೇಡಿಕೆಯನ್ನು ಈಡೇರಿಸುವುದಾಗಿ ಶಾಸಕರು ಎಂದಿನಂತೆ ಭರವಸೆಯನ್ನಷ್ಟೇ ನೀಡುತ್ತಿದ್ದಾರೆ. ಆದರೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಹಾಗಾಗಿ ಮುಷ್ಕರವು 12ನೆ ದಿನಕ್ಕೆ ಕಾಲಿಟ್ಟಿದೆ. ಹೊರಗುತ್ತಿಗೆಯ ಬದಲು ನೇರಪಾವತಿ ವ್ಯವಸ್ಥೆ ಯಾಕೆ ಮಾಡುತ್ತಿಲ್ಲ ಎಂದು ನಮಗೆ ಅರ್ಥವಾಗುವುದಿಲ್ಲ. ಮೈಮುರಿದು ದುಡಿಯುವುದು ನಾವು. ಅದರ ಲಾಭ ಪಡೆಯುವುದು ಗುತ್ತಿಗೆ ಕಂಪೆನಿಗಳು. ಇದು ಯಾವ ನ್ಯಾಯ? ತ್ಯಾಜ್ಯ ವಿಲೇವಾರಿಯ ಗುತ್ತಿಗೆಯನ್ನು ಯಾವುದೋ ಒಂದು ಕಂಪೆನಿ ವಹಿಸುತ್ತದೆ. ಬಳಿಕ ಆ ಕಂಪೆನಿಯು ಇತರ ಸಂಸ್ಥೆ ಅಥವಾ ವ್ಯಕ್ತಿಗೆ ಉಪಗುತ್ತಿಗೆಯನ್ನು ನೀಡುತ್ತದೆ. ಮೂರ್ನಾಲ್ಕು ಹಂತದ ಗುತ್ತಿಗೆ ಪ್ರಕ್ರಿಯೆ ದಾಟಿ ನಮಗೆ ವೇತನ ಪಾವತಿಯಾ ಗುತ್ತಿರುವುದು ಅವೈಜ್ಞಾನಿಕ ಕ್ರಮವಾಗಿದೆ".

-ನವೀನ್ ಅಧ್ಯಕ್ಷರು, ದ.ಕ.ಜಿಲ್ಲಾ ಸಫಾಯಿ ಕರ್ಮಚಾರಿ ಸಂಘ
 
"ನನಗೆ ತಿಳಿದ ಮಟ್ಟಿಗೆ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಯಾವತ್ತೂ ಕೂಡ ಇಂತಹ ಸಮಸ್ಯೆ ಉದ್ಭವಿಸಿರಲಿಲ್ಲ. ಪೌರ ಕಾರ್ಮಿಕರ ಪ್ರತಿಭಟನೆ, ಮುಷ್ಕರ ಒಂದೆರೆಡು ದಿನದವರೆಗೆ ನಡೆಯುತ್ತಿತ್ತು. ಬಳಿಕ ಸಹಜ ಸ್ಥಿತಿಗೆ ಮರಳುತ್ತಿತ್ತು. ಆದರೆ ಈ ಬಾರಿ ಪೌರ ಕಾರ್ಮಿಕರ ಬೇಡಿಕೆ ಈಡೇರಿಸಲು ಸರಕಾರ ಆಸಕ್ತಿ ವಹಿಸಿದಂತೆ ಕಾಣುತ್ತಿಲ್ಲ. ಅದರ ನೇರ ಪರಿಣಾಮವನ್ನು ನಾವು ಎದುರಿಸುತ್ತಿದ್ದೇವೆ. ಎರಡ್ಮೂರು ಕಸ ತೆಗೆಯಲು ಬಂದರೆ ನಾವು ಏನು ಮಾಡುವುದು? ಸಮಯಕ್ಕೆ ಸರಿಯಾಗಿ ಕಸವನ್ನು ಕೊಂಡು ಹೋಗದ ಕಾರಣ ಪರಿಸರದ ದುರ್ನಾತ ಬೀರುತ್ತಿವೆ".
- ನಳಿನಿ, ಮಂಗಳೂರು

Similar News