ಮಹಿಳೆಯರ ಹಕ್ಕುಗಳಿಗೆ ಬೆಲೆ ಸಿಗಲಿ

Update: 2023-03-25 07:18 GMT

►► ಸರಣಿ 2

ಇನ್ನೇನು ಕೆಲವೇ ದಿನಗಳಲ್ಲಿ ರಾಜ್ಯದ ವಿಧಾನ ಸಭಾ ಚುನಾವಣೆ ಘೋಷಣೆಯಾಗಲಿದೆ. ರಾಜ್ಯದ ಅಧಿಕಾರ ಸೂತ್ರವನ್ನು ಹಿಡಿಯಲು ಎಲ್ಲ ರಾಜಕೀಯ ಪಕ್ಷಗಳೂ ಸಜ್ಜಾಗಿವೆ. ಈ ನಿಟ್ಟಿನಲ್ಲಿ ರಾಜ್ಯದ ಸರ್ವ ಪಕ್ಷಗಳಿಗೆ ಮಾರ್ಗಸೂಚಿಯಾಗುವಂತೆ ಕರ್ನಾಟಕದ ಭವಿಷ್ಯದ ಸರ್ವತೋಮುಖ ಅಭಿವೃದ್ಧಿ ಹೇಗಿರಬೇಕೆಂಬ ‘ಜನ ಪ್ರಣಾಳಿಕೆ’ಯನ್ನು ರಾಜ್ಯದ ಹಲವು ಕ್ಷೇತ್ರಗಳಲ್ಲಿ ಪರಿಣಿತರಾದ ಚಿಂತಕರು ಸರಣಿ ರೂಪದಲ್ಲಿ ದಾಖಲಿಸಿದ್ದಾರೆ.  

ಮಹಿಳೆಯರು ಸಾಧಿಸಿದ ಪ್ರಗತಿಯನ್ನಾಧರಿಸಿ ನಾನು ಸಮುದಾಯದ ಪ್ರಗತಿಯನ್ನು ಅಳೆಯುತ್ತೇನೆ.

- ಬಾಬಾಸಾಹೇಬ್‌ಅಂಬೇಡ್ಕರ್

ಶ್ರೇಣೀಕೃತ ಸಮಾಜದಲ್ಲಿರುವ ಪಿತೃಪ್ರಭುತ್ವ, ಜಾತಿ ವ್ಯವಸ್ಥೆ ಮತ್ತು ಬಂಡವಾಳಶಾಹಿ ವ್ಯವಸ್ಥೆಯ ರಚನೆಗಳು ಮಹಿಳೆಯರ ಶೋಷಣೆಗೆ ಕಾರಣಗಳಾಗಿವೆ. ಪ್ರಭುತ್ವದ ನವ-ಉದಾರವಾದಿ ಅಜೆಂಡಾ ಮತ್ತು ಬ್ರಾಹ್ಮಣ್ಯವು ಮಹಿಳೆಯರನ್ನು ಮತ್ತಷ್ಟು ದಮನಿಸಲು ಪಿತೃಪ್ರಭುತ್ವವನ್ನು ಬಲಪಡಿಸುತ್ತಿದೆ. ಸಂವಿಧಾನ ಬಯಸಿರುವ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಸಮಾನತೆಯಲ್ಲಿ ಲಿಂಗ ಸಮಾನತೆಯನ್ನು ಸಾಧಿಸುವುದಕ್ಕಾಗಿ ಜಾತಿ, ಬ್ರಾಹ್ಮಣ್ಯ, ಬಂಡವಾಳಶಾಹಿ ಮತ್ತು ಪಿತೃಪ್ರಭುತ್ವದ ನಿರ್ಮೂಲನೆಯಾಗಲೇ ಬೇಕಾಗಿದೆ. ಈ ನಿಟ್ಟಿನಲ್ಲಿ ಲಿಂಗ ಸಮಾನತೆಯ ಗುರಿಯತ್ತ ಸಾಗಲು ಈ ಮಹಿಳಾ ಪ್ರಣಾಳಿಕೆ.  

ರಾಜಕೀಯ ಸಮಾನತೆಯಡೆಗೆ: 

ಮಹಿಳೆಯರ ರಾಜಕೀಯ ಪ್ರಾತಿನಿಧ್ಯದ ವಿಷಯದಲ್ಲಿ, ಭಾರತವು 193 ದೇಶಗಳಲ್ಲಿ 148ನೇ ಸ್ಥಾನದಲ್ಲಿದೆ, ಸಂಸತ್ತಿನಲ್ಲಿ ಕೇವಲ ಶೇ. 14 ಮಹಿಳೆಯರು ಮತ್ತು ಕರ್ನಾಟಕದಲ್ಲಿ ಶೇ. 4 ಮಹಿಳಾ ಶಾಸಕರು. ದಲಿತ ಮತ್ತು ತುಳಿತಕ್ಕೊಳಗಾದ ಇತರ ಸಮಾಜದ ಮಹಿಳೆಯರ ಪ್ರಾತಿನಿಧ್ಯವನ್ನು ಖಾತ್ರಿಪಡಿಸುವ ಅಗತ್ಯವನ್ನು ಪರಿಗಣಿಸಿ, ವಿಧಾನಸಭೆ ಮತ್ತು ಶಾಸಕಾಂಗದಲ್ಲಿ ಮಹಿಳೆಯರಿಗೆ ಶೇ. 33 ಸ್ಥಾನಗಳನ್ನು ಮೀಸಲಿಡಲು ಕಾನೂನು ರೂಪಿಸಬೇಕು.

ಕೇವಲ ರಾಜಕೀಯ ಪ್ರಾತಿನಿಧ್ಯವನ್ನು ಖಾತ್ರಿಪಡಿಸುವುದು ಮಾತ್ರವಲ್ಲದೆ ಅದರ ಪರಿಣಾಮಕಾರಿತ್ವವನ್ನು ಖಚಿತಪಡಿಸಿಕೊಳ್ಳ ಬೇಕಾಗಿದೆ. ಮಹಿಳೆಯರು ಚುನಾಯಿತರಾಗಿದ್ದರೂ, ಕುಟುಂಬದ ಪುರುಷ ಸದಸ್ಯರು ನಿಜವಾದ ಅಧಿಕಾರವನ್ನು ನಿಯಂತ್ರಿಸುವ ಅನೇಕ ನಿದರ್ಶನಗಳನ್ನು ನಾವು ನೋಡುತ್ತೇವೆ. ಹೀಗಾಗಿ ನಿರ್ಧಾರ ತೆಗೆದುಕೊಳ್ಳುವ ಸ್ಥಾನಗಳಲ್ಲಿ ಮಹಿಳೆಯರ ಮನೋಸ್ಥೈರ್ಯವನ್ನು ವೃದ್ಧಿಸುವ ಕಡೆ ಮತ್ತು ರಾಜಕೀಯದಲ್ಲಿ ಮಹಿಳೆಯರಿಗೆ ಸುರಕ್ಷಿತ ಮತ್ತು ಬೆಂಬಲ ವಾತಾವರಣವನ್ನು ಸೃಷ್ಟಿಸುವುದು ಅಗತ್ಯವಾಗಿದೆ. ರಾಜಕೀಯದಲ್ಲಿ ಪರಿಣಾಮಕಾರಿಯಾಗಿ ಭಾಗವಹಿಸಲು ಅಗತ್ಯವಾದ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಮಹಿಳೆಯರಿಗೆ ಶಿಕ್ಷಣ ಮತ್ತು ರಾಜಕೀಯ ತರಬೇತಿಯನ್ನು ಒದಗಿಸಬೇಕು. 


ಆರ್ಥಿಕ ಸಮಾನತೆಯಡೆಗೆ: 
ಮಹಿಳೆಯರ ಶ್ರಮವನ್ನು ಗುರುತಿಸುವುದು

ಲಿಂಗ ತಾರತಮ್ಯವು ಮಹಿಳಾ ಕಾರ್ಮಿಕರನ್ನು ಪೀಡಿಸುತ್ತಲೇ ಇದೆ, ಇದರ ಪರಿಣಾಮವಾಗಿ ಕಾರ್ಮಿಕರಲ್ಲಿ ಮಹಿಳೆಯರ ಸಂಖ್ಯೆ ಕಡಿಮೆಯಾಗಿದೆ. ಕಳೆದ ಎರಡು ದಶಕಗಳಲ್ಲಿ, ಭಾರತದ ಮಹಿಳಾ ಕಾರ್ಮಿಕರ ಸಂಖ್ಯೆಯ ಪ್ರಮಾಣವು 2005ರಲ್ಲಿ ಶೇ. 32ರಷ್ಟು ಮತ್ತು 2021ರಲ್ಲಿ ಶೇ. 19ರಷ್ಟು ಕಡಿಮೆಯಾಗಿದೆ. ವೇತನ ಮತ್ತು ಇತರ ಕೆಲಸದ ಪರಿಸ್ಥಿತಿಗಳಲ್ಲಿ ಮಹಿಳೆಯರ ವಿರುದ್ಧ ತಾರತಮ್ಯ ಮುಂದುವರಿಯುತ್ತಲೇ ಇದೆ, ಮಹಿಳೆಯರಿಗೆ ಪುರುಷರಿಗಿಂತ ಶೇ. 34 ಕಡಿಮೆ ವೇತನ ನೀಡಲಾಗುತ್ತಿದೆ. 

ಶೇ. 94ರಷ್ಟು ಮಹಿಳಾ ಕಾರ್ಮಿಕರು ಅಸಂಘಟಿತ ವಲಯದಲ್ಲಿ ದ್ದಾರೆ. ಪೌರಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಯೋಜನಾ ಕಾರ್ಯಕರ್ತೆಯರು, ಮನೆಗೆಲಸದವರು, ಗಾರ್ಮೆಂಟ್ ಕಾರ್ಮಿಕರು ಮತ್ತು ಕೃಷಿ ಕಾರ್ಮಿಕರು ಯಾವುದೇ ಉದ್ಯೋಗದ ಭದ್ರತೆಯಿಲ್ಲದೆ ಕೆಲಸ ನಿರ್ವಹಿಸುತ್ತಿದ್ದಾರೆ. ಇವರು ನಿರ್ವಹಿಸುವ ಕೆಲಸವು ನಿರಂತರ ಮತ್ತು ಪ್ರಮುಖ ಸ್ವರೂಪದ ಕೆಲಸಗಳಾಗಿದ್ದರೂ ಇವರಿಗೆ ಗುತ್ತಿಗೆ ಕಾರ್ಮಿಕರು, ದಿನಗೂಲಿ ನೌಕರರು, ಗೌರವಧನ ನೌಕರರು ಎಂದು ಕರೆಯುವ ಮೂಲಕ ಕಾರ್ಮಿಕರೆಂದು ಗುರುತಿಸುವುದನ್ನು ಸಹ ನಿರಾಕರಿಸಲಾಗಿದೆ. 

ಈ ಕಾರ್ಮಿಕರು ಮೂಲತಃ ದಲಿತ ಮತ್ತು ಸಮಾಜದ ಇತರ ತುಳಿತಕ್ಕೊಳಗಾದ ವರ್ಗಗಳಿಂದ ಬಂದವರಾಗಿದ್ದಾರೆ. ಇವರು ಲಿಂಗ ತಾರತಮ್ಯವಲ್ಲದೆ ಜಾತಿ-ಧರ್ಮ ಆಧಾರಿತ ದಬ್ಬಾಳಿಕೆಯನ್ನು ಎದುರಿಸುತ್ತಾರೆ. ಉದ್ಯೋಗದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ಮತ್ತು ತಾರತಮ್ಯವು ಅತಿರೇಕವಾಗಿದೆ, ಉದ್ಯೋಗ ಕಳೆದುಕೊಳ್ಳುವ ಭಯದಿಂದ ಮಹಿಳೆಯರು ತಮ್ಮ ಕುಂದುಕೊರತೆಗಳನ್ನು ಹೇಳಲು ಸಹ ಸಾಧ್ಯವಾಗುತ್ತಿಲ್ಲ. ಹೊಸ ಕಾರ್ಮಿಕ ಸಂಹಿತೆಗಳು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ, ಮಹಿಳಾ ಕಾರ್ಮಿಕರನ್ನು ಅಸಮಾನತೆ ಮತ್ತು ತಾರತಮ್ಯದ ಯುಗಕ್ಕೆ ತಳ್ಳುತ್ತದೆ.
ಮಹಿಳೆಯರ ಶ್ರಮದ ಮೌಲ್ಯವನ್ನು ಗುರುತಿಸಲು, ಈ ಕೆಳಗಿನ ಕ್ರಮಗಳನ್ನು ತೆಗೆದುಕೊಳ್ಳಬೇಕು:

1. ಗುತ್ತಿಗೆ, ಗೌರವಧನ ಇತ್ಯಾದಿ ಹೆಸರಿನಲ್ಲಿ ದುಡಿಸಿಕೊಳ್ಳುತ್ತಿರುವ ಮಹಿಳಾ ಕಾರ್ಮಿಕರಿಗೆ ತಕ್ಷಣವೇ ಸುರಕ್ಷಿತ, ಶಾಶ್ವತ ಮತ್ತು ಯೋಗ್ಯವಾದ ಕೆಲಸದ ಪರಿಸ್ಥಿತಿಗಳನ್ನು ಒದಗಿಸಬೇಕು.
2. ಗುಲಾಮಿಪದ್ಧತಿಯ ರೂಪದಲ್ಲಿರುವ ಗುತ್ತಿಗೆ ಕಾರ್ಮಿಕ ಪದ್ಧತಿ ಸಂಪೂರ್ಣವಾಗಿ ರದ್ದಾಗಬೇಕು.  
3. ಸಮಾನ ಕೆಲಸಕ್ಕೆ ಸಮಾನ ವೇತನ ಮತ್ತು ಸೇವಾ ಸೌಲಭ್ಯಗಳನ್ನು ಖಾತರಿಪಡಿಸಬೇಕು.
4. ಘನತೆಯಿಂದ ಜೀವನ ನಡೆಸುವ ವೇತನ ನೀಡಬೇಕು. ಸುರಕ್ಷಿತ ಮತ್ತು ಗೌರವಯುತವಾಗಿ ನಡೆಸಿಕೊಳ್ಳುವಂತಹ ಹಾಗೂ ಲೈಂಗಿಕ ಕಿರುಕುಳ ಸೇರಿದಂತೆ ಯಾವುದೇ ರೀತಿಯ ಕಿರುಕುಳವಿಲ್ಲದ ಕೆಲಸದ ವಾತಾವರಣವನ್ನು ಖಾತರಿಪಡಿಸಬೇಕು ಮತ್ತು ಈ ಸಂಬಂಧ ಅವಶ್ಯಕ ಕಾನೂನು ತಿದ್ದುಪಡಿಗಳನ್ನು ತರಬೇಕು. 
5. ಮನೆಗೆಲಸ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಲು ಮತ್ತು ಅವರಿಗೆ ನ್ಯಾಯಯುತ ವೇತನ ಮತ್ತು ಸಭ್ಯ ಕೆಲಸದ ಪರಿಸ್ಥಿತಿಗಳನ್ನು ಖಚಿತಪಡಿಸಿಕೊಳ್ಳಲು ಕಾನೂನನ್ನು ತರಬೇಕು.
6. ಯಾವುದೇ ರೂಪದ ಔದ್ಯೋಗಿಕ ತಾರತಮ್ಯ ಮತ್ತು ಕಿರುಕುಳವನ್ನು ತಕ್ಷಣವೇ ಬಗೆಹರಿಸುವ ವ್ಯವಸ್ಥೆಯನ್ನು ಜಾರಿಗೊಳಿಸಬೇಕು. 
7. ಹೊಸ ಕಾರ್ಮಿಕ ಸಂಹಿತೆಗಳನ್ನು ತಕ್ಷಣವೇ ರದ್ದುಗೊಳಿಸಬೇಕು.


ಮನೆಗಳಲ್ಲಿ ಮಹಿಳೆಯರ ಶ್ರಮವನ್ನು ಗುರುತಿಸುವುದು: 

ಮಹಿಳೆಯರು ತಮ್ಮ ಕುಟುಂಬಗಳ ನಿರ್ವಹಣೆಯಲ್ಲಿ ಹೆಚ್ಚಿನ ಹೊರೆಯನ್ನು ಹೊತ್ತಿದ್ದಾರೆ. ಹೆಂಗಸರು ಮನೆಯ ಹೊರಗಿನ ಕೆಲಸದಲ್ಲಿ ಪಾಲ್ಗೊಳ್ಳುತ್ತಿದ್ದಾಗಿಯೂ, ಮನೆ ಕೆಲಸದ ವಿಚಾರಕ್ಕೆ ಬಂದಾಗ ಆಯ್ಕೆ ಅಥವಾ ಸ್ವಾಯತ್ತತೆ ಅವರಿಗೆ ಇರುವುದಿಲ್ಲ. 

ಈ ಕೆಲಸವು ಮನೆಯ ಮತ್ತು ರಾಷ್ಟ್ರೀಯ ಬೆಳವಣಿಗೆಗೆ ಮಹತ್ತರವಾದ ಕೊಡುಗೆ ನೀಡುತ್ತದೆಯಾದರೂ, ಇದು ಅದೃಶ್ಯವಾಗಿದೆ ಮತ್ತು ಕೆಲಸವೆಂದು ಗುರುತಿಸಲಾಗಿಲ್ಲ. ಆರ್ಥಿಕತೆ ಮತ್ತು ಜಿಡಿಪಿಗೆ ಮನೆಕೆಲಸದ ಕೊಡುಗೆಯನ್ನು ಅರ್ಥಮಾಡಿಕೊಳ್ಳುವುದು ಮತ್ತು ಗುರುತಿಸುವುದು ಅಗತ್ಯವಾಗಿದೆ ಮತ್ತು ಮಹಿಳೆಯರ ಈ ಹೊರೆಯನ್ನು ನಿವಾರಿಸುವ ಜವಾಬ್ದಾರಿಯನ್ನು ಪ್ರಭುತ್ವವು ತೆಗೆದುಕೊಳ್ಳಬೇಕು ಹಾಗೂ ಘನತೆ ಮತ್ತು ಸ್ವಾಯತ್ತತೆಯ ಬದುಕನ್ನು ಪ್ರಭುತ್ವವು ಖಾತರಿಪಡಿಸಬೇಕು.

ಈ ನಿಟ್ಟಿನಲ್ಲಿ ತಂತ್ರಜ್ಞಾನವನ್ನು ಸುಧಾರಿಸುವುದು (ಉದಾ. ಅಡುಗೆಗೆ ಉತ್ತಮ ಇಂಧನ), ಉತ್ತಮ ಮೂಲಸೌಕರ್ಯ (ಉದಾಹರಣೆಗೆ ಮನೆ ಬಾಗಿಲಿಗೆ ನೀರು), ಮೂಲಭೂತ ಸೇವೆಗಳನ್ನು (ಉದಾಹರಣೆಗೆ ಆರೋಗ್ಯ ಮತ್ತು ಸಾರಿಗೆ) ಮಹಿಳೆಯರಿಗೆ ಸುಲಭವಾಗಿ ದೊರಕುವಂತೆ ಪ್ರಭುತ್ವ ಮಾಡಬೇಕು. ಜೊತೆಗೆ ಮಹಿಳೆಯರ ಮೇಲಿನ ಈ ಹೊರೆಯನ್ನು ಕಡಿಮೆ ಮಾಡಲು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಬೇಕು. 

ಮಹಿಳೆಯರ ಆಸ್ತಿಯ ಹಕ್ಕು
ಭಾರತದಲ್ಲಿ ಪುರುಷರಿಗೆ ಹೋಲಿಸಿದರೆ, ಕೇವಲ ಶೇ. 13.9 ಮಹಿಳೆಯರು ಮಾತ್ರ ಭೂಮಿಯನ್ನು ಹೊಂದಿದ್ದಾರೆ ಮತ್ತು ಮಹಿಳೆಯರು ದೇಶದ ಒಟ್ಟು ಕೃಷಿ ಭೂಮಿಯಲ್ಲಿ ಶೇ. 9.8 ಮಾತ್ರ ಹೊಂದಿದ್ದಾರೆ. ಆಸ್ತಿ ಹಕ್ಕುಗಳಲ್ಲಿ ಲಿಂಗ ಸಮಾನತೆಯನ್ನು ಖಚಿತಪಡಿಸಿಕೊಳ್ಳಲು ಕಾನೂನು ಸುಧಾರಣೆಗಳು ಇದ್ದರೂ, ಆಳವಾಗಿ ಬೇರೂರಿರುವ ಸಾಂಸ್ಕೃತಿಕ ರೂಢಿಗಳು ಮತ್ತು ಪಿತೃಪ್ರಭುತ್ವದ ಧೋರಣೆಗಳಿಂದಾಗಿ ಆಸ್ತಿಯಲ್ಲಿ ಸಮಾನ ಹಕ್ಕು ಸಿಗುತ್ತಿಲ್ಲ. ಲಿಂಗ ಸಮಾನತೆಯನ್ನು ಖಚಿತಪಡಿಸಿಕೊಳ್ಳಲು ಆಸ್ತಿ ಕಾನೂನುಗಳ ಸಮಗ್ರ ಪರಿಶೀಲನೆ ಅಗತ್ಯವಿದೆ. 

ಸಾಮಾಜಿಕ ನ್ಯಾಯದ ಕಡೆಗೆ:
ರೂಢಿಯಲ್ಲಿರುವ ಅನಿಷ್ಟ ನಡೆಗಳನ್ನು ಮುರಿಯುವುದು 

ರೂಢಿಯಲ್ಲಿರುವ ಅನಿಷ್ಟ ನಡೆಗಳು ಪುರುಷರು ಮತ್ತು ಮಹಿಳೆಯರ ನಡುವೆ ಇರುವ ತಾರತಮ್ಯ ಮುಂದುವರಿಯುವಂತೆ ಮಾಡುತ್ತಿವೆ. ಈ ಅನಿಷ್ಟ ನಡೆಗಳನ್ನು ಮುರಿಯಲು, ಶಾಲಾ ಮತ್ತು ಕಾಲೇಜು ಪಠ್ಯಕ್ರಮದಲ್ಲಿ ಲಿಂಗ ಸಂವೇದನೆ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಸಂಯೋಜಿಸುವುದು ಹಾಗೂ ಸಮಾನತೆ, ಗೌರವ ಮತ್ತು ವಿಮರ್ಶಾತ್ಮಕ ಚಿಂತನೆಯನ್ನು ಉತ್ತೇಜಿಸುವುದು ಅವಶ್ಯಕವಾಗಿದೆ. ಅಧಿಕಾರಶಾಹಿ, ನ್ಯಾಯಾಂಗ, ಇತ್ಯಾದಿ ಸೇರಿದಂತೆ ವಿವಿಧ ಸಂಸ್ಥೆಗಳಲ್ಲಿರುವ ಲಿಂಗಾಧಾರಿತ ನಡೆಗಳನ್ನು ನಿರ್ಮೂಲನೆ ಮಾಡಬೇಕು.


ಮಹಿಳೆಯರು ಮತ್ತು ಶಿಕ್ಷಣ
ಪುರುಷರಿಗೆ ಹೋಲಿಸಿದರೆ ಮಹಿಳೆಯರ ಸಾಕ್ಷರತೆ ಪ್ರಮಾಣವು ಸುಮಾರು ಶೇ.10ರಷ್ಟು ಕಡಿಮೆ ಇದೆ. ಅದರಲ್ಲೂ ಸಾಮಾನ್ಯ ವರ್ಗದ ಮಹಿಳೆಯರ ಸಾಕ್ಷರತೆಯ ಪ್ರಮಾಣವು ದಲಿತ ಮಹಿಳೆಯರಿಗಿಂತ 18.6 ಪ್ರತಿಶತ ಮತ್ತು ಆದಿವಾಸಿ 10 ಮಹಿಳೆಯರಿಗಿಂತ 27.9 ಪ್ರತಿಶತ ಅಧಿಕವಾಗಿದೆ. ಕನಿಷ್ಠ 1.6 ಮಿಲಿಯನ್ ಹುಡುಗಿ ಯರು ಅದರಲ್ಲೂ 15-18 ವರ್ಷ ವಯಸ್ಸಿನ ಶೇ. 39.4 ಹುಡುಗಿಯರು ಶಾಲೆಯಿಂದ ಹೊರಗುಳಿದಿದ್ದಾರೆ, ಇದರಲ್ಲಿ ದಲಿತ ಮತ್ತು ಆದಿವಾಸಿ ಸಮುದಾಯಗಳ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚು. 
ಹಿಜಾಬ್ ನಿಷೇಧದಿಂದಾಗಿ ಹೆಚ್ಚಿನ ಸಂಖ್ಯೆಯ ಮುಸ್ಲಿಮ್ ಹುಡುಗಿಯರನ್ನು ಶಾಲೆ ಮತ್ತು ಕಾಲೇಜುಗಳಿಂದ ಹೊರಹಾಕಲಾ ಯಿತು. ಸರಕಾರಿ ಶಾಲೆಗಳನ್ನು ಮುಚ್ಚಿರುವುದು ಮತ್ತು ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಮತ್ತು ಸಾರ್ವಜನಿಕ ಶಿಕ್ಷಣದ ಕಡಿಮೆ ಗುಣಮಟ್ಟದಿಂದಾಗಿ ಸಾಕಷ್ಟು ವಿದ್ಯಾರ್ಥಿನಿಯರು ಶಾಲೆಯಿಂದ ಹೊರಗುಳಿಯುವಂತಾಗಿದೆ. 
1. ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವುದು ಮತ್ತು ಅಭಿವೃದ್ಧಿಪಡಿಸುವುದು ಅವಶ್ಯಕ.
2. ದಾಖಲಾತಿಯನ್ನು ಖಚಿತಪಡಿಸಿಕೊಳ್ಳಲು ಮತ್ತು ಅವರ ಡ್ರಾಪ್-ಔಟ್ ತಡೆಗಟ್ಟಲು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳಬೇಕು.


ಲೈಂಗಿಕ ಹಿಂಸೆಯನ್ನು ನಿಭಾಯಿಸುವುದು: 
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5ನೇ ವರದಿಯ ಪ್ರಕಾರ ಭಾರತದಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು ಮಹಿಳೆಯರು ದೈಹಿಕ ಅಥವಾ ಲೈಂಗಿಕ ಹಿಂಸೆಯನ್ನು ಅನುಭವಿಸಿದ್ದಾರೆ, ಆದರೆ ಅವರಲ್ಲಿ ಕೇವಲ ಶೇ. 14 ಮಹಿಳೆಯರು ಮಾತ್ರ ತಮ್ಮ ವಿರುದ್ಧ ದೌರ್ಜನ್ಯವನ್ನು ವರದಿ ಮಾಡಿದ್ದಾರೆ. ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯವನ್ನು ನಿಭಾಯಿಸಲು, ತಡೆಗಟ್ಟಲು ಮತ್ತು ಪರಿಹಾರದ ಕಡೆಗೆ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯಕ.

ಮಾನವ ಹಕ್ಕುಗಳು ಉಲ್ಲಂಘನೆಯಾಗದ ರೀತಿಯಲ್ಲಿ ಸ್ಪಷ್ಟವಾದ ಮತ್ತು ವೈಜ್ಞಾನಿಕವಾಗಿ ಆಧಾರವಾಗಿರುವ ಲೈಂಗಿಕ ಶಿಕ್ಷಣವನ್ನು ಒದಗಿಸುವುದು ರಾಜ್ಯದ ಕರ್ತವ್ಯವಾಗಿದೆ. ಭಾರತೀಯ ಶಾಲೆಗಳಲ್ಲಿ ಔಪಚಾರಿಕ ಪಠ್ಯಕ್ರಮವನ್ನು ಪರಿಷ್ಕರಿಸಬೇಕು ಮತ್ತು ಲೈಂಗಿಕ ಶಿಕ್ಷಣವನ್ನು ಪ್ರತೀ ವಿದ್ಯಾರ್ಥಿಯ ಪಠ್ಯಕ್ರಮದ ಅವಿಭಾಜ್ಯ ಅಂಗವಾಗಿ ಮಾಡಬೇಕು. ಇದರಲ್ಲಿ ಲಿಂಗಾಧಾರಿತ ರೂಢಿಗಳನ್ನು ಮುರಿಯುವುದು, ಪೂರ್ವಾಗ್ರಹಗಳನ್ನು ತೊಡೆದುಹಾಕುವುದು ಮತ್ತು ಸಮಾನತೆ ಮತ್ತು ಭ್ರಾತೃತ್ವದ ವಿಷಯದಲ್ಲಿ ಚಿಂತನೆಯ ಕೃಷಿಯನ್ನು ಖಾತ್ರಿಪಡಿಸುವುದು ಒಳಗೊಂಡಿರಬೇಕು.

ಜಾತಿ-ಧರ್ಮಾಧಾರಿತ ಲೈಂಗಿಕ ಹಿಂಸಾಚಾರವನ್ನು ಗುರುತಿಸುವುದು ಅವಶ್ಯಕ. ಈ ಮೂಲಕ ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಮಹಿಳೆಯರು ಅನುಭವಿಸುತ್ತಿರುವ ಶೋಷಣೆಯನ್ನು ಅರಿಯಬೇಕಾಗಿದೆ. 

ಲಿಂಗ ಸಮಾನತೆಯು ಸಮಾಜದಲ್ಲಿ ಅಸ್ತಿತ್ವದಲ್ಲಿರಬೇಕಾದರೆ, ಮಹಿಳೆ ಲಿಂಗ ತಾರತಮ್ಯದಿಂದ ಮುಕ್ತಿ ಪಡೆದರೆ ಸಾಲದು ಮತ್ತು ಆಕೆ ಜಾತಿ ಅಥವಾ ಧರ್ಮದ ಕಾರಣದಿಂದ ತಾರತಮ್ಯ ಮತ್ತು ಶೋಷಣೆಗೆ ಒಳಗಾಗುವುದಿಲ್ಲ ಎಂಬುದನ್ನು ಪ್ರಭುತ್ವ ಖಚಿತಪಡಿಸಿಕೊಳ್ಳಬೇಕು. ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ವೈವಾಹಿಕ ಅತ್ಯಾಚಾರಕ್ಕೆ ಒದಗಿಸಲಾದ ವಿನಾಯಿತಿಯನ್ನು ತೆಗೆದುಹಾಕಬೇಕು ಮತ್ತು ವೈವಾಹಿಕ ಅತ್ಯಾಚಾರವನ್ನು ಅತ್ಯಾಚಾರ ಎಂದು ಗುರುತಿಸಬೇಕು. ಪೊಲೀಸರನ್ನು ಜವಾಬ್ದಾರಿಯುತ, ಸಂವೇದನಾಶೀಲ ಮತ್ತು ಜನಸ್ನೇಹಿಯನ್ನಾಗಿ ಮಾಡಬೇಕು ಮತ್ತು ಅಗತ್ಯ ಕ್ರಮ ಕೈಗೊಳ್ಳಲು ವಿಫಲರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.


ಸ್ವಾತಂತ್ರ್ಯ
ರಕ್ಷಣೆಯ ಹೆಸರಿನಲ್ಲಿ ಮಹಿಳೆಯರ ಸ್ವಾತಂತ್ರ್ಯವನ್ನು ಮೊಟಕುಗೊಳಿಸ ಲಾಗುತ್ತದೆ. ಮನೆಯ ಒಳಗೆ ಮತ್ತು ಹೊರಗೆ ನಿರ್ಭೀತಿ ಸ್ವಾತಂತ್ರ್ಯವನ್ನು ಸರಕಾರ ಖಾತ್ರಿಪಡಿಸಬೇಕು ಮತ್ತು ರಕ್ಷಣೆಯ ಹೆಸರಿನಲ್ಲಿ ನಡೆಯುವ ಸ್ವಾತಂತ್ರ್ಯಹರಣವನ್ನು ನಿಲ್ಲಿಸಬೇಕು. ಮಹಿಳೆಯರ ರಕ್ಷಣೆಯ ಹೆಸರಲ್ಲಿ ಅವರ ಸ್ವಾಯತ್ತತೆಯನ್ನು ಉಲ್ಲಂಘಿಸುವ ಮತ್ತು ಅವರ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಅನೈತಿಕ ಪೊಲೀಸಿಂಗ್ ಮತ್ತು ಧಾರ್ಮಿಕ ಸಾಂಪ್ರದಾಯಿಕತೆಯನ್ನು ನಿಮೂರ್ಲನೆ ಮಾಡಲೇ ಬೇಕು. 

ಸಾರ್ವಜನಿಕವಾಗಿ ಮಹಿಳೆಯರು ನಿರ್ಭೀತಿಯಿಂದಿರಲು  ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ದೀಪಗಳ ವ್ಯವಸ್ಥೆ, ಸಾರ್ವಜನಿಕ ಶೌಚಾಲಯ, ತಂಗುದಾಣ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಅವಶ್ಯಕವಾಗಿದೆ. 

ಅಲ್ಲದೆ, ಮಹಿಳೆಯರ ರಕ್ಷಣೆಯ ಹೆಸರಲ್ಲಿ ಜಾರಿಯಾಗುವ ಕಾನೂನು ಬಾಹಿರ ನೀತಿ, ನಿಯಮಗಳನ್ನು ನಿಷೇಧಿಸಬೇಕು. ಉದಾ: ಹಿಜಾಬ್ ನಿಷೇಧ. ಒಟ್ಟಾರೆಯಾಗಿ ಮಹಿಳೆಯರು ಎದುರಿಸುತ್ತಿರುವ ನಿಂದನೆ, ಹಿಂಸೆ ಮತ್ತು ನಿಯಂತ್ರಣದಿಂದ ಮುಕ್ತರಾಗಿ, ಸ್ವತಂತ್ರ ಜೀವನ ನಡೆಸುವಂತಾಗಬೇಕು. 


ಮಹಿಳೆಯರ ಆರೋಗ್ಯ ಮತ್ತು ಜೀವನವನ್ನು ಖಾತ್ರಿಪಡಿಸುವುದು

ಪ್ರತೀ ಇಬ್ಬರು ಮಹಿಳೆಯರಲ್ಲಿ ಒಬ್ಬ ಮಹಿಳೆಗೆ ರಕ್ತಹೀನತೆ ಮತ್ತು ಜನಿಸುವ ನಾಲ್ಕು ಮಕ್ಕಳಲ್ಲಿ ಒಂದು ಮಗು ಕಡಿಮೆ ತೂಕದಿಂದ ಕೂಡಿರುತ್ತದೆ. ಭಾರತದಲ್ಲಿ ಮಹಿಳೆಯರ ಅಪೌಷ್ಟಿಕತೆಯ ಪರಿಸ್ಥಿತಿಯು ದಿಗ್ಭ್ರಮೆಗೊಳಿಸುವಂತಿದೆ. ಅದರಲ್ಲೂ ದಲಿತ ಮಹಿಳೆಯರ ಆರೋಗ್ಯ ಮತ್ತು ಪೌಷ್ಟಿಕತೆಯ ಸಮಸ್ಯೆಯು ಸಂಕೀರ್ಣವಾಗಿದೆ. ದಲಿತ ಮಹಿಳೆಯರ ಸಾವಿನ ಸರಾಸರಿ ವಯಸ್ಸು ಪ್ರಬಲ ಜಾತಿಯ ಮಹಿಳೆಯರಿಗಿಂತ 14.6 ವರ್ಷ ಕಡಿಮೆಯಾಗಿದೆ. ಜೀವಿಸಲು ಅಸಾಧ್ಯವಾದ ವೇತನಗಳು ಮತ್ತು ಅಸುರಕ್ಷಿತ ಕೆಲಸದ ಪರಿಸ್ಥಿತಿಗಳೊಂದಿಗೆ ಅತ್ಯಂತ ಅಪಾಯಕಾರಿಯಾದ ಜಾತಿಯಾಧಾರಿತ ವೃತ್ತಿಗಳನ್ನು ನಿರ್ವಹಿಸುತ್ತಿರುವ ದಲಿತ ಮಹಿಳೆಯರ ಆರೋಗ್ಯವು ಮತ್ತಷ್ಟು ಹದಗೆಟ್ಟಿದೆ. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯು ಕುಸಿದಿದ್ದು, ಖಾಸಗಿ ಆಸ್ಪತ್ರೆಗಳು ನಾಯಿಕೊಡೆಗಳಂತೆ ಎಲ್ಲೆಡೆ ಹಬ್ಬುತ್ತಿವೆ. ಇದರಿಂದಾಗಿ ಆರೋಗ್ಯ ಸೇವೆ ಪಡೆಯುವುದು ಕಷ್ಟಸಾಧ್ಯವಾಗಿದೆ.

1.ಮಹಿಳೆಯರು ಮತ್ತು ಬಾಲಕಿಯರಿಗೆ ಸರಿಯಾದ ಪೋಷಕಾಂಶವುಳ್ಳ ಆಹಾರ ನೀಡಬೇಕು.  
2. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಬೇಕು ಮತ್ತು ಸಂತಾನೋತ್ಪತ್ತಿ ಆರೋಗ್ಯ ಸೇವೆಗಳು, ತಾಯಿಯ ಆರೋಗ್ಯ ಮತ್ತು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಕೈಗೆಟುಕುವ ಮತ್ತು ಗುಣಮಟ್ಟದ ಆರೋಗ್ಯ ಸೇವೆಗಳು ದೊರಕಬೇಕು.  
3. ಮಹಿಳೆಯರ ಆರೋಗ್ಯದ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಅವರ ಆರೋಗ್ಯದ ಮೇಲೆ ನಿರ್ದಿಷ್ಟವಾಗಿ ಗಮನಹರಿಸಬೇಕು, ಮಹಿಳಾ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಬೇಕು ಮತ್ತು ಸಮಗ್ರ ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯ ಸೇವೆಗಳನ್ನು ಒದಗಿಸಬೇಕು.
4. ಮಹಿಳಾ ಕಾರ್ಮಿಕರಿಗೆ ಸುರಕ್ಷಿತ ಕೆಲಸದ ಸ್ಥಳಗಳನ್ನು ಒದಗಿಸ ಬೇಕು ಮತ್ತು ಔದ್ಯೋಗಿಕ ಅಪಾಯಗಳಿಂದ ರಕ್ಷಿಸಬೇಕು.


ಲಿಂಗ ತಾರತಮ್ಯವು ಮಹಿಳಾ ಕಾರ್ಮಿಕರನ್ನು ಪೀಡಿಸುತ್ತಲೇ ಇದೆ, ಇದರ ಪರಿಣಾಮವಾಗಿ ಕಾರ್ಮಿಕರಲ್ಲಿ ಮಹಿಳೆಯರ ಸಂಖ್ಯೆ ಕಡಿಮೆಯಾಗಿದೆ. ಕಳೆದ ಎರಡು ದಶಕಗಳಲ್ಲಿ, ಭಾರತದ ಮಹಿಳಾ ಕಾರ್ಮಿಕರ ಸಂಖ್ಯೆಯ ಪ್ರಮಾಣವು 2005ರಲ್ಲಿ ಶೇ. 32ರಷ್ಟು ಮತ್ತು 2021ರಲ್ಲಿ ಶೇ. 19ರಷ್ಟು ಕಡಿಮೆಯಾಗಿದೆ. ವೇತನ ಮತ್ತು ಇತರ ಕೆಲಸದ ಪರಿಸ್ಥಿತಿಗಳಲ್ಲಿ ಮಹಿಳೆಯರ ವಿರುದ್ಧ ತಾರತಮ್ಯ ಮುಂದುವರಿಯುತ್ತಲೇ ಇದೆ, ಮಹಿಳೆಯರಿಗೆ ಪುರುಷರಿಗಿಂತ ಶೇ. 34 ಕಡಿಮೆ ವೇತನ ನೀಡಲಾಗುತ್ತಿದೆ.

Similar News