ಮುಸ್ಲಿಮರ 2ಬಿ ಮೀಸಲಾತಿ ರದ್ದತಿಯ ಹಿಂದೆ ರಾಜಕೀಯ ಷಡ್ಯಂತ್ರ : ಯು.ಟಿ.ಖಾದರ್ ಆರೋಪ

ಮಾ.25ರಂದು ಬೆಂಗಳೂರಿನಲ್ಲಿ ಮುಸ್ಲಿಂ ಮುಖಂಡರ ಸಭೆ

Update: 2023-03-24 16:25 GMT

ಮಂಗಳೂರು, ಮಾ.24: ಹಿಂದುಳಿದ ವರ್ಗಗಳ ಪ್ರವರ್ಗ 2ಬಿ ಅಡಿಯಲ್ಲಿ ಮುಸ್ಲಿಮರಿಗಿದ್ದ ಶೇ. 4 ಮೀಸಲಾತಿ ಯನ್ನು ರಾಜ್ಯ ಸರಕಾರ ರದ್ದುಪಡಿಸಿರುವುದರ ಹಿಂದೆ ರಾಜಕೀಯ ಷಡ್ಯಂತ್ರವಿದೆ ಎಂದು ರಾಜ್ಯ ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಆರೋಪಿಸಿದ್ದಾರೆ.

ಧಾರ್ಮಿಕ ಅಲ್ಪಸಂಖ್ಯಾತರಿಗೆ 2ಬಿ ಮೀಸಲಾತಿ ಇಲ್ಲ. ಅವರ ಮೀಸಲಾತಿಯನ್ನು ಇಡಬ್ಲ್ಯುಎಸ್‌ಗೆ ಶಿಫ್ಟ್ ಮಾಡಲು ನಿರ್ಧರಿಸಲಾಗಿದೆ. 2ಬಿ-ಯಡಿ ಒಕ್ಕಲಿಗರಿಗೆ ಶೇ.6ರಷ್ಟು ಹಾಗೂ ಲಿಂಗಾಯತರಿಗೆ ಶೇ.7ರಷ್ಟು ಮೀಸಲಾತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯ ಹೇಳಿಕೆಯ ಹಿಂದೆ ಚುನಾವಣಾ ಗಿಮಿಕ್ ಇದೆ. ಸಾಮಾಜಿಕ ನ್ಯಾಯವನ್ನು ಗಾಳಿಗೆ ತೂರಿರುವ ಈ ಪ್ರಕ್ರಿಯೆಯನ್ನು ಕಾನೂನು ಪ್ರಕಾರ ಅನುಷ್ಠಾನ ಗೊಳಿಸಲು ಸಾಧ್ಯವಿಲ್ಲ ಎಂದರು.

ಇದು ರಾಜ್ಯ ಸರಕಾರದ ಸಂವಿಧಾನ ವಿರೋಧಿ ನಡೆಯಾಗಿದೆ. ಚುನಾವಣೆಯ ಸಂದರ್ಭ ಅಲ್ಪಸಂಖ್ಯಾತ ಮುಸಲ್ಮಾನರ ಮೀಸಲಾತಿಯನ್ನು ಮುನ್ನಲೆಗೆ ತರಲಾಗಿದೆ. ಮುಂದಿನ ದಿನಗಳಲ್ಲಿ ದಲಿತರು, ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಕೂಡ ರದ್ದುಪಡಿಸುವ ಹುನ್ನಾರ ಅಡಗಿದೆ ಎಂದು ಯು.ಟಿ. ಖಾದರ್ ಹೇಳಿದರು.

ಮೀಸಲಾತಿಯ ಗೊಂದಲದಿಂದಾಗಿ ಸ್ಥಳೀಯಾಡಳಿತ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯು ಕಳೆದೊಂದು ವರ್ಷದಿಂದ ಬಾಕಿಯಾಗಿದೆ. ಇದೀಗ ಶಿಕ್ಷಣ, ಉದ್ಯೋಗದ ಮೀಸಲಾತಿ ಪ್ರಕ್ರಿಯೆಯಲ್ಲೂ ಗೊಂದಲ ಸೃಷ್ಟಿಸಿದೆ. ಶೇ.4ರಷ್ಟು ಮೀಸಲಾತಿಯನ್ನು ರದ್ದುಪಡಿಸಿ ಇಡಬ್ಲ್ಯುಎಸ್ ಮೂಲಕ ಮೇಲ್ವರ್ಗದವರ ಜೊತೆ ಸೇರಿಸಿದ್ದು ಸರಿಯಾದ ಕ್ರಮವಲ್ಲ. ಭ್ರಷ್ಟಾಚಾರವನ್ನು ಮರೆಮಾಚಲು ಉದ್ದೇಶಪೂರ್ವಕವಾಗಿ ರಾಜ್ಯ ಸರಕಾರ ಮುಸ್ಲಿಮರಿಗಿದ್ದ 2ಬಿ ಮೀಸಲಾತಿಯನ್ನು ರದ್ದುಪಡಿಸಿದೆ ಎಂದು ಯು.ಟಿ.ಖಾದರ್ ಆರೋಪಿಸಿದರು.

1994ರಲ್ಲಿ ಅಂದಿನ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಮುಸ್ಲಿಮರಿಗೆ 2ಬಿ ಮೀಸಲಾತಿಯ ಬಗ್ಗೆ ಅಧಿಸೂಚನೆ ಹೊರಡಿಸಿದ್ದರು. ಬಳಿಕ ಬಂದ ಜನತಾ ದಳ ಸರಕಾರ ಇದನ್ನು ಜಾರಿಗೊಳಿಸಿತು. ಇದೀಗ ಬಿಜೆಪಿ ಸರಕಾರ ಈ ಮೀಸಲಾತಿಯನ್ನು ರದ್ದುಪಡಿಸಿರುವುದು ಖಂಡನೀಯ. ಈ ನಿಟ್ಟಿನಲ್ಲಿ ಮುಂದಿನ ಹೋರಾಟದ ಬಗ್ಗೆ ಚರ್ಚಿಸಲು ಮಾಜಿ ರಾಜ್ಯಸಭಾ ಸದಸ್ಯ ರಹ್ಮಾನ್ ಖಾನ್ ನೇತೃತ್ವದಲ್ಲಿ ಮಾ.25ರಂದು ಸಂಜೆ ಬೆಂಗಳೂರಿನಲ್ಲಿ ಮುಸ್ಲಿಂ ಮುಖಂಡರ ಸಭೆಯನ್ನು ಕರೆಯಲಾಗಿದೆ ಎಂದು ಯು.ಟಿ. ಖಾದರ್ ತಿಳಿಸಿದರು.

Similar News